ಬಿಜೆಪಿ ಸರ್ಕಾರಕ್ಕೆ ಕಷ್ಟ ಬಂದರೆ ಸಪೋರ್ಟ್​ – ಗೌಡರ ಬಹಿರಂಗ ಬೆಂಬಲ..!

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಬೆಂಗಳೂರಿನ ಪದ್ಮನಾಭ ನಗರ ನಿವಾಸಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್​.ಡಿ ದೇವೇಗೌಡರ ಕಾಲಿಗೆ ನಮಸ್ಕರಿಸಿದ್ರು. ಬಳಿಕ ಗೌಡರನ್ನು ಗೌರವಿಸಿದ್ರು. ಮಾಜಿ ಪ್ರಧಾನಿ ದೇವೇಗೌಡರೂ ಸಹ ಮುಖ್ಯಮಂತ್ರಿಗಳನ್ನು ಸನ್ಮಾನಿಸಿದ್ರು. ಅರ್ಧ ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ಮಾತನಾಡಿದ ದೇವೇಗೌಡರು, ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಏನಾದರೂ ಸಮಸ್ಯೆ ಆದರೆ ನಾನು ಬೆಂಬಲ ನೀಡ್ತೇನೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ರು. ಚರ್ಚೆ ವೇಳೆ ಮಾಜಿ ಸಚಿವರಾದ ವಿ. ಸೋಮಣ್ಣ ಹಾಗೂ ಹೆಚ್​.ಡಿ ರೇವಣ್ಣ ಭಾಗಿಯಾಗಿದ್ದರು.

ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಶೀರ್ವಾದ ಪಡೆಯಲು ಬಂದಿದ್ದೆ. ನನ್ನ ತಂದೆ ಎಸ್.ಆರ್.ಬೊಮ್ಮಾಯಿ ಜೊತೆ ಒಡನಾಟ ಹೊಂದಿದ್ದರು. ನಾನು ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದಿದ್ದೇನೆ. ದೇವೇಗೌಡರು ಅನೇಕ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ. ಈ ವಯಸ್ಸಿನಲ್ಲಿ ರಾಜ್ಯದ ಹಿತವನ್ನಷ್ಟೇ ಅವರು ಬಯಸಲು ಸಾಧ್ಯ. ದೇವೇಗೌಡರು ಸಾಕಷ್ಟು ಹಿರಿಯರು, ಅನುಭವಿಗಳು, ಆಡಳಿತಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದಿದ್ದಾರೆ. ಇನ್ನೂ ಚನ್ನಮ್ಮ ತಾಯಿಯ ಆಶೀರ್ವಾದವನ್ನೂ ಕೂಡ ಪಡೆದಿದ್ದೇನೆ. ನಾನು ಅವರ ಗರಡಿಯಲ್ಲೇ ಬೆಳೆದವನು, ಮುಖ್ಯಮಂತ್ರಿಯಾಗಿದ್ದಕ್ಕೆ ಸಾಕಷ್ಟು ಖುಷಿ ವ್ಯಕ್ತಪಡಿಸಿದರು. ಖುಷಿಯಿಂದ ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ಸಿಎಂ ತಿಳಿಸಿದ್ರು.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್.ಬೊಮ್ಮಾಯಿಯವರು ದೇವೇಗೌಡರ ಒಡನಾಡಿ ಆಗಿದ್ದರು. ಇಂದು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ದೇವೇಗೌಡರು ಅತ್ಯಂತ ಖುಷಿಯಿಂದ ಹಾರೈಸಿದ್ದಾರೆ ಎಂದು ಹೆಚ್.ಡಿ.ರೇವಣ್ಣ ತಿಳಿಸಿದ್ರು. ನನ್ನ ಹಾಗೂ ಬಸವರಾಜ ಬೊಮ್ಮಾಯಿ ನಡುವೆ ಹಲವಾರು ವರ್ಷದ ಗೆಳೆತನ ಇದೆ. ನಾನು ಅವರ ಒಳ್ಳೆಯ ಸ್ನೇಹಿತ. ಪ್ರವಾಹ ಹಾಗೂ ಕೋವಿಡ್ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುತ್ತಾರೆ. ಮೂರನೇ ಅಲೆ ಬಗ್ಗೆ ಈಗಲೇ ಕ್ರಮವಹಿಸಬೇಕಿದೆ. ಬೊಮ್ಮಾಯಿ ಜನತಾ ಪರಿವಾರದ ಸಿಎಂ‌ ಎಂಬ ಹೇಳಿಕೆ‌ ಬಗ್ಗೆ ಹೇಳಲು ತಯಾರಿಲ್ಲ. ನಾನು ಅದರ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ ಎಂದಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾತನಾಡಿ, ದೆಹಲಿಯಲ್ಲಿ ಭೇಟಿಗೆ ಬರುತ್ತೇನೆ ಎಂದು ಸಿಎಂ ಹೇಳಿದ್ದರು. ಆದರೆ ದೆಹಲಿಯಲ್ಲಿ ಬಿಡುವಿಲ್ಲದ ಕಾರ್ಯಕ್ರಮ ಇತ್ತು. ಹಾಗಾಗಿ ಇಂದು ನನ್ನನ್ನು ಭೇಟಿಯಾದರು. ರಾಜ್ಯದ ಹಲವಾರು ವಿಚಾರ ಚರ್ಚೆ ಮಾಡಿದರು. ಸಿಎಂ ತಂದೆ ಹಾಗೂ ನಾನು ಒಟ್ಟಿಗೆ ‌ಕೆಲಸ ಮಾಡಿದ್ದೆವು. ಅದೊಂದು ಕಾಲ, ಅವರೊಟ್ಟಿಗೆ ನಾವಿದ್ದೆವು. ಅವರ ತಂದೆ ಹಾಗೂ ನಾವು ಹೇಗೆ ಕೆಲಸ ಮಾಡಿದ್ದೇವೆ ಎನ್ನುವುದು ಬಸವರಾಜ ಬೊಮ್ಮಾಯಿಗೆ ಗೊತ್ತಿದೆ. ಅವರ ತಂದೆ ಹಾಗೂ ಬಸವರಾಜ್ ಇಬ್ಬರೂ ನಮ್ಮ ಜತೆ ಕೆಲಸ ಮಾಡಿದ್ದಾರೆ. ನಮ್ಮ ತಂದೆ ಜೊತೆ ಕೆಲಸ ಮಾಡಿದವರು, ನಿಮ್ಮನ್ನು ಭೇಟಿಯಾಗಲು ಬರುತ್ತೇನೆ ಎಂದಿದ್ರು. ಬಾರಪ್ಪ ಎಂದು ಕರೆದೆ. ಇನ್ನೂ ಸೋಮಣ್ಣ ಜೆಡಿಎಸ್​ನಲ್ಲಿ ಇದ್ದವನು, ಒಳ್ಳೆಯ ಕೆಲಸ ಮಾಡು ಎಂದು ತಿಳಿಸಿದ್ದೇನೆ ಎಂದಿದ್ದಾರೆ.

ಯಡಿಯೂರಪ್ಪ ಪರವಾಗಿ ದೇವೇಗೌಡರ ಬ್ಯಾಟಿಂಗ್​

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ತೆಗೆಯುವಂತೆ ನಾವು ಹೇಳಿಲ್ಲ. ಕೇಂದ್ರ ಬಿಜೆಪಿ ಅವರು 75 ವರ್ಷ ಆದ ಮೇಲೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರಿಗೆ ವಿಶೇಷ ಸಂದರ್ಭದಲ್ಲಿ ಎರಡು ವರ್ಷ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಕೇಂದ್ರದವರು ರಾಜೀನಾಮೆ ಕೊಡಲು ಹೇಳಿ ಬಸವರಾಜ ಬೊಮ್ಮಯಿ ಅವರನ್ನು ಸಿಎಂ ಮಾಡಿದ್ದಾರೆ. ಎರಡು ವರ್ಷ ಪೂರೈಸಲು ನಮ್ಮಿಂದ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಇನ್ನೂ ಸಿದ್ದರಾಮಯ್ಯ ಜೊತೆ ಬಹಳ ಜನ ಹೋಗಿದ್ದಾರೆ, ಎಲ್ಲರೂ ಮುಖ್ಯಮಂತ್ರಿ ಆಗಲೂ ಸಾಧ್ಯವಿಲ್ಲ. ಎಲ್ಲರೂ ಮಿನಿಸ್ಟರ್ ಆಗಲಿಕ್ಕೂ ಆಗಲಿಲ್ಲ. ಬಸವರಾಜ ಬೊಮ್ಮಯಿ ಅವರು ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಜತೆ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದಾರೆ, ಹಾಗಾಗಿ ಮುಖ್ಯಮಂತ್ರಿ ಆದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ವಯಸ್ಸಾದ ಭೀಷ್ಮನ ಹೋರಾಟ 10 ದಿನ..!

ರಾಜಕಾರಣದಲ್ಲಿ ವಯಸ್ಸು ಮುಖ್ಯವಲ್ಲ, ನಾವು ಮಹಾಭಾರತದ ಘಟನೆ ನೆನಪಿಸಿಕೊಳ್ಳಬೇಕು ಎಂದಿರುವ ದೇವೇಗೌಡರು, ಭೀಷ್ಮನಿಗೆ ವಯಸ್ಸು ಆಗಿದ್ರೂ ಹತ್ತು ದಿನ ಯುದ್ಧ ಮಾಡಿದ. ಆದರೆ ಯುವಕ ಕರ್ಣ ಕೇವಲ ಒಂದೂವರೆ ದಿನ ಯುದ್ಧ ಮಾಡಿದ ಮಡಿದ ಎನ್ನುವ ಮೂಲಕ ರಾಜಕಾರಣದಲ್ಲಿ ವಯಸ್ಸು ಮುಖ್ಯ ಅಲ್ಲ. ರಾಜಕಾರಣ ಮಾಡಲು ಜನರ ಕೆಲಸ ಮಾಡಲು ಉತ್ಸಾಹ ಮುಖ್ಯ ಎಂದಿದ್ದಾರೆ. ವಯಸ್ಸು ಇದೆ ಎಂದು ಮನೆಯಲ್ಲಿ ಮಲಗಿಕೊಂಡ್ರೆ ಏನು ಪ್ರಯೋಜನ ಎಂದಿರುವ ಗೌಡರು, ಉತ್ಸಾಹ ಜನರ ಕೆಲಸ ಮಾಡುವುದು ಮುಖ್ಯ ಎಂದಿದ್ದಾರೆ.

ಯಡಿಯೂರಪ್ಪ ಅವರನ್ನ ದೂರ ಇಟ್ಟು ಸರ್ಕಾರ ರಚನೆ ಮಾಡುವುದು ಕಷ್ಟ ಎಂದಿರುವ ದೇವೇಗೌಡರು, ಈ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನಾನು ಸಪೋರ್ಟ್ ಮಾಡ್ತೀನಿ ಎಂದು ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ಅವಧಿಗೂ ಮೊದಲೇ ಚುನಾವಣೆಗೆ ಹೋಗುವ ಆಸೆ ನಮಗೆ ಇಲ್ಲ. ಜಿಲ್ಲಾ ಪಂಚಾಯತ್​ ಮತ್ತು ತಾಲ್ಲೂಕು ಪಂಚಾಯತ್​ ಚುನಾವಣೆ ಮುಗಿದ ಬಳಿಕ ಚುನಾವಣೆ ನಡೆಯಬೇಕು. ಅವಧಿಗೂ ಮೊದಲೇ ಚುನಾವಣೆ ಬರಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನೂ ಸಿದ್ದರಾಮಯ್ಯ ನನ್ನ ಶಿಷ್ಯ ಎಂದು ಹೇಳಲ್ಲ. ನಾಯಕರಾಗಿ ಬೆಳೆದಿದ್ದಾರೆ. ಅವರು ನಾಯಕರು ಎನ್ನುವ ಮೂಲಕ ಪ್ರಶ್ನಾರ್ಥಕ ಚಿನ್ಹೆ ಮೂಡುವಂತೆ ಮಾತನಾಡಿದ್ದಾರೆ.

Related Posts

Don't Miss it !