ರಮೇಶ್ ಕುಮಾರ್ ಹೇಳಿಕೆ ಮತ್ತು ಕೇಸರಿ ರಾಜಕೀಯ ಕೆಸರು..!

ರಮೇಶ್ ಕುಮಾರ್ ಹೇಳಿಕೆ ನೀಡಿದಾಗ ಇಡೀ ಸದನ ನಗೆಯ ಕಡಲಲ್ಲಿ ತೇಲಿತ್ತು. ಖಾಸಗಿ ಮಾಧ್ಯಮಗಳ ಕ್ಯಾಮೆರಾ ಸದನದ ಒಳಗೆ ಇಣುಕದ ಕಾರಣಕ್ಕೆ ಬೇರೆಲ್ಲರ ಹಾವಭಾವ ಸಂತೋಷದ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕಳೆದುಕೊಳ್ಳಬೇಕಾಯ್ತು. ಆದರೆ ಮಾಧ್ಯಮಗಳು ಪ್ರಶ್ನೆ ಮಾಡಿದ ಬಳಿಕ ಈ ವಿಚಾರದಲ್ಲಿ ಸಕ್ರೀಯರಾದ ಬಿಜೆಪಿ ನಾಯಕರು ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿಗಳ ಸುರಿಮಳೆ ಮಾಡಿದರು. ರಾಜ್ಯದಲ್ಲಿ ಮಾತ್ರವಲ್ಲ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಲೋಕಸಭೆಯಲ್ಲಿ ರಮೇಶ್ ಕುಮಾರ್ ಬಗ್ಗೆ ಪ್ರಸ್ತಾಪ ಮಾಡಿದರು. ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಕೂಡ ರಮೇಶ್ ಕುಮಾರ್ ಮನಸ್ಥಿತಿ ಬಗ್ಗೆ ಟೀಕಾಪ್ರಹಾರ ನಡೆಸಿದರು. ಆದರೆ ರಮೇಶ್ ಕುಮಾರ್ ಈ ಮಾತನ್ನಾಡುವಾಗ ಸದನದಲ್ಲಿ ಮಹಿಳಾ ಸದಸ್ಯರೂ ಸೇರಿದಂತೆ ಎಲ್ಲಾ ಹಿರಿಯ ನಾಯಕರು ಇದ್ದರು, ಆದರೂ ಚಕಾರ ಎತ್ತಲಿಲ್ಲ. ಯಾಕೆಂದ್ರೆ ರಮೇಶ್ ಕುಮಾರ್ ಅತ್ಯಾಚಾರದ ಬಗ್ಗೆ ಮಾತನಾಡುವಾಗ ಈ ರೀತಿ ಹೇಳಿದ್ದಲ್ಲ. ಸ್ಪೀಕರ್ ಅವರ ಇಕ್ಕಟ್ಟಿನ ಸಮಯದಲ್ಲಿ ಸಾಂದರ್ಭಿಕ ವಿಚಾರವಾಗಿ ಹೇಳಿದ ಮಾತು. ಆದರೆ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಗಾಂಭೀರ್ಯ ಹೆಚ್ಚಾಯ್ತು ಅಷ್ಟೆ.

ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್..! ವರದಿ ಕೇಳಿದ ಹೈಕಮಾಂಡ್..!

ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದಿನ ಏಪ್ರಿಲ್, ಮೇನಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ವಿರೋಧಿ ಅಲೆ ಬಳಸಿಕೊಂಡು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ನಾಯಕರ ತಯಾರಿ‌ ನಡೆಯುತ್ತಿದೆ. ಆದರೆ ದೇಶದ ಯಾವುದೋ ಮೂಲೆಯಲ್ಲಿ ಯಾರೋ ಒಬ್ಬ ನಾಯಕ ನೀಡುವ ಹೇಳಿಕೆಗಳು ಬೇರೊಂದು ರಾಜ್ಯದಲ್ಲೂ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ. ಅದೇ ಕಾರಣದಿಂದ ಕಾಂಗ್ರೆಸ್ ಹೈಕಮಾಂಡ್ ರಮೇಶ್ ಕುಮಾರ್ ಹೇಳಿಕೆ ಬಗ್ಗೆ ಗರಂ ಆಗಿದೆ. ಕೆಪಿಸಿಸಿ ಅಧ್ಯಕ್ಷರಿಂದಲೂ ವರದಿಯನ್ನು ಬಯಸಿದೆ. ಬಿಜೆಪಿ ಹಾರಿಬೀದಿ ರಂಪಾಟ ಮಾಡುವ ಮುನ್ನ ರಮೇಶ್ ಕುಮಾರ್ ಸದನದಲ್ಲಿ‌ ಕ್ಷಮಾಪಣೆ ಕೇಳಿದ್ದು ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಸೇರಿದಂತೆ ಪ್ರಮುಖ ನಾಯಕರು ಖಂಡನೆ ವ್ಯಕ್ತಪಡಿಸಿದ್ದು ಇದೇ ಉದ್ದೇಶದಿಂದ ಎನ್ನುವುದನ್ನು ನಾವು ಮನಗಾಣಬೇಕಿದೆ

ರಾಜ್ಯ ಮಹಿಳಾ ಆಯೋಗದ ಬಾಯಿ ಕಟ್ಟಿದ್ದು ಯಾರು..? ಮಾತಿಲ್ಲ ಯಾಕೆ..?

ಮಹಿಳಾ ಜನಪ್ರತಿನಿಧಿಗಳಲ್ಲಿ ಬಹುತೇಕರು ಅನಿವಾರ್ಯ ಕಾರಣಕ್ಕೆ ರಮೇಶ್ ಕುಮಾರ್ ವಿರೋಧ ಮಾಡಲು ಮುಂದಾಗಿದ್ದು ಕಂಡು ಬಂತು. ಕೆಲವರು ಕ್ಷಮೆ ಕೇಳಬೇಕು ಅಂದ್ರೆ ಇನ್ನೂ ಕೆಲವರು ಬಿಜೆಪಿ ನಾಯಕರು ಬ್ಲ್ಯೂ ಫಿಲ್ಮ್ ನೋಡಿದಾಗಲೂ ಯಾವುದೇ ಕ್ರಮ ತೆಗೆದುಕೊಳ್ಳಿಲ್ಲ ಎನ್ನುವ ಮೂಲಕ ರಮೇಶ್ವಕುಮಾರ್ ಹೇಳಿಕೆಯನ್ನು ಸಮರ್ಥಿಸುವ ಕೆಲಸ ಮಾಡಿದ್ರು. ಇನ್ನೂ ರಮೇಶ್ ಕುಮಾರ್ ಮಾತನಾಡುವಾಗ ಗಹಗಹಿಸಿ ನಗುವಿನ ಅಲೆಯಲ್ಲಿ ತೇಲಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಲೋಪವೂ ಇದರಲ್ಲಿ ಇರುವ ಕಾರಣಕ್ಕೆ ಬಹುತೇಕರು ಗಪ್‌ಚುಪ್ ಆಗಿದ್ದಾರೆ. ಒಂದು ವೇಳೆ ಸದನದಲ್ಲಿ ರಮೇಶ್ ಕುಮಾರ್ ಹೇಳಿದ್ದು ತಪ್ಪು ಎಂದಾದರೆ ಅಲ್ಲೇ ವಿರೋಧ ಮಾಡಬೇಕಿತ್ತು. ಜೊತೆಗೆ ಕಡತಕ್ಕೆ ಆ ಮಾತುಗಳು ಹೋಗದಂತೆ ಸ್ಪೀಕರ್ ತಡೆಯಬೇಕಿತ್ತು. ಆದರೆ ಇದ್ಯಾವುದು ಆಗಲಿಲ್ಲ.

ಸ್ಪೀಕರ್ ಗಹಗಹಿಸಿ ನಕ್ಕಿದ್ದು ಸಮರ್ಥನೆ ಆಗುವುದಿಲ್ಲವೇ..?

ರಾಜ್ಯದಲ್ಲಿ ಬಿಜೆಪಿ ಸರ್ಕಾವೇ ಇದೆ. ಮಹಿಳೆಯರ ಬಗ್ಗೆ ಗೌರವ ಇದ್ದರೆ ಖಂಡಿತ ರಮೇಶ್ ಕುಮಾರ್ ಅವರಿಗೆ ನೋಟಿಸ್ ಕೊಟ್ಟು ಮಹಿಳಾ ಆಯೋಗ ಮಾಹಿತಿ ಪಡೆಯಬೇಕು. ಆದರೆ ಇಲ್ಲೀವರೆಗೂ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಈ ಬಗ್ಗೆ ದೂಸ್ರಾ ಮಾತನಾಡಿಲ್ಲ. ಕೇಂದ್ರ ಮಹಿಳಾ ಆಯೋಗದ ಅಧ್ಯಕ್ಷರು ಮಾತ್ರ ರಮೇಶ್ ಕುಮಾರ್ ವಿರುದ್ಧ ಅಬ್ಬರಿಸಿದ್ದಾರೆ. ರಮೇಶ್ ಕುಮಾರ್ ಹೇಳಿಕೆ ನೀಚತನದ್ದಾಗಿದೆ. ಜೊತೆಗೆ ಅತ್ಯಾಚಾರಿ ಚಿಂತನೆಯುಳ್ಳ ವ್ಯಕ್ತಿಯಾಗಿದ್ದಾರೆ ಎಂದು ಸ್ವಾತಿ ಮಾಲಿವಾಲ್ ಆಕ್ರೋಶ ಹೊರಹಾಕಿದ್ದಾರೆ. ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಹಕ್ಕು ರಮೇಶ್ ಕುಮಾರ್‌ಗೆ ಇಲ್ಲ, ಕೂಡಲೇ FIR ದಾಖಲಿಸಿ ಬಂಧಿಸಬೇಕು ಎಂದು ಸರ್ಕಾರವನ್ನು ಆಗ್ರಹ ಮಾಡಿದ್ದಾರೆ. ಆದರೆ ಸುಮೋಟೋ ಕೇಸ್ ದಾಖಲಿಸಿಕೊಂಡು ವಿಚಾರಣೆ ಮಾಡಬೇಕಿದ್ದ ರಾಜ್ಯ ಮಹಿಳಾ ಆಯೋಗ ಮಾತ್ರ ಜಾಣ ಕುರುಡುತನ ಪ್ರದರ್ಶನ ಮಾಡಿದೆ.

ಅತ್ಯಾಚಾರ ಹೇಳಿಕೆ ವಿಚಾರದಲ್ಲಿ ಇವರದ್ದು ಏನು ತಪ್ಪು ಇಲ್ವಾ..?

ರಮೇಶ್ ಕುಮಾರ್ ನೀಡಿದ ಹೇಳಿಕೆ ಸರಿ ಎಂದು The public spot ಒಪ್ಪಿಕೊಳ್ಳಲು ಸಿದ್ಧವಿಲ್ಲ. ಆದರೆ ರಮೇಶ್ ಕುಮಾರ್ ಹೇಳಿಕೆಯನ್ನು ಕೇಳುತ್ತಾ ವಿರೋಧ ಮಾಡದೆ ಕುಳಿತವರು, ಮಾತನ್ನು ಎಂಜಾಯ್ ಮಾಡಿದವರ ತಪ್ಪೇನು ಇಲ್ಲವೇ..? ಎನ್ನುವ ಪ್ರಶ್ನೆ ನಮ್ಮದು. ಒಬ್ಬ ಪೊಲೀಸ್ ಅಧಿಕಾರಿ ತನ್ನ ಕಣ್ಣಿನ ಎದುರು ಯಾವುದೇ ಅಪರಾಧ ನಡೆದಾಗ ಅದನ್ನು ತಪ್ಪಿಸಲಿಲ್ಲ ಎನ್ನುವುದಾದರೇ ಆತ ಅಸಮರ್ಥ ಎನ್ನುವ ಜೊತೆಗೆ ಆತನದ್ದೂ ಅಪರಾಧ ಎಂದು ಅರ್ಥ. ಅದೇ ರೀತಿ ಸದನದಲ್ಲೇ ರಮೇಶ್ ಕುಮಾರ್ ಈ ರೀತಿಯ ಹೇಳಿಕೆ ನೀಡಿದರೂ ಮೌನಕ್ಕೆ ಶರಣಾಗಿದ್ದ ಎಲ್ಲಾ ನಾಯಕರೂ ಕೂಡ ಅಪರಾಧ ಮಾಡಿದ್ದಾರೆ. ಈಗಲಾದರೂ ರಮೇಶ್ ಕುಮಾರ್ ವಿರುದ್ಧ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗಬೇಕಿದೆ. ಈಗ ರಮೇಶ್ ಕುಮಾರ್ ವಿರುದ್ಧ ತಿರುಗಿ ಬಿದ್ದಿರುವ ಬಹುತೇಕ ನಾಯಕರೂ ಕೂಡ ವಿಡಿಯೋ ಪ್ರಸಾರ ಮಾಡದಂತೆ ತಡೆ ತಂದಿದ್ದಾರೆ ಎನ್ನುವುದನ್ನು ಈ ವೇಳೆ ನೆನಪು ಮಾಡಿಕೊಳ್ಳುವುದು ಸೂಕ್ತ.

Related Posts

Don't Miss it !