ರಮೇಶ್​ ಕುಮಾರ್​ ಮಾಡಿದ ತಪ್ಪೇನು..? ಪೊಲೀಸರ ಆಗ್ರಹ ಏನು..?

ವಿಧಾನಸಭೆಯ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಸದಾ ಕಾಲ ತಮ್ಮ ನೇರವಂತಿಕೆಯಿಂದಲೇ ಜನರ ಮನಸ್ಸನ್ನು ಗೆಲ್ಲುತ್ತಾರೆ. ಆದರೆ ಈ ಬಾರಿ ತಮ್ಮ ಅದೇ ನೇರವಂತಿಕೆಯಿಂದ್ಲೇ ಜನರ ವಿರೋಧಕ್ಕೆ ಕಾರಣವಾಗಿದ್ದಾರೆ. ಆದರೆ ಅಷ್ಟಕ್ಕೂ ಅವರು ಮಾಡಿದ ಅಂತಹ ತಪ್ಪಾದರೂ ಏನು ಎಂದು ಅದೇ ಜನರಲ್ಲಿ ಕೇಳುವ ಕೂಗು ಸಹ ಕೇಳಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್​ ಇಲಾಖೆಯಲ್ಲಿರುವ ಜನರೇ ಮಾಜಿ ಸ್ಪೀಕರ್​ ವಿರುದ್ಧ ಕೆಂಡಕಾರಿದ್ದಾರೆ. ಬಹಿರಂಗ ಪತ್ರ ಬರೆದಿದ್ದಾರೆ. ಆಡಿಯೋ ಮೂಲಕ ಬಹಿರಂಗ ಕ್ಷಮೆಯಾಚನೆಗೆ ಒತ್ತಾಯ ಮಾಡಿದ್ದಾರೆ. ಇದೇ ವೇಳೆ ರಮೇಶ್​ ಕುಮಾರ್​ ಕೂಡ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ರಾಮಕೃಷ್ಣ ಹೆಗಡೆ ಜನ್ಮದಿನಾಚರಣೆ ಕಾರ್ಯಕ್ರಮದ ಬಳಿಕ ಮಾತನಾಡಿದ ರಮೇಶ್​ ಕುಮಾರ್​, ನನ್ನ ಕ್ಷೇತ್ರದಿಂದ ಬರುವಾಗ ಹೆದ್ದಾರಿಯಲ್ಲಿ ವಾಹನ ತಡೆದು ಪೊಲೀಸರು ತಪಾಸಣೆ ನಡೆಸಿದ್ದರು. ನನ್ನ ವಾಹನವನ್ನೂ ಪೊಲೀಸರು ತಡೆದು ನಿಲ್ಲಿಸಿದ್ದರು. ನನ್ನ ಗುರುತು ಪತ್ತೆಯಾದ ಬಳಿಕ ನೀವು ಹೋಗಿ ಸಾರ್​ ಎಂದಿದ್ದರು. ಆದರೆ, ಜನರಿಗೊಂದು ಕಾನೂನು ನನಗೆ ಒಂದು ಕಾನೂನು ಯಾಕೆ..? ನನ್ನನ್ನು ಬಿಟ್ಟ ಬಳಿಕ ಜನರನ್ನು ಬಿಡದಿದ್ದರೆ ಜನರು ನನ್ನ ಬಗ್ಗೆ ಏನು ತಿಳಿದುಕೊಳ್ತಾರೆ..? ನನ್ನ ಕ್ಷೇತ್ರದ ಜನರು ನನ್ನ ಬಗ್ಗೆ ಏನು ಮಾತನಾಡುತ್ತಾರೆ. ಶಾಸಕನಾದವನು ಯಾವುದೇ ದಾಖಲೆ ತೋರಿಸದೆ ಹೊರಟು ಹೋದ, ನಮ್ಮ ಕಾಳಜಿ ಅವನಿಗಿಲ್ಲ ಎಂದು ಮಾತನಾಡಿಕೊಳ್ಳುತ್ತಿರಲಿಲ್ಲವೇ ಎಂದಿದ್ದಾರೆ ರಮೇಶ್​ ಕುಮಾರ್​.

ಇದನ್ನೂ ಓದಿ:

ಜೆಪಿ ನಗರ ಎಎಸ್​ಐ ಗೋಪಿ ಆಗ್ರಹ..!

ಬೆಂಗಳೂರಿನ ಜೆಪಿ ನಗರದ ಪೊಲೀಸ್​ ಠಾಣೆಯಲ್ಲಿ ಎಎಸ್​ಐ ಆಗಿರುವ ಗೋಪಿ ಸಾಮಾಜಿಕ ಜಾಲತಾಣದ ಮೂಲಕ ರಮೇಶ್​ ಕುಮಾರ್​ವಿರುದ್ಧ ವಾಗ್ದಾಳಿ ಮಾಡಿದ್ದು, ಕೂಡಲೇ ಕರ್ನಾಟಕ ಪೊಲೀಸರ ಕ್ಷಮೆ ಕೇಳಬೇಕು. ಇಲ್ಲದಿದ್ರೆ ಕನಿಷ್ಠ ಪಕ್ಷ ನನಗೆ ಕರೆ ಮಾಡಿ ಮಾತನಾಡಬೇಕು. ನಾನು ಅವರಿಗೆ ಸೂಕ್ತ ಉತ್ತರ ಕೊಡುತ್ತೇನೆ ಎಂದಿದ್ದಾರೆ. ಪೊಲೀಸರಿಗೆ ಆಗಿರುವ ನೋವಿನ ಬಗ್ಗೆ ಮಾತನಾಡಿರುವ ಎಎಸ್​ಐ ಗೋಪಿ, ನಾವು ರಾಜಕಾರಣಿಗಳು ಹೇಳಿರುವುದನ್ನೇ ಮಾಡುತ್ತಿದ್ದೇವೆ. ವಾಹನ ತಪಾಸಣೆ ಮಾಡುವುದು ಬೇಡ ಎನ್ನುವುದಾದರೆ, ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಕಾನೂನು ತರಲಿ ಎಂದಿದ್ದಾರೆ. ನೊಂದ ಪೊಲೀಸ್​ ಸಿಬ್ಬಂದಿ ಹೆಸರಲ್ಲಿ ಬರೆದಿರುವ ಬಹಿರಂಗ ಪತ್ರದಲ್ಲೂ ಸಾಕಷ್ಟು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಇದನ್ನೂ ಓದಿ;

ನಿಮ್ಮ ಮಕ್ಕಳಿಗೆ ಒಳ್ಳೇದಾಗುತ್ತಾ..? ದಂಡ ವಸೂಲಿ ಮಾಡುವುದು ಎಷ್ಟು ಸರಿ..? ಎಂದು ಬಹಿರಂಗವಾಗಿ ದಾಳಿ ಮಾಡಿದ್ದು ಪೊಲೀಸರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರಿದೆ ಎನ್ನಬಹುದು. ಇದಕ್ಕೆ ಬಹುಮುಖ್ಯ ಕಾರಣ ಎಂದರೆ ರಮೇಶ್​ ಕುಮಾರ್​ ಅವರ ನೇರವಂತಿಯನ್ನು ಮೆಚ್ಚಿದವರಲ್ಲಿ ಪೊಲೀಸರೂ ಸಹ ಇದ್ದರು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ ರಮೇಶ್​ ಕುಮಾರ್​ ಹೇಳಿರುವುದರಲ್ಲೂ ಏನೂ ತಪ್ಪಿಲ್ಲ. ಹೆದ್ದಾರಿಯಲ್ಲಿ ಎಲ್ಲರನ್ನೂ ತಡೆದು ತಪಾಸಣೆ ಮಾಡುವುದು ಕೂಡ ಸಾಕಷ್ಟು ಜನರಿಗೆ ಕಿರಿಕಿರಿ ಉಂಟು ಮಾಡಿರುತ್ತದೆ. ಆ ರೀತಿ ಕಿರಿಕಿರಿ ಆದವರಲ್ಲೂ ಸಾಕಷ್ಟು ಮಂದಿ ಇದಕ್ಕಿಂತಲೂ ಕೆಟ್ಟದಾಗಿಯೇ ಬೈಯ್ದುಕೊಂಡು ಹೋಗಿರುತ್ತಾರೆ. ಕೆಲವು ಬಾರಿ ಬಹಿರಂಗವಾಗಿಯೂ ಹೇಳಿರಬಹುದು. ಆದರೆ ರಮೇಶ್​ ಕುಮಾರ್​ ಅವರನ್ನು ಪೊಲೀಸ್​ ಸಿಬ್ಬಂದಿ ಕೂಡ ಮೇಲ್ಪಂಕ್ತಿಯಲ್ಲಿ ಇಟ್ಟಿದ್ದ ಕಾರಣಕ್ಕೆ ಇಷ್ಟೆಲ್ಲಾ ನೋವಾಗಿದೆ ಎನ್ನಬಹುದು. ರಮೇಶ್​ ಕುಮಾರ್​ ಕೂಡ ನನಗೇನು ಪೊಲೀಸರ ಮೇಲೆ ದ್ವೇಷ ಇಲ್ರಪ್ಪ. ರಸ್ತೆಯಲ್ಲಿ ಜನರನ್ನು ನಿಲ್ಲಿಸಿ ಹಿಂಸೆ ಕೊಡುತ್ತಿದ್ದಾರೆ ಎನಿಸಿ ಹಾಗೆ ಹೇಳಿಬಿಟ್ಟೆ ಎಂದಿದ್ದಾರೆ. ಅಂದರೆ ಅವರಿಗೂ ಮನಸ್ಸಿನಲ್ಲಿ ಯಾವುದೇ ಕೆಟ್ಟ ಭಾವನೆ ಇರಲಿಲ್ಲ ಎನ್ನುವುದು ಗೊತ್ತಾಗ್ತಿದೆ.

Related Posts

Don't Miss it !