ಮನೆಯವರ ಭಕ್ಷ್ಯ ಭೋಜನ, ಪೂಜೆ ಮೀರಿಸಿದ್ದು ಅಪ್ಪು ಅಭಿಮಾನಿಗಳ ಪ್ರೀತಿ..!

ಅಕ್ಟೋಬರ್ 29, 2021ರಂದು ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಇನ್ನಿಲ್ಲ ಅನ್ನೋ ವಿಚಾರ ಅಭಿಮಾನಿಗಳ ಪಾಲಿಗೆ ಬರಸಿಡಿಲು ಬಡಿದಂತೆ ಆಗಿತ್ತು. ಒಂದು ವರ್ಷ ಆದರೂ ಅಪ್ಪು ಮೇಲಿನ ಪ್ರೀತಿ ಕಿಂಚಿತ್ತು. ಕರಗಿಲ್ಲ ಅನ್ನೋದು ಇಂದಿನ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾಬೀತಾಯ್ತು. ಒಂದೇ ದಿನ ಒಂದೂವರೆ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್​ ಸಮಾಧಿ ಇರುವ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ, ಪ್ರೀತಿಯ ನಟನಿಗೆ ನಮಿಸಿದ್ದಾರೆ. ಪುನೀತ್​ ಪತ್ನಿ ಅಶ್ವಿನಿ ಸೇರಿದಂತೆ ದೊಡ್ಮನೆ ಕುಟುಂಬದ ಪುಣ್ಯಸ್ಮರಣೆ ಕಾರ್ಯದಲ್ಲಿ ಗಮನ ಸೆಳೆದಿದ್ದ ಅಭಿಮಾನಿಗಳ ಪ್ರೀತಿ, ಮಮಕಾರ, ಕುಟುಂಬಸ್ಥರನ್ನೇ ಕಳೆದುಕೊಂಡಷ್ಟು ಕಂಬನಿ.

ಅಪ್ಪು ಇಷ್ಟದ ತಿಂಡಿ ತಿನಿಸು ಇಟ್ಟು ಕುಟುಂಬಸ್ಥರ ಪೂಜೆ..!

ಅಶ್ವಿನಿ ಪುನೀತ್​ ರಾಜ್​ಕುಮಾರ್​ ಹಾಗು ಮಕ್ಕಳು, ಶಿವಣ್ಣ, ರಾಘಣ್ಣ ಕುಟುಂಬ ಮನೆಯಲ್ಲಿ ಎಡೆಯಿಟ್ಟು ಪೂಜೆ ಸಲ್ಲಿಸಿದ ಬಳಿಕ, ಕಂಠೀರವ ಸ್ಟುಡಿಯೋಗೆ ಆಗಮಿಸಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ್ರು. ಪುನೀತ್​ ಇಷ್ಟಪಟ್ಟು ಸೇವಿಸುತ್ತಿದ್ದ ತಿಂಡಿ, ತಿನಿಸು ಸೇರಿದಂತೆ ಮಾಂಸಹಾರ ಭಕ್ಷ್ಯ ಭೋಜನವನ್ನು ಎಡೆಗೆ ಇಡಲಾಗಿತ್ತು. ಪುನೀತ್​ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ ರಾಜ್​ಕುಮಾರ್ ಗಂಡನ ಫೋಟೊ ನೋಡಿಕೊಂಡು ಭಾವುಕರಾಗಿ ಕಣ್ಣೀರು ಹಾಕಿದ್ರು. ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳಿಗಾಗಿ ಏರ್ಪಡಿಸಿದ್ದ ಅನ್ನದಾನಕ್ಕೆ ಚಾಲನೆ ನೀಡಿದ್ರು. 8 ಕ್ವಿಂಟಾಲ್​​ ಅಕ್ಕಿ, 4 ಕ್ಷಿಂಟಾಲ್​ ತರಕಾರಿ ಬಳಸಿ ಆಹಾರ ಮಾಡಲಾಗಿತ್ತು. ಇನ್ನು ಸಂಬಂಧಿಕರು, ಸ್ನೇಹಿತರು, ಆಪ್ತರಿಗೆ ಅಪ್ಪು ನಿವಾಸದ ಬಳಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಪುನೀತ್​ಗೆ 24 ಗಂಟೆಗಳ ಕಾಲ ಸಂಗೀತ ನಮನ..!

ಸಂಗೀತ ನಿರ್ದೇಶಕ ಸಾಧುಕೋಕಿಲಾ ನೇತೃತ್ವದಲ್ಲಿ ಬರೋಬ್ಬರಿ 24 ಗಂಟೆಗಳ ಕಾಲ ನಿರಂತರ ಸಂಗೀತ ನಮನ ಸಲ್ಲಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 100 ಗಾಯಕರನ್ನು ಬಳಸಿಕೊಂಡು 15ಕ್ಕೂ ಹೆಚ್ಚು ಸಂಗೀತ ತಂಡಗಳು ದಿನಪೂರ್ತಿ ಗಾನ ನಮನ ಸಲ್ಲಿಸಿದ್ದು ವಿಶೇಷ. ಇದರ ನಡುವೆ ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉತ್ತರ ಕರ್ನಾಟಕ ಸೇರಿದಂತೆ ಬೇರೆ ಬೇರೆ ಊರುಗಳಿಂದ ಬಂದಿದ್ದ ಜನರು ಪುನೀತ್​ ಸಮಾಧಿ ದರ್ಶನ ಮಾಡಿ ತೋರಿಸಿದ ಪ್ರೀತಿ ಅಮೋಘವಾಗಿತ್ತು. ಗಂಧದ ಗುಡಿ ಥೀಮ್​​ನಲ್ಲಿ ಅಲಂಕಾರ ಆಗಿದ್ದ ಪುನೀತ್​ ರಾಜ್​ಕುಮಾರ್​ ಸಮಾಧಿಯನ್ನು ಕಣ್ತುಂಬಿಕೊಂಡು ಕಣ್ತುಂಬಿಕೊಂಡಿದ್ದಾರೆ.

ಅಭಿಮಾನಿಗಳ ಪ್ರೀತಿಯಿಂದ ಪುಣ್ಯಸ್ಮರಣೆ ಪುನೀತ..!

ಬಾಗಲಕೋಟೆಯ ಜಮಖಂಡಿಯಿಂದ ಅಪ್ಪುಗಾಗಿ ಜೋಳದ ರೊಟ್ಟಿ, ಹೋಳಿಗೆ ತಂದು ಅರ್ಪಿಸಿದ್ರು. ಹಾವೇರಿಯ ಶಿಗ್ಗಾಂವಿಯ ನಾರಾಯಣಪುರ ಗ್ರಾಮಸ್ಥರು ರುದ್ರಾಕ್ಷಿ ಹಾರ ತಂದು ಪ್ರೀತಿಯ ನಟನಿಗೆ ಹಾಕಿದ್ರು. ಪ್ರತಿ ಬಾರಿಯೂ ಅಪ್ಪು ಸಮಾಧಿ ಬಳಿ ಕಾಣಿಸಿಕೊಳ್ಳುವ ಅಜ್ಜಿ ಸುಮಿತ್ರ ಪುನೀತ್​ ಸಮಾಧಿಗೆ ಪುರಿ ಹಾರ ಹಾಕುವ ಮೂಲಕ ಪ್ರೀತಿ ತೋರಿಸಿದ್ರು. ದಾವಣಗೆರೆ ಜಿಲ್ಲೆ ಹೊನ್ನಾಳಿಯಿಂದ 15ಕ್ಕೂ ಹೆಚ್ಚು ಮಹಿಳೆಯರು ಸಮಾಧಿ ಸ್ಥಳಕ್ಕೆ ಬಂದಿದ್ರು.. ಅಪ್ಪು ಇಲ್ಲ ಅನ್ನೋದನ್ನು ನಂಬೋಕೆ ಆಗ್ತಿಲ್ಲ ಅಂತಾ ಕಣ್ಣೀರು ಹಾಕಿದ್ರು. ಶಿವಮೊಗ್ಗ ಜಿಲ್ಲೆ ಸಾಗರದಿಂದ ಕಿನ್ನರಿ ಜೋಗಿಯೊಬ್ಬರು ಕಿನ್ನರಿ ಬಾರಿಸುತ್ತಲೇ ಪುನೀತ್ ಬಗ್ಗೆ ಹಾಡಿ ಹೊಗಳಿದ್ರು.

ಮಗನಿಗೆ ಪುನೀತ್​ ಎಂದು ಸಮಾಧಿ ಬಳಿ ನಾಮಕರಣ..!

ರೂಪಾಂಜಲಿ ಎಂಬ ಪೇಂಟಿಂಗ್ ಆರ್ಟಿಸ್ಟ್ ಪುನೀತ್​ ನಿವಾಸಕ್ಕೆ ತೆರಳಿ ಪುನೀತ್​​ ರಾಜ್​ಕುಮಾರ್​ ಅವರ ಪೇಂಟಿಂಗ್​ ಅನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಿಗೆ ಗಿಫ್ಟ್​ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಆಗಮಿಸಿ ತಮ್ಮ 22 ದಿನದ ಗಂಡು ಮಗುವಿಗೆ ನಾಮಕರಣ ಮಾಡಿದ್ದಾರೆ. ಪುನೀತ್​ ನಿಧನ ಬಳಿಕ ಗಂಡು ಮಗು ಆಗಲಿ ಎಂದು ಹರಸಿಕೊಂಡಿದ್ದ ದಂಪತಿ ತಮ್ಮ ಮಗುವಿಗೆ ಪುನೀತ್​ ಎಂದು ನಾಮಕರಣ ಮಾಡಿದ್ದಾರೆ. ಇನ್ನು ನವೆಂಬರ್​ 1ರಂದು ಸರ್ಕಾರ ಕರ್ನಾಟಕ ರತ್ನ ಗೌರವ ನೀಡಲು ಸಿದ್ಧತೆ ನಡೆಯುತ್ತಿದ್ದು, ಶಿವರಾಜ್​ಕುಮಾರ್​ ದಂಪತಿ ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸರ್ಕಾರದ ಪ್ರಶಸ್ತಿ ವಿತರಣಾ ಕಾರ್ಯಕ್ರಮಕ್ಕೆ ನಟ ರಜನಿಕಾಂತ್​ ಹಾಗೂ ಜ್ಯೂನಿಯರ್​ NTRಗೆ ಆಹ್ವಾನ ನೀಡಿದ್ದು, ಇಬ್ಬರು ಗಣ್ಯರು ಒಪ್ಪಿಕೊಂಡಿದ್ದಾರೆ.

Related Posts

Don't Miss it !