‘ I am sorry ನಮ್ಮಿಂದ ಆಗಲಿಲ್ಲ’ – ನಿರ್ಮಲಾ ಸೀತಾರಾಮನ್​

ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಮಾಧ್ಯಮಗಳ ಎದುರು ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದ ಸಚಿವೆ ನಿರ್ಮಲಾ ಸೀತಾರಾಮನ್​, ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ರಾಜ್ಯದಲ್ಲಿ ಲಸಿಕೆ ಕೊರತೆ ಆಗಿರುವ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಕರ್ನಾಟಕಕ್ಕೆ ಸಿಗಬೇಕಾದ ಲಸಿಕೆ ಸಿಕ್ಕೇ ಸಿಗುತ್ತೆ, ಎಲ್ಲಾ ರಾಜ್ಯಗಳಿಗೂ ಅಗತ್ಯಕ್ಕೆ ತಕ್ಕಂತೆ ಲಸಿಕೆ ಪೂರೈಕೆ ಮಾಡಲಾಗ್ತಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಎಷ್ಟು ಪೂರೈಕೆ ಮಾಡುತ್ತೋ ಮೊದಲೇ ಅದರ ಬಗ್ಗೆ ಮಾಹಿತಿ ಕೊಡುತ್ತೆ. ಏಳು ದಿನಕ್ಕೂ ಮುಂಚೆಯೇ ಕೊಡಬೇಕಾದ ಪ್ರಮಾಣ ತಿಳಿಸುತ್ತೆ, ರಾಜ್ಯಗಳಲ್ಲಿ ಲಸಿಕೆ ಬಳಕೆ ಮಾಡಿದಂತೆಲ್ಲ ಸಕಾಲಕ್ಕೆ ಪೂರೈಕೆ ಆಗುತ್ತಿರುತ್ತದೆ. ಕೇಂದ್ರದ ಲಸಿಕೆ ಪೂರೈಕೆ ನಿರ್ವಹಣೆ ಉತ್ತಮವಾಗಿದೆ. ದೇಶದ ಎಲ್ಲರಿಗೂ ಲಸಿಕೆ ಲಭಿಸಲಿದೆ ಎಂದಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚಿಸಲಾಗಿದೆ, ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಸುಧಾರಣೆಗಳನ್ನು ತರಲಾಗಿದೆ. ಕೋವಿಡ್ ಸಂಕಷ್ಟದಲ್ಲು ಸಾಕಷ್ಟು ಉತ್ತಮ ಕ್ರಮ ಕೈಗೊಂಡಿದ್ದೇವೆ. ಪೆಟ್ರೋಲ್ ದರ ಹೆಚ್ಚಳದ ಬಗ್ಗೆಯೂ ಮಾತನಾಡಿದ ಸಚಿವರು, ಪೆಟ್ರೋಲ್​ ಮೇಲೆ ರಾಜ್ಯದಿಂದಲೂ ಸೆಸ್ ಹಾಕಲಾಗುತ್ತದೆ. ಬ್ಯಾರಲ್‌ಕಚ್ಚಾತೈಲದ ಬೆಲೆಯೂ ಹೆಚ್ಚಾಗಿದೆ. ಪೆಟ್ರೋಲ್ ಕೂಡ ಜಿಎಸ್‌ಟಿ ವ್ಯಾಪ್ತಿಗೆ ತರಲು ಯಾವುದೇ ತಕರಾರಿಲ್ಲ. ಆದರೆ ಜಿಎಸ್‌ಟಿ ಕೌನ್ಸಿಲ್ ಇದನ್ನು ನಿರ್ಧಾರ ಮಾಡಬೇಕಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಜಿಎಸ್‌ಟಿ ಬಾಕಿ ಉಳಿಸಿಕೊಂಡಿರುವ ವಿಚಾರದ ಬಗ್ಗೆ ಮಾತನಾಡಿರುವ ನಿರ್ಮಲಾ ಸೀತಾರಾಮನ್​, ಕೇಂದ್ರ ಸರ್ಕಾರ ಒಂದು ರಾಜ್ಯದ ಜಿಎಸ್‌ಟಿ ಬಗ್ಗೆ ನಿರ್ಧಾರ ಮಾಡಲ್ಲ. ಜಿಎಸ್‌ಟಿ ಕೌನ್ಸಿಲ್ ಇದನ್ನು ತೀರ್ಮಾನ ಮಾಡುತ್ತೆ. ಕೌನ್ಸಿಲ್ ತೀರ್ಮಾನದಂತೆ ಕೇಂದ್ರ ನಡೆದುಕೊಳ್ಳುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಆಹಾರ ಧಾನ್ಯ, ಅಡುಗೆ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಬೆಲೆ‌ಹೆಚ್ಚಳವಾಗಿದೆ ಎಂದಿದ್ದಾರೆ.

ದೇಶದಲ್ಲಿ ಇಂಧನ ದರ ಹೆಚ್ಚಳ ವಿಚಾರದ ಬಗ್ಗೆ ಸಚಿವರು, ಅಬಕಾರಿ ಸುಂಕ ಇಳಿಕೆ ಬಗ್ಗೆ ಈಗಾಗಲೇ ಇಂಧನ ಸಚಿವರು ಮಾತಾಡಿದ್ದಾರೆ. ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿದ ವಿಷಯ. ಕೇಂದ್ರ ಲೆವಿ ಫಿಕ್ಸ್ ಮಾಡಲಿದೆ. ರಾಜ್ಯಗಳಿಗೆ ಸುಂಕ ಹೆಚ್ಚಿಸುವ, ಇಳಿಸುವ ಅವಕಾಶ ಇದೆ. ಒಂದು ಬ್ಯಾರೆಲ್ ಪೆಟ್ರೋಲಿಯಂ ದರ 75 ಡಾಲರ್ ಆಗಿದೆ ಎಂದಿದ್ದಾರೆ.

ಜನ ಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸರ್ಕಾರ ಕಾರಣವಲ್ಲ, ರಾಷ್ಟ್ರದ ಬಡ ಜನರಿಗೆ ಸರ್ಕಾರ ಸಹಾಯ ಹಸ್ತ ಚಾಚಿದೆ. ಲಾಕ್​ಡೌನ್ ಸಂದರ್ಭದಲ್ಲೂ ಉಚಿತ ಆಹಾರ ಪದಾರ್ಥಗಳನ್ನು ವಿತರಿಸಲಾಗಿತ್ತು. ಮೂರು ಎಲ್​ಪಿಜಿ ಸಿಲೆಂಡರ್​ಗಳನ್ನು ವಿತರಣೆ ಮಾಡಿದ್ದೆವು. ಆದರೂ ಬೆಲೆ ಏರಿಕೆಯ ಬಿಸಿ ರಾಷ್ಟ್ರದ ಜನರಿಗೆ ತಟ್ಟಬಾರದು ಎಂದು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿದೆ. ಅದಕ್ಕೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳುತ್ತಿದೆ‌ ಎಂದಿದ್ದಾರೆ. ಕೆಲವೊಂದು ಸಂಗತಿಗಳು ನಮ್ಮ ಕೈ ಮೀರಿ ಹೋಗುತ್ತಿವೆ. ಆದರೂ ಅತ್ಯಗತ್ಯ ಆಹಾರ ಪದಾರ್ಥಗಳ ರಫ್ತಿಗೆ ಕಡಿವಾಣ ಹಾಕಲಾಗಿದೆ ಎಂದಿದ್ದಾರೆ.

ಕೇಂದ್ರವು ಒಂದು ಕಡೆ ಆರ್ಥಿಕ ನೆರವು ಘೋಷಣೆ ಮಾಡಿ ದರ ಹೆಚ್ಚಳ ಮಾಡುವ ಮೂಲಕ ವಾಪಸ್ ಪಡೆಯುತ್ತಿದೆ ಎನ್ನುವ ಆರೋಪ ಸುಳ್ಳು. ಒಂದು ಕೈನಲ್ಲಿ ಕೊಟ್ಟು ಇನ್ನೊಂದು ಕೈನಲ್ಲಿ ಕಿತ್ಕೊಳ್ಳೋ ಥರ ಮಾಡುತ್ತಿಲ್ಲ. ಅಗತ್ಯ ವಸ್ತುಗಳ ದರ ಹೆಚ್ಚಳ ಅನುವಾರ್ಯವಾಗಿ ಆಗಿದೆ. ಅಡುಗೆ ಎಣ್ಣೆ ದರ ಏರಿಕೆಗೆ ಕಾರಣ ಇದೆ. ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದ್ದೇವೆ. ಪೆಟ್ರೋಲ್, ಡೀಸೆಲ್​ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಹೆಚ್ಚಾಗಿರೋದು ಕಾರಣ. ಅಗತ್ಯ ವಸ್ತುಗಳ‌ ದರ ಹೆಚ್ಚಳ ‌ಮಾಡಿದ್ದೇ ಅಚ್ಛೇ ದಿನವಾ ಎಂಬ ಕಾಂಗ್ರೆಸ್ ಆರೋಪಕ್ಕೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ರಾಜ್ಯದಿಂದ ಆಯ್ಕೆ ಆಗಿ ಹೋಗಿದ್ದೀರಿ ನಿಮ್ಮಿಂದ ಹೆಚ್ಚು ನಿರೀಕ್ಷೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್​, ಈ ಪ್ರಶ್ನೆ ನಿಮ್ಮದೋ ಜನರದ್ದೋ ಎಂದು ಮರುಪ್ರಶ್ನೆ ಹಾಕಿದ್ದಾರೆ. ಬಹಳ ಬುದ್ಧಿವಂತಿಕೆಯಿಂದ ಪ್ರಶ್ನೆ ಕೇಳಿದ್ದೀರಿ, ನಾನು ಇಲ್ಲಿಂದ ಆಯ್ಕೆ ಆಗಿ ಹೋಗಿದ್ದೇನೆ. ಆದ್ರೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗಲಿಲ್ಲ. I am sorry I can't reach your expectations ಎಂದಿದ್ದಾರೆ. ಅದೂ ಅಲ್ಲದೆ ಎಲ್ಲದಕ್ಕೂ ನಾನು ಒಬ್ಬಳೇ ಹೊಣೆ ಅಲ್ಲ. ಇಲ್ಲಿಂದ ಬಹಳ ಜನ ಆಯ್ಕೆ ಆಗಿದ್ದಾರೆ ಎನ್ನುವ ಮೂಲಕ ಅವರೆಲ್ಲಾ ಏನು ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕಕ್ಕೆ 15ನೇ ಹಣಕಾಸು ಆಯೋಗದಿಂದ ಬರಬೇಕಾಗಿದ್ದ 5000 ಕೋಟಿಗೆ ನಾನು ಅಡ್ಡಿ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿರುವುದು ಸರಿಯಲ್ಲ. ಅವರ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದ ಹಣಕಾಸು ಅಕ್ರಮಗಳ ಬಗ್ಗೆಯೂ ಅವರು ಸ್ವಲ್ಪ ಮಾತನಾಡಲಿ‌. ಸಿದ್ದರಾಮಯ್ಯನವರು ತಪ್ಪು ಮಾಹಿತಿ ಕೊಡಬಾರದು. ಕರ್ನಾಟಕಕ್ಕೆ ತೊಂದರೆ ಮಾಡಬೇಕೆಂದು ನಮ್ಮ ಉದ್ದೇಶವಿರಲಿಲ್ಲ. ರಾಜ್ಯ ಸರ್ಕಾರ ಆದಾಯ ಕೊರತೆ ಪ್ರಮಾಣವನ್ನು ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ತೋರಿಸಿದ್ದರಿಂದ ಕರ್ನಾಟಕ ,ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಹೆಚ್ಚುವರಿ ಹಣಕಾಸು ಬಿಡುಗಡೆ ತಡೆಹಿಡಿಯಲಾಯ್ತು. ಸಹಜ ಆದಾಯ ಕೊರತೆ ಸರಿಯಾದ ಕ್ರಮ. ಹೆಚ್ಚುವರಿ ಆದಾಯ ಕೊರತೆ ತೋರಿಸುವುದು ರಾಜ್ಯಗಳಿಗೆ ಶೋಭೆ ತರಲ್ಲ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

Related Posts

Don't Miss it !