KGF 2 ಸಿನಿಮಾ ನೋಡುವಾಗ ಗುಂಡಿನ ದಾಳಿ.. ಇಬ್ಬರ ಸ್ಥಿತಿ ಚಿಂತಾಜನಕ..

ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದಾಗ ಸಾಮಾನ್ಯ ಜನರಿಗೆ ಭಯ ಉಂಟಾಗುವುದು ಸಹಜ. ಕರ್ನಾಟಕ ಉತ್ತರ ಪ್ರದೇಶ, ಬಿಹಾರದ ರೀತಿ ಹಿಂಸಾಚಾರವನ್ನು ಮೈಗೂಡಿಸಿಕೊಳ್ತಿದೆ ಎನ್ನುವ ಆತಂಕ ಮನೆ ಮಾಡುತ್ತದೆ. ನಾವು ಈ ರೀತಿಯ ಘಟನೆಗಳನ್ನು ಉತ್ತರ ಭಾರತದ ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶದಲ್ಲಿ ನೋಡಬಹುದು. ಮದುವೆ ಮನೆಯಲ್ಲಿ ಗುಂಡು ಹಾರಿಸಿ ಸಂಭ್ರಮ ಮಾಡುವುದು ಸಾಮಾನ್ಯ ಸಂಗತಿ. ಅದೆ ರೀತಿ ಹಬ್ಬ ಹರಿದಿನಗಳಲ್ಲೂ ಗುಂಡಿನ ಮಳೆ ಸುರಿಸುತ್ತಾರೆ. ಆದರೆ ಇದೀಗ ಕರ್ನಾಟಕ ಕೂಡ ನಿಧಾನವಾಗಿ ರಕ್ತಪಾತವನ್ನು ಸಂಭ್ರಮದ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಿದೆ ಎನಿಸುತ್ತದೆ. ಕೆಜಿಎಫ್​ 2 ಸಿನಿಮಾ ನೋಡಲು ಥಿಯೇಟರ್​ಗೆ ಹೋಗಿದ್ದ ಇಬ್ಬರು ಯುವಕರು ಪ್ರಾಣ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ತವರಲ್ಲೇ ಅಟ್ಟಹಾಸ..!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಶೂಟೌಟ್ ನಡೆದಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯ ರಾಜಶ್ರೀ ಚಿತ್ರ ಮಂದಿರದಲ್ಲಿ ಈ ದುರ್ಘಟನೆ ನಡೆದಿದೆ. ಸಿನಿಮಾ ನೋಡುವ ವೇಳೆ ವ್ಯಕ್ತಿಯೊಬ್ಬ ಮನಬಂದಂತೆ ಇಬ್ಬರ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. ಮುತ್ತು ಹಾಗೂ ವಸಂತ್ ಎಂಬ ಇಬ್ಬರು ಯುವಕನ ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನೆ ಮಾಡಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗುಂಡು ಹಾರಿಸಿವರು ಯಾರು ಅನ್ನೋದನ್ನು ತನಿಖೆ ಮಾಡಲಾಗ್ತಿದೆ. ಯುವಕರ ಸುತ್ತಮುತ್ತ ಕುಳಿತಿದ್ದವರು ಯಾರು ಅನ್ನೋ ಬಗ್ಗೆಯೂ ಹುಡುಕಾಟ ನಡೆಯುತ್ತಿದೆ. ಏನಾದರೂ ಹಳೇ ದ್ವೇಷದಿಂದ ಈ ಘಟನೆ ನಡೆದಿದ್ಯಾ ಎನ್ನುವ ಬಗ್ಗೆಯೂ ಪೊಲೀಸರಿಗೆ ಶಂಕೆ ಮೂಡಿದೆ.

ಥಿಯೇಟರ್​ ಒಳಗೆ ಅಪರಿಚಿತನಿಂದ ಗುಂಡಿನ ದಾಳಿ..!

ಕೆಜಿಎಫ್ 2 ಸಿನಿಮಾ ಪ್ರದರ್ಶನ ಆಗುತ್ತಿದ್ದ ವೇಳೆ ಅಪರಿಚಿತ 2-3 ಬಾರಿ ಗುಂಡು ಹಾರಿಸಿದ್ದಾನೆ. ಯುವಕರ ಸೊಂಟದ ಭಾಗಕ್ಕೆ ಗುಂಡು ತಗುಲಿದೆ. ಕೈಯ್ಯನ್ನೂ ಸೀಳಿಕೊಂಡು ಹೊರಕ್ಕೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದ ಇಬ್ಬರು ಯುವಕರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಕೆಲಸ ಆಗಿದೆ. ಘಟನಾ ಸ್ಥಳಕ್ಕೆ ಹಾವೇರಿ ಎಸ್​ಪಿ ಹನುಮಂತರಾಯ್ ದೌಡಾಯಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಕೆಲಸ ಮಾಡಲಾಗಿದೆ. ಆದರೆ ಘಟನೆಗೆ ಪ್ರಮುಖ ಕಾರಣ ಏನು..? ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿಗ್ಗಾಂವಿ ಪೊಲೀಸ್​ ಠಾಣೆಯಲ್ಲಿ ಅನಾಮಿಕ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಸಿನಿಮಾ ನೋಡಿ ಪ್ರಚೋದನೆಯೋ..? ಹುಬ್ಬಳ್ಳಿ ಎಫೆಕ್ಟೋ..?

ರಾಖಿಭಾಯ್​ ಅಭಿನಯದ ಕೆಜಿಎಫ್​ 2 ಸಿನಿಮಾ ಹೊಡಿಬಡಿ ಮೂಲಕವೇ ಪ್ರಸಿದ್ಧಿ ಪಡೆದಿದೆ. ಗುಂಡುಗಳ ಆರ್ಭಟದ ನಡುವೆ ಉಲ್ಲಾಸದಿಂದ ಗುಂಡು ಹಾರಿಸಿದ್ದಾನಾ..? ಎನ್ನುವ ಬಗ್ಗೆ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಆದರೆ ಗನ್​ ತೆಗೆದುಕೊಂಡು ಥಿಯೇಟರ್​ ಒಳಕ್ಕೆ ಹೋಗಿದ್ದು ಯಾಕೆ..? ಹಳೇ ದ್ವೇಷ ಏನಾದರೂ ಇತ್ತಾ..? ಎನ್ನುವ ಜೊತೆಗೆ ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದಿದ್ದ ಮುಸ್ಲಿಂ ಸಮುದಾಯದ ಹೋರಾಟದ ಹಿನ್ನಲೆ ಏನಾದರೂ ಇದೆಯಾ..? ಎನ್ನುವ ಬಗ್ಗೆಯೂ ಅನುಮಾನಗಳು ಮೂಡುತ್ತಿವೆ. ಇತ್ತೀಚಿಗೆ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಯುವಕರು ಚಿಕಿತ್ಸೆ ಪಡೆದ ಬಳಿಕ ಗುಂಡು ಹೊಡೆದವರು ಯಾರು..? ಎನ್ನುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಸಿಗಬೇಕಿದೆ. ಆ ಬಳಿಕ ಅಷ್ಟೇ ಘಟನೆಗೆ ಪ್ರಮುಖ ಕಾರಣ ಸಿಗಲಿದೆ.

Related Posts

Don't Miss it !