ತಂಗಿ ಗಂಡನ ಜೊತೆಗೆ ಸರಸ ಸಲ್ಲಾಪ.. 4 ಮಕ್ಕಳು ಸೇರಿ ಐವರನ್ನು ಬಲಿ ಪಡೆದ ಮಾ‘ನಾ’ರಿ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂ ಇರುವ ಕೃಷ್ಣರಾಜಸಾಗರ ಗ್ರಾಮದಲ್ಲಿ ನಡೆದಿದ್ದ 5 ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರನ್ನು ಭೀಕರವಾಗಿ ಹತ್ಯೆ ಮಾಡಿದ್ದು, ಒಂದು ಹೆಣ್ಣು. ತನ್ನ ಸ್ವಂತ ತಂಗಿ ಸೇರಿದಂತೆ ತಂಗಿ ಮಕ್ಕಳು ಹಾಗೂ ಮತ್ತೋರ್ವ ಬಾಲಕನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಳು. ಅಷ್ಟು ಮಾತ್ರವಲ್ಲದೆ ಬೆಳಗ್ಗೆ 10 ಗಂಟೆ ಸುಮಾರಿಗೆ ಮತ್ತೆ ವಾಪಸ್​ ಆಗಿದ್ದ ಹಂತಕಿ ಕೊಲೆಯಾಗಿದ್ದ ಶವದ ಎದುರು ಕುಳಿತು ಕಣ್ಣೀರು ಹಾಕುವ ನಾಟಕ ಮಾಡಿದ್ದಳು. ಯಾರಿಗೂ ಅನುಮಾನ ಬರಬಾರದು ಎಂದು ಆಕೆ ಮಾಡಿದ್ದ ಮಾಸ್ಟರ್​ ಪ್ಲ್ಯಾನ್​, ಆಕೆಯನ್ನು ಪೊಲೀಸರ ಎದುರು ತಂದು ನಿಲ್ಲಿಸಿತ್ತು ಎನ್ನುವುದು ವಿಶೇಷ. ಆಂಟಿ ಎಂದು ಮಗು ಕೂಗಿದ್ದು, ನಾಲ್ವರು ಮಕ್ಕಳ ಕೊಲೆಗೂ ಕಾರಣವಾಯಿತು ಎಂದು ಹಂತಕಿ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾಳೆ.

ತಂಗಿ ಗಂಡನ ಜೊತೆಗೆ ನಡೆದಿತ್ತು ಅಕ್ಕನ ಸರಸ ಸಲ್ಲಾಪ..!

ಕೊಲೆಯಾದ ಲಕ್ಷ್ಮೀ ಗಂಗಾರಾಮ್​ ಎಂಬಾತನ ಜೊತೆಗೆ 12 ವರ್ಷಗಳ ಹಿಂದೆ ಮದುವೆ ಆಗಿದ್ದಳು. ಆದರೆ ಹಂತಕಿ ಲಕ್ಷ್ಮೀಗೆ ಮದುವೆ ಆಗಿರಲಿಲ್ಲ. ಓರ್ವ ಶಿಕ್ಷಕನ ಜೊತೆಗೆ ಪರಾರಿಯಾಗಿದ್ದ ಲಕ್ಷ್ಮೀ ಕೆಲವು ದಿನಗಳ ನಂತರ ವಾಪಸ್​ ಆಗಿದ್ದಳು. ಆ ಬಳಿಕ ಬೇರೊಬ್ಬ ಯುವಕನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಆದರೂ ಕೊಲೆಗಾತಿ ಲಕ್ಷ್ಮೀ ತನ್ನ ತಂಗಿಯ ಗಂಡ ಗಂಗಾರಾಮ್​​ನನ್ನು ತನ್ನ ಕಾಮದ ಬಲೆಯಲ್ಲಿ ಬೀಳಿಸಿಕೊಂಡಿದ್ದಳು. ಈ ವಿಚಾರ ಕೊಲೆಯಾದ ಲಕ್ಷ್ಮೀಗೆ ಗೊತ್ತಾದ ಬಳಿಕ ನ್ಯಾಯ ಪಂಚಾಯ್ತಿ ಮಾಡಿ ಇಬ್ಬರನ್ನೂ ದೂರ ಮಾಡಲಾಗಿತ್ತು. ಜನರ ಎದುರು ಮಾನ ಹರಾಜಾದ ಬಳಿಕ ತನ್ನ ಹೆಂಡತಿ ಮಕ್ಕಳ ಜೊತೆಗೆ ಸುಖಸಂಸಾರ ನಡೆಸುತ್ತಿದ್ದ ಗಂಗಾರಾಮ್​​ನನ್ನು ಪಡೆಯಲೇ ಬೇಕು ಎಂದು ಹಠಕ್ಕೆ ಬಿದ್ದಿದ್ದ ಕೊಲೆಗಾತಿ ಲಕ್ಷ್ಮೀ, ತನ್ನ ತಂಗಿ ಹಾಗೂ ನಾಲ್ವರು ಮಕ್ಕಳನ್ನು ನಿರ್ದಯಿಯಾಗಿ ಕೊಚ್ಚಿ ಕೊಲೆ ಮಾಡಿದ್ದಳು. ಕೊಲೆಗೂ ಮುನ್ನವೇ ಮಾಸ್ಟರ್​ ಪ್ಲ್ಯಾನ್​ ಮಾಡಿದ್ದ ಲಕ್ಷ್ಮೀ ಖಾಕಿ ಕಣ್ಣಿಗೆ ಬೀಳದಂತೆ ತಂತ್ರ ಮಾಡಿದ್ದಳು.

ಇದನ್ನೂ ಓದಿ: ಕ್ರೇಜಿಸ್ಟಾರ್​ ರವಿಚಂದ್ರನ್​ ಕಿಡ್ನ್ಯಾಪ್​.. ಕನ್ನಡ ಸಿನಿಪ್ರೇಮಿಗಳಲ್ಲಿ ಆತಂಕ..!

ಕೊಲೆಗಾತಿ ಲಕ್ಷ್ಮೀ

ಖಾಕಿ ಎದುರು ನಡೆಯಲಿಲ್ಲ ಖತರ್ನಾಕ್​ ಆಂಟಿಯ ಆಟ..!

ಗಂಗಾರಾಮ್​ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಕೊಲೆಗಾತಿ ಲಕ್ಷ್ಮೀಗೆ ಬೇರೆಯವನ ಜೊತೆಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದರು. ಆದರೆ ತನ್ನ ದೇಹ ಸುಖವನ್ನು ಗಂಗಾರಾಮ್​ ಜೊತೆಗೆ ಅನುಭವಿಸಲು ಪ್ರಾಣ ತೆಗೆಯುವ ಪಣ ತೊಟ್ಟಿದ್ದ ಲಕ್ಷ್ಮೀ ಕೊಲೆ ಮಾಡುವ ಮುನ್ನ ಪೂರ್ವ ತಯಾರಿ ಮಾಡಿಕೊಂಡಿದ್ದಳು. ಮಾಂಸ ಕತ್ತರಿಸುವ ಮಚ್ಚೊಂದನ್ನು ಖರೀದಿ ಮಾಡಿದ್ದಳು. ರಾತ್ರಿ ಆಗುತ್ತಿದ್ದ ಹಾಗೆ ತಂಗಿ ಮನೆಗೆ ಎಂಟ್ರಿ ಕೊಟ್ಟಿದ್ದ ಕೊಲೆಗಾತಿ ಊಟ ಮಾಡಿ, ಚೆನ್ನಾಗಿಯೇ ಮಾತನಾಡಿಕೊಂಡು ರಾತ್ರಿ ಎಲ್ಲರ ಜೊತೆಗೆ ಮಲಗಿದ್ದಳು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ತನ್ನ ಕಾರ್ಯಾಚರಣೆ ಶುರು ಮಾಡಿ, ತಂಗಿ ಲಕ್ಷ್ಮೀಯನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಅದೇ ಸಮಯಕ್ಕೆ ಮಲಗಿದ್ದ ಮಗು ಎದ್ದು ಆಂಟಿ ಎಂದು ಕೂಗಿದೆ. ಮಗು ನಾನೇ ಕೊಲೆಗಾತಿ ಎಂದು ಪತ್ತೆ ಹಚ್ಚಿಬಿಡುತ್ತದೆ ಎನ್ನುವ ಕಾರಣಕ್ಕೆ ಎಲ್ಲಾ ಮಕ್ಕಳನ್ನು ಕೊಂದು ಬಿಸಾಡಿದ್ದಳು. ಆ ಬಳಿಕ ಸಾಕಷ್ಟು ಸಮಯ ರಕ್ತದ ಮಡುವಿನಲ್ಲೇ ಕುಳಿತು, ಜನರು ಎಚ್ಚರಗೊಳ್ಳುವ ಮುನ್ನ ಮನೆಯಿಂದ ಕಾಲ್ಕಿತ್ತಿದ್ದಳು.

ಕೊಲೆಯಾದ ಕುಟುಂಬ

ಕೊಲೆಗಾತಿ ಆಂಟಿಯ ಆ ಒಂದು ಕರೆ ಕೊಲೆಯ ಸಾಕ್ಷಿ ಹೇಳಿತ್ತು..!!

ಗಂಗಾರಾಮ್​ ಹಾಗೂ ಆತನ ಅಣ್ಣ ಊರಿಂದ ಊರಿಗೆ ಬಟ್ಟೆ ವ್ಯಾಪಾರ ಮಾಡುತ್ತ ಹೋಗುವ ವಿಚಾರ ಕೊಲೆಗಾತಿಗೆ ತಿಳಿದಿತ್ತು. ಗಂಗಾರಾಮ್​ ಅಕ್ಕನ ಮಗ ಕೂಡ ಕೃಷ್ಣರಾಜ ಸಾಗರ ಗ್ರಾಮದಲ್ಲೇ ಉಳಿದುಕೊಂಡಿದ್ದ. ಆತನಿಗೆ ಕರೆ ಮಾಡಿದ್ದ ಲಕ್ಷ್ಮೀ ಮನೆಯಲ್ಲಿ ಯಾರಿದ್ದಾರೆ..? ಏನು ವಿಶೇಷ ಎಲ್ಲವನ್ನೂ ತಿಳಿದುಕೊಂಡಿದ್ದಳು. ಆದರೆ ಅಂದಿನ ರಾತ್ರಿ ಸ್ನೇಹಿತರ ಜೊತೆಗೆ ಬರ್ತ್​​ಡೇ ಪಾರ್ಟಿಯಲ್ಲಿದ್ದ ಗಂಗಾರಾಮ್​ ಅಕ್ಕನ ಮಗ ನಾನು ಸ್ನೇಹಿತರ ಜೊತೆಗೆ ಇದ್ದೇನೆ. ನಾನು ಮನೆಗೆ ಹೋಗುವುದಿಲ್ಲ ಎಂದು ಹೇಳಿದ್ದ. ಇನ್ನೂ ಬೆಳಗ್ಗೆ ಹೆಣದ ಎದುರು ಕುಳಿತು ರೋದಿಸುತ್ತಿದ್ದಾಗ ಕೊಲೆಗಾತಿಗೆ ಕೊಂಚವೂ ಪ್ರಶ್ಚತ್ತಾಪ ಇರಲಿಲ್ಲ. ಕಣ್ಣಿನಿಂದ ಕಣ್ಣೀರು ಬಂದಿರಲಿಲ್ಲ. ಆದರೆ ಮಾಧ್ಯಮಗಳ ಕ್ಯಾಮಾರಾ ಕಂಡು ಕೋಪಗೊಂಡಿದ್ದಳು. ಕ್ಯಾಮಾರಾವನ್ನು ಆ ಕಡೆಗೆ ತೆಗೆದುಕೊಂಡು ಹೋಗಿ ಎಂದು ಕೋಪಗೊಂಡಿದ್ದಳು. ಈ ಎರಡು ವಿಚಾರಗಳು ಪೊಲೀಸರಿಗೆ ಅನುಮಾನ ಮೂಡಿಸಿದ್ದವು. ಮೈಸೂರಿನಲ್ಲಿ ಉಳಿದುಕೊಂಡಿದ್ದ ಕೊಲೆಗಾತಿಯ ಕೈಗೆ ಕೋಳ ತೊಡಿಸುವಲ್ಲಿ ಖಾಕಿ ಸಫಲವಾಗಿದೆ.

ಕೊಲೆಗಾತಿ ಲಕ್ಷ್ಮೀಯನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೆಆರ್​ಎಸ್​ ಗ್ರಾಮದ ಜನ ಪ್ರತಿಭಟನೆ ನಡೆಸಿದ್ದಾರೆ. ವಿಶೇಷ ಅಂದ್ರೆ ಯಾರೊಂದಿಗೆ ದೇಹಸುಖ ಅನುಭವಿಸಬೇಕು ಎಂದು ಅಂದುಕೊಂಡಿದ್ದಳೋ ಆ ಗಂಗರಾಮ್​​ ಕೂಡ ಈಕೆಯ ಮಾಸ್ಟರ್​ ಪ್ಲ್ಯಾನ್​​ನಲ್ಲಿ ಇರುವ ಗುಮಾನಿ ಪೊಲೀಸರನ್ನೂ ಕಾಡುತ್ತಿದೆ. ಆದರೆ ಆತನ ಒಳಸಂಚಿನ ಬಗ್ಗೆ ಮಂಡ್ಯ ಪೊಲೀಸರಿಗೆ ಇನ್ನೂ ಸಾಕ್ಷ್ಯಗಳು ಲಭ್ಯವಾಗಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ. ಕೊಲೆಯಾದ ಲಕ್ಷ್ಮೀ ಗಂಡ ತಾನು ಇದರಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸರು ಸಾಕ್ಷ್ಯ ಸಂಗ್ರಹ ಮಾಡಿದರೆ ಅಕ್ರಮ ಸಂಬಂಧದ ಜೋಡಿ ಹಕ್ಕಿಗಳು ಜೈಲಲ್ಲಿ ಒಂದಾಗುವ ಕಾಲ ಬಂದರೂ ಬರಬಹುದು.

Related Posts

Don't Miss it !