IAS ಅಧಿಕಾರಿ ರಕ್ಷಣೆಗೆ ರಾಜ್ಯ ಸರ್ಕಾರದ ಸಾಥ್​, ಅರೆಸ್ಟ್​ ಆಗಿದ್ದ ಡಿಸಿಗೆ ಡಿಫಾಲ್ಟ್​ ಬೇಲ್​..!

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿ ನಡೆಯುತ್ತಿದೆ ಎನ್ನುವುದನ್ನು ಉನ್ನತ ಮಟ್ಟದ ಅಧಿಕಾರಿಯಿಂದ ಹಿಡಿದು ಜನಸಾಮಾನ್ಯರೂ ಕೂಡ ಮಾತನಾಡಿಕೊಳ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಇತ್ತೀಚಿಗೆ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್​. ಜಿಲ್ಲಾಧಿಕಾರಿ ಕಚೇರಿಯಲ್ಲೇ ಭೂ ವ್ಯಾಜ್ಯಕ್ಕೆ ಸಂಬಂಧಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಭೂ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ತಹಶೀಲ್ದಾರ್​ ಬಂಧನ ಆಗಿತ್ತು. ಆ ಬಳಿಕ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ಜಿಲ್ಲಾಧಿಕಾರಿ ಆಗಿದ್ದ ಮಂಜುನಾಥ್​ ಅವರ ಕೈವಾಡ ಇರುವುದು ಪತ್ತೆಯಾಗಿತ್ತು. ಹಾಲಿ ಜಿಲ್ಲಾಧಿಕಾರಿ ಅವರನ್ನೇ ಅರೆಸ್ಟ್​ ಮಾಡಿದ್ದ ಎಸಿಬಿ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಇದೀಗ ಡಿಫಾಲ್ಟ್​ ಜಾಮೀನು ಲಭ್ಯವಾಗಿದ್ದು ಸರ್ಕಾರದ ನಿರ್ಲಕ್ಷ್ಯವನ್ನು ಬಯಲು ಮಾಡುತ್ತಿದೆ.

ಜುಲೈ 4ರಂದು ಅರೆಸ್ಟ್​ ಆಗಿದ್ದ IAS ಮಂಜುನಾಥ್​​ಗೆ ಜಾಮೀನು..!

ಐಎಎಸ್​ ಅಧಿಕಾರಿ ಮಂಜುನಾಥ್​​ ಅವರಿಗೆ ಲಂಚದ ಪ್ರಕರಣದಲ್ಲಿ ಲಿಂಕ್​ ಇದೆ ಎನ್ನುವ ಕಾರಣಕ್ಕೆ ಬಂಧನ ಮಾಡಲಾಗಿತ್ತು. ಆದರೆ ನಿಗದಿತ ಸಮಯದಲ್ಲಿ ಅಧಿಕಾರಿ ವಿರುದ್ಧ ಚಾರ್ಜ್​ಶೀಟ್​​ ಹಾಕುವಲ್ಲಿ ಎಸಿಬಿ ಅಧಿಕಾರಿಗಳು ವಿಫಲರಾಗಿದ್ದಾರೆ. 60 ದಿನಗಳಲ್ಲಿ ಆರೋಪ ಪಟ್ಟಿಯನ್ನು ಕೋರ್ಟ್​ಗೆ ಸಲ್ಲಿಸಬೇಕು ಎನ್ನುವುದು ನಿಯಮ. ಆ ನಿಯಮವನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪಾಲನೆ ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ IAS ಅಧಿಕಾರಿ ಮಂಜುನಾಥ್​ಗೆ ಎಸಿಬಿ ನಿರ್ಲಕ್ಷ್ಯದ ​ ಜಾಮೀನು ಮಂಜೂರಾಗಿದೆ. IAS ಅಧಿಕಾರಿಗೆ ಜಾಮೀನು ಸಿಗುವಂತೆ ಎಸಿಬಿ ನೇರವಾಗಿಯೇ ಸಹಕರಿಸಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಇಲ್ಲದಿದ್ದರೆ ನಿಗದಿತ ಸಮಯದಲ್ಲಿ ಎಸಿಬಿ ಅಧಿಕಾರಿಗಳು ಕೋರ್ಟ್​ಗೆ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಇದರಲ್ಲಿ ರಾಜ್ಯ ಸರ್ಕಾರದ ಕೈವಾಡ ಎಷ್ಟು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

ಐಎಎಸ್ ಅಧಿಕಾರಿ​ ರಕ್ಷಣೆಯಲ್ಲಿ ರಾಜ್ಯ ಸರ್ಕಾರದ ಪಾತ್ರ..!?

ಲಂಚದ ಕೇಸ್​​ನಲ್ಲಿ ಐಎಎಸ್​ ಅಧಿಕಾರಿ ಮಂಜುನಾಥ್​​ಗೆ ಡಿಫಾಲ್ಟ್​ ಜಾಮೀನು ಮಂಜೂರು ಆಗುವಲ್ಲಿ ಎಸಿಬಿ ಪಾತ್ರದ ಜೊತೆಗೆ ರಾಜ್ಯ ಸರ್ಕಾರದ ಪಾತ್ರವನ್ನೂ ಕಡೆಗಣಿಸುವಂತಿಲ್ಲ. ಲಂಚದ ಕೇಸ್​​ನಲ್ಲಿ ಬಂಧನ ಆಗ್ತಿದ್ದ ಹಾಗೆ ಜಿಲ್ಲಾಧಿಕಾರಿ ಆಗಿದ್ದ ಮಂಜುನಾಥ್​ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದ ಸರ್ಕಾರ, ಆರೋಪ ಪಟ್ಟಿ ಸಲ್ಲಿಸುವಲ್ಲಿ ನಿಧಾನಗತಿ ಅನುಸರಿಸುವಂತೆ ಮಾಡಲಾಗಿದೆ. ಪ್ರಮುಖ ಪ್ರಕರಣಗಳಲ್ಲಿ ಎಸಿಬಿ ಅಧಿಕಾರಿಗಳು ಬಿ-ರಿಪೋರ್ಟ್​ ಹಾಕುತ್ತಿದ್ದಾರೆ ಎನ್ನುವ ಕಾರಣಕ್ಕೆ ಹೈಕೋರ್ಟ್​ ನ್ಯಾಯಮೂರ್ತಿ ಎಸಿಬಿ ವಿರುದ್ಧ ಗರಂ ಆಗಿದ್ದರು. ಆ ಬಳಿಕ ಎಸಿಬಿ ತನಿಖೆ ಮಾಡಿದ್ದ ಕೇಸ್​ಗಳ ಸಂಪೂರ್ಣ ಮಾಹಿತಿ ಕೇಳಿದ್ದರು. ಇಷ್ಟೆಲ್ಲಾ ಆದ್ಮೇಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​ನ ಮತ್ತೊಂದು ಪೀಠ ಎಸಿಬಿ ರಚನೆಯನ್ನೇ ರದ್ದು ಮಾಡಿ ಆದೇಶ ಹೊರಡಿಸಿತ್ತು. ಲೋಕಾಯುಕ್ತಕ್ಕೆ ಎಲ್ಲಾ ಕೇಸ್​ ವರ್ಗಾವಣೆ ಮಾಡಿ, ಲೋಕಾಯುಕ್ತ ನ್ಯಾಯಮೂರ್ತಿಗಳ ಅಡಿಯಲ್ಲಿ ಎಸಿಬಿ ಕೆಲಸ ಮಾಡಲಿ ಎಂದಿತ್ತು. ಆದರೆ ಇದೀಗ ಸರ್ಕಾರದ ವಿಳಂಬ ನೀತಿ ಐಎಎಸ್​ ಅಧಿಕಾರಿಗೆ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದೆ.

ಆಗಸ್ಟ್​ 11ರಂದು ಎಸಿಬಿ ರದ್ದು, ತನಿಖೆ ಅರ್ಧಕ್ಕೆ ಮೊಟಕು..!

ಕಳೆದ ಆಗಸ್ಟ್​ 11ರಂದು ಎಸಿಬಿ ರಚನೆಯನ್ನು ರದ್ದು ಮಾಡಿದ್ದ ಹೈಕೋರ್ಟ್​​ ಲೋಕಾಯುಕ್ತ ವ್ಯಾಪ್ತಿಯೊಳಕ್ಕೆ ತರುವಂತೆ ಸರ್ಕಾರಕ್ಕೆ ಸೂಚನೆ ಕೊಟ್ಟಿತ್ತು. ಹೈಕೋರ್ಟ್​ ಆದೇಶವನ್ನು ನಾವು ಸರ್ಕಾರದ ವತಿಯಿಂದ ಪ್ರಶ್ನೆ ಮಾಡುವುದಿಲ್ಲ ಎಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ ಲೋಕಾಯುಕ್ತ ಅಡಿಯಲ್ಲಿ ತನಿಖೆ ನಡೆಸುವಂತೆ ಎಸಿಬಿಯನ್ನು ವರ್ಗಾವಣೆ ಮಾಡ್ತೇವೆ ಎಂದಿದ್ದರು. 20 ದಿನಗಳ ಕಳೆದು ಹೋದರೂ ಎಸಿಬಿ ಅಸ್ತಿತ್ವವನ್ನು ವರ್ಗಾವಣೆ ಮಾಡಲಿಲ್ಲ. ಇದೀಗ ಎಸಿಬಿ ರದ್ದಾಗಿರುವ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ವಿಚಾರಣೆ ನಿಲ್ಲಿಸುವುದು ಅನಿವಾರ್ಯವಾಗಿದೆ. ಮಂಜುನಾಥ್​ ಪ್ರಕರಣದಲ್ಲೂ ಎಸಿಬಿ ಆರೋಪ ಪಟ್ಟಿ ದಾಖಲಿಸುವುದು ಸಾಧ್ಯವಾಗಿಲ್ಲ. ಅತ್ತ ಸುಪ್ರೀಂಕೋರ್ಟ್​ಗೆ ಕೆಲವು ಖಾಸಗಿ ವ್ಯಕ್ತಿಗಳು ಹೈಕೋರ್ಟ್​ ಆದೇಶವನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಅದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಆದರೆ ವರ್ಗಾವಣೆ ಮಾಡುವಲ್ಲೂ ವಿಳಂಬ ನೀತಿ ಅನುಸರಿದ್ದಾರೆ, ಇದೆ ಕಾರಣದಿಂದ ಮಂಜುನಾಥ್​​ ಅವರಿಗೆ ಜಾಮೀನು ಮಂಜುರಾಗಿದೆ. ಒಟ್ಟಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ರಕ್ಷಣೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಿದಂತಾಗಿದೆ.

Related Posts

Don't Miss it !