ಬಸ್​ ನಿಲ್ದಾಣ ಉದ್ಘಾಟನೆಗೆ ಎಮ್ಮೆಲ್ಲೆ (MLA) ಬರಲಿಲ್ಲ, ಎಮ್ಮೆ ಕರೆತಂದ ರೈತರು..!

ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಬಸ್​ ನಿಲ್ದಾಣ ಉದ್ಘಾಟನೆಗೆ ಶಾಸಕರು ಬರಲಿಲ್ಲ ಅಂತಾ ಆಕ್ರೋಶಗೊಂಡ ರೈತ ಸಮುದಾಯ ತಾವು ಹಾಲಿಗಾಗಿ ಸಾಕಿದ್ದ ಎಮ್ಮೆಯನ್ನು ಕರೆತಂದು ಟೆಪ್​ ಕತ್ತರಿಸಿ, ಶಾಸಕರಿಗೆ ತಿರುಗೇಟು ನೀಡಿದ್ದಾರೆ. ಆದರೆ ಶಾಸಕರು, ಸಂಸದರೂ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಉದ್ಘಾಟನೆ ಮಾಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ಗದಗ ಜನಪ್ರತಿನಿಧಿಗಳಿಗೆ ಏನಾಗಿದೆ ಎಂದು ನಿಮ್ಮ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಗೆ ಉತ್ತರ ‘ಇದು ಅಸಲಿ ಬಸ್​ ನಿಲ್ದಾಣ’ ಅಲ್ಲ.

10 ವರ್ಷದಿಂದ ಮನವಿ ಕೊಟ್ರೂ ನೋ ಯೂಸ್​..!

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರಿನಲ್ಲಿ ಬಸ್ ನಿಲ್ದಾಣ ಹಾಳಾಗಿತ್ತು. ಬಿಜೆಪಿ ಶಾಸಕ ರಾಮಪ್ಪ ಲಮಾಣಿ, ಬಿಜೆಪಿ ಸಂಸದ ಶಿವಕುಮಾರ್ ಉದಾಸಿಯವರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು. ಹಾಳಾಗಿರುವ ಬಸ್​ ನಿಲ್ದಾಣವನ್ನು ಮರು ನಿರ್ಮಾಣ ಮಾಡದಿದ್ದರೂ ಪರವಾಗಿಲ್ಲ. ಅದನ್ನೇ ದುರಸ್ಥಿ ಮಾಡಿ, ಜನರು ನಿಲ್ಲುವುದಕ್ಕೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಆದರೆ ಶಾಸಕರು ಹಾಗು ಸಂಸದರು ಇದರ ಬಗ್ಗೆ ಚಕಾರ ಎಚ್ಚಲಿಲ್ಲ. ಕನಿಷ್ಟ ಪಕ್ಷ ರಿಪೇರಿ ಎನ್ನುವ ತೇಪೆ ಕೆಲಸಕ್ಕೂ ಹಣ ಕೊಡಲಿಲ್ಲ, ಕೆಲಸವನ್ನೂ ಮಾಡಲಿಲ್ಲ.

ಶಾಸಕ ರಾಮಪ್ಪ ಲಮಾಣಿ

ತೆಂಗಿನ ಗರಿಯಲ್ಲಿ ನಿರ್ಮಾಣವಾಯ್ತು ನಿಲ್ದಾಣ..!!

ಬಿಜೆಪಿ ಶಾಸಕ, ಬಿಜೆಪಿ ಸಂಸದ, ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಕೇಂದ್ರದಲ್ಲೂ ಬಿಜೆಪಿ ಸರ್ಕಾರ. ಹಳ್ಳಿಯಿಂದ ದಿಲ್ಲಿ ತನಕ ಒಂದೇ ಪಕ್ಷದ ಜನಪ್ರತಿನಿಧಿಗಳು ಹಾಗೂ ಸರ್ಕಾರ ಇದ್ದರೂ, ಹಾಳಾಗಿರುವ ಒಂದು ಬಸ್​ ನಿಲ್ದಾಣಕ್ಕೆ ಕಾಯಕಲ್ಪ ಕೊಡಲಿಲ್ಲ ಎನ್ನುವ ಆಕ್ರೋಶದ ಕಟ್ಟೆ ಒಡೆದಿತ್ತು. ರೈತರು, ಗ್ರಾಮಸ್ಥರು ಎಲ್ಲರೂ ಒಟ್ಟಾಗಿ ಸೇರಿಕೊಂಡು ತೆಂಗಿನ ಗರಿಗಳನ್ನು ಬಳಸಿ, ಚಪ್ಪರ ಹಾಕಿದ್ದರು. ಶಾಸಕರು ಹಾಗು ಸಂಸದರ ಅನುದಾನದಲ್ಲಿ ನಿರ್ಮಾಣವಾದ ತಂಗುದಾಣ ಎಂದು ಬೋರ್ಡ್​ ಕೂಡ ಹಾಕಿದ್ರು. ಉದ್ಘಾಟನೆಗೂ ಆಹ್ವಾನ ಕೊಟ್ರು.

ಸಂಸದ ಶಿವಕುಮಾರ್ ಉದಾಸಿ

ಎಮ್ಮೆ ಮುಂದೆ ನಿಲ್ಲಿಸಿ ಟೇಪ್​ ಕತ್ತರಿಸಿ ಆಕ್ರೋಶ..!

ಕಳೆದ ಒಂದು ದಶಕದಿಂದ ಬಸ್​ ನಿಲ್ದಾಣ ಹಾಳಾಗಿದ್ದರೂ ನಿರ್ಮಾಣ ಮಾಡಲಿಲ್ಲ ಅನ್ನೋ ಕೋಪದಲ್ಲಿ ಕುದಿಯುತ್ತಿದ್ದ ಜನತೆ, ಶಾಸಕರು ಅಥವಾ ಸಂಸದರಿಗೆ ಆಹ್ವಾನ ಕೊಡಲಿಲ್ಲ, ಬದಲಿಗೆ ಎಮ್ಮೆಯನ್ನು ಕರೆತಂದು ಗ್ರಾಮಸ್ಥರೆಲ್ಲಾ ಸೇರಿ ಸ್ವಾಗತ ಮಾಡಿ, ಅದನ್ನು ಮುಂದೆ ನಿಲ್ಲಿಸಿ ಟೇಪ್​ ಕಟ್​​ ಮಾಡಿ ಸಂಭ್ರಮಿಸಿದ್ದಾರೆ. ಶಾಸಕರಿಗೆ ಈ ಮರ್ಯಾದೆ ಸಿಗುತ್ತಿತ್ತೋ ಇಲ್ಲವೋ, ಎಮ್ಮೆಗಂತೂ ಭಾರೀ ಮರ್ಯಾದೆ ಕೊಟ್ಟಿದ್ದಾರೆ. ಅಭಿವೃದ್ಧಿಯ ಸರ್ಕಾರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ವತಃ ಲೋಕೋಪಯೋಗಿ ಸಚಿವರಾಗಿರುವ ಗದಗದ ಸಿ.ಸಿ ಪಾಟೀಲ್​, ಸಾರಿಗೆ ಸಚಿವರಾಗಿರುವ ಈ ಹಿಂದಿನ ಗದಗ ಉಸ್ತುವಾರಿ ಶ್ರೀರಾಮುಲು ಈ ಘಟನೆಯಿಂದ ಸಂತಸ ಹಾಗು ಹೆಮ್ಮೆ ಪಡಬೇಕಿದೆ.

Related Posts

Don't Miss it !