ಕಷ್ಟ ಬಂದಾಗ ಎದೆಗುಂದಬಾರದು..! ಜೀವನಕ್ಕೆ ಇಲ್ಲಿದೆ ನಾನಾ ಮಾರ್ಗ..!

ದಾಲ್​ಪುರಿ ಮಾರಾಟ ಮಾಡ್ತಿದ್ದಾರೆ ಕ್ರಿಕೆಟರ್​..! - ಮೀನು ಮಾರಾಟಗಾರನಾದ ಜನಪ್ರಿಯ ನಟ..! - ಯಾವುದೇ ಕೆಲಸವೂ ಕೀಳಲ್ಲ, ಗೆಲ್ಲುವ ಹುಮ್ಮಸ್ಸಿರಬೇಕು..!

ಕೊರೊನಾ ಸೋಂಕು ಇಡೀ ಜಗತ್ತಿನ ಜನರನ್ನು ನಾನಾ ಸಮಸ್ಯೆಗೆ ತಂದು ನಿಲ್ಲಿಸಿದೆ. ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಸಾಕಷ್ಟು ವ್ಯಾಪಾರಸ್ಥರು ಬಾಡಿಗೆ ಕಟ್ಟಲು ಸಾಧ್ಯವಾಗದೆ ಅಂಗಡಿ ಮುಂಗಟ್ಟುಗಳನ್ನು ಬಂದ್​ ಮಾಡಿದ್ದಾರೆ. ಪ್ರತಿದಿನ ಸಾವಿರಾರು ರೂಪಾಯಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಬೀದಿಬದಿ ವ್ಯಾಪಾರಿಗಳು ಆದಾಯವಿಲ್ಲದೆ ಕಂಗೆಟ್ಟಿದ್ದಾರೆ. ಟ್ಯಾಕ್ಸಿ ಚಾಲಕರು ಮಾಸಿಕ EMI ಕಟ್ಟಲಾಗದೆ, ಸಾಲಗಾರರಿಗೆ ಬಡ್ಡಿ ಕಟ್ಟಲಾಗದೆ ಸಂಕಷ್ಟಗಳ ಸಂಕೋಲೆಯಲ್ಲಿ ಸಿಲುಕಿದ್ದಾರೆ. ಇದರ ನಡುವೆ ಜೀವನ ನಡೆಸುವುದೇ ಕಷ್ಟ ಎಂದು ಭಾವಿಸಿ ಅದೆಷ್ಟೋ ಮಂದಿ ತಮ್ಮ ಜೀವವನ್ನೇ ಕಳೆದುಕೊಳ್ಳುವ ಕೆಲಸ ಮಾಡಿದ್ದಾರೆ.

ದಾಲ್​ಪುರಿ ಮಾರಾಟ ಮಾಡ್ತಿದ್ದಾರೆ ಕ್ರಿಕೆಟರ್​..!

ಬೆಂಗಳೂರು ಸೇರಿದಂತೆ ಬಹುತೇಕ ಭಾಗಗಳಲ್ಲಿ ಗೋಲ್ಗಪ್ಪ ಮಾರಾಟ ಮಾಡೋದು ಈಶಾನ್ಯ ರಾಜ್ಯದವರು. ಒಂದು ಸಣ್ಣ ಟೇಬಲ್​ ಹಾಕಿಕೊಂಡು ಪೂರಿ ಇಟ್ಟುಕೊಂಡು ಮಸಾಲ ಮಿಕ್ಸ್​ ಮಾಡಿ ಪ್ಲೇಟ್​ ಮೇಲೆ ಒಂದೊಂದೇ ಹಾಕುತ್ತಾ ಬಾಯಿಗೆ ರುಚಿ ಹತ್ತಿಸುತ್ತಾರೆ. ಈಶಾನ್ಯ ರಾಜ್ಯಗಳಲ್ಲಿ ಕೆಲಸ ಸಿಗದೆ ಪರದಾಡುವ ಯುವಕರು ದೇಶದ ನಾನಾ ಭಾಗಗಳಲ್ಲಿ ಹೀಗೆ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಳ್ಳುವುದು ರೂಢಿ. ಆದರೆ ಇವರು ಕ್ರಿಕೆಟಿಗ ಆಲ್​ರೌಂಡರ್​ ಪ್ರಕಾಶ್​ ಭಗತ್​. ಅಸ್ಸಾಂ ರಣಜಿ ತಂಡವನ್ನು ಪ್ರತಿನಿಧಿಸಿದ್ದಾರೆ. 2009 – 10, 2010-11ನೇ ಸಾಲಿನಲ್ಲಿ ಕ್ರಿಕೆಟ್​ ಆಡಿದ್ದ ಪ್ರಕಾಶ್​ ಭಗತ್​, ಕಾಯಂ ಉದ್ಯೋಗಕ್ಕಾಗಿ ಅಲೆದಾಡಿದ್ರು. ಕ್ರಿಕೆಟಿಗನಾದರೂ ಕ್ರೀಡಾ ಕೋಟದಲ್ಲಿ ಕೆಲಸ ಸಿಗಲಿಲ್ಲ. ಇದೇ ಕಾರಣಕ್ಕೆ ಕ್ರಿಕೆಟ್​ ತೊರೆದು ಮೊಬೈಲ್​ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ರು. ಇದೀಗ ಕೊರೊನಾ ಸಂಕಷ್ಟದ ಸಮಯ, ಉದ್ಯೋಗ ಕಳೆದುಕೊಂಡಿರುವ ಪ್ರಕಾಶ್​ ಭಗತ್​, ಕುಟುಂಬ ನಿರ್ವಹಣೆಗಾಗಿ ಬೀದಿ ಬದಿಯಲ್ಲಿ ದಾಲ್​ಪುರಿ ಮಾರಾಟ ಮಾಡ್ತಿದ್ದಾರೆ.

ಕ್ರಿಕೆಟ್​ ತರಬೇತಿಗಾಗಿ ಬೆಂಗಳೂರಿನ NCA ಗೂ ಬಂದಿದ್ದ ಪ್ರಕಾಶ್​ ಭಗತ್​, ದಾದ ಸೌರವ್​ ಗಂಗೂಲಿಗೂ ಬೌಲ್​ ಮಾಡಿರುವುದು ವಿಶೇಷ. ಅಂಡರ್​ 13, ಅಂಡರ್​ 16, ಅಂಡರ್​ 19, ಅಂಡರ್​ 23 ವಿಭಾಗದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆಟಗಾರ ಇಂದು ಬೀದಿಬದಿ ವ್ಯಾಪಾರ ಮಾಡುತ್ತಿದ್ದಾರೆ. ಸಾಕಷ್ಟು ಕಚೇರಿಗಳಿಗೆ ಅಲೆದಾಡಿ ಕೊನೆಗೂ ಕೆಲಸ ಸಿಗಲಿಲ್ಲ. ಅಷ್ಟರಲ್ಲಿ ನನ್ನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದರು. ಕುಟುಂಬವನ್ನು ಸಾಕುವ ಹೊಣೆ ನನ್ನದಾಗಿತ್ತು. ಕಿತ್ತು ತಿನ್ನುವ ಬಡತನದಲ್ಲಿ ಕ್ರಿಕೆಟ್​ ಆಡಲು ಸಾಧ್ಯವಾಗಲಿಲ್ಲ ಎಂದು ಬೇಸರದಿಂದಲೇ ನುಡಿಯುತ್ತಾರೆ ಭಗತ್​.

ಮೀನು ಮಾರಾಟಗಾರನಾದ ಜನಪ್ರಿಯ ನಟ..!

ಸಿನಿಮಾ ಅನ್ನೋದು ಸ್ಟಾರ್​ಡಮ್ ಕ್ರಿಯೇಟ್​ ಮಾಡುವ ತಾಣ. ಒಂದು ಧಾರವಾಹಿಯಲ್ಲಿ ನಟನೆ ಮಾಡಿದ ಬಳಿಕ ಸ್ಟಾರ್​ ಪಟ್ಟ ಹುಡುಕಿ ಬರುತ್ತೆ. ಆದರೆ ಇಲ್ಲೊಬ್ಬ ಖ್ಯಾತ ಬಂಗಾಳಿ ನಟ ಅರಿಂದಮ್​ ಪ್ರಮಾಣಿಕ್​, ಕೊರೊನಾ ಸಂಕಷ್ಟ ಕಾಲದಲ್ಲಿ ಯಾವುದೇ ದುಡಿಮೆ ಇಲ್ಲದ ಕಾರಣಕ್ಕೆ ನಟನೆಯನ್ನೇ ತ್ಯಜಿಸಿ ಮೀನು ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಧಾರವಾಹಿಗಳಲ್ಲಿ ನಟನೆ ಅಷ್ಟೇ ಅಲ್ಲದೆ ಕೆಲವು ಟಿವಿ ವಾಹಿನಿಗಳಲ್ಲೂ ಅರಿಂದಮ್​ ಪ್ರಮಾಣಿಕ್​ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಸಂಕಷ್ಟದಿಂದ ಎಲ್ಲಾ ಕಾರ್ಯಕ್ರಮಗಳು ಬಂದ್​ ಆಗಿದ್ದವು. ಕಳೆದ 2 ವರ್ಷಗಳಲ್ಲಿ ಉದ್ಯೋಗವೇ ಇಲ್ಲದಂತಾಯ್ತು. ಅನಿವಾರ್ಯವಾಗಿ ಈ ವೃತ್ತಿ ಆಯ್ದುಕೊಳ್ಳಬೇಕಾಯ್ತು ಎನ್ನುತ್ತಾರೆ. ಅನನ್ಯ ಚಟರ್ಜಿ ನಟನೆಯ ಸುಬರ್ನಲತಾ ಸೀರಿಯಲ್​ನಲ್ಲಿ ಅರಿಂದಮ್​ ಪ್ರಾಮಾಣಿಕ್​ ನಟನೆ ಮೂಲಕ ಮನೆ ಮಾತಾಗಿದ್ದರು.

ಯಾವುದೇ ಕೆಲಸವೂ ಕೀಳಲ್ಲ, ಗೆಲ್ಲುವ ಹುಮ್ಮಸ್ಸಿರಬೇಕು..!

ಅದೃಷ್ಟ ಕೈಕೊಟ್ಟಾಗ ಸಾಕಷ್ಟು ಸಂಕಷ್ಟಗಳು ಸರಮಾಲೆಯಂತೆ ನಮ್ಮ ಬೆನ್ನು ಬೀಳುವುದು ಸಾಮಾನ್ಯ. ಆದರೆ ಆ ಪರಿಸ್ಥಿತಿಯಿಂದ ಹೊರಗೆ ಬರುವುದಕ್ಕೆ ನೂರಾರು ಮಾರ್ಗಗಳಿರುತ್ತವೆ. ಯಾವುದಾದರೂ ಒಂದು ಮಾರ್ಗದಲ್ಲಿ ಸಾಗುವುದನ್ನು ರೂಢಿ ಮಾಡಿಕೊಳ್ಳಬೇಕು. ಆದರೆ ನಮ್ಮೊಳಗಿನ ಅಹಂ ಬಿಟ್ಟು ಕೆಲಸ ಮಾಡುತ್ತೇವೆ ಎಂದಾಗ ಎಲ್ಲವೂ ಸಾಧ್ಯ. ಅಂತಸ್ತು, ಸ್ಟಾರ್​ ಪಟ್ಟವನ್ನು ಬದiಿಗಿಟ್ಟು ಜೀವನದಲ್ಲಿ ಗೆಲ್ಲಬೇಕು ಎನ್ನುವ ಹುಮ್ಮಸ್ಸು ನಮ್ಮೊಳಗೆ ಸೇರಿದಾಗ ಸಾವನ್ನೂ ಮೆಟ್ಟಿ ನಿಲ್ಲಬಹುದು ಎನ್ನುವುದು ನಿಜ. ಮನಸ್ಸಿದ್ದರೆ ಮಾರ್ಗ ಈ ಮಾತನ್ನು ಸಾಧಿಸಿ ನಿಂತಿದ್ದಾರೆ ಕ್ರಿಕೆಟಿಗ ಪ್ರಕಾಶ್​ ಭಗತ್​ ಹಾಗೂ ಸ್ಟಾರ್​ ನಟ ಅರಿಂದಮ್​ ಪ್ರಮಾಣಿಕ್​.

Related Posts

Don't Miss it !