ಗೂಗಲ್ ಕೊಳಕು ಮನಸ್ಥಿತಿ ಪ್ರದರ್ಶನಕ್ಕೆ ತೀವ್ರ ಟೀಕೆ..!

ಬೆಂಗಳೂರು ವಿಶ್ವದ ಟೆಕ್ ಹಬ್ ಆಗಿದೆ. ಅದರಲ್ಲೂ ದೇಶ ವಿದೇಶದ ಜನರು ಬೆಂಗಳೂರಿನಲ್ಲಿ ವಾಸ ಮಾಡುವ ಕನಸು ಕಾಣುತ್ತಾರೆ. ಕನ್ನಡಿಗರ ಸೇವಾ ಮನೋಭಾವ ವಿಶ್ವ ಜನರನ್ನೇ ಮಂತ್ರಮಗ್ನ ಮಾಡಿದೆ ಎಂದರೆ ಅತಿಶಯೋಕ್ತಿ ಅಲ್ಲ. ಆದರೆ ಒಮ್ಮೊಮ್ಮೊ ಕನ್ನಡ ಹಾಗೂ ಕನ್ನಡಿಗರ ಮೇಲೆ ಗಧಾಪ್ರಹಾರಗಳು ನಡೆಯುವುದು ಸರ್ವೇ ಸಾಮಾನ್ಯ ಎನ್ನುವಂತಹ ಘಟನೆಗಳಿಗೆ ಸಾಕ್ಷಿಯಾಗುತ್ತದೆ. ಇದೀಗ ಜಗತ್ತಿನ ಪ್ರಮುಖ ಸರ್ಚ್ ಎಂಜಿನ್ ಆಗಿರುವ ಗೂಗಲ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಗೂಗಲ್ ಮಾಡಿದ ಅವಂತಾರ ಏನು..?

ವಿಶ್ವದ ಅಂಗ್ಲಿಯೆಸ್ಟ್ (ಕೊಳಕು) ಭಾಷೆ ಯಾವುದು ಎಂದು ಗೂಗಲ್ ಸರ್ಚ್‌ನಲ್ಲಿ ಹುಡುಕಿದಾಗ ಅದು‌ ನೇರವಾಗಿ ಕನ್ನಡ ಎಂದು ತೋರಿಸುತ್ತಿದೆ. ಇದರಿಂದ ಕನ್ನಡದ ಬಹುತೇಕ ನಟ ನಟಿಯರು ಹಾಗೂ ಕನ್ನಡಾಭಿಮಾನಿಗಳು ತೀವ್ರವಾಗಿ ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡವನ್ನು ಕೊಳಕು ಭಾಷೆ ಎಂದು ತೋರುವ ಗೂಗಲ್ ವಿರುದ್ಧವೇ ಪ್ರಕರಣ ದಾಖಲಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. ಟ್ವಿಟ್ಟರ್ ಸೇರಿದಂತೆ ಹಲವು ಸಾಮಾಜಿಕ ತಾಣಗಳಲ್ಲಿ ಹ್ಯಾಶ್ ಟ್ಯಾಗ್ ಕನ್ನಡ #Kannada ಎಂದು ಹಾಕುವ ಮೂಲಕ ಕನ್ನಡಾಭಿಮಾನ ಮೆರೆಯುತ್ತಿದ್ದಾರೆ.

ಗೂಗಲ್‌ನಲ್ಲಿ ಕನ್ನಡ ಬಗ್ಗೆ ಅವಹೇಳನಕಾರಿ ವಿಚಾರ ಹರಡುತ್ತಿರುವ ಬಗ್ಗೆ ದೂರು ದಾಖಲಾಗಿದೆ. Ugliest language in india ಅಂತ ಟೈಪ್ ಮಾಡಿದಾಗ ಕನ್ನಡ ಭಾಷೆ ತೋರಿಸಿದ ಗೂಗಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಕನ್ನಡ ಪರ ಸಂಘಟನೆಯಿಂದ ಗೂಗಲ್ ಸಂಸ್ಥೆ ಹಾಗೂ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ರೀತಿ ಯಾರೂ ಕ್ರಿಯೆಟ್ ಮಾಡಿ ಕನ್ನಡಕ್ಕೆ ಅಪಮಾನ ಮಾಡಿದ್ರು ಎಂಬುದನ್ನು ಕಂಡು ಹಿಡಿದು ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಗೂಗಲ್‌ನಲ್ಲಿ ಕನ್ನಡಕ್ಕೆ ಅಪಮಾನ ಆದ್ದರಿಂದ ಆನ್‌ಲೈನ್‌ನಲ್ಲಿ ನೆಟ್ಟಿಗರು ಹಾಗೂ ಸೆಲೆಬ್ರಿಟಿಗಳ ಆಕ್ರೋಶ ವ್ಯಕ್ತಪಡಿಸಿದ್ರು. ನಿರ್ದೇಶಕ ಪನ್ನಗಾಭರಣ, ನಟ ಪ್ರಥಮ್ ಸೇರಿದಂತೆ ಹಲವಾರು ಜನರು ಗೂಗಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೂಗಲ್‌ನಿಂದ ಕನ್ನಡ ಭಾಷೆಗೆ ಅಪಮಾನ ಆಗಿರುವ ಬಗ್ಗೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಅಗ್ಲಿಯೆಸ್ಟ್ ಲಾಂಗ್ವೇಜ್ ಇನ್ ಇಂಡಿಯಾ ಎಂಬ ಪ್ರಶ್ನೆಗೆ ಗೂಗಲ್‌ನಲ್ಲಿ ಕನ್ನಡ ಎಂದು ತೋರಿಸುತ್ತಿರುವ ವಿಚಾರ ಈಗಷ್ಟೇ ನಮ್ಮ ಗಮನಕ್ಕೆ ಬಂದಿದೆ. ತಕ್ಷಣವೇ ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ತೀವಿ ಎಂದಿದ್ದಾರೆ.

ಈ ದುಷ್ಕೃತ್ಯದ ಹಿಂದಿನ ಕೈವಾಡ ಯಾರದ್ದು..?

ಕನ್ನಡದ ಬಗ್ಗೆ ಅಭಿಮಾನ ಹೊಂದಿದ ಯಾರೊಬ್ಬರೂ ಹೀಗೆ ಮಾಡಿರಲು ಸಾಧ್ಯವೇ ಇಲ್ಲ. ಆದರೆ ಇತ್ತೀಚಿಗೆ ಕೇರಳ ಸರ್ಕಾರ KSRTC ಎನ್ನುವ ಟ್ರೇಡ್ ಮಾರ್ಕ್ ಗೆದ್ದುಕೊಂಡಿದೆ. ಇದೇ ವೇಳೆ ಕರ್ನಾಟಕದಲ್ಲಿ ಇನ್ಮುಂದೆ ಕೆಎಸ್ಆರ್‌ಟಿಸಿ‌ ಎಂದು ಬಳಸಬಾರದು ಎಂದು‌ ನೋಟಿಸ್ ಕೂಡ ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಕೆಲವು ಕನ್ನಡಿಗರೇ ಈ ರೀತಿ ಕ್ರಿಯೇಟ್ ಮಾಡಿ ಕನ್ನಡಿಗರ ಒಗ್ಗಟ್ಟು ನೋಡಲು ಯಾರಾದ್ರು ಪ್ರಯತ್ನ ಮಾಡಿದ್ದಾರಾ..? ಅಥವಾ ಈ ರೀತಿ ಕ್ರಿಯೇಟ್ ಮಾಡಿ‌ ಅನ್ಯಭಾಷಿಕರು ನಮ್ಮ‌ ಭಾಷೆಯನ್ನು ಕೀಳಾಗಿ ನೋಡುವ ಪ್ರಯತ್ನ ಮಾಡಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆಯಬೇಕಿದೆ.

Related Posts

Don't Miss it !