‘ಸಚಿವ ಸ್ಥಾನಕ್ಕಾಗಿ ಯಾರ ಕಾಲಿಗೂ ಬೀಳಲ್ಲ’ ಇದು ನಿಜವಾದ ತಾಕತ್ತು..

ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಲು ನಾನಾ ಕಸರತ್ತುಗಳು ನಡೆದಿವೆ. ಆಪರೇಷನ್​ ಕಮಲದ ಮೂಲಕ ಬಿಜೆಪಿ ಸೇರಿ ಈಗ ಅತ್ರಂತ್ರ ಆಗಿರುವ ಮಾಜಿ ಸಚಿವರು ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಹಿಂದೆ ಮುಂದೆ ಓಡಾಡುತ್ತಿದ್ದಾರೆ. ಇನ್ನು ಬಿಜೆಪಿ ಹಿರಿಯ ನಾಯಕರು ದೆಹಲಿಯಲ್ಲೇ ಬೀಡು ಬಿಟ್ಟು ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ನಾನು ಸಚಿವ ಸ್ಥಾನ ಕೇಳಲು ಯಾರ ಬಳಿಯೂ ಹೋಗುವುದಿಲ್ಲ, ನನ್ನ ಉಸಿರು ಇದ್ದರೆ ಬೆಂಗಳೂರಿನಲ್ಲೂ ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ ಎಂದು ಬಿಜೆಪಿ ಶಾಸಕ ನೇರವಂತಿಕೆ ಪ್ರದರ್ಶನ ಮಾಡಿದ್ದಾರೆ.

ಲಾಬಿ ಮಾಡಲ್ಲ, ಕಾಲಿಗೆ ಬೀಳಲ್ಲ..! ಹಾಲಾಡಿ ಅಬ್ಬರ

ಉಡುಪಿ ಜಿಲ್ಲೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು, ಸತತ ಐದು ಬಾರಿ ಗೆದ್ದು ಶಾಸಕರಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟರು, ಸಚಿವ ಸ್ಥಾನಕ್ಕಾಗಿ ನಾನು ಯಾರ ಕಾಲಿಗೂ ಬೀಳುವುದಿಲ್ಲ. ಯಾವ ನಾಯಕನ ಹಿಂದೆಯೂ ಸುತ್ತು ಬರುತ್ತಾ ತಿರುಗಾಡಲು ಹೋಗುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ನಾನು ರಾಜಕೀಯದಲ್ಲಿ ಸಮತೋಲನ ಕಳೆದುಕೊಳ್ಳುವುದಿಲ್ಲ. ನಾನು ರಾಜಕೀಯದಲ್ಲಿ ಸ್ವಾಭಿಮಾನ ಬಿಟ್ಟಿಲ್ಲ, ಬಿಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೂ ಈ ಹಿಂದೆ ನನ್ನನ್ನು ಕರೆದು ತಪ್ಪು ಮಾಡಿದ್ದರು, ಆಗಲೂ ನಾನು ಸಚಿವ ಸ್ಥಾನ ಕೇಳಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ. ರಾಜಕೀಯ ಲಾಬಿ, ಜಾತಿವಾದಿತನ ನಾನು ಮಾಡುವುದಿಲ್ಲ. ಯಾರ ಕಾಲಿಗೂ ಬಿದ್ದು ನಾನು ಕೆಲಸ ತೆಗೆದುಕೊಳ್ಳುವುದಿಲ್ಲ. ಕೆಲಸ ಕೊಟ್ಟರೆ ನಾನು ಅದನ್ನು ನಿಭಾಯಿಸುತ್ತೇನೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಶಾಸಕ

ನಾನು ಹೆಡ್ಡ ರಾಜಕಾರಣಿ ಅಲ್ಲ, ನೇರ ನುಡಿ ರಾಜಕಾರಣ..!

ನಾನು ಮಂತ್ರಿಯಾದರೆ ಸರ್ಕಾರಿ ಕಾರು ತೆಗೆದುಕೊಳ್ಳುವುದಿಲ್ಲ, ಎಸ್ಕಾರ್ಟ್ ಬೇಕಾಗಿಲ್ಲ, ಗನ್ ಮ್ಯಾನ್ ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹಾಲಾಡಿ ಶ್ರೀನಿವಾಸ ಶೆಟ್ಟರು, ನಾನು ಹೆಡ್ಡ ರಾಜಕಾರಣಿ ಅಲ್ಲ, ನೇರ ನುಡಿಯ ರಾಜಕಾರಣ ನನ್ನನ್ನು ಎಂದು ಸ್ಪಷ್ಟಪಡಿಸಿದ್ದಾರೆ. ಇದು ದುರಹಂಕಾರ ಅಲ್ಲ, ನಾನು ಯಾರ ಭಯದಲ್ಲೂ ಬದುಕಲ್ಲ. ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ಮಾತ್ರ ನಾನಿದ್ದೇನೆ. ಗೋಗರೆದು ಸಚಿವ ಸ್ಥಾನವನ್ನ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ ಎಂದು ಉಳಿದ ಆಕಾಂಕ್ಷಿತರಿಗೆ ಚಾಟಿ ಬೀಸಿದ್ದಾರೆ.

ಜಾತಿ ಬೇಕಿಲ್ಲ, ಅದು ಆಕಸ್ಮಿಕ ಮಾತ್ರ..!

ನಾನು ಜಾತ್ಯಾತೀತ ರಾಜಕಾರಣಿ, ನನ್ನ ಹುಟ್ಟಿನಿಂದ ನಾನು ಜಾತಿ ಸಂಘಕ್ಕೆ ಹೋಗಿಲ್ಲ. ಪ್ರಬಲ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ ಮಾತ್ರ. ಎಲ್ಲಾ ಜಾತಿಯವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಜಾತಿಯ ಉದ್ದಾರಕ್ಕಾಗಿ ಜನ ನನ್ನನ್ನು ಗೆಲ್ಲಿಸಿಲ್ಲ ಎನ್ನುವ ಮೂಲಕ ಜಾತಿ ಜಾತಿ ಎನ್ನುವವರಿಗೆ ಜಾಡಿಸಿದ್ದಾರೆ. ಜಾತಿವಾದಿಗಳು ಜಾತಿಯ ಸಂಘಕ್ಕೆ ಸಚಿವರಾಗಬೇಕೇ ವಿನಃ ಜಾತಿವಾದಿಗಳು ಯಾವುದೇ ಕಾರಣಕ್ಕೂ ಶಾಸಕರಾಗಿ ಆಯ್ಕೆಯಾಗಬಾರದು, ಜಾತಿವಾದಿಗಳು ಸಾರ್ವತ್ರಿಕ ಚುನಾವಣೆಗೂ ನಿಲ್ಲಬಾರದು ಎಂದಿದ್ದಾರೆ. ನನ್ನಲ್ಲಿ ಯಾವುದೇ ನಾಟಕೀಯ ಮಾತುಗಳು ಇಲ್ಲ, ಉಪಯೋಗಕ್ಕೆ ಇಲ್ಲದ್ದನ್ನ ಕೊಟ್ಟರೆ ಕಿಸೆಗೆ ಹಾಕಿಕೊಂಡು ಬರುವ ವ್ಯಕ್ತಿಯೂ ನಾನಲ್ಲ. ಶಾಸಕರು ಹೆರಿಗೆ ಕೋಣೆಯ ದಾದಿಯ (ನರ್ಸ್​) ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಹಾಲಾಡಿ ಶ್ರೀನಿವಾಸ ಶೆಟ್ಟರ ಮಾತು ಶೇ. 100ರಷ್ಟು ಸತ್ಯ..!

ಶಾಸಕನಾಗಿ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದನ್ನು ನೋಡಿ ಮಾತ್ರವೇ ಸಚಿವ ಸ್ಥಾನ ಕೊಡಬೇಕು. ಇಲ್ಲದಿದ್ದರೆ ನಿನ್ನೆ ಯತ್ನಾಳ್​ ಹೇಳಿದ ಹಾಗೆ ಯಡಿಯೂರಪ್ಪ ಅವರ ಸೇವೆ ಮಾಡಿದವರಿಗೆ ವಿಜಯೇಂದ್ರ ಅವರ ರಾತ್ರಿ ವ್ಯವಸ್ಥೆ ಮಾಡಿದವರಿಗೆ ಸಚಿವ ಸ್ಥಾನ ಕೊಟ್ಟರೆ ರಾಜ್ಯದ ಅಭಿವೃದ್ಧಿ ಕನಸಿನ ಮಾತು. ಹಾಲಾಡಿ ಶ್ರೀನಿವಾಸ ಶೆಟ್ಟರು ಹಣ ಕೊಟ್ಟು ಗೆದ್ದು ಬಂದವರಲ್ಲ, ಜನಸಾಮಾನ್ಯರ ಸಮಸ್ಯೆಗೂ ಸ್ಪಂದಿಸುವ ಉತ್ತಮ ಗುಣ ಉಳ್ಳವರು. ನನಗೆ ರಾಜಕೀಯ ಬೇಕಿಲ್ಲ ಎನ್ನುವ ಹಾಲಾಡಿ ಅವರು, ಜನರೇ ಹಿಂಸೆ ಮಾಡಿ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಾರೆ. ನಾನು ಇಲ್ಲೀವರೆಗೂ ಕೋಟಿ ಕೋಟಿ ಸುರಿದು ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ ಎನ್ನುತ್ತಾರೆ. ಅವರ ಸರಳತೆಗೆ ಸಾಕ್ಷಿ ಎಂದರೆ ಕ್ಷೇತ್ರದ ಜನರಿಗಾಗಿ ಸಮಯ ಮೀಸಲಿಟ್ಟಿರುವುದು. ಕಷ್ಟ ಎಂದು ಯಾರೇ ಮನವಿ ಕೊಟ್ಟರೂ ಸ್ಪಂದಿಸುತ್ತಾರೆ ಎನ್ನುವುದು ಕ್ಷೇತ್ರದ ಜನರ ಮಾತು. ಇಷ್ಟು ನಿಷ್ಠೂರವಾಗಿ ಹೇಳಿದ ಮೇಲೆ ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗುತ್ತಾ ಎನ್ನುವುದೇ ಅನುಮಾನ.

Related Posts

Don't Miss it !