ಡಿಸಿ ಕಚೇರಿಯಲ್ಲಿ ‘ಹಾಲ’ಪ್ಪ ಬಳಿಕ ದೂರು ಕೊಡಲು ಬಂದ ಬೆಕ್ಕಣ್ಣ..!

ಬಾಲ್ಯದಲ್ಲಿ ಸಾಕಷ್ಟು ನೀತಿಕಥೆ ಓದುವಾಗ ಈ ರೀತಿಯ ಹಾಲಪ್ಪ, ಬೆಕ್ಕಣ್ಣ, ನಾಯಣ್ಣ ಎನ್ನುವ ಹೆಸರುಗಳು ಬರುವುದು ಉಂಟು. ಆದರೆ ಇಲ್ಲಿ ನಿಜವಾಗಿಯೂ ಹಾಲಪ್ಪರನ್ನು ಹುಡುಕಿಕೊಂಡು ಡಿಸಿ ಕಚೇರಿಗೆ ಬೆಕ್ಕು ಬಂದಿದೆ. ಶುಕ್ರವಾರ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಘಟನೆ ನಡೆದಿದೆ. ವಿಶೇಷ ಅತಿಥಿ ಕಂಡು ಸಚಿವ ಹಾಲಪ್ಪ ಆಚಾರ್​ ಒಂದು ಕ್ಷಣ ಗಲಿಬಿಲಿ ಆಗಿದ್ದಾರೆ. ಯಾರೀ ಕಚೇರಿ ಒಳಕ್ಕೆ ಬೆಕ್ಕು ಬಿಟ್ಟವರು ಎಂದು ಅಧಿಕಾರಿಗಳನ್ನು ಕೇಳಿದ್ದಾರೆ. ಬೆಕ್ಕನ್ನು ಓಡಿಸಲು ಸಿಬ್ಬಂದಿ ಕೂಡ ಹರಸಾಹಸ ಮಾಡಿದ್ದಾರೆ. ಬೆಕ್ಕು ಪ್ರತ್ಯಕ್ಷ ಆಗಿದ್ದನ್ನು ಸಚಿವರು ಹೊಸದಾಗಿ ನೋಡಿದ್ದರಿಂದ ಈ ರೀತಿ ಆಗಿದೆ ಎಂದು ಅಲ್ಲಿನ ಅಧಿಕಾರಿಗಳೇ ಮಾತನಾಡಿಕೊಂಡು ಸುಮ್ಮನಾಗಿದ್ದಾರೆ.

ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಹಾಲಪ್ಪ ಆಚಾರ್ ಅಧಿಕಾರಿಗಳ ಸಭೆ ನಡೆಸುವಾಗ ಸಭೆ ಮಧ್ಯೆ ಬಂದ ಬೆಕ್ಕು ತನ್ನ ಪಾಡಿಗೆ ತಾನು ಕುಳಿತಿತ್ತು. ಅಧಿಕಾರಿಗಳು ಸಚಿವರು ಬಂದಿದ್ದಾರೆ ಎನ್ನುವ ಕಾರಣಕ್ಕೆ ಬೆಕ್ಕನ್ನು ಓಡಿಸುವ ಯತ್ನ ಮಾಡಿದ್ದರು. ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆದರೂ ಬೆಕ್ಕು ಮಾತ್ರ ಕಚೇರಿಯಿಂದ ತೆರಳಲಿಲ್ಲ. ಸಿಬ್ಬಂದಿಗಳು ಓಡಿಸಲು ಪ್ರಯತ್ನ ಮಾಡಿದರೂ ಪ್ರಯೋಜನಕ್ಕೆ ಬರಲಿಲ್ಲ. ಜನರ ನಡುವೆಯೇ ಓಡಾಡಿದರೂ ಆಚೆಗೆ ಮಾತ್ರ ಹೋಗಲಿಲ್ಲ. ಯಾವುದೇ ಸಮಸ್ಯೆಗೆ ಪರಿಹಾರ ಸಿಗದಿದ್ದಾಗ ಸಚಿವರಿಗಾಗಿ ಕಾದು ಕುಳಿತುಕೊಳ್ಳುವ ಅಸಹಾಯಕ ಜನರ ಹಾಗೆ ಸಭೆ ಮುಗಿಸಿ ಹೊರಡುವ ತನಕ ಕುಂತಲ್ಲೇ ಕುಳಿತು ಕಾಲ ಕಳೆದಿದೆ ಬೆಕ್ಕು.

ಸರ್ಕಾರಿ ಕಚೇರಿಗಳಲ್ಲಿ ಇಲಿಗಳು ದರ್ಬಾರ್​ ನಡೆಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ ಬೆಕ್ಕುಗಳು ಹಚೇರಿಗೆ ಬರುವುದು ಸಾಮಾನ್ಯ ಎನ್ನುವ ಮಾತುಗಳು ಅಲ್ಲಿಯೇ ಕೇಳಿ ಬಂದವು. ಇನ್ನೂ ಈ ಬೆಕ್ಕು ರಾಮನಗರ ಜಿಲ್ಲಾ ಕಚೇರಿಯಲ್ಲೇ ಸುತ್ತಾಡುತ್ತ, ಇಲಿಗಳನ್ನು ಸ್ವಾಹಃ ಮಾಡುತ್ತ ಬದುಕುತ್ತಿದೆ. ಅಲ್ಲಿನ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೂ ಈ ಬೆಕ್ಕು ಚಿರಪರಿಚಿತ. ಅದೇ ಕಾರಣಕ್ಕೆ ಸಾಕಷ್ಟು ಸಮಯದ ವಿಚಲಿತ ಆಗದೆ ಸಭೆ ಮುಗಿಯುವ ತನಕ ಸುಮ್ಮನೆ ಕುಳಿತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೂ ಸಚಿವ ಹಾಲಪ್ಪರ ಸಭೆಗೆ ಬೆಕ್ಕು ಬಂದಿದ್ದು ಮಾತ್ರ ವಿಶೇಷ ಎನ್ನುವ ಮಾತುಗಳು ಹರಿದಾಡಿದವು.

Related Posts

Don't Miss it !