ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷನದ್ದು ಕೊಲೆಯೋ..? ಉದ್ದೇಶ ಪೂರ್ವಕ ಹತ್ಯೆಯೋ..?

ಶಿವಮೊಗ್ಗದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಎಂಬಾತನ ಕೊಲೆ ಬಳಿಕ ಸಾವಿರಾರು ಜನರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕೊಲೆ ನಡೆದ ಬಳಿಕ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್​ ಜಾರಿ ಮಾಡಿದ್ದರೂ ಹತ್ತು ಹಲವಾರು ಕಡೆ ಕಲ್ಲು ತೂರಾಟ ನಡೆದಿದೆ. ಪೊಲೀಸರ ವಾಹನಗಳು ಸೇರಿದಂತೆ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಅನ್ಯ ಕೋಮಿನ ಮನೆಗಳು, ಧಾರ್ಮಿಕ ಕೇಂದ್ರ ಸೇರಿದಂತೆ ಹಲವು ಭಾಗದಲ್ಲಿ ಪರಸ್ಪರ ಕಲ್ಲು ತೂರಾಟ ಪ್ರಕರಣಗಳು ನಡೆದಿವೆ. ಪೊಲೀಸರ ವೈಫಲ್ಯ ಎದ್ದು ಕಾಣಿಸಿದರೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಮಾತ್ರ ಪೊಲೀಸರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಮೆರವಣಿಗೆಗೆ ಅವಕಾಶ ನೀಡಿದ್ದೇ ಕಾನೂನು ಬಾಹಿರ ಆಗಿದ್ದರೂ ಪೊಲೀಸರ ನಿರ್ಧಾರ ಸಮರ್ಥಿಸಿಕೊಂಡ ಈಶ್ವರಪ್ಪ, ನಮ್ಮ ಶಿವಮೊಗ್ಗದವರು ಯಾರೂ ಕಲ್ಲು ತೂರಾಟ ನಡೆಸಿಲ್ಲ, ಬೇರೆ ಕಡೆಯಿಂದ ಬಂದಿದ್ದ ಕಿಡಿಗೇಡಿಗಳಿಂದ ಕೃತ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.

ಹರ್ಷನನ್ನು ಕೊಂದವರ ಬಂಧನ, ಇಬ್ಬರಿಗಾಗಿ ಹುಡುಕಾಟ..!

ಶಿವಮೊಗ್ಗದ ಕೊಲೆ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದಾರೆ. ಆ ಮೂವರೂ ಶಿವಮೊಗ್ಗದವರೇ ಆಗಿದ್ದು, ಬೆಂಗಳೂರು ಮೂಲದವರು ಎನ್ನಲಾದ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಇನ್ನೂ 144 ಸೆಕ್ಷನ್​ ಜಾರಿ ಮಾಡಿಯೂ ಹಿಂಸಾಚಾರಕ್ಕೆ ಅವಕಾಶ ಕೊಟ್ಟ ಪೊಲೀಸರನ್ನು ಸಮರ್ಥನೆ ಮಾಡಿಕೊಂಡಿರುವ ಗೃಹ ಸಚಿವರು, ಶಾಂತ ರೀತಿಯಿಂದ ವರ್ತಿಸಿದ್ದಾರೆ. ಫೈರ್​ ಮಾಡಿದ್ರೆ ನಾಲ್ಕೈದು ಹೆಣ ಬೀಳುತ್ತಿತ್ತು ಎನ್ನುವ ಮೂಲಕ ಅಸಮರ್ಥನೆಯ ಮೂಲಕ ಬೆನ್ನು ತಟ್ಟಿಕೊಳ್ಳುವ ಕೆಲಸ ಮಾಡಿದ್ದಾರೆ. ಆದರೆ ಕೆ.ಎಸ್​ ಈಶ್ವರಪ್ಪ ಮಾತ್ರ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲ ಎನ್ನುವಂತೆ ಮಾತನಾಡಿದ್ದು, ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಆದರೆ ಮಾತ್ರ ನ್ಯಾಯ ಸಿಗುವುದಕ್ಕೆ ಸಾಧ್ಯ. ಮುಸ್ಲಿಂ ಗೂಂಡಾಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಅಬ್ಬರಿಸಿದ್ದಾರೆ. ಆದರೆ ಶಿವಮೊಗ್ಗ ಮುಸ್ಲಿಮರು ಯಾವುದೇ ಗಲಾಟೆ ಮಾಡಿಲ್ಲ ಎನ್ನುವ ಮೂಲಕ ಮುಸಲ್ಮಾನರನ್ನೂ ಓಲೈಸುವ ಕೆಲಸ ಮಾಡಿದ್ದಾರೆ. ಇದನ್ನು ವಿರೋಧಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​​, ಈಶ್ವರಪ್ಪ ಬುರ್ಖಾ ಹಾಕಿ ಓಡಾಡಿದರು ಮುಸ್ಲಿಮರು ಮತ ಹಾಕುವುದಿಲ್ಲ, ಓಲೈಕೆ ಮಾಡುವುದನ್ನು ಬಿಡಿ ಎಂದು ಕಟುವಾಗಿ ಟೀಕಿಸಿದ್ದಾರೆ.

ಕಾಂಗ್ರೆಸ್​ ಮೇಲೆ ಈಶ್ವರಪ್ಪ ಆರೋಪ, ಕಾಂಗ್ರೆಸ್​ ತಿರುಗೇಟು..!

ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ನೀಡಿದ ಕುಮ್ಮಕ್ಕಿನಿಂದಲೇ ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಕೆ.ಎಸ್​ ಈಶ್ವರಪ್ಪ ಆರೋಪ ಮಾಡಿದ್ದರು. ಈಶ್ವರಪ್ಪ ಆರೋಪಕ್ಕೆ ತಿರುಗೇಟು ನೀಡಿದ್ದ ವಿಧಾನಪರಿಷತ್​ ಸದಸ್ಯ ಬಿ.ಕೆ ಹರಿಪ್ರಸಾದ್​, ಕೆ.ಎಸ್​ ಈಶ್ವರಪ್ಪ ಅವರೇ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿಸಿದ್ದಾರೆ. ಈಗಾಗಲೇ ಕಾಂಗ್ರೆಸ್​ ಪಕ್ಷ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಇನ್ನೂ ಸೋಮವಾರ ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾಂಗ್ರೆಸ್​​ ಪ್ರತಿಭಟನೆ ಹಮ್ಮಿಕೊಂಡಿತ್ತು. ಕಾಂಗ್ರೆಸ್​ ಪ್ರತಿಭಟನೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕೊಲೆ ಮಾಡಿಸಲಾಗಿದೆ. ಕೊಲೆಗಡುಕ ಈಶ್ವರಪ್ಪನಿಗೆ ಧಿಕ್ಕಾರ ಎಂದು ವಿಧಾನಪರಿಷತ್​​ನಲ್ಲಿ ಕಾಂಗ್ರೆಸ್​ ಸದಸ್ಯರು ಘೋಷಣೆ ಕೂಗಿದ್ದಾರೆ. ಇನ್ನೂ ಶಿವಮೊಗ್ಗದಲ್ಲಿ ಕರ್ಫ್ಯೂ ವಿಸ್ತರಣೆ ಮಾಡಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅದರ ಜೊತೆಗೆ ಕೊಲೆ ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ, ಬಿಜೆಪಿ ಸರ್ಕಾರದ ವೈಫಲ್ಯತೆಗೆ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದಾರೆ.

ಕಾಂಗ್ರೆಸ್​ ಹೋರಾಟ ಠುಸ್​ ಆಗಿದ್ದು ಸತ್ಯ..! ನಾಯಕರು ಏನಂದ್ರು..?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿರೋಧ ಪಕ್ಷದ ನಾಯಕರುಗಳು ಕೊಲೆಯನ್ನು ಖಂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಕೊಲೆ ಆರೋಪಿಗಳನ್ನು ಬಿಡುವುದಿಲ್ಲ ಎಂದು ಸರ್ಕಾರ ಹೇಳಿದೆ. ಆರೋಪಿಗಳು ಯಾವುದೇ ಧರ್ಮದವರು ಇದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ. ಇದು 2023ರ ವಿಧಾನಸಭಾ ಚುನಾವಣೆಗೆ ಸ್ಯಾಂಪಲ್​ ಮಾತ್ರ. ಮುಂದಿನ ದಿನಗಳಲ್ಲಿ ಮತ ರಾಜಕೀಯಕ್ಕಾಗಿ ಇನ್ನಷ್ಟು ಘಟನೆಗಳು ನಡೆಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಕಾಂಗ್ರೆಸ್​-ಬಿಜೆಪಿ ರಕ್ತರಾಜಕೀಯದ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ. ಇನ್ನೂ ನನ್ನ ಮಗನ ಕೊಲೆಗೆ ಅನ್ಯ ಕೋಮಿನವರೇ ಕಾರಣ ಎಂದು ಹರ್ಷ ತಾಯಿ ಪದ್ಮಾ ದೂರು ನೀಡಿದ್ದಾರೆ. ಕೆ.ಆರ್.ಪುರಂ ರಸ್ತೆ, RML ನಗರ, ಕ್ಲಾರ್ಕ್ ಪೇಟೆ ಸೇರಿದಂತೆ ಬೇರೆ ಬೇರೆ ಏರಿಯಾ ಜನರಿಂದ ಜೀವ ಬೆದರಿಕೆ ಇತ್ತು ಎಂದಿದ್ದಾರೆ. ದೊಡ್ಡಪೇಟೆ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಂಗಳೂರು ಮುಸ್ಲಿಮ್ಸ್ ಹೆಸರಿನ ಫೇಸ್​ಬುಕ್ ಪೇಜ್​ನಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಆಗಿದ್ದು, ಟ್ಯಾಗ್​ ಮಾಡಿ, ಶೇರ್​ ಮಾಡಿದವರ ಮೇಲೂ ಕೇಸ್​ ಬುಕ್​ ಮಾಡಲಾಗಿದೆ. ಈಗಾಗಲೇ ಖಾಸಿಫ್, ಸೈಯದ್ ನದೀಮ್ ಎಂಬುವರ ಬಂಧನ ಆಗಿದೆ ಎಂದು ಶಿವಮೊಗ್ಗ ಎಸ್​ಪಿ ಲಕ್ಷ್ಮೀ ಪ್ರಸಾದ್​ ಮಾಹಿತಿ ನೀಡಿದ್ದಾರೆ.

ರಾಜಕಾರಣಿಗಳು ತಮ್ಮ ಕುತ್ತಿಗೆಗೆ ಬಂದಾಗ ವಿಷಯವನ್ನು ಡೈವರ್ಟ್​ ಮಾಡೋದು ಸಮಾನ್ಯ ಸಂಗತಿ ಆಗಿದೆ. ಈ ಹಿಂದೆ ರಾಜ್ಯ ಸರ್ಕಾರದ ವಿರುದ್ಧ ಬಿಟ್​ ಕಾಯಿನ್​ ಆರೋಪ ಬಂದಾಗ, ಶೇಕಡ 40 ರಷ್ಟು ಕಮಿಷನ್​ ಪಡೆಯುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಾಗ, ಮಾಜಿ ಸಚಿವರ ವಿರುದ್ಧ ಸಿ.ಡಿ ವಿಚಾರ ಎಲ್ಲಾ ಮಾಧ್ಯಮಗಳಲ್ಲೂ ಅಬ್ಬರಿಸುತ್ತಿದ್ದಾಗ ಬೇರೆ ಬೇರೆ ವಿಷಯಗಳನ್ನು ತೂರಿ ಬಿಡುವುದು ಸಾಮಾನ್ಯ. ಮಾಧ್ಯಮಗಳ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುವುದೂ ಸಾಮಾನ್ಯ. ಕಾಂಗ್ರೆಸ್​ನಲ್ಲಿ ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ನಡುವೆ ಪೈಪೋಟಿ ನಡೆಯುವಾಗಲೂ ಕಾಂಗ್ರೆಸ್​​ ಪಕ್ಷದಿಂದಲೂ ಕೂಡ ದಿಕ್ಕು ತಪ್ಪಿಸುವ ಪ್ರಯತ್ನಗಳು ನಡೆದಿವೆ. ಆದರೆ ಇದೀಗ ಬಂಧಿತ ಆರೋಪಿಗಳು ಸತ್ಯವಾಗಲೂ ಕೊಲೆ ಮಾಡಿದ್ದಾರಾ..? ಕೊಲೆ ಮಾಡುವುದಕ್ಕೆ ಪ್ರಮುಖ ಕಾರಣ ಏನು ಎನ್ನುವುದನ್ನು ಪೊಲೀಸರು ಪತ್ತೆ ಮಾಡಬೇಕಿದೆ. ರಾಜಕಾರಣಿಗಳು ಕೊಲೆಗೆ ಪರೋಕ್ಷ ಬೆಂಬಲ ನೀಡಿದ್ದರೆ ಮುಂದಿನ ದಿನಗಳಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Related Posts

Don't Miss it !