ಸಂತೋಷ್​ ಭವಿಷ್ಯಕ್ಕಾಗಿ ಕ್ಷೇತ್ರ ಸಜ್ಜು ಮಾಡ್ತಿರೋ ಮುಖ್ಯಮಂತ್ರಿ..!

ಬಿ.ಎಸ್​ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ಸ್ವಹಿತಾಸಕ್ತಿ, ಸ್ವಜನಪಕ್ಷಪಾತ ಆರೋಪಿತ ವಿಚಾರ ಚರ್ಚೆಗೆ ಬರುವುದು ಸಾಮಾನ್ಯ. ಅದೇ ರೀತಿ ಈ ಬಾರಿ ಕೂಡ ಪುತ್ರ ವಿಜಯೇಂದ್ರ ಅಧಿಕಾರದಲ್ಲಿ ಭಾಗಿಯಾಗ್ತಿದ್ದಾರೆ ಎನ್ನುವ ಆರೋಪವಿದೆ. ಅದರ ಜೊತೆಗೆ ಯಡಿಯೂರಪ್ಪ ಅವರ ಮೊಮ್ಮಗ ಕಿಕ್​ಬ್ಯಾಕ್​ ಪಡೆದಿದ್ದಾರೆ ಎನ್ನುವ ವಿಚಾರ ಕೋರ್ಟ್​ ಮೆಟ್ಟಿಲೇರಿದೆ. ಇದೀಗ ಮತ್ತೋರ್ವ ಸಂಬಂಧಿ ಹಲವು ವರ್ಷಗಳಿಂದ ಸಿಎಂ ಜೊತೆಯಲ್ಲಿದ್ದ ಹಾಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್​.ಆರ್​ ರಮೇಶ್​ಗಾಗಿ ಕ್ಷೇತ್ರವೊಂದನ್ನು ಸಜ್ಜು ಮಾಡುತ್ತಿದ್ದಾರೆ ಎನ್ನಲಾಗಿದೆ. ಕ್ಷೇತ್ರದಲ್ಲಿ ಸಂತೋಷ್​ ಪ್ರಾಬಲ್ಯ ಸಾಧಿಸುವ ಉದ್ದೇಶದಿಂದ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ ಎನ್ನುವುದು ಗೊತ್ತಾಗ್ತಿದೆ.

ಸಚಿವ ಸೋಮಣ್ಣ ಕೂಡ ಕಣ್ಣಿಟ್ಟಿದ್ದರು..!

ಹಾಸನದ ಅರಸೀಕೆರೆ ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯವಿದೆ. ಆದರೂ ಫೈರ್​ ಬ್ರಾಂಡ್​ ಶಿವಲಿಂಗೇಗೌಡ ಗೆಲುವು ಸಾಧಿಸಿಕೊಂಡು ಬರುತ್ತಿದ್ದಾರೆ. ತನಗೆ ತಿಳಿದಿದ್ದನ್ನು ನೇರವಾಗಿ ಸದನದಲ್ಲಿ ಮಂಡಿಸುವ ಮೂಲಕ ಖ್ಯಾತಿ ಗಳಿಸಿರುವ ಶಿವಲಿಂಗೇಗೌಡ ಒಕ್ಕಲಿಗನಾದರೂ ಜೆಡಿಎಸ್​ ಪಕ್ಷದಿಂದ ಸತತವಾಗಿ ಗೆಲ್ಲುವುದಕ್ಕೆ ಕಾರಣ ಜಾತಿ ಮೀರಿದ ಅಭಿವೃದ್ಧಿ ಕೆಲಸಗಳು. ಆದರೆ ಜಾತಿಯಾಧಾರಿತ ರಾಜಕಾರಣದಲ್ಲಿ ಸಚಿವ ಸೋಮಣ್ಣ ತಮ್ಮ ಮಗ ಡಾ. ಅರುಣ್​ ಸೋಮಣ್ಣಗಾಗಿ ಚಾಮರಾಜನಗರದ ಹನೂರು ಹಾಗೂ ಹಾಸನದ ಅರಸೀಕೆರೆ ಕ್ಷೇತ್ರದ ಕಡೆಗೆ ಮುಖ ಮಾಡಿದ್ದರು. ಇದೀಗ ಅಂತಿಮವಾಗಿ ಸಿಎಂ ಯಡಿಯೂರಪ್ಪ ಪರಮಾಪ್ತ ಎನ್​.ಆರ್​ ಸಂತೋಷ್​ಗೆ ಕ್ಷೇತ್ರ ಒಲಿಯುವಂತೆ ಕಾಣಿಸುತ್ತಿದೆ.

ಸಂತೋಷ್​ಗಾಗಿ ಏನೇನು ಸಿದ್ಧತೆ ಆಗ್ತಿದೆ..?

ಆಪರೇಷನ್​ ಕಮಲ ಮಾಡುವ ಮೂಲಕ ಮುಖ್ಯಮಂತ್ರಿ ಆಗಿರುವ ಯಡಿಯೂರಪ್ಪ, ತನ್ನ ಸಂಬಂಧಿಕ ಎನ್​.ಆರ್​ ಸಂತೋಷ್​ಗಾಗಿ ತಾಲೂಕು ಮಟ್ಟದಲ್ಲೂ ಆಪರೇಷನ್​ ಕಮಲ ಮಾಡಿದ್ದಾರೆ. ನಗರ ಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಮೀಸಲಾತಿ ಪ್ರಕಾರ ಬಿಜೆಪಿ ಸದಸ್ಯನಿಗೆ ಅಧಿಕಾರ ಒಲಿದು ಬಂದಿದೆ. ಆದರೆ ಜೆಡಿಎಸ್​ ಸದಸ್ಯರನ್ನು ಸೆಳೆಯಲು ಮುಂದಾಗಿರುವ ಸಂತೋಷ್​ ತಲಾ 25 ಲಕ್ಷ ಹಣ ಕೊಡುತ್ತಿದ್ದಾರೆ ಎಂದು ದೂರಲಾಗಿದೆ. 10 ಲಕ್ಷ ರೂಪಾಯಿ ಹಣದ ಜೊತೆಗೆ ಹೆಚ್​.ಡಿ ರೇವಣ್ಣ ಹಾಗೂ ಶಿವಲಿಂಗೇಗೌಡ ಸುದ್ದಿಗೋಷ್ಟಿ ನಡೆಸಿ ವಾಗ್ದಾಳಿ ಮಾಡಿದ್ದಾರೆ. ಜೆಡಿಎಸ್​​ ಸದಸ್ಯೆ ಕಲೈ ಅರಸಿ ಕೊಟ್ಟ ದೂರಿನ ಆಧಾರದ ಮೇಲೆ ಆಮೀಷಕ್ಕೆ ಒಳಗಾಗಿರುವ ಜೆಡಿಎಸ್​ ಸದಸ್ಯರ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಸೇರಿದರೆ 25 ಲಕ್ಷ ಕೊಡುವ ಆಮಿಷವೊಡ್ಡಿ ಹತ್ತು ಲಕ್ಷವನ್ನು ಬಲವಂತವಾಗಿ ಕೊಟ್ಟರು ಎಂದು ಕಲೈ ಅರಸಿ ಆರೋಪ ಮಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಸಂತೊಷ್ ಫೋನ್​ನಲ್ಲಿ ಮಾತನಾಡಿ ಹಣದ ಆಮಿಷವೊಡ್ಡಿದರು ಎಂದು ದೂರಿದ್ದಾರೆ.

ಆಪರೇಷನ್​ ಅಷ್ಟೇ ಅಲ್ಲ ಅಭಿವೃದ್ಧಿ ತಂತ್ರ..!

ಕಳೆದ ಬಾರಿಯ ರಾಜ್ಯ ಸಚಿವ ಸಂಪುಟದಲ್ಲಿ ಹೊನ್ನಾಳಿ ಹಾಗೂ ಅರಸೀಕೆರೆ ಕ್ಷೇತ್ರಕ್ಕೆ ಬಂಪರ್​ ಕೊಡುಗೆ ಸಿಕ್ಕಿತ್ತು. ಒಂದು ರೇಣುಕಾಚಾರ್ಯ ಬಿಜೆಪಿ ಬಂಡಾಯದ ವಿರುದ್ಧ ಗಟ್ಟಿಯಾಗಿ ನಿಂತರು ಎನ್ನುವ ಕಾರಣಕ್ಕೆ 509 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಇನ್ನೂ ಅರಸೀಕೆರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ 307 ಕೋಟಿ ರೂಪಾಯಿ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅಭಿವೃದ್ಧಿ ಹೇಗಾದರೂ ಮಾಡಲಿ ಜನರಿಗೆ ಅನುಕೂಲ ಆದರೆ ಸಾಕು ಎನ್ನುವುದು ಸರಿ. ಆದರೆ ಸಂಬಂಧಿಕ ಎನ್​.ಆರ್​ ಸಂತೋಷ್​ಗೆ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಏನೇನು ಮಾಡಬೇಕು ಅದನ್ನು ಸಿಎಂ ಯಡಿಯೂರಪ್ಪ ಮಾಡುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯ ಅಲ್ಲಗಳೆಯುವಂತಿಲ್ಲ.

Related Posts

Don't Miss it !