ದೇವೇಗೌಡರ ಮರಿ ಮಗನಿಗೆ‘ಆವ್ಯಾನ್​ ದೇವ್​’ ಎಂದು ಹೆಸರು..!! ಏನಿದರೆ ವಿಶೇಷ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ನಾಲ್ಕನೇ ತಲೆಮಾರು ನೋಡಿದಂತಾಗಿದೆ. ಕುಮಾರಸ್ವಾಮಿ ಅವರ ಮಗ ನಿಖಿಲ್​ ಕುಮಾರಸ್ವಾಮಿಗೆ ಮಗ ಜನಿಸಿದ್ದು, ನಾಲ್ಕನೇ ತಲೆಮಾರಿನ ಕುಡಿ ನೋಡಿದ್ದಾರೆ. ಈಗ ನಾಲ್ಕನೇ ತಲೆ ಮಾರಿನ ಕುಡಿಗೆ ‘ಆವ್ಯಾನ್​ ದೇವ್’​ ಎಂದು ನಾಮಕರಣ ಮಾಡಲಾಗಿದೆ. ನಿಖಿಲ್​​ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಯ ಮುದ್ದಾಗ ಕಂದನಿಗೆ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಮಾಡಿ ಪೂರೈಸಿದ್ದಾರೆ. ಸರಳವಾಗಿ ನಡೆದ ‘ಆವ್ಯಾನ್​ ದೇವ್’ ನಾಮಕರಣದಲ್ಲಿ ಆಪ್ತರು, ಹಿತೈಷಿಗಳು ಹಾಗೂ ಕುಟುಂಬಸ್ಥರು ಮಾತ್ರ ಪಾಲ್ಗೊಂಡಿದ್ದಾರೆ. ‘ಆವ್ಯಾನ್​ ದೇವ್’ ಎನ್​.ಕೆ ಅಂದರೆ ಏನಿದರ ಅರ್ಥ..? ಯಾಕಿಷ್ಟು ವಿಭಿನ್ನವಾದ ಹೆಸರಿಟ್ಟರು ಎನ್ನುವುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

ದೇವೇಗೌಡ ದಂಪತಿ ಕನಕಾಭಿಷೇಕ ಮಾಡಿ ನಾಮಕರಣ..!

ಮೊಮ್ಮೊಗನ ಮಗನನ್ನು ನೋಡಿದವರಿಗೆ ಕನಕಾಭಿಷೇಕ ಮಾಡಲಾಗುತ್ತದೆ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಚೆನ್ನಮ್ಮನವರು ಮೊಮ್ಮೊಗ ನಿಖಿಲ್​ ಕುಮಾರಸ್ವಾಮಿ ಮಗನನ್ನು ನೋಡಿದ್ರಿಂದ ಕನಕಾಭಿಷೇಕ ನೆರವೇರಿಸಲಾಯ್ತು. ‘ಆವ್ಯಾನ್​ ದೇವ್’ ಕೂಡ ತನ್ನ ಮುತ್ತಾತ ಹಾಗು ಮುತ್ತಜ್ಜಿಗೆ ಕನಕಾಭಿಷೇಕ ಮಾಡಿ ಕಿಲಕಿಲನೆ ನಕ್ಕಿದ್ದಾನೆ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ದಂಪತಿ ಮೊಮ್ಮೊಗನಿಗೆ ಬಂಗಾರದ ಬಳೆ ತೊಡಿಸಿ ಸಂಭ್ರಮಿಸಿದ್ದಾರೆ. ಇನ್ನೂ ‘ಆವ್ಯಾನ್​ ದೇವ್’ ಹೆಸರಿಗೆ ನಿಖಿಲ್​ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದು, ಗಣೇಶ ಹಾಗೂ ವಿಷ್ಣುವನ್ನು ‘ಆವ್ಯಾನ್​’ ಎಂದು ಕರೆಯುತ್ತಾರೆ. ಇನ್ನೂ ನನ್ನ ತಾತನ ಮೇಲಿನ ಪ್ರೀತಿ ಹಾಗೂ ಭಾವನಾತ್ಮಕ ಸಂಬಂಧ ಉಳಿದುಕೊಳ್ಳಲಿ ಎನ್ನುವ ಕಾರಣಕ್ಕೆ ‘ದೇವ್’ ಎಂದು ಸೇರಿಕೊಂಡಿದ್ದೇವೆ ಎಂದಿದ್ದಾರೆ.

ದೈವವನ್ನೇ ನಂಬಿಕೊಂಡಿರುವ ಕುಟುಂಬಕ್ಕೆ ವಿಶೇಷ ಹೆಸರು..!

ದೇವೇಗೌಡರ ಕುಟುಂಬ ದೇವರಲ್ಲಿ ನಂಬಿಕೆ ಇಟ್ಟಿರುವಷ್ಟು ಬೇರೆ ಯಾವುದೇ ರಾಜಕಾರಣಿ ಕರ್ನಾಟಕದಲ್ಲಿ ಇಲ್ಲ ಎನ್ನಬಹುದು. ದೇವೇಗೌಡರ ಸಹಿತ ಎಲ್ಲಾ ಮಕ್ಕಳು, ಮೊಮ್ಮಕ್ಕಳು ಕೂಡ ದೈವತ್ವಕ್ಕೆ ಸಾಕಷ್ಟು ಆದ್ಯತೆ ಕೊಡುತ್ತಾರೆ. ‘ಆವ್ಯಾನ್​ ದೇವ್’ ಹೆಸರನ್ನು ನಿಖಿಲ್​ ಕುಮಾರಸ್ವಾಮಿ ಪತ್ನಿ ರೇವತಿ ಹುಡುಕಿದ್ದಾರೆ. ಆದರೆ ಆ ಹೆಸರಿಗೆ ಹೆಚ್​.ಡಿ ಕುಮಾರಸ್ವಾಮಿ ದಂಪತಿ ಹಾಗೂ ಹೆಚ್​.ಡಿ ದೇವೇಗೌಡ ದಂಪತಿ ಕೂಡ ಸಮ್ಮತಿ ಸೂಚಿಸಿದ್ದಾರೆ. ಆ ಬಳಿಕ ಸಂಖ್ಯಾ ಶಾಸ್ತ್ರದ ಪ್ರಕಾರ ಜಾತಕಕ್ಕೆ ಹೆಸರು ಹೊಂದಾಣಿಕೆ ಆಗುತ್ತದೆಯೇ ಎನ್ನುವುದನ್ನು ಪರಿಶೀಲಿಸಿದ್ದಾರೆ. ಆ ಬಳಿಕ ಅಷ್ಟೇ ‘ಆವ್ಯಾನ್​ ದೇವ್’ ಎಂದು ನಾಮಕರಣ ಮಾಡಿದ್ದಾರೆ. ಮಗ ಮುಂದೆ ಏನಾಗಬೇಕು ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ನಿಖಿಲ್​ ಹಾಗೂ ರೇವತಿ, ಮೊದಲು ಚೆನ್ನಾಗಿ ಓದಲಿ, ಆ ಬಳಿಕ ಏನಾದರೂ ಆಗಲಿ, ಅವನಿಚ್ಛೆ ಎಂದಿದ್ದಾರೆ. ಇನ್ನು ನಿಖಿಲ್​ ಮಾತ್ರ ಒಳ್ಳೆಯ ಪ್ರಜೆ ಆದರೆ ಸಾಕು ಎಂದಿದ್ದಾರೆ.

Related Posts

Don't Miss it !