ಕರುನಾಡಲ್ಲಿ ವರುಣನ ಅಬ್ಬರ, ತುಂಬಿ ಹರಿಯುತ್ತಿರುವ ನದಿಗಳು..!

Kalasa hebbale bridge

ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಕಾರವಾರ, ಹೊನ್ನಾವರ ಸೇರಿದಂತೆ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಜುಲೈ 18 ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಶುರುವಾಗಿರುವ ಮಳೆಯ ಅಬ್ಬರಕ್ಕೆ ಜನಜೀವನ ತತ್ತರಿಸಿದೆ. ಜಿಲ್ಲೆಯ ಮಲೆನಾಡು ಭಾಗಗಳಾ್ ಶಿರಸಿ, ಸಿದ್ಧಾಪುರ, ಯಲ್ಲಾಪುರ, ಜೋಯಿಡಾ ಭಾಗದಲ್ಲೂ ವರುಣನ ಅಬ್ಬರ ಜೋರಾಗಿದ್ದು, ಜಲಾಶಯ ವ್ಯಾಪ್ತಿಯ ಪ್ರದೇಶಗಳಲ್ಲಿ ನದಿಗಳ ಹರಿವು ಹೆಚ್ಚಾಗಿದೆ. ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನದಿ ಪಾತ್ರದ ನಿವಾಸಿಗಳಿಗೆ ಕೆಪಿಸಿಎಲ್ ಮುನ್ನೆಚ್ಚರಿಕೆ ನೀಡಿದೆ. ಕಡಲಿನಲ್ಲೂ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಕೊಡಗು ಜಿಲ್ಲೆಯಲ್ಲೂ ಭಾರೀ ಮಳೆ ಸುರಿಯುತ್ತಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗ್ತಿರುವ ಕಾರಣ ಪಯಶ್ವಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹ ಸ್ಥಿತಿ ತಲುಪಿರುವ ಪಯಶ್ವಿನಿ ನದಿ ನೀರು ಕೊಯನಾಡಿನ ಕೆಲವು ಮನೆಗಳಿಗೂ ನುಗ್ಗಿದೆ. ಮಡಿಕೇರಿ ತಾಲೂಕಿನ ಕೊಯನಾಡು ನದಿ ಪಾತ್ರದಲ್ಲಿ ಪ್ರವಾಹದ ನೀರಿನಲ್ಲಿ ಬೃಹತ್ ಗಾತ್ರದ ದಿಮ್ಮಿಗಳು ತೇಲಿ ಬರುತ್ತಿರುವುದರಿಂದ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. 2018 ರಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. .

ಪಯಶ್ವಿನಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಹಲವು ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ನದಿ ತೀರದ ಹಲವು ಕುಟುಂಬಗಳ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಕೊಯನಾಡು ಶಾಲೆಯ ಕಾಳಜಿ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದೆ. ಮಳೆಯಿಂದ ಜಿಲ್ಲೆಯಲ್ಲಿ 1 ಕೋಟಿಗೂ ಹೆಚ್ಚು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ. ಒಬ್ಬರ ಜೀವ ಹಾನಿಯಾಗಿದ್ದು ಕುಟುಂಬಸ್ಥರಿಗೆ NDRF ನಿಯಮಗಳ ಪ್ರಕಾರ ಪರಿಹಾರ ನೀಡಲಾಗುವುದು ಎಂದು ಕುಶಾಲನಗರದಲ್ಲಿ ಸಚಿವ ಸೋಮಣ್ಣ ಹೇಳಿದ್ದಾರೆ.

ಮಲೆನಾಡು ಚಿಕ್ಕಮಗಳೂರು ಭಾಗದಲ್ಲೂ ಮಳೆ ಆರ್ಭಟ ರೌದ್ರನರ್ತನ ಸೃಷ್ಟಿಸಿದ್ದೆ. ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್. ಆರ್ ಪುರ ತಾಲೂಕುಗಳಲ್ಲಿ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಭಾರಿ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿವೆ. ತುಂಗ-ಭದ್ರಾ, ಹೇಮಾವತಿ ನದಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳಸದ ಹೆಬ್ಬಾಳೆ ಸೇತುವೆ ಮುಳುಗುವ ಭೀತಿಯಲ್ಲಿದೆ. ಸೇತುವೆ ಮಟ್ಟದಿಂದ ಕೇವಲ ಎರಡು ಅಡಿ ಕೆಳಗೆ ನೀರು ಹರಿಯುತ್ತಿದೆ. ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೇಮಾವತಿ ನದಿ ನೀರಿನ ಮಟ್ಟದಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.ಉಕ್ಕಿಹರಿಯುತ್ತಿರುವ ಹಳ್ಳಕೊಳ್ಳಗಳಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಭಾರೀ ಮಳೆಯಾಗುತ್ತಿದೆ. ಭಾರೀ ಗಾಳಿ ಮಳೆಯಾಗ್ತಿದ್ದು, ಬೆಳ್ತಂಗಡಿ ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನಾದ್ಯಾಂತ ಭಾರೀ ಮಳೆಯಾಗ್ತಿದೆ. ಜುಲೈ19 ರವರೆಗೆ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೇತ್ರಾವತಿ, ಕುಮಾರಾಧಾರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ಮಂಗಳೂರು ಬಳಿ ರೈಲು ಹಳಿ ಮೇಲೆ ಮಣ್ಣು ಕುಸಿದು ಬಿದ್ದಿದ್ದು ರೈಲು ಸಂಚಾರ ಬಂದ್ ಆಗಿದೆ. ಮಂಗಳೂರು ಜಂಕ್ಷನ್ ಮತ್ತು ತೋಕೂರು ರೈಲ್ವೇ ಸ್ಟೇಷನ್ ನಡುವೆ ಕುಲಶೇಖರ ಟನಲ್ ಬಳಿ ಹಳಿ ಮೇಲೆ ಮಣ್ಣು ಕುಸಿದಿದೆ. ಕೊಂಕಣ್ ರೈಲ್ವೇ ವಿಭಾಗದ ರೈಲು ಸಂಚಾರದಲ್ಲಿ ವ್ಯತ್ಯಯ ಆಗಿದ್ದು, ಮಣ್ಣು ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯ್ತು.

Related Posts

Don't Miss it !