ರಾಜ್ಯದಲ್ಲಿ ಮತ್ತೆ 5 ದಿನ ಭಾರೀ ಮಳೆ..! ನಿನ್ನೆ ಬೆಳಗಾವಿಯಲ್ಲಿ ಗೋಡೆ ಕುಸಿದು 7 ಸಾವು..

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರ ಬೆನ್ನಲ್ಲೇ ಬೆಳಗಾವಿಯಲ್ಲಿ ಭೀಕರ ಘಟನೆ ಒಂದು ನಡೆದಿದೆ. ಒಂದೇ ಕುಟುಂಬಕ್ಕೆ ಸೇರಿದ 7 ಮಂದಿ ನಿನ್ನೆ ಸೂರ್ಯಾಸ್ತ ನೋಡಿದವರು ಇಂದಿನ ಸೂರ್ಯೋದಯ ಕಂಡಿಲ್ಲ. ಎಲ್ಲರೂ ಮಸಣ ಸೇರಿದ್ದಾರೆ. ಅದೂ ಕೂಡ ಮಳೆಯ ಆರ್ಭಟದಿಂದ ಮನೆಯ ಗೋಡೆ ಕುಸಿದು ಈ ದುರಂತ ಸಂಭವಿಸಿದೆ. ರಕ್ಕಸ ಮಳೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದೆ. ಅಂಗಡಿಗೆ ತೆರಳಿದ್ದ ಭೀಮ ಎಂಬಾತ ಹಾಗು ಆತನ ಮಗ ಇಬ್ಬರು ಮಾತ್ರ ಬದುಕಿ ಉಳಿದಿದ್ದಾರೆ.

ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿ ಬಡಾಲ ಅಂಕಲಗಿ ಗ್ರಾಮದ ಭೀಮಪ್ಪ ಖನಗಾವಿ ಕುಟುಂಬದ 7 ಮಂದಿ ಸಾವನ್ನಪ್ಪಿದ್ದಾರೆ. ಮನೆಯ ಗೋಡೆ ಕುಸಿಯುವ ಭೀತಿಯಿಂದ ಮನೆಯನ್ನು ಬಿಟ್ಟು ಪಕ್ಕದಲ್ಲೇ ಗುಡಿಸಲು ಹಾಕಿಕೊಂಡಿದ್ದ ಕುಟುಂಬಸ್ಥರು ಮನೆ ಗೋಡೆ ಕುಸಿಯುತ್ತಿದ್ದಂತೆ ಗುಡಿಸಲಿನಿಂದ ಹೊರಬಂದು ನೋಡಲು ಮುಂದಾಗಿದ್ದರು ಎನ್ನಲಾಗಿದೆ. ಇದೇ ಸಮಯಕ್ಕೆ ಕುಸಿದುಬಿದ್ದ ಗೋಡೆ ಸ್ಥಳದಲ್ಲೇ ಐವರನ್ನು ಬಲಿ ಪಡೆದರೆ ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ತಹಶೀಲ್ದಾರ್, ಬೆಳಗಾವಿ ಜಿಲ್ಲಾಧಿಕಾರಿ, ಹಿರೇಬಾಗೇವಾಡಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿ ಮರಣೋತ್ತರ ಪರೀಕ್ಷೆಯನ್ನು ರಾತ್ರೋರಾತ್ರಿ ಮಾಡಿ ಅಂತ್ಯಸಂಸ್ಕಾರವನ್ನೂ ಮಾಡಿ ಮುಗಿಸಿದ್ದಾರೆ.

Read this also;

50 ವರ್ಷದ ಗಂಗವ್ವ ಖನಗಾವಿ, 45 ವರ್ಷದ ಸತ್ಯವ್ವ ಖನಗಾವಿ, 8 ವರ್ಷದ ಪೂಜಾ ಖನಗಾವಿ 28 ವರ್ಷದ ಸವಿತಾ ಖನಗಾವಿ, 15 ವರ್ಷದ ಲಕ್ಷ್ಮೀ ಖನಗಾವಿ, ಅರ್ಜುನ್ ಖನಗಾವಿ, ಕಾಶವ್ವ ಕೊಳೆಪ್ಪನವರ್ ಮೃತ ದುರ್ದೈವಿಗಳು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದುರಂತದ ಬಗ್ಗೆ ಕಂಬನಿ ಮಿಡಿದಿದ್ದು, ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ನಾಳೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಆವರನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದಾರೆ. ರಾತ್ರಿಪೂರ್ತಿ ಮಳೆಯ ನಡುವೆಯೇ ಎಲ್ಲಾ ಕಾರ್ಯಗಳನ್ನು ಖುದ್ದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಮುಂದೆ ನಿಂತು ಮಾಡಿಸಿದ್ದಾರೆ. ಒಂದೇ ಗುಂಡಿಯಲ್ಲಿ ಕುಟುಂಬದ ಎಲ್ಲಾ 6 ಜನರನ್ನು ಒಟ್ಟಿಗೆ ಮಣ್ಣು ಮಾಡಿದ್ದಾರೆ. ಇನ್ನೂ ಎದುರು ಮನೆಯ ಕಾಶವ್ವ ಕೊಳೆಪ್ಪನವರ್​ನನ್ನು ಅವರ ಮನೆಯವರು ಪ್ರತ್ಯೇಕವಾಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Read this also;

ಸತ್ತ ಮೇಲೆ ಲಕ್ಷ ಲಕ್ಷ ಪರಿಹಾರ ಪ್ರಯೋಜನೆ ಏನು..?

ಯಾವುದೇ ಸರ್ಕಾರಗಳು ಈ ರೀತಿಯ ಘಟನೆಗಳು ನಡೆದಾಗ ಲಕ್ಷ ಲಕ್ಷ ಪರಿಹಾರ ಕೊಟ್ಟು ದುಃಖವನ್ನು ಖರೀದಿ ಮಾಡುವ ಕೆಲಸ ಮಾಡುತ್ತವೆ. ಆದರೆ ಅದೇ ಈ ಬಡ ಕುಟುಂಬ ಬದುಕಿದ್ದಾಗ ಒಂದು ಮನೆ ಕಟ್ಟಿಕೊಳ್ಳಲು ಸಹಕಾರ ನೀಡಿದ್ದರೆ ಇಡೀ ಕುಟುಂಬವೇ ಸಂತೋಷದಿಂದ ಬದುಕು ಕಟ್ಟಿಕೊಳ್ಳಬಹುದಿತ್ತು. ಮನೆ ಮುರಿದು ಬೀಳುತ್ತಿದೆ. ಮನೆ ಕಟ್ಟಿಕೊಳ್ಳಿ ಎಂದು ಹತ್ತಾರು ತಿಂಗಳು ಅರ್ಜಿ ಹಾಕಿಕೊಂಡು ಅಲೆದಾಡಿದ್ರು ಸರ್ಕಾರ ಹಾಗೂ ಅಧಿಕಾರಿಗಳು ಕ್ಯಾರೇ ಎನ್ನುವುದಿಲ್ಲ. ಇದೇ ರೀತಿ ರಾಜ್ಯಾದ್ಯಂತ ಸಾವಿರಾರು ಕುಟುಂಬಗಳು ಮನೆ ಬೀಳುವ ಆತಂಕದಲ್ಲಿ ದಿನಗಳನ್ನು ದೂಡುತ್ತಿದೆ. ಸರ್ಕಾರ ದುರಂತವಾದ ಬಳಿಕ ಪರಿಹಾರ ಕೊಡಲು ಕಾಯುವುದನ್ನು ಬಿಟ್ಟು ಮನೆ ಕಟ್ಟಿಕೊಳ್ಳಲು ಸಹಕಾರ ನೀಡಬೇಕಿದೆ. ರಾಜ್ಯದಲ್ಲಿ ಕುಸಿದು ಬೀಳುವ ಹಂತದಲ್ಲಿರುವ ಮನೆಗಳ ಸಮೀಕ್ಷೆ ನಡೆಸಬೇಕಿದೆ. ಆ ಬಳಿಕ ಯಾವುದಾದರೂ ಒಂದು ಯೋಜನೆಯಲ್ಲಿ ಮನೆಗಳ ನಿರ್ಮಾಣ ಮಾಡಿಸಿಕೊಟ್ಟರೆ ಸಾವಿರಾರು ದುರಂತಗಳನ್ನು ತಡೆಯಬಹುದಾಗಿದೆ. ಸರ್ಕಾರ ಮನಸ್ಸು ಮಾಡಬೇಕು ಅಷ್ಟೆ..

Related Posts

Don't Miss it !