ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ.. ಬೆಂಗಳೂರಲ್ಲಿ 3 ದಿನ ವರುಣಾರ್ಭಟ..

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿಯಲಿದ್ದು, ಮುಂದಿನ ಒಂದು ವಾರ ಮಳೆ ಸುರಿಯಲಿದೆ ಎನ್ನುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದ್ದು, ಕರಾವಳಿ ಕರ್ನಾಟಕ ಭಾಗದಲ್ಲಿ ಇನ್ನೂ ಮೂರು ದಿನ ಮಳೆ ಅಬ್ಬರ ಜೋರಾಗಿರಲಿದೆ ಎನ್ನುವ ಮಾಹಿತಿ ಜನತೆಯನ್ನು ಕಂಗಾಲು ಮಾಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನಾಳೆ ರೆಡ್ ಅಲರ್ಟ್ ಹಾಗು ಆಗಸ್ಟ್​ 6ರಂದು ಆರೆಂಜ್ ಅಲರ್ಟ್ ಮತ್ತು ಕೊನೆಯ ಎರಡು ದಿನಗಳ ಕಾಲ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲ್ಬುರ್ಗಿ ವಿಜಯಪುರ ಜಿಲ್ಲಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಆಗಿದೆ. ನಾಳೆ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

20 ಜಿಲ್ಲೆಗಳಲ್ಲಿ ಮಳೆ ಬಗ್ಗೆ ಎಚ್ಚರಿಕೆ.. ರೆಡ್​ ಅಲರ್ಟ್​ ಇದ್ರೆ ಸಂಕಷ್ಟ..!

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಹಾಗು ಚಾಮರಾಜನಗರ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಳೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅದರ ಜೊತೆಗೆ ಮುಂದಿನ ಮೂರು ಗಂಟೆಗಳ ಕಾಲ ರಾಜ್ಯಾದ್ಯಂತ 20 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು 20 ಜಿಲ್ಲಾಧಿಕಾರಿಗಳಿಗೆ ಭಾರತೀಯ ಹವಾಮಾನ ಇಲಾಖೆ ಅಲರ್ಟ್ ಆಗಿರುವಂತೆ ಸಂದೇಶ ರವಾನಿಸಲಾಗಿದೆ. ಸುಮಾರು 30 ರಿಂದ 40 ಕಿಲೋ ಮೀಟರ್​ ವೇಗದಲ್ಲಿ ಗಾಳಿ ಬೀಸಲಿದ್ದು, ಮಿಂಚು ಗುಡುಗು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಅನಾಹುತಗಳು ಸಂಭವಿಸುವ ಮುನ್ನ ಅಗತ್ಯ ಕ್ರಮ ತೆಗೆದುಕೊಂಡು ಎಚ್ಚರ ವಹಿಸುವಂತೆ ಸೂಚನೆ ರವಾನೆ ಮಾಡಲಾಗಿದೆ.

ಶಾಲೆಗಳಿಗೆ ರಜೆ ಘೋಷಣೆ ಮಾಡಿರೋ ಜಿಲ್ಲಾಡಳಿತ..!

ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು , ಹಾಸನ, ಚಿತ್ರದುರ್ಗ, ತುಮಕೂರು ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಕಲಬುರರ್ಗಿ, ಬೀದರ್, ಕೊಪ್ಪಳ ಜಿಲ್ಲೆಯಲ್ಲಿ ಇಂದು ರಾತ್ರಿ ಜೋರು ಮಳೆ ಬೀಳಲಿದೆ. ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನು ಚಾಮರಾಜನಗರ ಜಿಲ್ಲೆಯಾದ್ಯಂತ ಭಾರಿ ಮಳೆ ಆಗ್ತಿರೋ ಹಿನ್ನೆಲೆಯಲ್ಲಿ ಎರಡು ದಿನ ಚಾಮರಾಜನಗರ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಆಗಸ್ಟ್ 5 ಮತ್ತು 6 ರಂದು ಜಿಲ್ಲೆಯ ಎಲ್ಲಾ ಎಲ್‌ಕೆಜಿ, ಯುಕೆಜಿ, ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲೂ ನಿರಂತರ, ವ್ಯಾಪಕ ಮಳೆ ಆಗ್ತಿದ್ದು, ಮಂಡ್ಯ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ರಜೆ ಘೋಷಿಸಿ ಡಿಡಿಪಿಐ ಜವರೇಗೌಡ ಆದೇಶ ಮಾಡಿದ್ದಾರೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ಎದುರಾಗಿದೆ ಮಳೆಯ ಕಂಟಕ..!

ವರಮಹಾಲಕ್ಷ್ಮಿ ಹಬ್ಬಕ್ಕೆ ವರುಣನ ಅಡ್ಡಿಯಾಗಿದ್ದು, ಬೆಂಗಳೂರಿನಲ್ಲಿ ಭಾರೀ ಮಳೆ ಆಗ್ತಿದೆ. ಇದೇ ರೀತಿ ಮಳೆ ಮುಂದುವರಿಯಲಿದ್ದು, ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಗ್ರಾಹಕರು ಪರದಾಟುವಂತಾಗಿದೆ. 2 ವರ್ಷಗಳ ಕೊರೊನಾ ಸಂಕಷ್ಟದ ಬಳಿಕ ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡುತ್ತಿದ್ದು, ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆಯಾಗ್ತಿರೋದು ಹಬ್ಬದ ಕಳೆ ಕುಂದುವಂತೆ ಮಾಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾರೀ ಮಳೆ ಮುನ್ಸೂಚನೆ ಸಿಕ್ಕಿದ್ದು, ನಾಳೆ ಬೆಳಗ್ಗೆ 8.30ರವರೆಗೆ ಭಾರೀ ಮಳೆ ಆಗಲಿದೆ. ಗರಿಷ್ಟ 29 ಡಿಗ್ರಿ, ಕನಿಷ್ಟ 20 ಡಿಗ್ರಿ ತಾಪಮಾನವಿರಲಿದ್ದು, ಇನ್ನೂ ಮೂರು ದಿನ ಬೆ.ಂಗಳೂರಿನಲ್ಲಿ ಮಳೆ ಇರಲಿದೆ. ಇಂದಿನಿಂದ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Related Posts

Don't Miss it !