ಮುಖ್ಯಮಂತ್ರಿಗಳೇ.. ಇದು ನಮ್ಮೂರ ರಸ್ತೆ, ನೀವೊಮ್ಮೆ ನೋಡಿ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗೇನಹಳ್ಳಿಯಿಂದ ಬರಗೇನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯಿದು. ಈ ರಸ್ತೆ ಸಂಪೂರ್ಣವಾಗಿ ಹಾಳಗಿದ್ದು, ರಸ್ತೆಯ ತುಂಬಾ ತಗ್ಗು-ಗುಂಡಿಗಳು ಇರುವುದರಿಂದ ವಾಹನ ಸವಾರರು ಸಂಚಾರ ಮಾಡಲು ಹರಸಾಹಸ ಪಡಬೇಕಾಗಿದೆ. ನಿತ್ಯ ಸಂಚಾರ ಮಾಡುವ ಜನರ ಗೋಳು ಹೇಳ ತೀರದು. ರಾಜ್ಯದಲ್ಲಿ ಬಿಜೆಪಿ ಪಕ್ಷ ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿ ಇದೆ. ನಮ್ಮ ಕ್ಷೇತ್ರದಲ್ಲೂ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗಿದ್ದರೂ ಅಭಿವೃದ್ಧಿ ಮರಿಚಿಕೆಯಾಗಿದೆ. ಇದಕ್ಕೆ ನೂತನ ಮುಖ್ಯಮಂತ್ರಿಯಾದ ನೀವಾದರೂ ಕಾಯಕಲ್ಪ ನೀಡಿ.

ಈ ರಸ್ತೆಯು ಸುಮಾರು 4 ಕಿಲೋ ಮೀಟರ್​ ಉದ್ದವಿದ್ದು ಭಾರಿ ಪ್ರಮಾಣದ ತಗ್ಗು ಗುಂಡಿಗಳು ಬಿದ್ದಿವೆ. ಇದರಿಂದ ಪ್ರಯಾಣಿಕರು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ. ಈ ರಸ್ತೆ ಮೂಲಕ ರಂಗೇನಹಳ್ಳಿ – ಇಂದಿರಾ ನಗರ – ಬರಗೇನಹಳ್ಳಿ – ಹರುವನಹಳ್ಳಿ – ಗೌಳಿಗರ ಕ್ಯಾಂಪ್ – ಗುಡ್ಡದ ಬೀರನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಗ್ರಾಮಗಳ ನೂರಾರು ಜನರು ದಿನನಿತ್ಯ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ, ಆದರೆ ಕಳೆದ 4-5 ವರ್ಷಗಳಿಂದ ಅಧಿಕಾರಿಗಳು ಸಮಸ್ಯೆ ಕಂಡರೂ ಕಣ್ಮುಚ್ಚಿ ಕುಳಿತಿದ್ದಾರೆ. ಶಾಸಕರು ಸೇರಿ ಜನಪ್ರತಿನಿಧಿಗಳು ಅಭಿವೃದ್ಧಿ ಮರೆತಿದ್ದಾರೆ.

ಈ ರಸ್ತೆಯನ್ನು ನಾಲ್ಕೈದು ವರ್ಷಗಳ ಹಿಂದೆ ಅಭಿವೃದ್ಧಿ ಪಡಿಸಿದ್ದು ಬಿಟ್ಟರೆ ಇಲ್ಲಿಯವರೆಗೂ ರಸ್ತೆಗೆ ತೇಪೆ ಹಚ್ಚುವ ಕೆಲಸವೂ ನಡೆದಿಲ್ಲ. ಈಗ ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದು ಜಲ್ಲಿಕಲ್ಲುಗಳು ಕಾಣಿಸುತ್ತಿವೆ. ರಸ್ತೆಯಲ್ಲಿ ತಗ್ಗುಗಳೇ ಹೆಚ್ಚಾಗಿರುವ ಕಾರಣ ತಗ್ಗು – ಗುಂಡಿಗಳ ನಡುವೆ ರಸ್ತೆಯನ್ನೆ ಹುಡುಕುವ ಪರಿಸ್ಥಿತಿ ಎದುರಾಗಿದೆ. ಹಾಳದ ರಸ್ತೆಯಿಂದಾಗಿ ಸಮಯ ವ್ಯರ್ಥವಾಗುವುದರಿಂದ ಸುಗಮ ಪ್ರಯಾಣ ಎಂಬುವುದು ದುಸ್ತರವಾಗಿದೆ. ರಸ್ತೆ ಸಂಪೂರ್ಣವಾಗಿ ಹಾಳಗಿರುವ ಪರಿಣಾಮ ಅಪರೂಪಕ್ಕೆ ಎಂಬಂತೆ ಸಂಚರಿಸುತ್ತಿದ್ದ ಬಸ್ ಕೂಡ ಸರಿಯಾದ ಸಮಯಕ್ಕೆ ಬಾರದೆ ವಿದ್ಯಾರ್ಥಿಗಳು, ನೌಕರರು, ವ್ಯಾಪರಸ್ಥರಿಗೆ ತೊಂದರೆಯಾಗಿದೆ.

ಸುತ್ತಮುತ್ತಲ ಗ್ರಾಮಸ್ಥರು ರಸ್ತೆ ಅಭಿವೃದ್ಧಿ ಬಗ್ಗೆ ಹಲವಾರು ಬಾರಿ ಕೋರಿಕೆ ಸಲ್ಲಿಸಿದ್ದರು ಸಹ ಈವರೆಗೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.ಈ ರಸ್ತೆಯಲ್ಲಿ ವಾಹನ ಸವಾರ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ. ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಸಾಗುವುದು ಸಾವಿನ ಮನೆಯ ಯಾತ್ರೆ ಎನ್ನುವಂತಿದೆ. ಚುನಾವಣೆ ಬಂದಾಗ ಭರಪೂರ ಭರವಸೆ ಸಿಗುತ್ತದೆ. ಆ ಬಳಿಕ ನಮ್ಮ ಕಡೆಗೆ ತಿರುಗಿಯೂ ನೋಡುವುದಿಲ್ಲ. ನಮ್ಮ ಜನರ ತಪ್ಪಿಲ್ಲ ಎಂದು ಹೇಳುವುದಿಲ್ಲ. ನೀವು ಕೊಡುವ ಹಣಕ್ಕೆ ಕೈಚಾಚಿ ವೋಟ್​ ಹಾಕಿದ್ದಾರೆ. ಆದರೂ ಕನಿಷ್ಟ ತಿರುಗಾಡುವ ರಸ್ತೆಯನ್ನಾದರೂ ಅಭಿವೃದ್ಧಿ ಮಾಡಿಕೊಡಿ. ನಮ್ಮೂರಿಗೆ ಒಮ್ಮೆ ನೀವಾದರೂ ಬನ್ನಿ ಆಗಲಾದರೂ ನಮ್ಮೂರ ರಸ್ತೆಗೆ ಡಾಂಬಾರು ಹಾಕುತ್ತಾರೆ. ಪ್ಲೀಸ್

ದಿಲೀಪ್ ಕುಮಾರ್.ಕೆ
ಬರಗೇನಹಳ್ಳಿ

Related Posts

Don't Miss it !