ಕೇಂದ್ರದಿಂದ ಬೈಕ್​ ಸವಾರರಿಗೆ ಸಿಹಿ ಸುದ್ದಿ, ಜೊತೆಗೆ ಕಹಿ ಸುದ್ದಿ..! ಸವಾರರಿಗೆ ಸಂಕಷ್ಟ..!

ಬೈಕ್​ ಓಡಿಸುವ ಜನರಿಗೆ ಕೇಂದ್ರ ಸರ್ಕಾರ ಗುಡ್​ ನ್ಯೂಸ್​ ಕೊಟ್ಟಿದೆ. ಇನ್ಮುಂದೆ ವಾಹನ ಓಡಿಸುತ್ತಾ ಮೊಬೈಲ್​ನಲ್ಲಿ ಮಾತನಾಡಿದ್ರೆ ಪೊಲೀಸರು ಹಿಡಿದು ಫೈನ್​ ಹಾಕುವಂತಿಲ್ಲ. ಈ ಬಗ್ಗೆ ನೂತನ ಕಾಯ್ದೆಯನ್ನೇ ಜಾರಿ ಮಾಡುವುದಾಗಿ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್​ ಗಡ್ಕರಿ ಘೋಷಣೆ ಮಾಡಿದ್ದಾರೆ. ಆದರೆ ಮೊಬೈಲ್​ ಹಿಡಿದು ಮಾತನಾಡುವಂತಿಲ್ಲ, ಆಧುನಿಕ ತಂತ್ರಜ್ಞಾನಗಳಾದ ಬ್ಲ್ಯೂಟೂತ್​ ಸೇರಿದಂತೆ ಹೆಡ್​ಫೋನ್​ ಬಳಸಿ ಮಾತನಾಡಬಹುದು. ಈ ಬಗ್ಗೆ ಹೊಸ ಕಾಯ್ದೆ ತರುವುದರಿಂದ ಸಾಕಷ್ಟು ಜನರಿಗೆ ಅನುಕೂಲ ಆಗಲಿದೆ ಎನ್ನುವುದು ಕೇಂದ್ರ ಸರ್ಕಾರದ ಯೋಜನೆಯ ಭಾಗ. ಆದರೆ ವಾಹನ ಸವಾರರಿಗೆ ಕಹಿಯೊಂದನ್ನೂ ನೀಡಿದೆ.

ರಾಜ್ಯದಲ್ಲಿ ಮಕ್ಕಳಿಗೆ ಇರಬೇಕು ಹೆಲ್ಮೆಟ್​​..!

ರಾಜ್ಯದಲ್ಲಿ ಬೈಕ್​ ಸವಾರರಿಗೆ ಹೆಲ್ಮೆಟ್​ ಕಡ್ಡಾಯ ಮಾಡಲಾಗಿತ್ತು. ಆ ಬಳಿಕ ಬೈಕ್​ನಲ್ಲಿ ತೆರಳುವ ಇಬ್ಬರಿಗೂ ಹೆಲ್ಮೆಟ್​ ಕಡ್ಡಾಯ. ಬೈಕ್​ ಅಪಘಾತ ಆದರೆ ಪ್ರಾಣ ರಕ್ಷಣೆಗೆ ಹೆಲ್ಮೆಟ್​ ಕಡ್ಡಾಯ ಎನ್ನುವುದು ಸರ್ಕಾರ ಕೊಟ್ಟಿದ್ದ ಕಾರಣ. ಇದೀಗ ಮಕ್ಕಳನ್ನು ಸ್ಕೂಟರ್​ನಲ್ಲಿ‌ ಕರೆದುಕೊಂಡು ಹೋಗಲು ಹೊಸ ನಿಯಮ ಜಾರಿ ಮಾಡಿದೆ. ಹೆಲ್ಮೆಟ್‌ ಮತ್ತು ರಕ್ಷಾಕವಚ ಹಾಕುವುದು ಕಡ್ಡಾಯ. ಅದೂ ಕೂಡ 9 ತಿಂಗಳ ಮಗುವಿನಿಂದ 4 ವರ್ಷ ವಯಸ್ಸಿನ ಮಕ್ಕಳ ತನಕ ರಕ್ಷಾಕವಚ ಇರಲೇಬೇಕು. 4 ವರ್ಷದ ಮೇಲಿನ ಮಕ್ಕಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಲೇಬೇಕು. ಇಲ್ಲದಿದ್ದರೆ ಪೊಲೀಸರು ದಂಡ ಹಾಕುವುದು ನಿಶ್ಚಿತ.

ಬೈಕ್​​ನಲ್ಲಿ ಮಕ್ಕಳಿದ್ದಾಗ ವೇಗ 40 ಕಿ.ಮೀ ಇರಬೇಕು..!

ಮಕ್ಕಳಿಗೆ ರಕ್ಷಾ ಕವಚ ಹಾಗೂ ಹೆಲ್ಮೆಟ್​ ಇರಬೇಕು, ಒಂದೊಮ್ಮೆ ಬೈಕ್​ನಿಂದ ಬಿದ್ದರೂ ರಕ್ಷಣೆ ಆಗುವಂತಿರಬೇಕು ಎನ್ನುವುದು ಸರ್ಕಾರದ ನಿರ್ಧಾರದ ಉದ್ದೇಶ. ಆದರೆ ಬೈಕ್​ನಲ್ಲಿ ಮಕ್ಕಳು ಇದ್ದರೆ ಪ್ರತಿ ಗಂಟೆಗೆ 40 ಕಿಲೋ ಮೀಟರ್​​ಗಿಂತ ಕಡಿಮೆ ವೇಗದಲ್ಲಿ ಚಲಿಸಬೇಕು. ರಕ್ಷಾಕವಚದ ಪಟ್ಟಿ ಚಾಲಕನ ಜೊತೆಗೆ ಬೆಲ್ಟ್​​ ಹಾಕಿಕೊಂಡಂತೆ ಇರಬೇಕು. ಮಕ್ಕಳ ರಕ್ಷಾಕವಚಗಳು ಹಗುರ ಮತ್ತೆ ಫ್ಲೆಕ್ಸಿಬಲ್ ಆಗಿರಬೇಕು. ಮಕ್ಕಳಿಗೆ ಹಾಕುವ ರಕ್ಷಾ ಕವಚ ವಾಟರ್ ಪ್ರೂಫ್ ಆಗಿರಬೇಕು ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ, ಮೋಟಾರು ವಾಹನಗಳ ಕಾಯ್ದೆಯ ಸೆಕ್ಷನ್‌ 129ರ ಅಡಿಯಲ್ಲಿ ಹೊಸ ನಿಯಮ ಜಾರಿ ಮಾಡಿದೆ.

ಮಿತಿ ಹೇರಿಕೆ ಸಮಸ್ಯೆ ಅಲ್ಲ, ಹೆಲ್ಮೆಟ್​, ರಕ್ಷಾಕವಚನೇ ಟ್ರಬಲ್​..!

ಬೆಂಗಳೂರು ನಗರ ಸೇರಿದಂತೆ ಪ್ರಮುಖ ನಗರಗಳಲ್ಲಿ ವೇಗ 40 ಕಿಲೋ ಮೀಟರ್​ನಲ್ಲಿ ಹೋಗುವುದು ಸಮಸ್ಯೆ ಆಗುವುದಿಲ್ಲ. ಆದರೆ ಬಡವರು, ಮಧ್ಯಮ ವರ್ಗದ ಜನರು ರಕ್ಷಾ ಕವಚ ಖರೀದಿ ಮಾಡಬೇಕು ಎನ್ನುವುದೇ ಸಮಸ್ಯೆ. ಇನ್ನು ಮಕ್ಕಳಿಗೆ ಹೆಲ್ಮೆಟ್​ ಹಾಕಿಕೊಂಡು ಬೈಕ್​ ಓಡಿಸುವುದು ಸಮಸ್ಯೆ ಆಗಲಿದೆ. ಹಳ್ಳಿಗಾಡಿನ ಜನ ಹೆಲ್ಮೆಟ್​ ಹಾಗೂ ರಕ್ಷಾ ಕವಚ ಹಾಕಿಕೊಂಡೆ ಓಡಾಡುವುದು ಕಷ್ಟಕರ. ನಗರ ವಾಸಿಗಳು ಸರ್ಕಾರದ ಯೋಜನೆಯನ್ನು ಒಪ್ಪಿಕೊಂಡು ಪಾಲಿಸಿದರೂ ಹಳ್ಳಿಗಾಡಿನ ಜನರನ್ನು ಖಾಕಿಪಡೆ ರಕ್ತ ಹೀರುವ ಎಲ್ಲಾ ಸಾಧ್ಯತೆಗಳಿವೆ. ಈ ಬಗ್ಗೆ ಸರ್ಕಾರ ಮತ್ತೊಮ್ಮೆ ಚಿಂತಿಸಬೇಕಿದೆ.

Related Posts

Don't Miss it !