ರಾಜ್ಯದಲ್ಲಿ ಹಿಜಬ್​ ಕಿಚ್ಚು, ಶಾಲಾ ಕಾಲೇಜಿಗೆ ರಜೆ, ಸರ್ಕಾರದಲ್ಲೇ ಗೊಂದಲ..!

ಉಡುಪಿಯಲ್ಲಿ ಶುರುವಾದ ಹಿಜಬ್​ ವಿವಾದ ರಾಜ್ಯಾದ್ಯಂತ ವಿಸ್ತರಣೆ ಆಗಿದೆ. ಹಿಜಬ್​​ ವಿರೋಧಿಸುವ ನೆಪದಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಶಾಲೆಗೆ ಬರುತ್ತಿದ್ದಾರೆ. ಈ ವಿಚಾರ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿದ್ದು, ಸಮಗ್ರವಾದ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಬಹುತೇಕ ಜಿಲ್ಲೆ, ತಾಲೂಕು ಕೇಂದ್ರದಲ್ಲಿ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ದಾವಣಗೆರೆ, ಬಾಗಲಕೋಟೆ, ಶಿವಮೊಗ್ಗದಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ಕಾನೂನು ಸುವ್ಯಸ್ಥೆ ಹದಗೆಟ್ಟಿದೆ. ಬಹುತೇಕ ಸ್ಥಳಗಳಲ್ಲಿ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. ದಾವಣಗೆರೆ, ಶಿವಮೊಗ್ಗದಲ್ಲಿ ಸೆಕ್ಷನ್​ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇನ್ನೂ ಕರ್ನಾಟಕ ಹೈಕೋರ್ಟ್​ನಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಲಾಗಿದೆ. ಈ ನಡುವೆ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ವಿಚಾರಣೆಗೂ ಶಾಲಾ ಕಾಲೇಜಿಗೆ ರಜೆಗೂ ಲಿಂಕ್​ ಏನು..?

ಹಿಜಬ್​ ವಿಚಾರವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಕೋಲಾಹಲ ನಿಲ್ಲಬೇಕಿದ್ದರೆ ಹೈಕೋರ್ಟ್​ ತೀರ್ಪು ಕೊಡಬೇಕಿದೆ. ಆದರೆ ಸಂವಿಧಾನಿಕ ವಿಚಾರ ಆಗಿರುವ ಕಾರಣ ಕೋರ್ಟ್​ನಲ್ಲಿ ವಿಚಾರಣೆ ಸುಧೀರ್ಘವಾಗಿ ನಡೆಯುತ್ತಿದೆ. ಇದೇ ಕಾರಣಕ್ಕೆ ಅರ್ಜಿದಾರರ ಪರ ವಕೀಲ ದೇವದಾಸ್​ ಕಾಮತ್​ ಹೈಕೋರ್ಟ್​ ಗಮನ ಸೆಳೆದಿದ್ದರು. ಕೋರ್ಟ್​ ಕಲಾಪದ ಹೊರಗೆ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿ ಕೋರ್ಟ್​ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು. ಇದನ್ನು ಗಮನಿಸಿದ ನ್ಯಾಯಾಧೀಶರು, ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಿಗೆ ಸೂಚಿಸಿದರು. ಹೀಗಾಗಿ ರಜೆ ನೀಡಿ ಸರ್ಕಾರ ಆದೇಶ ಹೊರಡಿಸಿತು.

ರಾಜ್ಯ ಸರ್ಕಾರದ ರಜೆ ಆದೇಶದಲ್ಲಿ ಗೊಂದಲ ಸೃಷ್ಟಿ..!

ರಾಜ್ಯ ಸರ್ಕಾರದ ಅಧಿಕೃತ ಆದೇಶದಲ್ಲಿ ಕಾಲೇಜು ಶಿಕ್ಷಣ, ಪದವಿ ಹಾಗೂ ತಾಂತ್ರಿಕ ವಿದ್ಯಾಲಯಗಳಿಗೆ ರಜೆ ಎಂದು ಅಧಿಕೃತ ಆದೇಶ ಹೊರಡಿಸಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಂತ ಟ್ವಿಟರ್ ಅಕೌಂಟ್‌ನಲ್ಲಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಬರೆದಿದ್ದಾರೆ. ಆ ಬಳಿಕ ಕರ್ನಾಟಕ ಮುಖ್ಯಮಂತ್ರಿ ಅಕೌಂಟ್‌ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಬರೆದಿದ್ದಾರೆ. ಇನ್ನೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಕಾಲೇಜುಗಳಿಗೆ ರಜೆ ಘೋಷಣೆ ಎಂದಿದ್ದಾರೆ. ಸದ್ಯಕ್ಕೆ ಈಗ ರಜೆ ಯಾರಿಗೆ ಎಂಬುದರ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

ಶಾಂತಿ ಕಾಪಾಡಲು ರಜೆ ಘೋಷಣೆ ಅವಶ್ಯಕತೆ ಇದೆಯಾ..?

ರಾಜ್ಯ ಸರ್ಕಾರ ಕಾಲೇಜುಗಳಲ್ಲಿ ಹಿಜಬ್ ಹಾಗೂ ಕೇಸರಿ ಶಲ್ಯದ ವಿಚಾರವಾಗಿ ಕಿಚ್ಚು ಶುರುವಾಗಿತ್ತು. ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ ಶುರುವಾಗುತ್ತಿದ್ದ ಹಾಗೆ ಪ್ರತಿಭಟನೆ ಜೋರಾಗುವ ಸಾಧ್ಯತೆ ಇದೆ ಎನ್ನುವುದು ಸರ್ಕಾರಕ್ಕೆ ಮೊದಲೇ ಗೊತ್ತಿತ್ತು. ಆದರೂ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದು ಸರ್ಕಾರದ ವೈಫಲ್ಯವೇ ಸರಿ. ಒಂದು ವೇಳೆ ಅನುಮತಿ ಇಲ್ಲದ ಪ್ರತಿಭಟನೆಯನ್ನು ತಡೆಯುವಲ್ಲಿ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಹೈಕೋರ್ಟ್ ಸೂಚನೆ ಮೇರೆಗೆ ಪ್ರತಿಭಟನೆ ನಿಲ್ಲಿಸುವ ಕೆಲಸ ಮಾಡದ ಸರ್ಕಾರ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಮಾಡಿದೆ. ಆದರೆ ನಾಳೆ ಶಾಲೆಯಲ್ಲಿ ಹಿಜಬ್ ಹಾಗೂ ಶಲ್ಯದ ಕಿಚ್ಚು ಶುರುವಾಗಲಿ ಎನ್ನುವ ಉದ್ದೇಶ ಸರ್ಕಾರಕ್ಕೆ ಇದ್ದಂತಿದೆ. ಅದೇ ಕಾರಣಕ್ಕೆ ರಜೆ ಘೋಷಣೆ ಮಾಡುವುದರಲ್ಲಿ ಎಡವಟ್ಟು ಮಾಡಿಕೊಂಡಿದೆ.

Related Posts

Don't Miss it !