KGF 2: ಕನ್ನಡಿಗರನ್ನು ಕೆಣಕಿ ಕಂಗಾಲಾದ ಹಿಂದಿವಾಲಾ..! ಕಿಚ್ಚನ ಕಿಚ್ಚು.. ಬಿಜೆಪಿ ಪೆಚ್ಚು..!!

ಹಿಂದಿ ಹೇರಿಕೆ ಬಗ್ಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಟೀಕೆಗಳು ಎದುರಾಗುತ್ತಿರುವಾಗ ನಟ ಕಿಚ್ಚ ಸುದೀಪ ಹಿಂದಿ ರಾಷ್ಟ್ರಭಾಷೆಯಲ್ಲ. ನಮ್ಮ ಕನ್ನಡದಂತೆಯೇ ಹಿಂದಿಯೂ ಕೂಡ ಒಂದು ಪ್ರಾದೇಶಿಕ ಭಾಷೆ ಎಂದಿದ್ದರು. ಈ ವಿಚಾರವಾಗಿ ಬಾಲಿವುಡ್​ ನಟ ಅಜಯ್​ ದೇವಗನ್​ ಟ್ವೀಟ್​ ಮಾಡಿ, ಹಿಂದಿ ರಾಷ್ಟ್ರ ಭಾಷೆ ಆಗಿತ್ತು. ಈಗಲೂ ಆಗಿದೆ, ಮುಂದೆಯೂ ರಾಷ್ಟ್ರಭಾಷೆ ಆಗಿ ಇರಲಿದೆ. ಒಂದು ವೇಳೆ ಹಿಂದಿ ರಾಷ್ಟ್ರಭಾಷೆ ಅಲ್ಲ ಎನ್ನುವುದಾದರೆ ನಿಮ್ಮ ಮಾತೃಭಾಷೆ ಸಿನಿಮಾಗಳನ್ನು ಹಿಂದಿಗೆ ಡಬ್​ ಮಾಡುವುದು ಯಾಕೆ..? ಎಂದು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟ ಸುದೀಪ್​, ನನಗೆ ನಿಮ್ಮ ಹಿಂದಿ ಭಾಷೆಯ ಸಂದೇಶ ಅರ್ಥವಾಗಿದ್ದಕ್ಕೆ ಉತ್ತರ ಕೊಡುತ್ತಿದ್ದೇನೆ. ನಾನು ಕನ್ನಡದಲ್ಲೇ ಸಂದೇಶ ಕಳುಹಿಸಿದ್ದರೆ ನಿಮ್ಮ ಗತಿ ಏನು..? ನಾವು ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ. ನನ್ನ ಉದ್ದೇಶ ಟೀಕೆ ಆಗಿರಲಿಲ್ಲ ಎಂದಿದ್ದರು. ಅದಕ್ಕೆ ಅಜಯ್​ ದೇವಗನ್​ ಕೂಡ ನನ್ನ ತಪ್ಪು ತಿಳುವಳಿಕೆಯನ್ನು ತಿದ್ದಿದ್ದಕ್ಕೆ ಧನ್ಯವಾದಗಳು ಎಂದು ಸುಮ್ಮನಾದರು. ಆದರೆ ಉಳಿದವರು ಕಂಡಂತೆ ದೇವಗನ್​ ವಿರುದ್ಧ ಕಿಡಿ ಜೋರಾಯ್ತು.

ಸುದೀಪ್​ಗೆ ಕನ್ನಡ ಮನಸ್ಸುಗಳ ಬೆಂಬಲ, KGF ಅಸೂಯೆ..!

ಸುದೀಪ್​ ವಿಚಾರ ಇಷ್ಟೆಲ್ಲಾ ಆಗ್ತಿದ್ದ ಹಾಗೆ ನಟಿ ರಮ್ಯಾ ಸೇರಿದಂತೆ ನಟ ಶ್ರೀನಗರ ಕಿಟ್ಟಿ, ನೀನಾಸಂ ಸತೀಶ್​, ನಟಿ ಮೇಘನಾ ಗಾಂವ್ಕರ್​ ಕೂಡ ಟ್ವೀಟ್​ ಮಾಡಿ ಬೆಂಬಲ ವ್ಯಕ್ತಪಡಿಸಿದ್ರು. ನಟಿ ರಮ್ಯಾ ಕೆಜಿಎಫ್​ 2, RRR, ಪುಷ್ಪ ಹಿಂದಿ ಪ್ರಾಂತ್ಯದಲ್ಲಿ ಅಬ್ಬರಿಸಿದ್ದನ್ನು ಸಹಿಸಿಕೊಳ್ಳಲಾಗ್ತಿಲ್ಲ. ನಾವು ನಿಮ್ಮ ಸಿನಿಮಾಗಳನ್ನು ಹೇಗೆ ಎಂಜಾಯ್​ ಮಾಡಿದ್ದೆವು ಹಾಗೆ ನೀವೂ ಕೂಡ ನಮ್ಮ ಸಿನಿಮಾಗಳನ್ನು ಎಂಜಾಯ್​​ ಮಾಡಿ ಎಂದು ಕಿವಿ ಹಿಂಡಿದ್ದರು. ಇನ್ನು ನಿರ್ದೇಶಕ ಸಿಂಪಲ್​ ಸುನಿ ಟ್ವೀಟ್​ ಮಾಡಿದ್ದು, ‘ಗುಟ್ಕಾ ಕಾವೋ, ರೋಡ್​ ಮೇ ಕೇಸರಿ ಟುಪುಕ್​ ಟುಪುಕ್​’ ‘ಅಜಯ್​ ದೇವಗನ್​​ ಅವರೇ ಇದೇನಾ ಜನಗಣಮನ’ ಮೊದಲು ಭಾಷೆಯನ್ನು ಗೌರವಿಸಿ, ಕೆಜಿಎಫ್​, RRR, ಪುಷ್ಪಾ ಸಿನಿಮಾ ನೋಡಿ ಖುಷಿಪಡಿ ಎಂದು ಚಾಟಿ ಬೀಸಿದ್ರು. ಉತ್ತರದ ನಟ ನಟಿಯರು ಭಯಗೊಂಡಿದ್ದಾರೆ. ಏಕೆಂದರೆ ಕನ್ನಡದ ಡಬ್ಬಿಂಗ್ ಚಿತ್ರ KGF 2 ಮೊದಲ ದಿನವೇ ಹಿಂದಿ ಪ್ರಾಂತ್ಯದಲ್ಲಿ 50 ಕೋಟಿ ಗಳಿಸಿತ್ತು ಎಂದು ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಬಾಲಿವುಡ್​ ಸಿಂಗಂಗೆ ಟಾಂಗ್​ ಕೊಟ್ಟಿದ್ದಾರೆ.

ಹಿಂದಿ ರಾಷ್ಟ್ರಭಾಷೆಯಲ್ಲ, ನಮಗೆ ಕನ್ನಡವೇ ಸಾರ್ವಭೌಮ ಭಾಷೆ..!

ರಾಜಕಾರಣಿಗಳೂ ಕೂಡ ಸುದೀಪ್​ ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವ ವಾದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್​ಗೆ ತಿರುಗೇಟು ಕೊಟ್ಟಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿಂದಿ ಭಾಷೆ ಈ ಹಿಂದೆ ನಮ್ಮ ರಾಷ್ಟ್ರೀಯ ಭಾಷೆ ಆಗಿರಲಿಲ್ಲ, ಮುಂದೆ ಆಗುವುದೂ ಇಲ್ಲ. ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ದೇವಗನ್​ಗೆ ಟಾಂಗ್​ ಕೊಟ್ಟಿದ್ದಾರೆ. ಇನ್ನೂ ಕನ್ನಡ ಎಂದರೆ ಬೆಂಬಲಿಸುವ ಪ್ರಾದೇಶಿಕ ಪಕ್ಷ ಜೆಡಿಎಸ್​​ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಕೂಡ ಟ್ವೀಟ್​ ಮಾಡಿ ಅಜಯ್​ ದೇವಗನ್​ ಅವರದ್ದು ಅಧಿಕ ಪ್ರಸಂಗತನ, ಹಿಂದಿ ಭಾಷೆ ಅಷ್ಟೇ, ರಾಷ್ಟ್ರೀಯ ಭಾಷೆ ಅಲ್ಲ. ನಟ ಸುದೀಪ್​​ ಹೇಳಿದ್ದು ಸರಿಯಿದೆ, ಭಾಷೆ ಹೇರಿಕೆ ಬೇಡ ಎಂದು ಸರಣಿ ಟ್ವೀಟ್​ ಮಾಡಿದ್ದಾರೆ. ಜೊತೆಗೆ ಬಿಜೆಪಿ ಹಿಂದಿ ಹೇರಿಕೆ ಬಗ್ಗೆಯೂ ಕುಟುಕಿದ್ದಾರೆ.

ಬಿಜೆಪಿ ಹಿಂದಿ ಹೇರಿಕೆಯನ್ನು ಬೆಂಬಲಿಸೋದು ಯಾಕೆ..?

ಸಾಮಾನ್ಯವಾಗಿ ಹಿಂದಿ ಹೇರಿಕೆ ವಿಚಾರ ಸಾಕಷ್ಟು ಚಾಲ್ತಿಗೆ ಬಂದಿದ್ದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಷ್ಟೆ. ಅದಕ್ಕೂ ಮೊದಲು ಕೇಂದ್ರ ಸರ್ಕಾರ ಇಂಗ್ಲಿಷ್​ ಭಾಷೆಯಲ್ಲಿ ಹೆಚ್ಚು ವ್ಯವಹಾರ ಮಾಡುತ್ತಿತ್ತು. ಆದರೆ ಉತ್ತರ ಭಾರತದಲ್ಲಿ ಅತಿ ಹೆಚ್ಚು ರಾಜ್ಯಗಳಲ್ಲಿ ಹಿಂದಿ ಬಳಕೆಯಲ್ಲಿದೆ. ಪಂಜಾಬ್​, ರಾಜಸ್ಥಾನ, ಬಿಹಾರ್​ ಸೇರಿದಂತೆ ಪ್ರಾದೇಶಿಕ ಭಾಷೆ ಹೊಂದಿರುವ ರಾಜ್ಯಗಳಲ್ಲೂ ಹಿಂದಿ ಚಾಲ್ತಿಯಲ್ಲಿದೆ. ಇದೇ ಕಾರಣಕ್ಕೆ ರಾಜಕೀಯ ನಾಯಕರು ಅಬ್ಬರಿಸಲು ಸಾಧ್ಯವಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆಗೂ ದಕ್ಷಿಣದ ಭಾಷೆಗಳಿಗೂ ಅಜಗಜಾಂತರ ವ್ಯತ್ಯಾಸ. ಹೈಕಮಾಂಡ್​ ನಾಯಕರು ಏನೇ ಅಬ್ಬರಿಸಿದರು ಬೆರಳೆಣಿಕೆ ಜನರಿಗೆ ಮಾತ್ರ ಅರ್ಥವಾಗುತ್ತದೆ. ಬಿಜೆಪಿ ನಾಯಕರು ಬಹುತೇಕ ಹಿಂದಿ ಪ್ರಾಂತ್ಯಗಳಿಂದ ಬಂದಿದ್ದು, ಇಂಗ್ಲಿಷ್​ ಬಳಕೆಯೂ ಅಷ್ಟಕ್ಕಷ್ಟೆ. ಹಿಂದಿಯನ್ನು ನಿಧಾನವಾಗಿ ಜಾರಿ ಮಾಡುತ್ತಾ ಸಾಗಿದರೆ ಮುಂದಿನ ದಿನಗಳಲ್ಲಿ ರಾಜಕಾರಣ ಸುಲಭ ಆಗುತ್ತೆ ಎನ್ನುವುದಕ್ಕೆ ಹೇರಿಕೆ ಮಾಡುತ್ತಿದ್ದಾರೆ ಎನ್ನುವ ಮಾತಿದೆ. ರಾಜ್ಯ ಬಿಜೆಪಿ ಕೂಡ ಹಿಂದಿ ಹೇರಿಕೆ ಬಗ್ಗೆ ತುಟಿಕ್​ ಪಿಟಿಕ್​ ಎನ್ನದೆ ಬಾಯಿಗೆ ಬೀಗ ಹಾಕಿಕೊಂಡಿರುವುದು ಜನರ ಕಣ್ಣು ಕೆಂಪಾಗುವಂತೆ ಮಾಡಿದೆ.

Related Posts

Don't Miss it !