ಹಿಂದೂ ದೇವಸ್ಥಾನ ಕೆಡವುತ್ತಾರೆ, ಹಿಂದೂಗಳ ಮೇಲೆ ಹಲ್ಲೆ ಆಗುತ್ತೆ..! ಏನಾಗ್ತಿದೆ..?

ರಾಜ್ಯದಲ್ಲಿ ಹಿಂದೂಗಳ ಹೆಸರೇಳಿಕೊಂಡೇ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳು ಮಾತ್ರ ಚಿತ್ರವಿಚಿತ್ರವಾಗಿ ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಳ್ತಿದೆ. ಯಾರು ರಕ್ಷಣೆಯ ಭರವಸೆಯ ಮಾತುಗಳನ್ನಾಡಿ ಅಧಿಕಾರ ಹಿಡಿದಿದ್ದಾರೆಯೋ ಅವರ ಮೇಲೆ ಭರವಸೆ ಕಳೆದು ಹೋಗುತ್ತಿದೆ. ರನ್ನ ಚಿನ್ನ ಎಂದು ಹೊತ್ತು ಮೆರೆಯುತ್ತಿದ್ದ ಜನರೇ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಸರ್ಕಾರದ ಆಡಳಿತ ಹಳ್ಳ ಹಿಡಿದಿದೆಯಾ ಎನ್ನುವ ಪ್ರಶ್ನೆಗಳು ಶುರುವಾಗ ತೊಡಗಿದೆ. ಯಾಕಂದ್ರೆ ಅಫ್ಘಾನಿಸ್ತಾನದಲ್ಲಿ ತಾಲೀಬಾನಿ ಉಗ್ರರು ಹೆಣ್ಣುಮಕ್ಕಳ ಮೇಲೆ ನಡೆಸುತ್ತಿರುವ ದಾಳಿ ಬೆಂಗಳೂರಿನಲ್ಲೂ ನಡೆದಿದೆ.

ತಾಲಿಬಾನಿ ಮಾದರಿ ಕೃತ್ಯ ನಡೆದಿರುವುದು ಎಲ್ಲಿ..?

ಬೆಂಗಳೂರಿನ ಡೈರಿ ಸರ್ಕಲ್ ಬಳಿ ನೈತಿಕ ಪೊಲೀಸ್​ಗಿರಿ ನಡೆದಿದೆ. ಮುಸ್ಲಿಂ ಸಮುದಾಯ ಹೆಣ್ಣು ಮಗಳನ್ನು ಬೈಕ್​ನಲ್ಲಿ ಡ್ರಾಪ್​ ಕೊಡುವುದಕ್ಕೆ ಕರೆದುಕೊಂಡು ಹೋಗುತ್ತಿದ್ದ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ನಾನು ಮನೆಗೆ ಹೋಗುತ್ತಿದ್ದೇನೆ, ನನ್ನ ಜೊತೆಯಲ್ಲಿ ಕೆಲಸ ಮಾಡುವ ಸಹೋದ್ಯೋಗಿ ಜೊತೆಗೆ ನಾನು ಹೋಗುವುದರಲ್ಲಿ ತಪ್ಪೇನಿದೆ. ಬೇಕಿದ್ದರೆ ನನ್ನ ಗಂಡನ ಜೊತೆ ಮಾತನಾಡಿ ಎಂದು ಆ ಹೆಣ್ಣು ಮಗಳು ಹೇಳಿದರೂ ಪಟ್ಟು ಬಿಡದ ಪುಂಡರು ಆ ಮಹಿಳೆಯನ್ನು ಬೈಕ್​ನಿಂದ ಕೆಳಕ್ಕೆ ಇಳಿಸಿ ಆಟೋದಲ್ಲಿ ಮನೆಗೆ ಹೋಗುವಂತೆ ಸೂಚಿಸಿದ್ದಾರೆ. ರಸ್ತೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿ ಯಾರೂ ಪೊಲೀಸರು ಸುಳಿಯಲಿಲ್ಲ. ರಸ್ತೆಯಲ್ಲಿ ಹೈಡ್ರಾಮ ನಡೆಯುತ್ತಿದ್ರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.

Read this also;

ಕಿಡಿಗೇಡಿಗಳ ಬಲಿ ಹಾಕದಿದ್ದರೆ ಸಂಕಷ್ಟ ಗ್ಯಾರಂಟಿ..!

ಐದಾರು ಬೈಕ್​ಗಳಲ್ಲಿ ಬಂದು ಅಡ್ಡಗಟ್ಟುವ ಪುಂಡರ ಗುಂಪು, ಬುರ್ಕಾ ಹಾಕಿಕೊಂಡು ನೀನು ಹೀಗೆ ಹೋಗುತ್ತಿದ್ದೀಯಾ..? ನಾನು ಎಷ್ಟೊಂದು ಜಾಗೃತಿ ಮೂಡಿಸುತ್ತಿದ್ದೀವಿ, ಆದರೂ ನೀನು ಹೀಗೆ ಹೋಗುತ್ತಿದ್ದೀಯಾ ಎಂದು ಮಹಿಳೆಯನ್ನು ರಾತ್ರಿ 9 ಗಂಟೆಯ ವೇಳೆ ಸಹೋದ್ಯೋಗಿ ಬೈಕ್​ನಿಂದ ಕೆಳಕ್ಕೆ ಇಳಿಸಿ ಆಟೋದಲ್ಲಿ ಹೋಗುವಂತೆ ಮಾಡಿದ್ರು. ಹಿಂದೂ ಧರ್ಮದ ವ್ಯಕ್ತಿಯ ಹೆಲ್ಮೇಟ್​ ತೆಗೆಯುವಂತೆ ಒತ್ತಾಯಿಸಿ ಎರಡು ಏಟು ಬಾರಿಸಿದ್ದಾರೆ. ವೀಡಿಯೋ ವೈರಲ್​ ಆಗ್ತಿದ್ದ ಹಾಗೆ ಎಚ್ಚೆತ್ತ ಸದ್ದುಗುಂಟೆ ಪಾಳ್ಯ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಹೋದ್ಯೋಗಿಗಳ ಜೊತೆಗೆ ಹೋಗುವುದು ಭದ್ರತಾ ದೃಷ್ಟಿಯಿಂದ ಉತ್ತಮ. ಆದರೆ ಬೈಕ್​ನಿಂದ ಕೆಳಕ್ಕಿಳಿಸಿ ಆಟೋದಲ್ಲಿ ಕಳುಹಿಸಿದ್ದೇ ಅಪಾಯಕ್ಕೆ ಆಹ್ವಾನ ಕೊಟ್ಟಂತೆ ಎನ್ನುವ ತಿಳುವಳಿಕೆ ಇಲ್ಲದ ಮೂಢರಿಗೆ ಕಿವಿ ಹಿಂಡಿ ಬುದ್ಧಿ ಹೇಳಬೇಕಿದೆ.

ಈ ಕೃತ್ಯಕ್ಕೆ ಪ್ರೇರೇಪಣೆ, ಕಾರಣವಾದರು ಏನು..?

ಮುಸ್ಲಿಂ ಸಮುದಾಯದ ಹೆಣ್ಣು ಮಗಳದ್ದು ಮದುವೆ ಆಗಿಲ್ಲ ಎನ್ನುವುದಾದರೆ ಆಕೆಯನ್ನು ಬೇರೆ ಯಾರೋ ಪ್ರೀತಿಸುತ್ತಿರುವ ಕಾರಣಕ್ಕೆ ಹೀಗೆ ಹಲ್ಲೆ ಮಾಡಿದ್ದಾರೆ ಎನ್ನಬಹುದು. ಆದರೆ ಇಲ್ಲಿ ದಾಳಿಗೆ ಒಳಗಾಗಿರುವ ಮಹಿಳೆ ಈಗಾಗಲೇ ಮದುವೆ ಆಗಿದ್ದಾರೆ. ಹಾಗಿದ್ದ ಮೇಲೆ ಇಲ್ಲಿ ದಾಳಿ ಮಾಡಿದವರು ಪ್ರೇಮಿಗಳಲ್ಲ ಎನ್ನುವುದು ಖಚಿತವಾಗುತ್ತದೆ. ಇನ್ನೂ ಯಾವುದೇ ಧರ್ಮ ಕೂಡ ಹಿಂಸೆಯನ್ನು ಪ್ರೇರೇಪಿಸುವುದಿಲ್ಲ. ಆದರೆ ಈ ರೀತಿಯ ಅಂಧ ಧರ್ಮವನ್ನು ಪುಂಡರ ಎದೆಗೆ ತುಂಬುವ ಕೆಲಸ ಮಾಡುವುದು ಸಂಘಟನೆಗಳು. ಈ ಪುಂಡರ ಹಿಂದೆ ಇರುವ ಆ ಮುಖಗೇಡಿಗಳು ಯಾರು ಎನ್ನುವುದನ್ನು ಬಯಲು ಮಾಡಬೇಕು. ಆ ಹೆಣ್ಣು ಮಗಳು ಗಂಡನ ನಂಬರ್​ ಕೊಟ್ಟ ಬಳಿಕ ಆರೋಪಿ ಗಂಡನಿಗೆ ತನ್ನ ಮೊಬೈಲ್​ನಿಂದ ವೀರಾಧಿ ವೀರನಂತೆ ಕರೆ ಮಾಡಿದ್ರಿಂದ ಖಾಕಿ ಪಡೆಗೂ ಬಲೆ ಹಾಕಲು ಕಷ್ಟ ಆಗಿರಲಿಲ್ಲ. ಆದರೆ ಇದೀಗ ಬುಡಸಮೇತ ಕಿತ್ತು ಹಾಕುವ ಕೆಲಸ ಮಾಡಬೇಕಿದೆ.

Read this also;

ಟ್ರೈನ್​ ಪಾಸ್​ ಆದ ಬಳಿಕ ಟಿಕೆಟ್​ ಪ್ರಯೋಜನವಿಲ್ಲ..!

ದೇವಸ್ಥಾನ ಕೆಡವಿದ್ದರಲ್ಲಿ ಸರ್ಕಾರದ ತಪ್ಪು ಎಂದು ಹೇಳಲಾಗದು. ಸುಪ್ರೀಂಕೋರ್ಟ್​ ಆದೇಶದ ಅನ್ವಯ ಕಾರ್ಯಾಂಗ ತನ್ನ ಕೆಲಸ ಮಾಡುತ್ತದೆ. ಆದರೆ ಶಾಸಕಾಂಗ ಸ್ಥಳೀಯ ಜನರ ವಿಶ್ವಾಸ ಪಡೆಯಬೇಕಿತ್ತು ಎನ್ನುವುದಷ್ಟೇ ತಕರಾರು. ಆದರೆ ಈ ಪ್ರಕರಣದಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪೊಲೀಸ್​ ಆಯುಕ್ತರು ಕೂಡ ಆರೋಪಿಗಳನ್ನು ಬಂಧಿಸಿದ್ದೇವೆ ಎಂದಿದ್ದಾರೆ. ಆದರೆ ಬಂಧಿಸಿದರೆ ಸಾಲದು, ಆ ಪುಂಡರ ಹಿಂದಿರುವ ಶಕ್ತಿಗಳನ್ನು ಮಟ್ಟ ಹಾಕಬೇಕು. ಜೊತೆಗೆ ಬೆಂಗಳೂರಿನಲ್ಲಿ ರಾತ್ರಿ 9 ಗಂಟೆಗೆ ಈ ರೀತಿ ನಡೆಯುತ್ತದೆ ಎನ್ನುವುದಾದರೆ ಭದ್ರತೆ ಹೇಗಿದೆ..? ಪೊಲೀಸರ ಗಸ್ತು ಇಷ್ಟೊಂದು ಕಳಪೆ ಆಗಿದ್ಯಾ..? ಎನ್ನುವುದನ್ನು ಪ್ರಶ್ನಿಸಬೇಕಿದೆ.

Related Posts

Don't Miss it !