ಶಿವಮೊಗ್ಗದ ಹರ್ಷನಂತೆ ಪುತ್ತೂರಿನಲ್ಲೂ ಹಿಂದೂ ಮುಖಂಡನ ಭೀಕರ ಹತ್ಯೆ..!!

ಕರಾವಳಿಯಲ್ಲಿ ಹಿಂದೂ ಮುಸ್ಲಿಂ ನಡುವಿನ ದ್ವೇಷ ತಾರಕಕ್ಕೇರಿದೆ. ಪುತ್ತೂರಿನಲ್ಲಿ BJP ಯುವ ಮುಖಂಡನಾಗಿದ್ದ ಪ್ರವೀಣ್​ ನೆಟ್ಟಾರು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರ ಕೊಲೆ ಮಾಡಲಾಗಿದೆ. ಬೆಳ್ಳಾರೆ ಪೇಟೆಯಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಭೀಕರ ಹತ್ಯೆ ಮಾಡಿರುವ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಬಿಜೆಪಿ ಮುಖಂಡ ಪ್ರವೀಣ್​ ನೆಟ್ಟಾರು, ಹಿಂದೂಪರ ಸಂಘಟನೆಯಲ್ಲೂ ಸಕ್ರಿಯನಾಗಿ ಗುರುತಿಸಿಕೊಂಡಿದ್ದರು. ಕೇರಳ ನೊಂದಣಿ ಸಂಖ್ಯೆಯ ಬೈಕ್​ನಲ್ಲಿ ಬಂದಿದ್ದ ಮೂವರು ಕಿಡಿಗೇಡಿಗಳು ಪ್ರವೀಣ್​ ನೆಟ್ಟಾರು ಅವರನ್ನು ಹತ್ಯೆ ಮಾಡಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ ಇಡೀ ಪುತ್ತೂರು, ಬೆಳ್ಳಾರೆಯಲ್ಲಿ ಸ್ವಯಂಘೋಷಿತ ಬಂದ್​ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಹೈಅಲರ್ಟ್​ ಘೋಷಿಸಿದ್ದಾರೆ. ಬೆಳ್ಳಾರೆಯಲ್ಲಿ ಪೊಲೀಸರೇ ಅಂಗಡಿಗಳನ್ನು ಬಂದ್ ಮಾಡಿಸಿ ಕೊಲೆ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

34 ವರ್ಷದ ಪ್ರವೀಣ್​ ನೆಟ್ಟಾರು ಕೊಲೆಗೆ ಕಾರಣವೇನು..?

ಬಿಜೆಪಿ ಯುವ ಮುಖಂಡನಾಗಿದ್ದ ಪ್ರವೀಣ್ ನೆಟ್ಟಾರು​​ ಹತ್ಯೆಗೆ ಪ್ರಮುಖ ಕಾರಣ ಅಂದರೆ, ವಾರದ ಹಿಂದೆ ನಡೆದಿದ್ದ ಮಸೂದ್​ ಹತ್ಯೆಗೆ ಪ್ರತೀಕಾರ ಎನ್ನಲಾಗ್ತಿದೆ. ವಾರದ ಹಿಂದೆ ಬೆಳ್ಳಾರೆಯ ಕಳಂಜದಲ್ಲಿ ನಡೆದಿದ್ದ ಮುಸ್ಲಿಂ ಸಮುದಾಯದ ಮಸೂದ್​ ಎಂಬಾತನ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ಮಾಡಿರಬಹುದು ಎನ್ನಲಾಗ್ತಿದೆ. ಆದರೆ ವರ್ಷದ ಹಿಂದಷ್ಟೇ ಮದುವೆ ಆಗಿದ್ದ ಪ್ರವೀಣ್​ ನೆಟ್ಟಾರು, ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಅಂಗಡಿಯಲ್ಲಿದ್ದಾಗ ದಾಳಿ ಮಾಡಿರುವ ಕಿಡಿಗೇಡಿಗಳು ಕೊಂದು ಪರಾರಿಯಾಗಿದ್ದಾರೆ. ಈ ದುಷ್ಕೃತ್ಯದಿಂದ ಪ್ರವೀಣ್​ ನೆಟ್ಟಾರು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಈ ರೀತಿ ಹಿಂದೂಗಳ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಿದೆ ಇದು ಖಂಡನೀಯ ಎಂದಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲಾಗುವುದು. ಎಲ್ಲಾ ಆಯಾಮಗಳಿಂದ ತನಿಖೆ ಮಾಡಿಸಲಾಗುವುದು ಎಂದಿದ್ದಾರೆ. ಆದರೆ ಮಸೂದ್​ ಕೊಲೆಯಲ್ಲಿ ಪ್ರವೀಣ್ ನೆಟ್ಟಾರು​ ಪಾತ್ರವಿತ್ತಾ..? ಬಿಜೆಪಿ ಮುಖಂಡ ಎನ್ನುವ ಕಾರಣಕ್ಕೆ ಪೊಲೀಸರು ಬಂಧಿಸಿರಲಿಲ್ಲವಾ..? ಅನ್ನೋ ಪ್ರಶ್ನೆಗಳು ಸೃಷ್ಟಿಯಾಗಿವೆ.

ಮುಸ್ಲಿಂ ಯುವಕ ಮಸೂದ್​ ಹತ್ಯೆ ನಡೆದಿದ್ದು ಯಾಕೆ..?

ವಾರದ ಹಿಂದೆ ಅಂದರೆ ಜುಲೈ 19ರಂದು ಸುಳ್ಯಾದ ಕಳಂಜದಲ್ಲಿ ಮಸೂದ್​ ಎಂಬಾತನನ್ನು ಕೊಲೆ ಮಾಡಲಾಗಿತ್ತು. 19 ವರ್ಷದ ಮಹಮ್ಮದ್​ ಮಸೂದ್​​ನನ್ನ ಕ್ಷುಲ್ಲಕ ಕಾರಣಕ್ಕೆ ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಸುಧೀರ್ ಹಾಗು ಮಸೂದ್​ ಸಣ್ಣ ಅಂಗಡಿಗಳನ್ನು ನಡೆಸುತ್ತಿದ್ದು, ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆಗಳು ನಡೆದಿದ್ದವು. ಗಲಾಟೆ ಬಳಿಕ ಸಂಧಾನ ಮಾತುಕತೆಗೆ ಕರೆಸಿ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಬಾಟೆಲ್​ನಿಂದ ತೆಲೆಗೆ ಹೊಡೆಯುತ್ತಿದ್ದ ಹಾಗೆ ಮಸೂದ್​ ಜೊತೆಗೆ ಬಂದಿದ್ದ ನಾಲ್ವರು ಪರಾರಿಯಾಗಿದ್ದರು, ದಾಳಿಯಿಂದ ತಪ್ಪಿಸಿಕೊಳ್ಳಲು ಮಸೂದ್​ ಕೂಡ ಓಡಿದ್ದರು. ಆದರೆ ಬಲವಾದ ಪೆಟ್ಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಮಸೂದ್​​ ಸಾವನ್ನಪ್ಪಿದ್ದರು. ಮಸೂದ್​ ಹತ್ಯೆ ಕೇಸ್​​ನಲ್ಲಿ 8 ಮಂದಿ ಹಿಂದೂಪರ ಸಂಘಟನೆಗೆ ಸೇರಿದ್ದ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್​, ಸದಾಶಿವ, ಜಿಮ್ ರಂಜಿತ್ ಮತ್ತು ಭಾಸ್ಕರ್ ಎಂಬುವರನ್ನು ಬಂಧಿಸಲಾಗಿತ್ತು. ಇದೀಗ ಮಸೂದ್​ ಹತ್ಯೆಗೆ ಪ್ರತೀಕಾರವಾಗಿ ಪ್ರವೀಣ್​ ನೆಟ್ಟಾರು ಹತ್ಯೆ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಕೇರಳಕ್ಕೂ ಕರ್ನಾಟಕಕ್ಕೂ ಕೊಲೆಯಲ್ಲಿ ನಂಟು ಹೇಗೆ..?

ಸುಳ್ಯದ ಬೆಳ್ಳಾರೆಯಲ್ಲಿ ನಡೆದಿದ್ದ ಮುಸ್ಲಿಂ ಯುವಕನ ಕೊಲೆಗೆ ಕೇರಳದ ನೋಂದಣಿ ಇರುವ ಬೈಕ್​ನಲ್ಲಿ ಕೊಂದಿದ್ದಾರೆ ಎನ್ನುವುದು ಭಾರೀ ಸೋಜಿಗದ ವಿಚಾರವಾಗಿದೆ. ಇದೇ ಕಾರಣಕ್ಕೆ ಕರ್ನಾಟಕದ ಹಿಂದೂ ಮುಸ್ಲಿಂ ಘರ್ಷಣೆಯಲ್ಲಿ ಕೇರಳದವರ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 144 ಸೆಕ್ಷನ್​ ಜಾರಿಗೂ ಮುಂದಾಗಿರುವ ಪೊಲೀಸರು. ಕೊಲೆ ಪಾತಕರ ಬಂಧನಕ್ಕೆ ಬಲೆ ಬೀಸಿದ್ದಾರೆ. The Public Spot ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ವಾರದ ಹಿಂದೆ ಕೊಲೆಯಾಗಿದ್ದ ಮುಸ್ಲಿಂ ಸಮುದಾಯದ ಯುವಕ ಮಸೂದ್​ ಮೂಲತಃ ಕಾಸರಗೋಡು ಮೂಲದವನು ಎನ್ನಲಾಗಿದೆ. ತಾಯಿ ತವರು ಮನೆ ಬೆಳ್ಳಾರೆಯಲ್ಲಿ ತಾಯಿ ಜೊತೆಗೆ ವಾಸವಿದ್ದನು. ಜೀವನೋಪಾಯಕ್ಕಾಗಿ ಅಂಗಡಿಯೊಂದನ್ನು ನಡೆಸುತ್ತಿದ್ದ. ಪಕ್ಕದ ಅಂಗಡಿಯಾತ ಹಿಂದೂ ಸಮುದಾಯಕ್ಕೆ ಸೇರಿದ್ದು, ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದನು ಎನ್ನಲಾಗಿದೆ. ಸಣ್ಣ ಪುಟ್ಟ ಜಗಳದಲ್ಲಿ ಅಂತ್ಯವಾಗಬೇಕಿದ್ದ ವಿಚಾರ ಎರಡು ಕೊಲೆಗಳಿಗೆ ಕಾರಣವಾಗಿದೆ. ಇಡೀ ಕರಾವಳಿ ಬೂದಿ ಮುಚ್ಚಿದ ಕೆಂಡದಂತೆ ಧಗಧಗಿಸುತ್ತಿದೆ. ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳದ ಹೊರತು ರಕ್ತಪಾತದ ಸರಣಿ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.

ಪತ್ನಿಯೊಂದಿಗೆ ಪ್ರವೀಣ್​ ನೆಟ್ಟಾರು

Related Posts

Don't Miss it !