ರಾಜಸ್ಥಾನದಲ್ಲಿ ಹಿಂದೂ ಸಮುದಾಯದ ವ್ಯಕ್ತಿ ಹತ್ಯೆಗೆ ನಿಖರ ಕಾರಣ ಏನು..!?

ರಾಜಸ್ಥಾನದ ಉದಯ್​ಪುರದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಕನ್ಹಯ್ಯ ಕುಮಾರ್​ ಎಂಬಾತನನ್ನು ಹಾಡಹಗಲೇ ಕೊಲೆ ಮಾಡಲಾಗಿದೆ. ಟೈಲರ್​ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿಯನ್ನು ಕುತ್ತಿಗೆ ಕತ್ತರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಬಟ್ಟೆ ಹೊಲಿಸುವ ನೆಪದಲ್ಲಿ ಅಂಗಡಿ ಒಳಕ್ಕೆ ಬಂದಿದ್ದ ಇಬ್ಬರು ವ್ಯಕ್ತಿಗಳು ಸಮಯ ನೋಡಿ ದಾಳಿ ಮಾಡಿ ಕುತ್ತಿಗೆಯನ್ನು ಕತ್ತರಿಸಿ ಅಟ್ಟಹಾಸ ಮೆರೆದಿದ್ದಾರೆ. ಗೌಸ್ ಮೊಹಮ್ಮದ್ ರಿಯಾಜ್​​, ಮೊಹಮ್ಮದ್​ ಅನ್ಸಾರಿ ಎಂಬ ಕಟುಕರು ಕೊಲೆ ಮಾಡಿ ಬೆದರಿಕೆಯನ್ನೂ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ನೂಪುರ್​ ಶರ್ಮಾರನ್ನು ಕೊಲೆ ಮಾಡುವುದಾಗಿ ಹೇಳಿ, ವೀಡಿಯೋ ಮಾಡಿರುವುದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ ಎಂಬಂತಿದೆ. ಇದೀಗ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸ್ರು ಬಂಧಿಸಿದ್ದಾರೆ.

ಕತ್ತು ಕತ್ತರಿಸಿದ ಬಳಿಕ ವೀಡಿಯೋ ಪ್ರಧಾನಿಗೆ ಬೆದರಿಕೆ..!

ಟೈಲರ್​ ವೃತ್ತಿ ಮಾಡುತ್ತಿದ್ದ ಕನ್ಹಯ್ಯ ಕುಮಾರ್​ ಎಂಬಾತನ ಕತ್ತು ಕೊಯ್ದು ಕೊಲೆ ಮಾಡಿದ ಬಳಿಕ ಮನೆಗೆ ಬರುವ ಆರೋಪಿಗಳು, ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರವಾದಿ ಮೊಹಮದ್​ರನ್ನು ಹಿಯ್ಯಾಳಿಸಿದ್ದಾರೆ ಎನ್ನಲಾದ ನೂಪುರ್​ ಶರ್ಮಾರನ್ನು ಕೊಲೆ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ನೂಪುರ್​ ಶರ್ಮಾ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನೂಪುರ್​ ಶರ್ಮಾ ಬೆಂಬಲಿಸಿದ್ದ ಟೈಲರ್​ ಕನ್ಹಯ್ಯ ಕುಮಾರ್​ ವಿರುದ್ಧ ದೂರು ದಾಖಲಾಗಿತ್ತು. ಆ ಬಳಿಕ ರಾಜಸ್ಥಾನ ಪೊಲೀಸರು ಕನ್ಹಯ್ಯ ಕುಮಾರ್​ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಮೇಲೆ ಬಿಡುಗಡೆ ಆದ ಬಳಿಕ ತನ್ನ ವೃತ್ತಿ ಟೈಲರಿಂಗ್​ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ ನೂಪುರ್​ ಶರ್ಮಾ ಬೆಂಬಲಿಸಿದ ಕಾರಣಕ್ಕೆ ಆರೋಪಿಗಳು ಕೊಲೆ ಮಾಡಿದ್ದಾರೆ. ಅದಕ್ಕೂ ಮೊದಲು ಭದ್ರತೆ ಕೇಳಿದ್ರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ರು ಎನ್ನಲಾಗ್ತಿದೆ.

ರಾಜಸ್ಥಾನ ಸರ್ಕಾರದ ನಿರ್ಲಕ್ಷ್ಯಕ್ಕೆ ಬಿತ್ತು ಹಿಂದೂ ಹೆಣ..!

ಹಿಂದೂ ಸಮುದಾಯಕ್ಕೆ ಸೇರಿದ ಟೈಲರ್​ ಕನ್ಹಯ್ಯ ಕುಮಾರ್​ ಕೊಲೆ ಮಾಡುವ ಮುನ್ನ ಆರೋಪಿಗಳು, ಜೂನ್​ 17ರಂದು ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದರು. ಕೊಲೆ ಮಾಡುವುದಾಗಿ ನೇರವಾಗಿ ಬೆದರಿಕೆ ಕೂಡ ಹಾಕಿದ್ದರು. ಆದರೆ ರಾಜಸ್ಥಾನ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಇತ್ತೀಚಿಗೆ ನೂಪುರ್​ ಶರ್ಮಾ ಬೆಂಬಲಿಸಿದ್ದ ಕನ್ಹಯ್ಯ ಕುಮಾರ್​ ಅವರಿಗೆ ಜೀವ ಬೆದರಿಕೆ ಇದೆ ಎನ್ನುವುದು ಗೊತ್ತಾದ ಕೂಡಲೇ ಭದ್ರತೆ ನೀಡುವುದು ಅಥವಾ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವ ಕೆಲಸ ಮಾಡಿದ್ದರೆ, ಹಿಂದೂ ಸಮುದಾಯದ ಯುವಕನ ಕೊಲೆ ತಡೆಯಬಹುದಿತ್ತು ಎನ್ನುವ ಆಕ್ರೋಶ ಕೇಳಿಬಂದಿದೆ. ಆದರೆ ಇದೀಗ ರಾಜಸ್ಥಾನ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಆದೇಶ ಮಾಡಿದೆ.

ಒಂದು ತಿಂಗಳ ಕಾಲ ಉದಯ್​ಪುರದಲ್ಲಿ 144 ಸೆಕ್ಷನ್​ ಜಾರಿ..!

ಕೊಲೆಗೂ ಮುನ್ನ ಎಚ್ಚೆತ್ತುಕೊಳ್ಳದ ರಾಜಸ್ಥಾನದ ಕಾಂಗ್ರೆಸ್​ ಸರ್ಕಾರ, ಇದೀಗ ಕೊಲೆ ಆದ ಬಳಿಕ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಿದೆ. ವಿಚಾರಣೆಗೆ ವಿಶೇಷ ತನಿಖಾ (SIT) ತಂಡವನ್ನೂ ರಚಿಸಿದೆ. ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಮನವಿ ಮಾಡಿದ್ದಾರೆ. ಇನ್ನೂ ಕೇಂದ್ರದಿಂದ ರಾಷ್ಟ್ರೀಯ ತನಿಖಾ ತಂಡ (NIA) ಉದಯ್​​ಪುರಕ್ಕೆ ಬಂದಿಳಿದೆ. ಉದಯ್​ಪುರದಲ್ಲಿ ಇಂಟರ್​ನೆಟ್​ ಸೇವೆಯನ್ನು ಸ್ಥಗಿತ ಮಾಡಿದ್ದು, ಒಂದು ತಿಂಗಳ ಕಾಲ 144 ಸೆಕ್ಷನ್​ (ನಿಷೇಧಾಜ್ಞೆ) ಜಾರಿ ಮಾಡಿ ಸರ್ಕಾರ ಆದೇಶ ಮಾಡಿದೆ. ರಾಹುಲ್​ ಗಾಂಧಿ ಕೂಡ ಕೊಲೆಯನ್ನು ಖಂಡಿಸಿದ್ದು, ಧರ್ಮದ ಆಧಾರದಲ್ಲಿ ನಡೆಯುವ ಹಿಂಸಾಚಾರವನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ರಾಜಸ್ಥಾನದ ಕಾಂಗ್ರೆಸ್​ ಸರ್ಕಾರದ ನಿರ್ಲಕ್ಷ್ಯವೇ ಹಿಂದೂ ಸಮುದಾಯಕ್ಕೆ ಸೇರಿದ ಕನ್ಹಯ್ಯ ಕುಮಾರ್​ ಕೊಲೆಗೆ ಕಾರಣ ಎನ್ನುತ್ತಿದೆ ಕೇಸರಿಪಡೆ.

Related Posts

Don't Miss it !