ತನಿಖಾ ಸಂಸ್ಥೆಗಳ ದಾಳಿ ಮತ್ತು ರಾಜಕೀಯ ಪ್ರೇರಿತ ಆರೋಪ..!

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧೀನದಲ್ಲಿ ಸಾಕಷ್ಟು ತನಿಖಾ ಸಂಸ್ಥೆಗಳು ಇರುತ್ತವೆ. ಅದರಲ್ಲಿ ಕೇಂದ್ರದ ತನಿಖಾ ಸಂಸ್ಥೆಗಳಿಗೆ ಕೊಂಚ ಹೆಚ್ಚಿನ ಅಧಿಕಾರ ಇರುತ್ತದೆ. ಯಾವುದೇ ರಾಜ್ಯದಲ್ಲಿ ಬೇಕಾದರೂ ತನಿಖೆ ಮಾಡುವ ಶಕ್ತಿ ಇರುತ್ತದೆ. ಆದರೆ ರಾಜ್ಯ ಸರ್ಕಾರದ ಸಂಸ್ಥೆಗಳು ರಾಜ್ಯದ ಒಳಗೆ ತನ್ನ ವ್ಯಾಪ್ತಿಯನ್ನು ಹೊಂದಿರುತ್ತದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಯಾವುದೇ ತನಿಖಾ ಸಂಸ್ಥೆ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ ತನಿಖೆ ಮಾಡಲು ಮುಂದಾದರೆ ಅದು ರಾಜಕೀಯ ಪ್ರೇರಿತ. ಆ ವ್ಯಕ್ತಿ ತಪ್ಪನ್ನೇ ಮಾಡಿಲ್ಲ ಎನ್ನುವಂತಹ ಹೇಳಿಕೆಗಳು ಸರ್ವೇ ಸಾಮಾನ್ಯ. ಅದರಲ್ಲೂ ದಾಳಿಗೆ ಒಳಗಾದ ವ್ಯಕ್ತಿ ರಾಜಕೀಯ ಪಕ್ಷಕ್ಕೆ ಸೇರಿದವನಾದರೆ ತನಿಖಾ ಸಂಸ್ಥೆಯನ್ನೇ ಕೆಟ್ಟದಾಗಿ ವರ್ಣಿಸುವ ಅವಕಾಶ ರಾಜಕಾರಣಿಗಳದ್ದು ಆಗಿರುತ್ತದೆ.

ಜಮೀರ್​ ಅಹ್ಮದ್​ ಮನೆ ಮೇಲೆ ED ದಾಳಿ..!

ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರಿಂದ ಕುಪಿತಗೊಂಡ ಕಾಂಗ್ರೆಸ್​ ನಾಯಕರು ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜಮೀರ್​ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತವಾದ್ದು, ಈ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಪ್ರತಿಪಕ್ಷಗಳನ್ನು ಹೆದುರಿಸುವ ಕೆಲಸ ಮಾಡುತ್ತಿದೆ ಎಂದು ದೂರಿದ್ದಾರೆ. ರಾಮನಗರ ಕಾಂಗ್ರೆಸ್​ ಸಂಸದ ಡಿಕೆ ಸುರೇಶ್​ ಕೂಡ ರಾಜಕೀಯ ಕಾರಣಕ್ಕಾಗಿ ಜಮೀರ್​ ನಿವಾಸದ ಮೇಲೆ ದಾಳಿ ನಡೆದಿದೆ ಎಂದು ದೂರಿದ್ದಾರೆ.


ತನಿಖಾ ಸಂಸ್ಥೆಗಳು ದಾಳಿ ಮಾಡಬಾರದೇ..?

ಯಾವುದೇ ಒಂದು ದೇಶದಲ್ಲಿ ತನಿಖಾ ಸಂಸ್ಥೆಗಳು ಇರುವುದೇ ತನಿಖೆ ಮಾಡುವ ಉದ್ದೇಶದಿಂದ. ಯಾವುದೇ ಒಬ್ಬ ವ್ಯಕ್ತಿಯ ಮೇಲೆ ದೂರುಗಳು ಬಂದಾಗ ಆ ಬಗ್ಗೆ ತನಿಖಾ ಸಂಸ್ಥೆಗಳು ಮಾಹಿತಿ ಕಲೆ ಹಾಕಿ, ಆ ನಂತರ ಮತ್ತಷ್ಟು ಸಾಕ್ಷಿಗಳನ್ನು ಸಂಗ್ರಹ ಮಾಡುವ ಉದ್ದೇಶದಿಂದ ದಾಳಿ ಮಾಡುತ್ತಾರೆ. ಒಂದು ವೇಳೆ ದೂರು ಬಂದ ಬಳಿಕವೂ ತನಿಖಾ ಸಂಸ್ಥೆಗಳು ದಾಳಿ ಮಾಡಿ ಪರಿಶೀಲನೆ ನಡೆಸದಿದ್ದರೆ, ದೂರು ಕೊಟ್ಟವರು ತನಿಖಾ ಸಂಸ್ಥೆಗಳು ಹಣಕ್ಕೆ ಮಾರಿಕೊಂಡವು ಎಂದು ದೂರುವುದು ನಿಶ್ಚಿತ. ಆದರೆ ದೂರಿನ ಆಧಾರದ ಮೇಲೆ ಕೆಲವೊಂದು ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿ ತನಿಖೆ ಮಾಡಿದ ಬಳಿಕ ದೂರಿನ ಆರೋಪಕ್ಕೂ ವಾಸ್ತವಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದಾದರೆ ತನಿಖಾ ಸಂಸ್ಥೆಗಳು ಏನನ್ನೂ ಮಾಡಲು ಸಾಧ್ಯವಿಲ್ಲ. ಆದರೂ ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುವುದು ದುರಭ್ಯಾಸ.

ತಪ್ಪೇ ಮಾಡದಿದ್ದ ಮೇಲೆ ತನಿಖಾ ಸಂಸ್ಥೆ ಭಯವೇಕೆ..?

ಒಂದು ವೇಳೆ ತನಿಖಾ ಸಂಸ್ಥೆಗಳು ಆಡಳಿತರೂಢ ಪಕ್ಷದ ಮಾತಿನಂತೆ ನಡೆದುಕೊಳ್ಳುವುದು ಸುಳ್ಳು ಎಂದು ಹೇಳಲಾಗದು. ಆದರೆ ಕಾನೂನು ಮೀರಿ ವರ್ತಿಸಲು ಸಾಧ್ಯವಿಲ್ಲ. ಕೆಲವೊಂದಿಷ್ಟು ದಿನಗಳ ಕಾಲ ತೊಂದರೆ ಕೊಡಬಹುದು. ಆದರೆ ಅಂತಿಮವಾಗಿ ತನಿಖಾ ಸಂಸ್ಥೆಗಳು ವರದಿಯನ್ನು ಕೋರ್ಟ್​ ಎದುರು ಸಲ್ಲಿಸಲೇಬೇಕಿದೆ. ಆಗ ತನಿಖಾ ಸಂಸ್ಥೆಗಳು ಪ್ರಚೋದನೆಯಿಂದ ಈ ರೀತಿಯ ಕೆಲಸ ಮಾಡಿದ್ದಾರೆ ಎನ್ನುವುದು ಕೋರ್ಟ್​ ಗಮನಕ್ಕೆ ಬಂದರೆ ತನಿಖಾ ಸಂಸ್ಥೆಯ ಮುಖ್ಯಸ್ಥರಿಗೆ ಕೋರ್ಟ್​ ಛೀಮಾರಿ ಹಾಕಲಿದೆ. ಒಂದು ವೇಳೆ ತಾಂತ್ರಿಕ ತಪ್ಪು ಸಂಭವಿಸಿದರೆ ಯಾವುದೇ ತನಿಖಾ ಸಂಸ್ಥೆಯೂ ಶಿಕ್ಷೆ ಕೊಡಿಸಲು ಸಾಧ್ಯವಿಲ್ಲ. ಒಂದು ವೇಳೆ ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದರೆ, ಶಿಕ್ಷೆ ಕಟ್ಟಿಟ್ಟ ಬುತ್ತಿ. ಪರಿಸ್ಥಿತಿ ಹೀಗಿರುವಾಗ ತನಿಖಾ ಸಂಸ್ಥೆಗಳನ್ನು ದೂಷಣೆ ಮಾಡುವ ಬದಲು ಸಹಕರಿಸಿದರೆ ಉತ್ತಮ ಎನ್ನಬಹುದು.

ತನಿಖಾ ಸಂಸ್ಥೆಗಳು ಮಾಡುವ ಒಂದು ತಪ್ಪು..!

ಜಾರಿ ನಿರ್ದೇಶನಾಲಯ ಅಧಿಕಾರಿಗಳು ಎಲ್ಲರ ವಿಚಾರದಲ್ಲೂ ಒಂದೇ ರೀತಿ ನಡೆದುಕೊಳ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಿ.ವೈ ವಿಜಯೇಂದ್ರ ವಿರುದ್ಧ ತನಿಖೆ ಮಾಡುತ್ತಿದ್ದಾರೆ. ಈ ತನಿಖೆಯಲ್ಲಿ ವಿಜಯೇಂದ್ರನನ್ನು ಅರೆಸ್ಟ್​ ಮಾಡಬೇಕಾಗಬಹುದು ಎಂದು ಯಡಿಯೂರಪ್ಪನನ್ನು ಹೆದರಿಸಿ ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಸಲಾಯ್ತು ಎನ್ನುವ ಮಾತುಗಳೂ ಕೂಡ ರಾಜಕೀಯದಲ್ಲಿ ಕೇಳಿಬಂದಿತ್ತು. ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಕೂಡ ಇದನ್ನೇ ಹೇಳಿದ್ದರು. ದೆಹಲಿಗೆ ವಿಜಯೇಂದ್ರ ಭೇಟಿ ನೀಡಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಎದುರು ತನಿಖೆಗೆ ಹಾಜರಾಗುತ್ತಾರೆ ಎಂದಿದ್ದರು. ಆದರೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿಜಯೇಂದ್ರ ನಿವಾಸದ ಮೇಲೆ ದಾಳಿ ಮಾಡಿ ತನಿಖೆ ನಡೆಸಿಲ್ಲ. ಈ ರೀತಿಯ ತಾರತಮ್ಯ ನೀತಿಯನ್ನು ಅನುಸರಿಸುವ ಕಾರಣಕ್ಕೆ ರಾಜಕಾರಣಿಗಳು ಪ್ರತಿ ಬಾರಿಯೂ ವಿರೋಧ ಮಾಡುವುದನ್ನೇ ಕಾಯಕ ಮಾಡಿಕೊಂಡಿರುತ್ತಾರೆ ಎನ್ನಬಹುದು.

Related Posts

Don't Miss it !