IMA ವಂಚನೆ ಕೇಸ್​ನಲ್ಲಿ ರೋಷನ್​ ಜೊತೆ ಜಮೀರ್​ ಭಾಗಿ..! ED ರೇಡ್..

ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರೆ, ಬೆಂಗಳೂರಲ್ಲಿ ಮತ್ತೊಂದೆಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು ಬೆಂಗಳೂರಿನ 6 ಕಡೆ ದಾಳಿ ನಡೆಸಿದ್ದು ಸುಮಾರು 100 ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಐಎಂಎ ವಂಚನೆ ಕೇಸ್ ಸಂಬಂಧ ತನಿಖೆ..!

ಐಎಂಎ ವಂಚನೆ ಪ್ರಕರಣದ ಸಂಬಂಧ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ಶಿವಾಜಿನಗರದ ಕೋಲ್ಸ್​ಪಾರ್ಕ್​ನಲ್ಲಿರುವ ರೋಷನ್ ಬೇಗ್ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ. ದೆಹಲಿಯಿಂದ ಬಂದಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಐಎಂಎ ಕಂಪನಿಯಿಂದ ಸುಮಾರು 400 ಕೋಟಿ ಹಣ ಪಡೆದಿರುವ ಆರೋಪದ ಬಗ್ಗೆ ದಾಖಲೆ ಸಂಗ್ರಹ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ಈಗಾಗಲೇ ಸಿಬಿಐ ಅಧಿಕಾರಿಗಳು ಸಹ ತನಿಖೆ ನಡೆಸಿದ್ದರು.

ವಿದೇಶದಲ್ಲಿ ಹಣ ಹೂಡಿಕೆ ಬಗ್ಗೆ ತನಿಖೆ..!

ಐಎಂಎ ಕಂಪನಿ ಸಂಸ್ಥಾಪಕ ಮನ್ಸೂರ್ ಖಾನ್​ನಿಂದ ಸುಮಾರು 400 ಕೋಟಿ ಹಣ ಪಡೆದಿರುವ ರೋಷನ್​ ಬೇಗ್​, ವಿದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವ ಶಂಕೆ ಮೇರೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತನಿಖೆ ನಡೆಯುತ್ತಿದೆ. ಅಕ್ರಮ‌ ಹಣ ಬಳಸಿಕೊಂಡು ಕುಟುಂಬಸ್ಥರ ಹೆಸರಲ್ಲಿ ಆಸ್ತಿ ಸಂಪಾದನೆ ಮಾಡಿರುವ ಆರೋಪವೂ ರೋಷನ್​ ಬೇಗ್​ ಮೇಲಿದೆ. ಆದರೆ ರಾಜ್ಯ ಸರ್ಕಾರ ಕೇವಲ 16 ಕೋಟಿ ಆಸ್ತಿಯನ್ನು ಮಾತ್ರ ಜಪ್ತಿ ಮಾಡಿದೆ. ಉಳಿದ ಹಣ ಅಕ್ರಮವಾಗಿ ಹೂಡಿಕೆ ಮಾಡಿರುವ ಆರೋಪವಿದೆ.

ಕೋರ್ಟ್​ ಆದೇಶದಂತೆ ಜಪ್ತಿ ಮಾಡಿದ್ದ ಸರ್ಕಾರ..!

ಐಎಂಎ ಕೇಸ್​ನಲ್ಲಿ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರೋಷನ್​ ಬೇಗ್ ಆಸ್ತಿ ಜಪ್ತಿಗೆ ಕೋರ್ಟ್​ ಸೂಚಿಸಿತ್ತು. ಅದರಂತೆ ಇತ್ತೀಚಿಗೆ ರಾಜ್ಯ ಸರ್ಕಾರ ಆಸ್ತಿ ಜಪ್ತಿ ಮಾಡಿತ್ತು. ಬ್ಯಾಂಕ್​ ಅಕೌಂಟ್​ಗಳಲ್ಲಿದ್ದ 2.32 ಕೋಟಿ ರೂಪಾಯಿ ಹಣ, 8.91 ಕೋಟಿ ಮೌಲ್ಯದ ಸೈಟ್​​ಗಳು, 42.4 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಸ್ತುಗಳು, 6.80 ಲಕ್ಷ ಮೌಲ್ಯದ ಷೇರು ಬಂಡವಾಳ, 1.73 ಕೋಟಿ ಮೌಲ್ಯದ ರೋಷನ್ ಬೇಗ್​ ವಾಣಿಜ್ಯ ಕಟ್ಟಡಗಳು, ಹಳೆಯ ನಿವಾಸವನ್ನು ಸರ್ಕಾರ ವಶಕ್ಕೆ ಪಡೆದಿತ್ತು. ಆದರೆ ಇದಿಷ್ಟೇ ಆಸ್ತಿಯಲ್ಲ ಎನ್ನುವುದು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಅನುಮಾನ. ಉಳಿದ ಹಣ ಎಲ್ಲಿ ಎನ್ನುವುದನ್ನ ಪತ್ತೆ ಮಾಡಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ರೋಷನ್​ ಬೇಗ್​ ಜೊತೆ ಜಮೀರ್​ಗೂ ಲಿಂಕ್​..!

ಬೆಳಗ್ಗೆಯಷ್ಟೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವಾಗಲೇ ಶಾಸಕ ಜಮೀರ್ ಅಹಮದ್ ಖಾನ್​ ನಿವಾಸಕ್ಕೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐಎಂಎ ಸಂಸ್ಥೆಯ ಮನ್ಸೂನ್ ಖಾನ್​ಗೆ ಜಮೀರ್ ರಿಚ್ಮಂಡ್ ಟೌನ್ ಬಳಿಯ ನಿವೇಶನ ಮಾರಾಟ ಮಾಡಿದ್ದರು. ಮಾರುಕಟ್ಟೆ ಬೆಲೆಗೂ ಮಾರಾಟ ಮಾಡಿರುವ ಬೆಲೆಗೂ ಅಜಗಜಾಂತರ ವ್ಯತ್ಯಾಸ ಇರುವ ಕಾರಣಕ್ಕೆ ಜಮೀರ್​ ನಿವಾಸದಲ್ಲಿ ತನಿಖೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಜಮೀರ್​ ಅಹ್ಮದ್​ ಖಾನ್​ ಮೊಬೈಲ್​ ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಕೊಠಡಿಯಲ್ಲಿ ಕೂರಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಐಎಂಎ ಸಂಸ್ಥೆ ಹಾಗೂ ಮನ್ಸೂರ್ ಖಾನ್​ ಜೊತೆಗಿನ ಒಡನಾಟದ ಬಗ್ಗೆ ವಿಚಾರಣೆ.

90 ಕೋಟಿ ಮೌಲ್ಯದ ಸೈಟ್​ 9 ಕೋಟಿಗೆ ಮಾರಾಟ..?

ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಸೇರಿದ್ದ 14,924 ಚದರಡಿ ನಿವೇಶನದ ಬೆಲೆ ಮಾರುಕಟ್ಟೆಯಲ್ಲಿ 90 ಕೋಟಿ ರೂಪಾಯಿ ಆಗಿದ್ದು, ಜಮೀರ್​ ಆಹ್ಮದ್​ ಖಾನ್​ ಕೇವಲ 9.38 ಕೋಟಿಗೆ ನೀಡಿದ್ದರು. ಉಳಿದ ಹಣವನ್ನು ಜಮೀರ್​ ಆಹ್ಮದ್​ ಹವಾಲ ಮೂಲಕ ಸಂಗ್ರಹ ಮಾಡಿಕೊಂಡಿದ್ದಾರೆ. ಈ ಹಣದ ತೆರಿಗೆಯನ್ನು ಜಮೀರ್​ ವಂಚಿಸಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಲಾಗ್ತಿದೆ. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಈ ಹಿಂದೆ ಸಮನ್ಸ್ ಕೂಡ ಕೊಟ್ಟಿದ್ದರು. ಇನ್ನೂ ಕೋರ್ಟ್​ನಲ್ಲಿ ಕೇಸ್​ ಇದ್ದರೂ ಪ್ರಬಾವ ಬಳಸಿ ಮಾರಾಟ ಮಾಡಿದ್ದರು ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು. ಇನ್ನೂ 2018ರ ಚುನಾವಣ ಪ್ರಮಾಣ ಪತ್ರದಲ್ಲಿ ಕೂಡ ತಪ್ಪು ಮಾಹಿತಿ ನೀಡಿದ್ದ ಶಾಸಕ ಜಮೀರ್, ಮಾಜಿ ಸಚಿವ ಚೆಲುವರಾಯ ಸ್ವಾಮಿ ಬಳಿ 40 ಲಕ್ಷ ರೂಪಾಯಿ ಸಾಲ ಪಡೆದಿರುವುದಾಗಿ ತಪ್ಪು ಮಾಹಿತಿ ನೀಡಿದ್ದರು ಎನ್ನಲಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

Related Posts

Don't Miss it !