ಸದನದಲ್ಲಿ ಜಾರಿದ ಸಿದ್ದು ಮಾನ.. ರಕ್ಷಣೆಗೆ ಡಿಕೆಶಿ, ಮೌನ ಮುರಿದ ಸಿದ್ದರಾಮಯ್ಯ..!

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದಲ್ಲಿ ಹೆಚ್ಚಾಗಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸುತ್ತಿದ್ರು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯೋಜನೆ ಹಾಕಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮಾತನಾಡುವ ಬರದಲ್ಲಿ ತಾವು ಧರಿಸಿದ್ದ ಪಂಚೆಯನ್ನೇ ಮರೆತು ಬಿಟ್ಟಿದ್ದರು. ಹಿಂಬದಿಯಲ್ಲಿ ಕುಳಿತಿದ್ದ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್​, ಮುಂದಾಗುವ ಅನಾಹುತವನ್ನು ಗಮನಿಸಿ ಎದ್ದು ಸರಸರನೆ ಸಿದ್ದರಾಮಯ್ಯ ಅವರ ಬಳಿಗೆ ಬಂದು ಕಿವಿಮಾತು ಹೇಳಿದರು. ಗೌಪ್ಯವಾಗಿ ನೆರವೇರಿಸಬೇಕಿದ್ದ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಮಾಡುವ ಮೂಲಕ ತಾನು ಭಿನ್ನ ಎನ್ನುವುದನ್ನು ಸಾಧಿಸಿಕೊಂಡ್ರು.

ಕೊರೊನಾ ಎಫೆಕ್ಟ್​ ಅಂತಾ ಪಂಚೆ ಕಟ್ಟಿದ ಸಿದ್ದು..!

ಸಿದ್ದರಾಮಯ್ಯನವರೇ ಪಂಚೆ ಅಳಿದುಕೊಂಡಿದೆ. ಭದ್ರವಾಗಿ ಕಟ್ಟಿಕೊಳ್ಳಿ ಎಂದು ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಗೌಪ್ಯವಾಗಿ ಕಿವಿಯಲ್ಲಿ ಹೇಳಿದ್ರೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಹೋ ಹೌದ, ಈ ಕೊರೊನಾ ಸಮಯದಲ್ಲಿ ಸ್ವಲ್ಪ ಹೊಟ್ಟೆ ಬೆಳೆದುಬಿಟ್ಟಿದೆ. ಹಾಗಾಗಿ ಪಂಚೆ ನಿಲ್ತಿಲ್ಲ. ಈಶ್ವರಪ್ಪ ನನ್ನ ಪಂಚೆ ಕಳಚಿದೆ, ಕಟ್ಟಿಕೊಂಡು ಮಾತಾಡ್ತೇನೆ’ ಎಂದು ಹೇಳುವ ಮೂಲಕ ಪಂಚೆಯನ್ನು ಭದ್ರಪಡಿಸಿಕೊಂಡು ಮತ್ತೆ ಮಾತು ಮುಂದುವರಿಸಿದ್ರು. ಆದರೆ ಸ್ಪೀಕರ್​ ಕುರ್ಚಿಯಲ್ಲಿದ್ದ ಕುಮಾರ್​ ಬಂಗಾರಪ್ಪ ಮಾತ್ರ, ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡು ಸನ್ನಿವೇಶದಲ್ಲೇ ಹೀಗೆ ಆಗಬೇಕ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿಯನ್ನು ಕಿಚಾಯಿಸಿದ್ರು.

ಡಿ.ಕೆ ಶಿವಕುಮಾರ್​ ಕಳಚಿದ ಪಂಚೆ ಬಗ್ಗೆ ಸಿದ್ದರಾಮಯ್ಯಗೆ ಗುಟ್ಟಾಗಿ ಹೇಳಿದ ಬಳಿಕವೂ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ರು. ‘ಅಧ್ಯಕ್ಷರೇ ನನ್ನ ಪಂಚೆ ಕಳಚಿದೆ, ಇರೀ ಕಟ್ಟಿಕೊಂಡು ಮಾತಾಡ್ತೇನೆ’ ಎಂದ ಸಿದ್ದರಾಮಯ್ಯ ಮಾತಿಗೆ ಇಡೀ ಸದನವೇನೋ ನಗೆಗಡಲಲ್ಲಿ ತೇಲಿತು. ಆದರೆ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಮಾತ್ರ, ‘ಅವರು ಏನೋ ಗುಟ್ಟಾಗಿ ಕಿವಿಯಲ್ಲಿ ಹೇಳಿದ್ರೆ, ನೀವು ಅದನ್ನು ಬಹಿರಂಗ ಮಾಡ್ತೀರಲ್ಲ’ ಎಂದು ಮಾತಿನ ಸ್ವಿಂಗ್ ಮಾಡಿದ್ರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಿದ್ದರಾಮಯ್ಯ ಪಂಚೆ ಕಟ್ಟಿಕೊಂಡು ಮಾತು ಮುಂದುವರಿಸಿದ್ರು.

ಸದನದಲ್ಲಿ ಆರಗ ಜ್ಞಾನೇಂದ್ರಗೆ ತರಾಟೆ..!

ಮೈಸೂರಿನಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿ ಅಲ್ಲಿಗೆ ಅಷ್ಟು ಹೊತ್ತಿನಲ್ಲಿ ಯಾಕೆ ಹೋಗಿದ್ದರು ಎನ್ನುವ ಹೇಳಿಕೆ ಹಿಡಿದು ಮಹಿಳಾ ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಶಾಸಕಿ ಅಂಜಲಿ ನಿಂಬಾಳ್ಕರ್​ ಹಾಗೂ ಸೌಮ್ಯಾ ರೆಡ್ಡಿ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಲು ಮುಂದಾದರು. ಆ ವೇಳೆ ಸ್ಪೀಕರ್​ ಮಹಿಳಾ ಸದಸ್ಯರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು. ಈ ವೇಳೆ ಆಕ್ರೋಶ ಭರಿತರಾಗಿ ಮಾತನಾಡಿದ ಶಾಸಕಿ ಸೌಮ್ಯಾ ರೆಡ್ಡಿ, ಒಬ್ಬ ಹೆಣ್ಣುಮಗಳ ಅತ್ಯಾಚಾರ ಆದ್ರೆ, ಆಕೆ ಅಲ್ಲಿಗ್ಯಾಕೆ ಹೋಗಿದ್ಳು, ಯಾರ ಜತೆ ಇದ್ಳು ಅಂತಾರೆ..? ಹೆಣ್ಣುಮಕ್ಕಳು ಸಂಜೆ 6 ಗಂಟೆ ಬಳಿಕ ಕ್ಯಾಂಪಸ್​ನಲ್ಲಿ ಓಡಾಡಬೇಡಿ ಅಂತ ಆದೇಶ ಮಾಡಿದ್ದಾರೆ. ಮೈಸೂರು ವಿವಿಯ ವಿಸಿಯನ್ನು ಇನ್ನೂ ಯಾಕೆ ಅಮಾನತು ಮಾಡಿಲ್ಲ ಎಂದು ಪ್ರಶ್ನಿಸಿದ್ರು. ಅತ್ಯಾಚಾರ ಮಾಡೋರು ಹೆಣ್ಣುಮಕ್ಕಳಾ ಹಾಗಿದ್ರೆ..? ಹೀಗೆ ಮಾಡ್ತಿದ್ರಾ ಎಂದು ಆಕ್ರೋಶಭರಿತ ಮಾತನಾಡಿದ್ರು.

ಸದನದಲ್ಲಿ ಕಣ್ಣೀರು ಸುರಿಸಿದ ಅಂಜಲಿ ನಿಂಬಾಳ್ಕರ್..!

ಅತ್ಯಾಚಾರ‌ ಸಂಬಂಧ ಸದನದಲ್ಲಿ ಚರ್ಚೆ ನಡೆಯುತ್ತಿದ್ದರೆ, ಚರ್ಚೆಯನ್ನು ಕೇಳಿ ಭಾವನಾತ್ಮಕವಾಗಿ ನೊಂದು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಕಣ್ಣೀರು ಹಾಕಿದ್ದಾರೆ. ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಸಮಾಧಾನ ಮಾಡಲು ಶಾಸಕ‌ ರಾಜುಗೌಡ ಯತ್ನಿಸಿದ್ರು. ಬಳಿಕ ಸದನದಿಂದ ಆಚೆ ತೆರಳಿ ಮೊಗಸಾಲೆಯಲ್ಲಿ ಕುಳಿತು ತನ್ನಷ್ಟಕ್ಕೆ ತಾನೇ ಸಮಾಧಾನ ಮಾಡಿಕೊಂಡು ಬಂದು ಸದನದಲ್ಲಿ ಮಾತನಾಡಿದ್ರು. ನಾಮನಿರ್ದೇಶಿತ ಆಂಗ್ಲೋ ಇಂಡಿಯನ್​ ಶಾಸಕಿ ವಿನೀಶಾ ನೀರೋ, ಇಂಗ್ಲಿಷ್​ನಲ್ಲಿ ಮಾತನಾಡಿ ಚರ್ಚೆಯಲ್ಲಿ ಪಾಲ್ಗೊಂಡ್ರು.

Related Posts

Don't Miss it !