‘ಬಿಟ್​ ಕಾಯಿನ್​ ದಂಧೆ’ ಕಾಂಗ್ರೆಸ್​ ಉದ್ದೇಶವೇನು..?ರಾಜಕೀಯ ಮಾಡೋದು ಅಷ್ಟೆನಾ..?

ದೇಶದಲ್ಲಿ ನಿಷೇಧವಾಗಿರುವ ಬಿಟ್​ ಕಾಯಿನ್​ ದಂಧೆಗೆ ಬೆಂಗಳೂರು ರಾಜಧಾನಿ ಎನ್ನುವ ವಿಚಾರ ಕೆಲವೇ ದಿನಗಳ ಹಿಂದೆ ಬೆಂಗಳೂರು ಪೊಲೀಸರನ್ನು ಬೆಚ್ಚಿ ಬೀಳಿಸಿತ್ತು. ಸ್ಯಾಂಡಲ್​ವುಡ್​ ನಟಿಯರ ಡ್ರಗ್ಸ್​ ಪ್ರಕರಣ ಹಿಡಿದು ತನಿಖೆಗೆ ಇಳಿದಿದ್ದ ಬೆಂಗಳೂರು ಪೊಲೀಸರು ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ ಎಂಬಾತನನ್ನು ಅರೆಸ್ಟ್ ಮಾಡಿದ್ದರು. ಶ್ರೀಕಿ ಬಿಟ್​ ಕಾಯಿನ್​ ವ್ಯವಹಾರದಲ್ಲಿ ನಿಪುಣನಾಗಿದ್ದು, ಅಂತಾರಾಷ್ಟ್ರೀಯ ವ್ಯವಹಾರವನ್ನು ಚೆನ್ನಾಗಿ ಬಲ್ಲವಾಗಿದ್ದ, ಹ್ಯಾಕರ್​ ಕೂಡ ಆಗಿದ್ದ ಎನ್ನುವ ಅಂಶ ಗೊತ್ತಾಗಿತ್ತು. ಆದ್ರೆ ಇದೀಗ ಈ ದಂಧೆಯಲ್ಲಿ ಪ್ರಭಾವಿ ರಾಜಕೀಯ ನಾಯಕರು ಇದ್ದಾರೆ ಎನ್ನುವ ವಿಚಾರ ಬಹಿರಂಗ ಆಗಿದೆ. ಇನ್ನೂ ಪ್ರಧಾನಿ ನರೇಂದ್ರ ಮೋದಿ ಕಚೇರಿಗೂ ಈ ಬಗ್ಗೆ ದೂರು ಹೋಗಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶ ಹೊರ ತರುವಂತೆ ಸೂಚನೆಯೂ ಬಂದಿದೆ ಎನ್ನಲಾಗಿದೆ. ಆದರೆ ಆ ಇಬ್ಬರು ಪ್ರಭಾವಿ ನಾಯಕರು ಯಾರು ಎನ್ನುವ ಪ್ರಶ್ನೆ ಮಾತ್ರ ಉತ್ತರ ಸಿಗದ ನಿಗೂಢವಾಗಿದೆ.

ಇಬ್ಬರು ಪ್ರಭಾವಿ ರಾಜಕಾರಣಿಗಳು ಎಂದ ಕಾಂಗ್ರೆಸ್​​..!

ರಾಜ್ಯದಲ್ಲಿ ಬಿಟ್​ ಕಾಯಿನ್​ ದಂಧೆಯಲ್ಲಿ ಇಬ್ಬರು ಪ್ರಭಾವಿ ರಾಜಕಾರಣಿಗಳು ಇದ್ದಾರೆ. ಒಂದು ವೇಳೆ ಬಿಟ್​ ಕಾಯಿನ್​ ಬಗ್ಗೆ ಸವಿಸ್ತಾರ ತನಿಖೆ ನಡೆದರೆ ರಾಜ್ಯ ಸರ್ಕಾರಕ್ಕೆ ಕಂಟಕ ಎದುರಾಗಲಿದೆ ಎಂದು ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದರು. ಆ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ನಾನೂ ಕೂಡ ರಾಜ್ಯದಲ್ಲಿ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಇಬ್ಬರು ಪ್ರಭಾವಿ ರಾಜಕಾರಣಿಗಳು ಇರುವ ಬಗ್ಗೆ ಮಾಹಿತಿ ಇದೆ. ಆದರೆ ಸರ್ಕಾರ ಪ್ರಬಾವಿಗಳನ್ನ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದರು. ಆದರೆ ಯಾರು..? ಆ ಪ್ರಭಾವಿ ರಾಜಕಾರಣಿಗಳು ಎನ್ನುವುದನ್ನು ಸ್ಪಷ್ಟಪಡಿಸಲಿಲ್ಲ. ಗೊತ್ತಿದ್ದ ಮೇಲೆ ಮಾಹಿತಿ ಕೊಡಿ ಎನ್ನುವ ಪ್ರಶ್ನೆಗೆ ಎಲ್ಲವನ್ನೂ ನಾವೇ ಹೇಳಬೇಕು ಎಂದರೆ ಹೇಗೆ..? ಸರ್ಕಾರವನ್ನು ಪ್ರಶ್ನೆ ಮಾಡಿ ಎಂದಿದ್ದರು.

Read this;

ಸಿಎಂ ಸ್ಪಷ್ಟನೆ, ಗೃಹ ಸಚಿವರಿಂದ ಗೊಂದಲಕಾರಿ ಹೇಳಿಕೆ..!

ಬಿಟ್​ ಕಾಯಿನ್ ದಂಧೆ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಸಾಕಷ್ಟು ಮಾಹಿತಿಗಳು ಸಿಕ್ಕಿವೆ. ನಾವು ಜಾರಿ ನಿರ್ದೇಶನಾಲಯ ಅಧಿಕಾರಿಗಳನ್ನು ತನಿಖೆ ಮಾಡುವಂತೆ ಮನವಿ ಮಾಡಿದ್ದೇವೆ. ತನಿಖೆಯಿಂದ ಎಲ್ಲವೂ ಸಂಪೂರ್ಣವಾಗಿ ಹೊರ ಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ಕೊಟ್ಟರೆ, ಗೃಹ ಸಚಿವ ಆರಗ ಜ್ಞಾನೇಂದ್ರ ಮಾತ್ರ ಸಿಐಡಿ ತನಿಖೆ ನಡೆಯುತ್ತಿದೆ. ಯಾರನ್ನೂ ರಕ್ಷಣೆ ಮಾಡುವ ಪ್ರಮೆಯ ಇಲ್ಲ ಎಂದಿದ್ದಾರೆ. ಸರ್ಕಾರದ ಸ್ಪಷ್ಟನೆ ಬಳಿಕ ಮತ್ತೆ ಕೌಂಟರ್​ ಅಟ್ಯಾಕ್​ ಮಾಡಿರುವ ಸಿದ್ದರಾಮಯ್ಯ, ಬಿಟ್​ ಕಾಯಿನ್​ ದಂಧೆ ಬಗ್ಗೆ ಇಷ್ಟು ದಿನ ಮೌನವಾಗಿದ್ದು ಯಾಕೆ..? ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಎಲ್ಲೂ ಪ್ರಭಾವಿ ರಾಜಕಾರಣಿಗಳು ಯಾರು ಎನ್ನುವುದನ್ನು ಬಿಟ್ಟುಕೊಟ್ಟಿಲ್ಲ. ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ನಮ್ಮ ಸರ್ಕಾರಕ್ಕೆ ಇದರಿಂದ ಯಾವುದೇ ಅಪಾಯವಿಲ್ಲ, ತನಿಖೆ ಹಸ್ತಾಂತರ ಮಾಡಿರೋದೇ ಬೊಮ್ಮಾಯಿಯವರು, ಹೀಗಾಗಿ ನಮಗೇನೂ ಅಪಾಯವಿಲ್ಲ, ನಾವು ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡ್ತೀವಿ. ಬಿಜೆಪಿ ನಾಯಕರು ಬಿಟ್​ ಕಾಯಿನ್​ ದಂಧೆಯಲ್ಲಿ ಇದಾರೆ ಎಂದು ಪ್ರತಿಪಕ್ಷದ ಆರೋಪ ಅಷ್ಟೇ ಎಂದಿದ್ದಾರೆ.

ಏನಿದು ಬಿಟ್​ ಕಾಯಿನ್​ ದಂಧೆ..? ಹೇಗೆ ನಡೆಯುತ್ತೆ..?

ಬಿಟ್​ ಕಾಯಿನ್​ ವ್ಯವಹಾರ ಕಾನೂನು ಬಾಹಿರ. ನಮ್ಮ ದೇಶದಲ್ಲಿ ಮಾತ್ರ. ವಿದೇಶಗಳಲ್ಲಿ ಬಿಟ್​ ಕಾಯಿನ್​ ವ್ಯವಹಾರ ಶುರುವಾಗಿದೆ. ಆದರೆ ನಮ್ಮ ದೇಶದಲ್ಲಿ ಬಿಟ್​ ಕಾಯಿನ್​ ಹಾಗೂ ಸೈಬರ್​ ವ್ಯವಹಾರಕ್ಕೆ ಸಂಬಂಧಿಸಿದ ಕಾನೂನು ರೂಪಿಸಿಲ್ಲ ಆದ್ದರಿಂದ ಬಿಟ್​ ಕಾಯಿನ್​ ವ್ಯವಹಾರವನ್ನು ನಿಷೇಧಿಸಲಾಗಿದೆ. ಸುಪ್ರೀಂಕೋರ್ಟ್​ ಕೂಡ ಬಿಟ್​ ಕಾಯಿನ್​ ಅಕ್ರಮಲ್ಲ ಎಂದಿರುವುದನ್ನು ನಾವು ಮನಗಾಣಬಹುದು. ಆದರೆ ನಮ್ಮ ದೇಶದಲ್ಲಿ ನಿಯಂತ್ರಣ ಮಾಡುವ ವ್ಯವಸ್ಥೆ ಇಲ್ಲದಿರುವ ಕಾರಣ, ಅಕ್ರಮವಾಗಿ ಬಿಟ್​ ಕಾಯಿನ್​ ವ್ಯವಹಾರ ಮಾಡುತ್ತಿದ್ದಾರೆ. ಅದರಲ್ಲೂ ಡ್ರಗ್ಸ್​ ತರಿಸಿಕೊಳ್ಳುವುದಕ್ಕೆ ಬಿಟ್​ ಕಾಯಿನ್​ ವ್ಯವಹಾರ ಹೆಚ್ಚಾಗಿ ನಡೆಯುತ್ತಿದೆ. ನಗದು ವ್ಯವಹಾರದ ಬದಲಾಗಿ ನಡೆಯುವ ಡಿಜಿಟಲ್ ವ್ಯವಹಾರ. ಡಿಜಿಟಲ್ ಹೆಸರಿನಲ್ಲಿ ನಡೆಯುವ ಕಳ್ಳ ವ್ಯವಹಾರ. ಸರ್ಕಾರಕ್ಕೆ ತೆರಿಗೆ ತಪ್ಪಿಸಲು ನಡೆಯುವ ಹವಾಲ ದಂಧೆ ಎನ್ನಬಹುದು. ಬಿಟ್ ಕಾಯಿನ್ ವ್ಯವಹಾರ ಷೇರು ಮಾರುಕಟ್ಟೆಯ ರೀತಿ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತದೆ ಹಾಗೂ ಇಳಿಕೆಯೂ ಆಗುತ್ತದೆ. ವಿದೇಶಕ್ಕೆ ಹಣ ರವಾನೆ ಮಾಡೋ ವಾಮ ಮಾರ್ಗಗಳಲ್ಲಿ ಇದು ಪ್ರಮುಖ.

Also Read;

ಕಾಂಗ್ರೆಸ್​​ಗೆ ನಿಜವಾಗಿಯೂ ಪ್ರಭಾವಿ ರಾಜಕಾರಣಿಗಳು ಆರೋಪಿಗಳು ಆಗಬೇಕು ಎನ್ನುವ ದೃಢವಾದ ನಿಶ್ಚಯವಿದ್ದರೆ ಹೆಸರನ್ನು ಬಹಿರಂಗ ಮಾಡಬೇಕು. ಅದನ್ನು ಬಿಟ್ಟು ಹಾವು ಸಾಯಬಾರದು ಕೋಲು ಮುರಿಯಬಾರದು ಎನ್ನುವ ಹಾಗೆ ರಾಜಕೀಯ ಡ್ರಾಮ ಮಾಡಬಾರದು. ಬಿಟ್​ ಕಾಯಿನ್​ ದಂಧೆಯಲ್ಲಿ ಪ್ರಭಾವಿ ರಾಜಕಾರಣಿಗಳು ಇದ್ದರೆ..! ತಮಗೆ ಸಿಕ್ಕ ಮಾಹಿತಿಯಂತೆ ಈ ಇಬ್ಬರು ಹೆಸರುಗಳು ಇದೆ. ಈ ಬಗ್ಗೆ ತನಿಖೆ ಮಾಡಿ ಎಂದು ಬಹಿರಂಗವಾಗಿ ದೂರು ಸಲ್ಲಿಕೆ ಮಾಡಬಹುದು. ಆದರೆ ಕಾಂಗ್ರೆಸ್​ ಇಚ್ಛಾ ಶಕ್ತಿ ಪ್ರದರ್ಶನ ಮಾಡಬೇಕು ಅಷ್ಟೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೇವಲ ಕೆಣಕಿ ಸುಮ್ಮನಾಗುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ. ತನ್ನ ರಾಜಕೀಯ ಎದುರಾಳಿಯನ್ನು ಇಕ್ಕಟ್ಟಿಗೆ ಸಿಲುಕಿಸುವುದೇ ಇದರ ಉದ್ದೇಶವಾಗಿದ್ದರೆ, ಬಿಟ್​ ಕಾಯಿನ್​ ಕಳ್ಳ ವ್ಯವಹಾರದಾರರು ಸಿಕ್ಕಿ ಬೀಳಲಾರರು. ಇದರ ಹೊಣೆಯನ್ನು ಸರ್ಕಾರದ ಜೊತೆಗೆ ಕಾಂಗ್ರೆಸ್​ ಕೂಡ ಹೊತ್ತುಕೊಳ್ಳಬೇಕಾಗುತ್ತದೆ.

Related Posts

Don't Miss it !