IPS, IAS ಬಂಧಿಸಿರುವ ಸರ್ಕಾರ.. ಬೆನ್ನು ತಟ್ಟಿಕೊಳ್ಳುವ ಮುನ್ನ ಇಲ್ನೋಡಿ..!!

ಸೋಮವಾರ ರಾಜ್ಯದ ಇತಿಹಾಸದಲ್ಲಿ ಕಂಡು ಕೇಳರಿಯದ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿತ್ತು. ಒಂದು ಕಡೆ PSI (Police Sub Inspector) ನೇಮಕಾತಿ ಹಗರಣದಲ್ಲಿ ADGP (Additional General of Police) ಅಮೃತ್​ ಪೌಲ್​ ಅವರನ್ನೇ CID ಅಧಿಕಾರಿಗಳು ಬಂಧನ ಮಾಡಿದ್ದಾರೆ. ಇನ್ನೊಂದು ಕಡೆ ತನ್ನ ಕೈಕೆಳಗಿನ ಅಧಿಕಾರಿ ಬಳಸಿಕೊಂಡು 5 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಬೆಂಗಳೂರಿನ ಈ ಹಿಂದಿನ ಜಿಲ್ಲಾಧಿಕಾರಿ ಮಂಜುನಾಥ್​ ಅವರನ್ನು ACB ಅಧಿಕಾರಿಗಳು ಬಂಧಿಸಿದ್ದಾರೆ. ಈ ಎರಡೂ ಪ್ರಕರಣಗಳನ್ನು ಹಿಡಿದುಕೊಂಡು ರಾಜ್ಯ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಪ್ರಯತ್ನ ಮಾಡಿದೆ. ತಮ್ಮ ಸರ್ಕಾರದ ಅವಧಿಯಲ್ಲೇ ನಡೆದಿರುವ ಹುಳುಕನ್ನು ಎಷ್ಟು ಮುಚ್ಚುಕೊಳ್ಳಲು ಸಾಧ್ಯವೋ ಅಷ್ಟು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಮುಖ್ಯಮಂತ್ರಿ ಸೇರಿ ಸಚಿವರ ಸಾಲು ಸಾಲು ವರಸೆ..!

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಸರ್ಕಾರದಲ್ಲೇ ಆಗಿರುವ ಭ್ರಷ್ಟಾಚಾರವನ್ನು ನಾವು ಸಹಿಸೋದಿಲ್ಲ. ಅದೆಷ್ಟು ದೊಡ್ಡವರೇ ಆಗಿದ್ದರೂ ಬಂಧನ ಮಾಡಲಾಗುತ್ತದೆ ಎನ್ನುವ ಮಾತಿನಂತೆ ನಾವು ನಡೆದುಕೊಂಡಿದ್ದೇವೆ ಎಂದು ಸ್ವಯಂ ಪ್ರಶಂಸೆ ಮಾಡಿಕೊಂಡಿದ್ದರು. ಅದಾದ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಕೋಡ ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲ, ತನಿಖೆಯಲ್ಲಿ ಉನ್ನತ ಅಧಿಕಾರಿ ತಪ್ಪಿತಸ್ಥ ಎನ್ನುವುದಕ್ಕೆ ಪುರಾವೆ ಸಿಕ್ಕಿದ್ದರಿಂದ ಬಂಧನ ಮಾಡಲಾಗಿದೆ ಎಂದಿದ್ದರು. ಇಂದು ಪ್ರತಿಯೊಬ್ಬ ಸಚಿವರೂ ಕೂಡ ಸರ್ಕಾರ ಮಹಾನ್​ ಸಾಧನೆ ಮಾಡಿದೆ ಎನ್ನುವಂತೆ ಹೇಳಿಕೆಗಳನ್ನು ನೀಡುತ್ತಾ.. ತಮ್ಮನ್ನು ತಾವೇ ಬೆನ್ನು ತಟ್ಟಿಕೊಳ್ಳುವ ಪ್ರಮೇಯ ಸೃಷ್ಟಿಯಾಗಿದೆ. ಇದನ್ನು ನೋಡಿದಾಗ ಜನಸಾಮಾನ್ಯರು ಮೂರ್ಖರಲ್ಲ ಎನ್ನುವ ವಿಚಾರ ಸಚಿವರಿಗೆ ಗೊತ್ತಿಲ್ಲವೇ ಎಂದೆನಿಸುತ್ತದೆ.

ಸಾಮಾಜಿಕ ಜಾಲತಾಣದಲ್ಲೂ ಲಭ್ಯವಿದೆ ಸಾಕ್ಷಿ..!

ಭ್ರಷ್ಟ ಅಧಿಕಾರಿಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆ ಎಂದು ಹೈಕೋರ್ಟ್​ ಚಾಟಿ ಬೀಸಿದ್ದನ್ನು ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡಿದೆ. ನ್ಯಾಯಮೂರ್ತಿ ಸಂದೇಶ್​​ ಈ ಬಗ್ಗೆ ವಿಚಾರಣೆ ನಡೆಸಿದ್ದು, ಕೋಟಿ ಕೋಟಿ ಲಂಚ ಪಡೆದ ಅಧಿಕಾರಿಗಳನ್ನು ಮುಚ್ಚಿಡುವ ಪ್ರಯತ್ನ ಮಾಡ್ತಿರೋದ್ಯಾಕೆ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ನಾನು ನೇರವಾಗಿ ಕ್ರಮ ವಹಿಸಿದರೆ ವರ್ಗಾವಣೆ ಮಾಡುವ ಬೆದರಿಕೆ ಹಾಕಲಾಗುತ್ತದೆ. ಈಗಾಗಲೇ ಒಬ್ಬರನ್ನು ವರ್ಗಾವಣೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನೂ ನನಗೆ ತಲುಪಿಸಲಾಗುತ್ತದೆ. ಅಂದರೆ ಸರ್ಕಾರದ ಮಟ್ಟದಲ್ಲಿ ಎಷ್ಟ ಮಟ್ಟಿಗೆ ಕ್ಯಾನ್ಸರ್​ ಹರಡಿದೆ. 4ನೇ ಹಂತಕ್ಕೆ ಹೋಗುವ ಮೊದಲು ಇದನ್ನು ತಡೆಯದಿದ್ದರೆ ಹೇಗೆ..? ಸರ್ಕಾರ ಹಾಗೂ ಎಸಿಬಿ ಅಧಿಕಾರಿಗಳ ಕೈವಾಡ ಇಲ್ಲ ಎನ್ನುವುದಾದರೆ ಭಯ ಯಾಕೆ..? ನಾನು ಹುದ್ದೆಗೆ ಅಂಟಿ ಕೂರುವವನಲ್ಲ, ನಾನು ಒಂದಿಂಚು ಜಾಗವನ್ನೂ ಮಾಡಿಲ್ಲ ಜಡ್ಜ್​ ಆದಮೇಲೆ. ನಮ್ಮಪ್ಪನ ನಾಲ್ಕು ಎಕರೆ ಜಮೀನನ್ನೇ ನಾನು ಮಾರಿದ್ದೇನೆ. ಎಲ್ಲವನ್ನು ಬರೆದಿಟ್ಟು ಹೋಗ್ತೇನೆ, ಎಲ್ಲರಿಗೂ ಸಮನ್ಸ್​ ಕೊಡ್ತೇನೆ ಎಂದು ಗರಂ ಆಗಿದ್ದಾರೆ.

ಹೈಕೋರ್ಟ್​ ವಿಚಾರಣೆ ಈಗ ನೇರಪ್ರಸಾರದಲ್ಲಿ ಲಭ್ಯ..!

ಹೈಕೋರ್ಟ್​ ವಿಚಾರಣೆ ನೇರಪ್ರಸಾರದಲ್ಲಿ ಲಭ್ಯವಿದೆ. ಆಸಕ್ತಿ ಉಳ್ಳವರು, ಯೂಟ್ಯೂಬ್​ನಲ್ಲಿ ನೋಡಬಹುದಾಗಿದೆ. ಹೈಕೋರ್ಟ್​ ಜಡ್ಜ್​​ ಹೇಳಿರುವ ಎಲ್ಲಾ ಮಾತುಗಳು ಅಂತರ್ಜಾಲದಲ್ಲಿ ಲಭ್ಯವಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೂ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಂಚಲನ ಮೂಡಿಸಿದೆ. ನೀವು ತಿನ್ನುತ್ತಿರುವ ಅನ್ನ ಕೂಡ ಸಾರ್ವಜನಿಕರಿಂದ ತೆಗೆದುಕೊಂಡಿರುವುದು ಎಂದು ಸರ್ಕಾರಕ್ಕೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಆ ಬಳಿಕ ಸರ್ಕಾರ ಅನಿವಾರ್ಯ ನಿರ್ಧಾರ ಮಾಡಿದೆ. ಐಪಿಎಸ್​, ಐಎಎಸ್​ ಅಧಿಕಾರಿಗಳನ್ನು ಬಂಧಿಸಿ, ಹೈಕೋರ್ಟ್​ ಎದುರು ಮುಖಮುಚ್ಚಿಕೊಳ್ಳುವ ಪ್ರಯತ್ನ ಮಾಡಿದೆ, ಇದೆಲ್ಲವೂ ಜನರಿಗೆ ಗೊತ್ತಿರುವ ವಿಚಾರ ಆಗಿದ್ದರೂ ಸರ್ಕಾರ ಮತ್ತು ಮಂತ್ರಿಗಳು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು ಎಷ್ಟು ಸರಿ..? ಅಲ್ಲವೇ..?

Related Posts

Don't Miss it !