ಶಾಸಕ ಜಮೀರ್​ ಅಹ್ಮದ್​ ಖಾನ್ ಆದಾಯ ತೆರಿಗೆ ವಂಚನೆ ಲೆಕ್ಕಾಚಾರ..!

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​ ಮನೆಯಲ್ಲಿ ಲೆಕ್ಕಾಚಾರ ಮಾಡಲು ಶುರು ಮಾಡಿದ್ದಾರೆ. ಜಮೀರ್​ ಅವರ ಟ್ರಾವೆಲ್ಸ್ ಹೊರತುಪಡಿಸಿ ಜಮೀರ್ ಅಹಮದ್ ಖಾನ್​ ಅವರ ಇನ್ನಿತರ ಆದಾಯ ಮೂಲಗಳ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಅನಾಮಧೇಯ ಮೂಲಗಳಿಂದ ಸಿಕ್ಕಿರುವ ಮಾಹಿತಿ ಹಿಡಿದು ಐಷಾರಾಮಿ‌ ಮನೆಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಇದ್ದು, ಕಳೆದ ಹಣಕಾಸು ವರ್ಷದಲ್ಲಿ ಘೋಸಿಸಿಕೊಂಡ ಆಸ್ತಿಗಿಂತ ದುಪ್ಪಟ್ಟು ಆಸ್ತಿ ಹೊಂದಿರುವ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡಿದ್ದಾರೆ. ಹೀಗಾಗಿ ಜಮೀರ್ ಅಹ್ಮದ್​ ಖಾನ್​ ನಿವಾಸದಲ್ಲಿ ಶೋಧ ನಡೆಸಲಾಗ್ತಿದೆ.

ಬೆಂಗಳೂರಿನ 6 ಕಡೆ ಜಮೀರ್​ ಆಸ್ತಿ ಹುಡುಕಾಟ..!

ಶಾಸಕ ಜಮೀರ್​ಗೆ ಸೇರಿದ ಆರು ಕಡೆಗಳಲ್ಲಿ ಏಕಕಾಲದಲ್ಲಿ IT ಅಧಿಕಾರಿಗಳ ತಂಡ ದಾಳಿ ಮಾಡಿದೆ. ದೆಹಲಿಯಿಂದ ಬಂದಿರುವ 45ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸುತ್ತಿದ್ದಾರೆ. ವಸಂತನಗರದ ಜಮೀರ್ ಖಾನ್​ ಹಳೆಯ ನಿವಾಸ, ಬಂಬೂ ಬಜಾರ್​ನ ನಿವಾಸ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದ ಜಮೀರ್ ಆಪ್ತನ ನಿವಾಸ ಹಾಗೂ ಜಮೀರ್ ಆಪ್ತ ಸಹಾಯಕನ ಮನೆ ಸೇರಿದಂತೆ 6 ಕಡೆ ದಾಳಿ ನಡೆಸಿದ್ದಾರೆ. ಮನೆಯಲ್ಲಿರುವ ಆಸ್ತಿ ದಾಖಲೆ ಪತ್ರಗಳು, ಹಣ, ಒಡವೆ ಲೆಕ್ಕಾಚಾರ ಮಾಡಲಾಗ್ತಿದೆ. ಜಮೀರ್​ಗೆ ಸಂಬಂಧಿಸಿದ ಯುಬಿ ಸಿಟಿಯ ಫ್ಲ್ಯಾಟ್ ಮೇಲೂ ದಾಳಿ ಮಾಡಲಾಗಿದೆ. ಸಿಆರ್​ಪಿಎಫ್​ ಪೊಲೀಸ್ ಭದ್ರತೆಯಲ್ಲಿ ಜಮೀರ್ ಅಹ್ಮದ್​ ಖಾನ್​ ಮನೆ ಪರಿಶೀಲನೆ ನಡೆಸಲಾಗ್ತಿದೆ.

ಮಗಳ ಅದ್ಧೂರಿ ಮದುವೆ, ಹಣ ಹಂಚಿಕೆ ಲೆಕ್ಕ..!

ಜಮೀರ್​ ಅಹ್ಮದ್​ ಖಾನ್​ ಕೆಲವು ತಿಂಗಳ ಹಿಂದೆಯಷ್ಟೇ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದರು. ಮದುವೆಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿರುವ ಮಾಹಿತಿ ಸಿಕ್ಕಿತ್ತು. ಮದುವೆ ವೇಳೆ ಸಾರ್ವಜನಿಕರಿಗೆ ಹಣ ಹಂಚುವ ದೃಶ್ಯ ಸಾಕಷ್ಟು ವೈರಲ್ ಆಗಿತ್ತು. ಇನ್ನು ಬಂಬೂ ಬಜಾರ್​ನಲ್ಲಿ 30 ಕೋಟಿಗೂ ಹೆಚ್ಚು ರೂಪಾಯಿ ಖರ್ಚು ಮಾಡಿ 2 ಎಕರೆ ಭೂಮಿಯಲ್ಲಿ ಬಂಗಲೆ ನಿರ್ಮಾಣ ಮಾಡಿದ್ದು, ಮಗಳ ಮದುವೆಗೆ 25 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿರೋ ಮಾಹಿತಿ ಹಿಡಿದು ತನಿಖೆ ಮಾಡಲಾಗ್ತಿದೆ.

ಕ್ಯಾಸಿನೋ ವ್ಯವಹಾರ ಬಿಟ್ಟ ಬಗ್ಗೆಯೂ ತನಿಖೆ..!

ಕಳೆದ ವರ್ಷಕ್ಕೂ ಮುನ್ನ ಶ್ರೀಲಂಕದಲ್ಲಿರುವ ಎರಡು ಕ್ಯಾಸಿನೋಗೆ ಪಾರ್ಟನರ್ ಆಗಿದ್ದ ಜಮೀರ್​ ಅಹ್ಮದ್​ ಖಾನ್​, ಕ್ಯಾಸಿನೋ ವ್ಯವಹಾರದಿಂದ ಹೊರ ಬಂದಿದ್ದಾರೆ. ನ್ಯಾಷನಲ್‌ ಟ್ರಾವೆಲ್ಸ್​ನಲ್ಲಿ ಮೂರು ವರ್ಷಗಳಿಂದ ಆದಾಯದಲ್ಲಿ ವ್ಯತ್ಯಾಸ ಆಗಿರುವುದು ಪತ್ತೆಯಾಗಿದೆ. ದುಪ್ಪಟ್ಟು ಆದಾಯ ಇದ್ದರೂ ತೆರಿಗೆ ವಂಚನೆ‌ ಮಾಡಿರುವ ಅನುಮಾನ ಮೂಡಿದೆ. ವ್ಯವಹಾರದಲ್ಲಿ ಆದಾಯ ಕಡಿಮೆ ಇದ್ದರೂ ಮಗಳ ಮದುವೆಯನ್ನು ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಮದುವೆ ಮಾಡಿದ್ದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಟ್ರಾವೆಲ್ಸ್ ಆದಾಯ ಸಂಬಂಧ ಸಂಪೂರ್ಣ ದಾಖಲೆ ಸಂಗ್ರಹ ಮಾಡ್ತಿರೋ ಅಧಿಕಾರಿಗಳು, ಟ್ರಾವೆಲ್ಸ್​ನಲ್ಲಿ ನಡೆದಿರುವ ಬ್ಯಾಂಕ್ ವ್ಯವಹಾರ ದಾಖಲೆ ಪರಿಶೀಲನೆ ಮಾಡಲಾಗ್ತಿದೆ. ಟ್ರಾವೆಲ್ ಸಿಬ್ಬಂದಿಗಳ ಸಮ್ಮುಖದಲ್ಲೇ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದು, ಒಬ್ಬೊಬ್ಬರನ್ನೇ ಕಚೇರಿ ಒಳಗೆ ಕರೆಸಿ ಮಾಹಿತಿ ಪಡೆಯುತ್ತಿದ್ದಾರೆ. ಕಳೆದ 6 ತಿಂಗಳ ವ್ಯವಹಾರದ ದಾಖಲೆಗಳ ಹಿಡಿದು ಐಟಿ ಅಧಿಕಾರಿಗಳು ತಲಾಶ್​ ನಡೆಸುತ್ತಿದ್ದಾರೆ.

Related Posts

Don't Miss it !