ಏರ್​ ಇಂಡಿಯಾ ಮಾರಾಟ ಮಾಡಿದ ಕೇಂದ್ರ ಸರ್ಕಾರ..! ಮುಚ್ಚುಮರೆ ಏನಿಲ್ಲ..

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತ ಸರ್ಕಾರದ ಅಧೀನದಲ್ಲಿದ್ದ ಏರ್​ ಇಂಡಿಯಾ ವಿಮಾನಯಾನವನ್ನು ಮಾರಾಟ ಮಾಡಿದೆ. ಭಾರತದ ಹೆಮ್ಮೆಯ ಸಂಸ್ಥೆ ಆಗಿರುವ ಟಾಟಾ ಸನ್ಸ್​ ಏರ್​ ಇಂಡಿಯಾವನ್ನು ಅತಿ ಹೆಚ್ಚು ಬಿಡ್​ ಮಾಡುವ ಮೂಲಕ ಕೈವಶ ಮಾಡಿಕೊಂಡಿದೆ. ಕೇಂದ್ರ ಸರ್ಕಾರ ಮಾರಾಟ ಮಾಡಿದರೂ ಮಾಧ್ಯಮಗಳಲ್ಲಿ ಖಾಸಗೀಕರಣ ಎನ್ನುವ ಪದ ಬಳಸುವ ಮೂಲಕ ಹಾಗೂ ಟಾಟಾ ಸಂಸ್ಥೆಯು ತನ್ನದೇ ಸಂಸ್ಥೆಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಇತಿಹಾಸ ಬರೆದಿದೆ ಎಂದು ಕೇಂದ್ರ ಸರ್ಕಾರದ ಮಾನ ಉಳಿಸುವ ಕೆಲಸ ಮಾಡುತ್ತಿವೆ. ಆದರೆ ಕೇಂದ್ರ ಸರ್ಕಾರ ಏರ್​ ಇಂಡಿಯಾ ಸಂಸ್ಥೆಯನ್ನು ಟಾಟಾ ಸನ್ಸ್​ ಸಂಸ್ಥೆಗೆ ಮಾರಾಟ ಮಾಡಿದ್ದನ್ನು ಶುಕ್ರವಾರ ಅಧಿಕೃತವಾಗಿ ಪ್ರಕಟ ಮಾಡಿದೆ.

ಏರ್​ ಇಂಡಿಯಾ ಸಿಬ್ಬಂದಿಗಳಿಗೆ ಸಂಕಷ್ಟ..!

ಏರ್​ ಇಂಡಿಯಾದಲ್ಲಿ ಒಟ್ಟು 12,085 ಜನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ 8,084 ಜನ ಕಾಯಂ ನೌಕರಿ ಹುದ್ದೆಯಲ್ಲಿ ಇದ್ದಾರೆ. ಇನ್ನೂ 1,434 ಜನರು ಏರ್​ ಇಂಡಿಯಾ ಎಕ್ಸ್​ಪ್ರೆಸ್​​ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಟಾಟಾ ಸನ್ಸ್​ ಸಂಸ್ಥೆ ಏರ್​ ಇಂಡಿಯಾ ಖರೀದಿ ಮಾಡಿರುವ ಕಾರಣ ಉದ್ಯೋಗ ಭದ್ರತೆ ಭೀತಿ ಶುರುವಾಗಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಡಿಸೆಂಬರ್​ ಅಂತ್ಯದವರೆಗೂ ಸರ್ಕಾರದ ಒಡೆತನದಲ್ಲೇ ಇರಲಿದ್ದು, ಆ ಬಳಿಕ ಮುಂದಿನ ಒಂದು ವರ್ಷದ ತನಕ ಟಾಟಾ ಸಂಸ್ಥೆ ಸಹ ಯಾವುದೇ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಿಲ್ಲ. ಆ ಬಳಿಕ ವಿಆರ್​ಎಸ್​ ಮೂಲಕ ಕೆಲಸದಿಂದ ತೆಗೆಯುವ ಅವಕಾಶವಿದೆ ಎಂದಿದೆ. ಟಾಟಾ ಸಂಸ್ಥೆ ಸಹ ಉದ್ಯೋಗಿಗಳನ್ನು ಕಡೆಗಣನೆ ಮಾಡುವುದಿಲ್ಲ ಎನ್ನುವ ಮಾತುಗಳೂ ಕೇಳಿ ಬಂದಿವೆ.

ಅತಿ ಹೆಚ್ಚು ಹಣಕ್ಕೆ ಬಿಡ್​ ಮಾಡಿದ ಟಾಟಾ ಸಂಸ್ಥೆ..!

ಭಾರತದಲ್ಲಿ ಮೊದಲಿಗೆ ವಿಮಾನ ಸಂಚಾರವನ್ನು ಶುರು ಮಾಡಿದ್ದೇ ಟಾಟಾ ಸಂಸ್ಥೆ. ಸ್ವಾತಂತ್ರ್ಯ ಸಿಗುವ ಮುನ್ನವೇ ಭಾರತದಲ್ಲಿ ಟಾಟಾ ಸಂಸ್ಥೆ ವಿಮಾನಯಾನ ಸಂಸ್ಥೆಯನ್ನು ಸೃಷ್ಟಿಸಿತ್ತು. 1932ರಲ್ಲಿ ಜೆಆರ್​ಡಿ ಟಾಟಾ ‘ಟಾಟಾ ಏರ್​ಲೈನ್ಸ್’​ ಸಂಸ್ಥೆ ಸ್ಥಾಪನೆ ಮಾಡಿದ್ದರು. 1946 ಟಾಟಾ ಏರ್​ಲೈನ್ಸ್​ ಸರ್ಕಾರಿ ಏರ್​ಲೈನ್ಸ್​ ಆಗಿತ್ತು. ಆಗ ಏರ್ ಇಂಡಿಯಾ ಲಿಮಿಟೆಡ್​ ಆಗಿ ನಾಮಕರಣ ಮಾಡಲಾಗಿತ್ತು. ಹೀಗೆ ಟಾಟಾ ಸಂಸ್ಥೆಯಿಂದ ಭಾರತ ಸರ್ಕಾರ ಏರ್​ಲೈನ್ಸ್​ ವಶಕ್ಕೆ ಪಡೆದಿತ್ತು. ಇದೀಗ ಅತಿ ಹೆಚ್ಚು ಹಣಕ್ಕೆ ಬಿಡ್​ ಮಾಡಿ ಟಾಟಾ ಸಂಸ್ಥೆ ಮರಳಿ ತನ್ನ ವಶಕ್ಕೆ ಪಡೆದಿದೆ. ತನ್ನದೇ ಸಂಸ್ಥೆಯನ್ನು ಬೇರೊಂದು ಸಂಸ್ಥೆ ಖರೀದಿ ಮಾಡುವುದು ಬೇಡ ಎನ್ನುವ ಹಠಕ್ಕೆ ಬಿದ್ದಂತೆ ಬರೋಬ್ಬರಿ 18, 718 ಕೋಟಿ ರೂಪಾಯಿಗೆ ಬಿಡ್​ ಮಾಡಿ ಖರೀದಿ ಮಾಡಿದೆ. ಆದರೆ ಏರ್​ ಇಂಡಿಯಾ ಸಂಸ್ಥೆಯ ಮೌಲ್ಯ ಅಷ್ಟೊಂದು ಪ್ರಮಾಣದಲ್ಲಿ ಇಲ್ಲ ಎನ್ನಲಾಗ್ತಿದೆ. ಭಾವನಾತ್ಮಕ ಸಂಬಂಧಕ್ಕೆ ಮಾರು ಹೋಗಿ ಕೊಳ್ಳಲಾಗಿದೆ ಎನ್ನಲಾಗ್ತಿದೆ.

ಏರ್​ ಇಂಡಿಯಾ ಮೇಲೆತ್ತುವುದು ಟಾಟಾ ಸಂಸ್ಥೆಗೆ ಸವಾಲು..!

ಏರ್​ ಇಂಡಿಯಾ ಸಂಸ್ಥೆಯನ್ನು ಲಾಭದಾಯಕ ಸಂಸ್ಥೆಯನ್ನಾಗಿ ಕಟ್ಟುವುದು ಸವಾಲಿನ ಕೆಲಸವೇ ಸರಿ. ಆದರೆ ಬಿಡ್​ನಲ್ಲಿ ಗೆಲುವು ಸಾಧಿಸಿದ ಬಳಿಕ ರತನ್​ ಟಾಟಾ ಟ್ವೀಟ್​ ಮಾಡಿದ್ದು, ತಮ್ಮ ಸಂಸ್ಥೆಯನ್ನು ವಾಪಸ್​ ನಮ್ಮ ಸಂಸ್ಥೆಗೆ ಸೇರಿಸಿಕೊಂಡಿದ್ದೇವೆ ಎನ್ನುವ ಸಂಭ್ರಮ ಎದ್ದು ಕಾಣುತ್ತಿತ್ತು. ವೆಲ್​ ಕಂ ಏರ್​ ಇಂಡಿಯಾ ಎಂದು ಬರೆದುಕೊಂಡಿದ್ದ ರತನ್​ ಟಾಟಾ. ಜೊತೆಗೆ ಏರ್​ ಇಂಡಿಯಾ ಮರು ನಿರ್ಮಾಣಕ್ಕೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಜೆಆರ್​ಡಿ ಟಾಟಾ ಇಂದು ನಮ್ಮೊಂದಿಗೆ ಇದ್ದಿದ್ದರೆ ಅತಿ ಹೆಚ್ಚು ಸಂತಸ ಪಡುವ ಗಳಿಗೆ ಆಗಿರುತ್ತಿತ್ತು. ಮತ್ತೆ ನಮ್ಮ ಸಂಸ್ಥೆಯನ್ನು ಸೇರುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಆದರೆ ಭಾರತ ಸರ್ಕಾರದ ಹೆಮ್ಮೆಯಾಗಿದ್ದ ಏರ್​ ಇಂಡಿಯಾ ಮಾರಾಟ ಮಾಡುವ ಮೂಲಕ ಭಾರತ ಸರ್ಕಾರ ಭಾರತದ ಘನತೆಯನ್ನು ಕಳೆದುಕೊಂಡಂತಾಗಿದೆ.

Related Posts

Don't Miss it !