ಬಿಜೆಪಿ ಪಾಲಿಗೆ ಸಿದ್ದರಾಮಯ್ಯ ಮೀರ್​ ಸಾದಿಕ್​ ಅನ್ನಿಸಿದ್ದು ಯಾಕೆ..?

ಟಿಪ್ಪು ಸುಲ್ತಾನ್​​ ಬಳಿ ಆಪ್ತನಾಗಿದ್ದ ಸೇವಕನೇ ಮೀರ್​ ಸಾದಿಕ್​. ಆಂಗ್ಲೋ ಮೈಸೂರು ಯುದ್ಧ ನಡೆಯುವ ವೇಳೆ ಟಿಪ್ಪು ಸುಲ್ತಾನನ ಶೌರ್ಯಕ್ಕೆ ಬೆಚ್ಚಿದ ಬ್ರಿಟೀಷರು ಟಿಪ್ಪು ಸುಲ್ತಾನನ್ನು ಸೋಲಿಸುವ ಮಾರ್ಗವನ್ನು ಹುಡುಕಲು ಶುರು ಮಾಡಿದ್ದರು. ಆ ವೇಳೆ ಸಾಕಷ್ಟು ಜನರನ್ನು ಪಟ್ಟಿ ಮಾಡಿದ ಬಳಿಕ ಮೀರ್​ ಸಾದಿಕ್​ನನ್ನು ತಮ್ಮ ಗಾಳದಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಮೀರ್​ ಸಾದಿಕ್​ ಮೂಲಕ ಯುದ್ಧದ ಎಲ್ಲಾ ಮಾಹಿತಿಯನ್ನು ಪಡೆದುಕೊಂಡ ಬ್ರಿಟೀಷರು, ಮೊದಲಿಗೆ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸುವ ಮದ್ದು ಗುಂಡುಗಳ ಸಂಗ್ರಹಗಾರವನ್ನು ನಾಶ ಮಾಡುವಲ್ಲಿ ಯಶಸ್ವಿಯಾದರು. ಅಲ್ಲಿಂದ ಟಿಪ್ಪು ವೀರಾವೇಶ ರಣಾಂಗಣದಲ್ಲಿ ಕುಗ್ಗುತ್ತಾ ಹೋಯಿತು. ಯುದ್ಧದ ತಂತ್ರಗಾರಿಕೆಯ ಹಾಗೆ ಯಾವುದೇ ಯುದ್ಧ ಸಾಮಗ್ರಿಗಳು ಸರಿಯಾದ ಸಮಯಕ್ಕೆ ರಣಾಂಗಣ ತಲುಪಲಿಲ್ಲ. ಬ್ರಿಟೀಷರು ಮಾಡಿದ ಮೋಸದ ಕುತಂತ್ರದಲ್ಲಿ ಟಿಪ್ಪು ಸಿಲುಕಿ ಪ್ರಾಣಬಿಟ್ಟ. ಇದರಲ್ಲಿ ಮೀರ್​ ಸಾದಿಕ್​​ ಎಂಬ ಟಿಪ್ಪು ಆಪ್ತನೇ ಬ್ರಿಟೀಷರಿಗೆ ನೆರವಾಗಿದ್ದ. ಇದೀಗ ಕಾಂಗ್ರೆಸ್​ ಗಲಾಟೆಯಲ್ಲಿ ಮೀರ್​ ಸಾದಿಕ್​ ಪಾತ್ರವಿದೆ ಎನ್ನುವುದು ಬಿಜೆಪಿ ಆರೋಪ.

ಸಿದ್ದರಾಮಯ್ಯ ಹಿತಕ್ಕಾಗಿ ಕಾಂಗ್ರೆಸ್​ನಲ್ಲಿ ಬಣ ರಾಜಕೀಯ..!?

ಕಾಂಗ್ರೆಸ್​ನಲ್ಲಿ ಬಣ ರಾಜಕೀಯ ಶುರುವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ನಡುವೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಪೈಪೋಟಿ ಶುರುವಾಗಿದ್ದು, ಒಬ್ಬರನ್ನೊಬ್ಬರು ಅಣಿಯುವ ಕೆಲಸ ಮಾಡ್ತಿದ್ದಾರೆ. ಎಂಬಿ ಪಾಟೀಲ್​ ಹಾಗೂ ಡಿಕೆ ಶಿವಕುಮಾರ್​ ನಡುವೆ ಪೈಪೋಟಿ ನಡೆಯುತ್ತಿದೆ. ಮಧ್ಯದಲ್ಲಿ ಮಾಜಿ ಸಂಸದೆ ನಟಿ ರಮ್ಯಾ ಅವರ ಮೂಲಕ ಕಿಚ್ಚು ಹೊತ್ತಿಸುವ ಕೆಲಸ ಮಾಡಿದ್ದಾರೆ. ರಮ್ಯಾ ಕೌಂಟರ್​ಗೆ ಸಿಡಿದೆದ್ದ ಯುವ ಕಾಂಗ್ರೆಸ್​ ಅಧ್ಯಕ್ಷ ಮಹಮದ್​ ನಲಪಾಡ್​, ರಮ್ಯಾ ಇಷ್ಟು ದಿನ ಎಲ್ಲಿಗೆ ಹೋಗಿದ್ದರು..? ಈಗ ಏಕಾಏಕಿ ಬಂದು ಹೀಗೆಲ್ಲಾ ಮಾಡ್ತಿದ್ದಾರೆ . ಇದೆಲ್ಲಾ ಪ್ರಚಾರ ಪಡೆಯುವ ಗಿಮಿಕ್​ ಇರಬೇಕು ಎಂದಿದ್ದರು. ಇದಕ್ಕೆ ಮತ್ತೆ ಟ್ವಿಟ್ಟರ್​ನಲ್ಲೇ ತಿರುಗೇಟು ಕೊಟ್ಟಿರುವ ನಟಿ ರಮ್ಯಾ, ನಲಪಾಡ್​ ಅವರ ಈ ಹಿಂದಿನ ಕೇಸ್​​ಗಳ ಸುದ್ದಿಯನ್ನು ಹಾಕಿ ಆಕ್ರೋಶ ವಕ್ತಪಡಿಸಿದ್ದಾರೆ. ಆದರೆ ಬಿಜೆಪಿ ಮಾತ್ರ ಕಮಲ ಪಾಳಯ ಮಾತ್ರ ಸಿದ್ದರಾಮಯ್ಯ ಕಡೆಗೆ ಬೊಟ್ಟು ಮಾಡಿದೆ. ಸಿದ್ದರಾಮಯ್ಯ ಮಾತ್ರ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಮೌನಕ್ಕೆ ಶರಣಾಗಿದ್ದಾರೆ. MB ಪಾಟೀಲ್ ರಮ್ಯಾ ಪರ ಟ್ವೀಟ್ ಮಾಡಿ ಬಣ ರಾಜಕೀಯದ ಗುಟ್ಟು ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯ ಆಪ್ತ ಹೆಚ್.ಸಿ‌ ಮಹದೇವಪ್ಪ ಕೂಡ ಟ್ವೀಟ್ ಮಾಡಿ ಸಾತ್ ಕೊಟ್ಟಿದ್ದಾರೆ.

ಮೀರ್​ ಸಾದಿಕ್​ ಕೆಲಸ ಎಚ್ಚೆತ್ತುಕೊಳ್ಳಿ ಕನಕಪುರ ಬಂಡೆ..!

ಕಾಂಗ್ರೆಸ್​ ಕಿತ್ತಾಟದಲ್ಲಿ ಮಧ್ಯಪ್ರವೇಶ ಮಾಡಿರುವ ಕೇಸರಿ ಪಡೆ, ಕಾಂಗ್ರೆಸ್​ ಈ ಕಿತ್ತಾಟಕ್ಕೆ ಮೂಲ ಕಾರಣ ಮೀರ್​ ಸಾದಿಕ್​ ಎಂದು ಸಿದ್ದರಾಮಯ್ಯರನ್ನು ಪರೋಕ್ಷವಾಗಿ ಎಳೆದು ತರುವ ಪ್ರಯತ್ನ ಮಾಡಿದೆ. ಘಟಾನುಘಟಿ ನಾಯಕರ ಕಿತ್ತಾಟದ ನಡುವೆ ಒಬ್ಬಬ್ಬರೇ ಅಖಾಡಕ್ಕೆ ಎಂಟ್ರಿಯಾಗುತ್ತಿದ್ದಾರೆ. ರಮ್ಯಾ ಬಳಿಕ ಮಹಮದ್​ ನಲಪಾಡ್​, ಇದೀಗ ನಟರಾಜ್​ಗೌಡ ರಮ್ಯಾ ಬೆಂಬಲಿಸಿ ಟ್ವೀಟ್​ ಮಾಡಿದ್ದಾರೆ. ನಟರಾಜ್​ ಗೌಡರ ಟ್ವೀಟ್​​ ಬೆಂಬಲಿಸಿ ಕಾಂಗ್ರೆಸ್​​ ತರೀಕೆರೆ ಘಟಕ ಟ್ವೀಟ್​ ಮಾಡಿದೆ. ನಟಿ ರಮ್ಯಾ ಅವರ ಮೂಲಕ ಸಿದ್ದರಾಮಯ್ಯ ಎದುರಾಳಿ ಡಿ.ಕೆ ಶಿವಕುಮಾರ್​ ಅಣಿಯುವ ಪ್ರಯತ್ನ ಮಾಡಿದ್ದಾರಾ..? ಎನ್ನುವ ವಿಚಾರ ವಿಧಾನಸೌಧದ ಪಡಸಾಲೆಯಲ್ಲಿ ಬಹು ಚರ್ಚಿತ ವಿಚಾರವಾಗಿದೆ. ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುವುದು ಎನ್ನುವ ಗೊಂದಲದಲ್ಲಿ ಇರುವ ಸಿದ್ದರಾಮಯ್ಯ ಹೀಗೆ ಮಾಡಲು ಕಾರಣವೇನು ಎನ್ನುತ್ತಿದ್ದಾರೆ ಕಾಂಗ್ರೆಸ್​ ಬೆಂಬಲಿಗರು.

ಚುನಾವಣೆಗೂ ಮುನ್ನವೇ ಡಿ.ಕೆ ಶಿವಕುಮಾರ್​ ಅಧಿಕಾರ ಖೋತ..!

ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್​ ತನ್ನ ಪರಮಾಪ್ತ ಪಡೆಯನ್ನು ಕಟ್ಟುವುದಕ್ಕೆ ಶುರು ಮಾಡಿದ್ದಾರೆ ಎನ್ನುವುದು ತೆರೆದಿಟ್ಟ ಸತ್ಯವಾಗಿದೆ. ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ನಾಯಕರ ಕ್ಷೇತ್ರದಲ್ಲಿ ಪರ್ಯಾಯ ನಾಯಕರನ್ನು ಹುಟ್ಟು ಹಾಕಿ ಟಿಕೆಟ್​ ಕೊಟ್ಟು ಗೆಲ್ಲಿಸಿಕೊಳ್ಳಲು ತಂತ್ರಗಾರಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಸಿದ್ದರಾಮಯ್ಯ ಆಪ್ತರಿಗೂ ಇದರಿಂದ ಸೋಲುವ ಭೀತಿ ಎದುರಾಗಿದೆ. ಇದೇ ಕಾರಣದಿಂದ ಕಾಂಗ್ರೆಸ್​ ಪಕ್ಷದ ಒಳಗೇ ಗೊಂದಲ ಸೃಷ್ಟಿಸಿ, ಚುನಾವಣೆಗೂ ಮುನ್ನವೇ ಅಧ್ಯಕ್ಷ ಸ್ಥಾನದಿಂದ ಡಿ.ಕೆ ಶಿವಕುಮಾರ್​ ಅವರನ್ನು ಕೆಳಕ್ಕೆ ಇಳಿಸುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗಿದೆ. ಎಲ್ಲರೂ ಒಪ್ಪುವಂತಹ ನಾಯಕ ಪಕ್ಷವನ್ನು ಮುನ್ನಡೆಸಬೇಕು ಎಂದು ದೆಹಲಿ ಮಟ್ಟದ ನಾಯಕರಿಗೆ ಮನವರಿಕೆ ಮಾಡಿಕೊಟ್ಟು ಡಿಕೆ ಶಿವಕುಮಾರ್​​ ಅವರನ್ನು ಹೊರಕ್ಕೆ ದಬ್ಬುವ ಯೋಜನೆ ಚಾಲ್ತಿಯಲ್ಲಿದೆ ಎನ್ನುತ್ತಿವೆ ಕಾಂಗ್ರೆಸ್​ ಮೂಲಗಳು. ಒಂದು ವೇಳೆ ಕಾಂಗ್ರೆಸ್​ ಹೈಕಮಾಂಡ್​​ ಡಿ.ಕೆ ಶಿವಕುಮಾರ್​ ಅವರನ್ನು ಬದಲಾವಣೆ ಮಾಡಲು ಒಪ್ಪದಿದ್ದರೆ ಮತ್ತಷ್ಟು ಸಿದ್ದರಾಮಯ್ಯ ಆಪ್ತರು ಕೇಸರಿ ಬಾವುಟ ಹಿಡಿಯುವುದು ಪಕ್ಕಾ ಎನ್ನಲಾಗ್ತಿದೆ.

ತನಗೆ ಇಲ್ಲದ ಅಧಿಕಾರ ಎದುರಾಳಿಗೂ ಸಿಗಬಾರದು..!

ಈ ಮೊದಲು ಜೆಡಿಎಸ್​ ಕಾಂಗ್ರೆಸ್​ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ, ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್​ ಒಗ್ಗಟ್ಟಿನಿಂದ ಅಧಿಕಾರ ನಡೆಸುತ್ತಿದ್ದರು. ಆಗ ತನ್ನ ಪರಮಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದೇ ಸಿದ್ದರಾಮಯ್ಯ ಎನ್ನುವುದು ರಾಜಕೀಯ ಬಲ್ಲವರ ಮಾತು. ಆಗಲೂ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಯಾವುದಕ್ಕೂ ಉತ್ತರ ಕೊಡದೆ ಚಾಣಕ್ಯ ನಡೆ ಅನುಸರಿಸಿದ್ದರು. ಈಗಲೂ ಚೆಸ್​ ಬೋರ್ಡ್​ನ ಎಲ್ಲಾ ಕಾಯಿಗಳು ಮುನ್ನಗ್ಗುತ್ತಿವೆ. ರಾಜ ಮಾತ್ರ ತನ್ನ ಸ್ಥಾನ ಬಿಟ್ಟು ಅಲುಗಾಡುತ್ತಿಲ್ಲ. ಯಾವ ಕಾಯಿ ಯಾವಾಗ ಹೇಗೆ ಮುನ್ನಡೆಯಬೇಕು ಎನ್ನುವ ಸಂದೇಶ ಕೊಡಲಾಗ್ತಿದೆ ಅದರಂತೆ ಎದುರಾಳಿಯಾಗಿರುವ ಡಿಕೆ ಶಿವಕುಮಾರ್​ ಕಾಂಗ್ರೆಸ್​ ಅಧ್ಯಕ್ಷ ಪಟ್ಟದಿಂದ ಹೊರಕ್ಕೆ ಕಳುಹಿಸುವ ಎಲ್ಲಾ ಪ್ರಯತ್ನಗಳು ಸಾಗಿವೆ. ಮುಂದೇನು ಎನ್ನುವುದೇ ರಾಜಕೀಯ. ಸಿದ್ದರಾಮಯ್ಯ ಸೂತ್ರ ಫಲಿಸಿದ್ರೆ ಕನಕಪುರ ಬಂಡೆ ನುಚ್ಚುನೂರು. ಕಾಂಗ್ರೆಸ್​ಗೆ ಅಧಿಕಾರದ ಕನಸು ಬರೀ ಕನಸು.

Related Posts

Don't Miss it !