ಹಿಂದೂ ಮುಖಂಡರ ಹತ್ಯೆಗೆ ಸುಪಾರಿ ಕೊಟ್ಟಿದ್ಯಾರು..? ಓಪನ್​ ಥ್ರೆಟ್​​..

ರಾಜ್ಯದಲ್ಲಿ ಕಳೆದ ಐದಾರು ತಿಂಗಳೂಗಳಿಂದ ಮತಿಯ ವಿಚಾರಗಳು ಸಾಕಷ್ಟು ಚರ್ಚೆ ಆಗುತ್ತಿವೆ. ಅದರಲ್ಲಿ ಪ್ರಮುಖ ವಿಚಾರವಾಗಿ ದೇಶದ ಗಮನ ಸೆಳೆದಿದ್ದು, ಹಿಜಾಬ್​ ವಿವಾದ. ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಶುರುವಾದ ಈ ಹಿಜಾಬ್​ ಕಿಚ್ಚು ರಾಜ್ಯ ಅಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿಯೂ ಸದ್ದು ಮಾಡಿತ್ತು. ಆದರೀಗ ಈ ವಿವಾದದ ತೀವ್ರತೆ ಹೆಚ್ಚಾಗಲು ಕಾರಣರಾಗಿದ್ದ ಇಬ್ಬರು ಹಿಂದೂ ಮುಖಂಡರ ಜೀವಕ್ಕೆ ಬೆಲೆ ಕಟ್ಟಲಾಗಿದೆ. ತಲೆಯನ್ನು ಕಡಿದು ಉರುಳಿಸಿದವರಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ದರ ನಿಗದಿ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಹಿರಂಗವಾಗಿ ಓಪನ್​ ಪೋಸ್ಟ್​ ಹಾಕಲಾಗಿದೆ. ಇನ್ಸ್​ಟಾಗ್ರಾಂ ಮಾರಿಗುಡಿ ಪೇಜ್​ನಲ್ಲಿ ಬಹಿರಂಗ ಆಹ್ವಾನ ನೀಡಲಾಗಿದೆ.

ಇಬ್ಬರು ಘಟಾನುಘಟಿ ನಾಯಕರ ತಲೆಗೆ ಬೆಲೆ..!

ಉಡುಪಿಯ ಬಿಜೆಪಿ ಮುಖಂಡ ಹಾಗೂ ಉಡುಪಿ ಸರ್ಕಾರಿ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷನಾಗಿದ್ದ ಯಶ್​ಪಾಲ್​ ಸುವರ್ಣ ತಲೆಗೆ 10 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಇನ್ನೂ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ತಲೆಗೂ 10 ಲಕ್ಷ ರೂಪಾಯಿ ಹಣವನ್ನು ಕೊಡುವುದಾಗಿ ಘೋಷಣೆ ಮಾಡಲಾಗಿದೆ. ಮಾರಿಗುಡಿ ಇನ್ಸ್​​ಟಾ ಪೇಜ್​ ವಿರುದ್ಧ ಕಾಪು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾರಿ ಗುಡಿ ಪೇಜ್ ವಿರುದ್ದ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಯಶ್​ಪಾಲ್​ ಸುವರ್ಣ, ನನ್ನ ತಲೆಗೆ ಬೆಲೆ ಕಟ್ಟಿದವನು ಯಾರೆಂದು ಗೊತ್ತಾದರೆ ಸಂತೋಷವಾಗುತ್ತೆ ಎಂದಿದ್ದಾರೆ.

ಕೊಲೆ ಬೆದರಿಕೆಗೆ ಬಗ್ಗಲ್ಲ, ಭದ್ರತೆಗೆ ಗನ್​ಮ್ಯಾನ್​ ಕೇಳಲ್ಲ..!

ನನ್ನ ಕೊಲೆಗೆ ಬೆದರಿಕೆ ಹಾಕಿದವನು ಯಾರೆಂದು ಗೊತ್ತಿಲ್ಲ, ಹಾಗಾಗಿ‌ ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದಿರುವ ಯಶ್​​ಪಾಲ್​ ಸುವರ್ಣ, ನಾನು ಅನ್ಯಮಾರ್ಗದಲ್ಲಿ ಹೋದವನಲ್ಲ. ದುಡಿದು ತಿನ್ನುವ ಜನ ನಾವು. ನಾನು ದೇಶ, ರಾಷ್ಟ್ರೀಯತೆ ವಿಚಾರದಲ್ಲಿ ಹಿಂದೆ ಹಾಗೂ ಮುಂದೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಹಿಂದಿನಿಂದಲೂ ಟೀಕೆ, ಬೆದರಿಕೆ, ನಿಂದನೆ, ಅಪಪ್ರಚಾರ ಮೆಟ್ಟಿ ನಿಂತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಹಿಂದುತ್ವ ಪರವಾಗಿ ನನ್ನ ಕೆಲಸ ನಿಲ್ಲೋದಿಲ್ಲ ಎಂದಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಜಾಬ್ ಮಾರಕ ಎಂದು ಹೋರಾಟ ಮಾಡಿದ್ದೇನೆ. ಇಂತಹ ಬೆದರಿಕೆಗೆ ಹೆದರಿ ಗನ್​ಮ್ಯಾನ್ ಕೇಳುವುದಿಲ್ಲ. ಸಾಮಾಜಿಕ ‌ಜೀವನದಲ್ಲಿ ಬಹಳಷ್ಟು ಸಂಘ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂತಹ ಪೇಜ್​ಗಳಿಗೆ ಪೊಲೀಸರು ಕಡಿವಾಣ ಹಾಕಬೇಕು ಎಂದು ಆಗ್ರಹ ಮಾಡಿದ್ದಾರೆ.

ಈ ಇಬ್ಬರು ನಾಯಕರ ತಲೆಗೆ ಬೆಲೆ ಕಟ್ಟಿದ್ದು ಯಾಕೆ..?

ಯಶ್​ಪಾಲ್​ ಸುವರ್ಣ ಹಿಜಾಬ್​ ವಿವಾದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡೋದಕ್ಕೆ ಪ್ರಮುಖ ಕಾರಣ ಎನ್ನುವುದು ಬಹುತೇಕರ ಆರೋಪ. ಒಂದು ಸಮಯದಲ್ಲಿ ರಾಜಿ ಪಂಚಾಯ್ತಿ ನಡೆಯುವ ಸಂದರ್ಭ ಒದಗಿ ಬಂದಾಗ ಧಿಕ್ಕರಿಸಿ ಹೋರಾಟ ತೀವ್ರತೆ ಪಡೆದುಕೊಳ್ಳುವಂತೆ ಮಾಡಿದವರಲ್ಲಿ ಪ್ರಮುಖ ವ್ಯಕ್ತಿ. ಇನ್ನೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​, ಹಿಂದುತ್ವದ ವಿಚಾರಗಳು ಬಂದರೆ ಏಕಾಏಕಿ ಮುಸಲ್ಮಾನ ಸಮುದಾಯದ ವಿರುದ್ಧ ಕೆಂಗಣ್ಣು ಬೀರುತ್ತಾರೆ. ದ್ವೇಷ ಸೃಷ್ಟಿಸುವ ಕೆಲಸ ಮಾಡುತ್ತಾರೆ. ಒಂದೆರಡು ವಿಚಾರಗಳಲ್ಲದೆ ಬಹುತೇಕ ಎಲ್ಲಾ ವಿಚಾರದಲ್ಲೂ ಹಿಂದುತ್ವ ಅಜೆಂಡಾ ಸಾರುವ ಪ್ರಮೋದ್​ ಮುತಾಲಿಕ್​​ ಪ್ರಾಣಕ್ಕೂ ಬೆಲ ಕಟ್ಟಲಾಗಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಂಡು ಮುಂದಾಗುವ ಅನಾಹುತ ತಡೆಯುವುದು ಸೂಕ್ತ.

Related Posts

Don't Miss it !