ಸಿಡಿ ವಿಚಾರದಲ್ಲಿ ಸತ್ಯ ಬಿಚ್ಚಿಟು ಬಂಧನ ಆಗ್ತಾರಾ ರಮೇಶ್..?

ಕರ್ನಾಟಕದಲ್ಲಿ ಸಿ.ಡಿ ಬಿಡುಗಡೆ ಆಗುವುದು ಅಚ್ಚರಿಯೇನಲ್ಲ. ಅದೇ ರೀತಿ ಸರ್ಕಾರ ತನಿಖೆಗೆ ಆದೇಶ ಅಂತಾ ಘೋಷಣೆ ಮಾಡಿದ ಬಳಿಕ ಮೂರ್ನಾಲ್ಕು ತಿಂಗಳಲ್ಲಿ ಆರೋಪಿ ನಿರ್ದೋಷಿ ಅಂತಾ ರಿಪೋರ್ಟ್ ಬರೋದು ಹೊಸತೇನಲ್ಲ. ಈ ಹಿಂದೆ ವಿಧಾನಸೌಧದಲ್ಲಿ ಬ್ಲ್ಯೂ ಫಿಲಂ ನೋಡಿದ್ದ ನಾಯಕರೇ ಖುಲಾಸೆ ಆಗಿದ್ದ ಘಟನೆ ಕಣ್ಣ ಮುಂದಿದೆ. ಅದೇ ರೀತಿಯಲ್ಲಿ ಸ್ನೇಹಿತನ ಮನೆಗೆ ಲಗ್ಗೆ ಹಾಕಿದವರು, ಮಹಿಳೆಯನ್ನು ಚುಂಬಿಸಿದ್ದವರು, ಕಾರ್ಯಕರ್ತೆ ಜೊತೆಗೆ ಸರಸ ಸಲ್ಲಾಪ ಆಡಿದವರು ಖುಲಾಸೆ ಆಗಿದ್ದವು. ಇದೀಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ಕೂಡ ಅದೇ ಹಾದಿಯನ್ನು ಹಿಡಿಯುತ್ತದೆ ಎನ್ನುವುದು ಬಹುತೇಕ ಖಚಿತವಾಗಿತ್ತು. ಮಾಧ್ಯಮಗಳಲ್ಲಿ ಮೊದಲು ಬರುವ ಸುದ್ದಿ ಆ ನಂತರ ಸದ್ದಿಲ್ಲದೆ ಸಪ್ಪೆಯಾಗಿ ಬಿಡುತ್ತದೆ ಎಂದೇ ಬಹುತೇಕರು ಭಾವಿಸಿದ್ದರು. ಎಸ್‍ಐಟಿ ತನಿಖೆಯೂ ಅದೇ ಹಾದಿಯಲ್ಲಿ ಸಾಗುವಂತೆ ಕೇವಲ ಸಿ.ಡಿ ಮಾಡಿದವರು ಯಾರು..? ಈ ಸಿ.ಡಿ ಬಿಡುಗಡೆ ಹಿಂದೆ ಯಾರಿದ್ದಾರೆ..? ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಹನಿಟ್ರ್ಯಾಪ್ ಮಾಡಿದ್ದಾರಾ ಎನ್ನುವ ಬಗ್ಗೆಯಷ್ಟೇ ತನಿಖೆ ನಡೆದಿತ್ತು.

ರಮೇಶ್ ಜಾರಕಿಹೊಳಿ ಹೇಳಿದ ಸತ್ಯವೇನು..?

ಸಿ.ಡಿ ಬಿಡುಗಡೆ ಆದ ವೇಳೆಯಲ್ಲಿ ಆ ದೃಶ್ಯದಲ್ಲಿ ಇರುವುದು ನಾನಲ್ಲ. ಆಕೆ ಯಾರೂ ಅಂತಾನೇ ಗೊತ್ತಿಲ್ಲ. ಗ್ರಾಫಿಕ್ಸ್ ವಿಡಿಯೋ ಮಾಡಿ ನನ್ನನ್ನು ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ಮಹಾನಾಯಕ ಒಬ್ಬರು ಇದ್ದಾರೆ. ಷಡ್ಯಂತ್ರ ಮಾಡಿದವರಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ ಎಂದು ಗುಡುಗಿದ್ರು. ಆದ್ರೆ ಇದೀಗ ರಮೇಶ್ ಜಾರಕಿಹೊಳಿ ಆ ವಿಡಿಯೋದಲ್ಲಿ ಇರೋದು ನಾನೇ. ಆ ಯುವತಿ ಯಾವುದೋ ಒಂದು ಪ್ರೊಜೆಕ್ಟ್ ವಿಚಾರವಾಗಿ ಚರ್ಚೆ ಮಾಡಲು ಬಂದಿದ್ದಾಗ ನನಗೆ ಪರಿಚಯವಾಗಿದ್ದಳು. ನಮ್ಮಿಬ್ಬರದ್ದು ಸಮ್ಮತಿ ಮೇರೆಗೆ ನಡೆದಿರುವ ಲೈಂಗಿಕ ಸಂಪರ್ಕ ಎಂದಿದ್ದಾರೆ. ಜೊತೆಗೆ ಆ ವಿಡಿಯೋವನ್ನು ಆಕೆ ಯಾಕೆ ಮಾಡಿದಳು, ಯಾವಾಗ ಮಾಡಿದಳು ಅನ್ನೋದು ಗೊತ್ತಿಲ್ಲ ಎಂದು ತನಿಖಾಧಿಕಾರಿ ಎದುರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದೆಲ್ಲವೂ ಸತ್ಯವೇ ಇರಬಹುದು. ಆದರೆ ಓರ್ವ ಮಾಜಿ ಸಚಿವ ಸತ್ಯವನ್ನು ಹೇಳಿ ಜೈಲಿಗೆ ಹೋಗುವ ಸಂದರ್ಭ ತಂದುಕೊಂಡರೇ ಎನಿಸುತ್ತಿದೆ.

ಸತ್ಯ ಹೇಳಿದ ಮೇಲೆ ಜೈಲುಪಾಲು ಹೇಗೆ..?

ಸತ್ಯ ಹೇಳಿರುವ ಅಂಶಗಳೇ ಮಾಜಿ ಸಚಿವರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳು ಕಾಣಿಸುತ್ತಿವೆ. ಆ ಯುವತಿ ಪ್ರೊಜೆಕ್ಟ್ ವಿಚಾರವಾಗಿ ಚರ್ಚೆ ಮಾಡಲು ಬಂದಿದ್ದಾಗ ಪರಿಚಯ ಆದಳು ಎಂದಿದ್ದಾರೆ. ಅಂದರೆ ಓರ್ವ ಸಚಿವನಾಗಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ತನ್ನ ಕಾಮತೃಷೆಗೆ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಗುತ್ತದೆ. ಅಧಿಕಾರದಲ್ಲಿ ಇದ್ದ ಓರ್ವ ಸಚಿವ ಯಾವೋದೋ ಒಂದು ಪ್ರೋಜೆಕ್ಟ್ ಆಸೆ ತೋರಿಸಿ ಲೈಂಗಿಕ ಕ್ರಿಯೆ ಮಾಡುವುದು ಅಪರಾಧವಾಗುತ್ತೆ. ಒಂದು ವೇಳೆ ಯಾವುದಾದರೂ ಪ್ರೊಜೆಕ್ಟ್ ಕೊಟ್ಟು ಆಕೆಯನ್ನು ಕಾಮತೃಷೆಗೆ ಬಳಸಿಕೊಂಡಿದ್ದರೆ ಲಂಚದ ರೂಪದಲ್ಲಿ ಯುವತಿಯ ಶೀಲ ಪಡೆದ ಆರೋಪಕ್ಕೆ ಗುರಿ ಆಗಬೇಕಾಗುತ್ತದೆ. ಪ್ರೊಜೆಕ್ಟ್ ಕೊಟ್ಟಿರದಿದ್ದರೆ ವಂಚನೆ ಕೇಸ್ ಮೇಲೆ ರಮೇಶ್ ಜಾರಕಿಹೊಳಿ ಬಂಧನ ಮಾಡಬೇಕಾಗುತ್ತದೆ. ಮದುವೆ ಆಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗದಿದ್ದರೆ ರೇಪ್ ಕೇಸ್ ಆಗುತ್ತದೆ. ಆದರೆ ಕೆಲಸ ಮಾಡಿಕೊಡುವುದಾಗಿ ಆಸೆ ತೋರಿಸಿ ಮಂಚದಾಟ ಆಡಿದರೆ ಅತ್ಯಾಚಾರ ಆಗುವುದಿಲ್ಲವೇ..?

ವೀಡಿಯೋ ಯಾಕೆ ಮಾಡಿದ್ರು ಅನ್ನೋದು ಅನವಶ್ಯಕ..!

ಯಾವುದೇ ಒಂದು ಕೆಲಸಕ್ಕೆ ಲಂಚದ ಬೇಡಿಕೆ ಇಟ್ಟ ಅಧಿಕಾರಿಯದ್ದು ಅಪರಾಧ. ಜೊತೆಗೆ ಲಂಚ ಕೊಟ್ಟ ನಾಗರಿಕನದ್ದೂ ಅಷ್ಟೇ ಪಾಲು ಇರುತ್ತದೆ ಎನ್ನುವುದು ಸತ್ಯ, ಕಾನೂನು ಪ್ರಕಾರ ಇಬ್ಬರೂ ತಪ್ಪಿತಸ್ಥರೆ. ಆದರೆ ಒಂದು ವೇಳೆ ಲಂಚ ಕೊಡುವ ದೃಶ್ಯವನ್ನು ಸೆರೆ ಹಿಡಿದು ಬಳಿಕ ಲಂಚ ಸ್ವೀಕಾರ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಒಪ್ಪಿಸಿದರೆ ಲಂಚ ಪಡೆದವ ಮಾತ್ರ ಸಿಕ್ಕಿಹಾಕಿಕೊಳ್ಳುತ್ತಾನೆ. ಅದೇ ರೀತಿ ಯುವತಿ ಪ್ರೊಜೆಕ್ಟ್ ವಿಚಾರವಾಗಿ ಚರ್ಚೆ ಮಾಡಲು ಬಂದಾಗ ರಮೇಶ್ ಜಾರಕಿಹೊಳಿ ಯುವತಿಯನ್ನು ಪುಸಲಾಯಿಸಿದರೋ..? ಅಥವಾ ಯುವತಿಯ ಪ್ರೊಜೆಕ್ಟ್ ಮಾಡಿಕೊಟ್ಟು ಲಂಚದ ಬದಲು ಮಂಚಕ್ಕೆ ಕರೆಸಿದರೋ ಎನ್ನುವ ಬಗ್ಗೆ ತನಿಖೆ ಆಗಬೇಕಿದೆ. ಅಥವಾ ಮಂಚದಲ್ಲಿ ಸರಸ ಸಲ್ಲಾಪ ಆಡಿರುವುದು ಎಲ್ಲರಿಗೂ ಗೊತ್ತಾಗಿದೆ. ಆದರೂ ಕೆಲಸ ಮಾಡಿಕೊಟ್ಟಿಲ್ಲ ಅಂದರೆ ವಂಚನೆ ಕೇಸ್ ಕೂಡ ಬೀಳಲಿದೆ.

ಅತ್ತ ಹುಲಿ.. ಇತ್ತ ಧರಿ.. ಎತ್ತ ಪೋಯ..?

ಆ ಕಡೆ ಹೋದರೆ ಹುಲಿ, ಈ ಕಡೆ ಹೋದರೆ ನದಿ ಎನ್ನುವ ಪರಿಸ್ಥಿತಿಗೆ ರಮೇಶ್ ಜಾರಕಿಹೊಳಿ ಸಿಲುಕಿದ್ದಾರೆ. ಈಗ ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವ ಕಾರಣ ತಾತ್ಕಾಲಿಕವಾಗಿ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ. ಕೋರ್ಟ್ ಕಣ್ಗಾವಲಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಸ್ವತಃ ಗೃಹ ಸಚಿವರು ಹೇಳಿದ್ದಾರೆ. ಇತ್ತ ರೇಪಿಸ್ಟ್ ರಮೇಶ್ ಜಾರಕಿಹೊಳಿಯನ್ನು ಬಂಧಿಸಿ ಎಂದು ಕಾಂಗ್ರೆಸ್ ಕತ್ತಿ ಮಸೆಯುತ್ತಿದೆ. ಕೋರ್ಟ್‍ಗೆ ಒಂದು ಕಾನೂನು ಇದ್ದರೆ ಪೊಲೀಸರ ಬಳಿ ತಪ್ಪಿತಸ್ಥನನ್ನು ನಿರಪರಾಧಿ ಮಾಡಲು ನೂರೆಂಟು ಹಾದಿಗಳು ಇರುತ್ತವೆ. ಇದೀಗ ರಮೇಶ್ ಜಾರಕಿಹೊಳಿಯನ್ನು ಹೇಗೆ ಪಾರು ಮಾಡುತ್ತಾರೆ ಎನ್ನುವುದೇ ಕೌತುಕದ ವಿಚಾರ. ಆದ್ರೆ ಎಲ್ಲಾ ಆಯಾಮಗಳನ್ನು ಕೋರ್ಟ್ ಗಮನಿಸಿದರೆ ಬಂಧನ ಆಗೋದು ಕೂಡ ಕಟ್ಟಿಟ್ಟ ಬುತ್ತಿ.

Related Posts

Don't Miss it !