ಸಿದ್ದರಾಮಯ್ಯ ಭೇಟಿ ಮಾಡಿದ ಜೆಡಿಎಸ್ ಶಾಸಕ..! ಪಕ್ಷ ಬಿಡುವ ಬಗ್ಗೆ ಗುಸುಗುಸು..!

ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಆರಂಭವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಪಕ್ಷಾಂತರ ಪರ್ವದ ಬಗ್ಗೆ ರಾಜಕಾರಣದಲ್ಲಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಕೂಡ ಹಲವಾರು ಜನರು ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ ಎಂದಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕರ ಜೊತೆಗೆ ಜೆಡಿಎಸ್​ನ ಕೋಲಾರ ಶಾಸಕ ಶ್ರೀನಿವಾಸಗೌಡ, ಗುಬ್ಬಿ ಶಾಸಕ ಶ್ರೀನಿವಾಸ್​, ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡ ಚರ್ಚೆ ನಡೆಸಿದ್ದು, ಕಾಂಗ್ರೆಸ್​ ಸೇರುವುದು ಖಚಿತವಾಗಿದೆ. ಇದರ ಬೆನ್ನಲ್ಲೇ ಜೆಡಿಎಸ್‌ನ ಮೇಲುಕೋಟೆ ಶಾಸಕ ಸಿ.ಎಸ್ ಪುಟ್ಟರಾಜು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.‌

ಬೆಂಗಳೂರು ನಿವಾಸದಲ್ಲಿ ಜಮೀರ್ ಜೊತೆಗೆ ಭೇಟಿ..!

ಒಂದು ಕಾಲದಲ್ಲಿ ಕುಮಾರಸ್ವಾಮಿ ಖಾಸ ದೋಸ್ತ್, ಪರಮಾಪ್ತ ಎಂದೇ ಖ್ಯಾತಿ ಪಡೆದಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಜೊತೆಗೆ ಸಿ.ಎಸ್ ಪುಟ್ಟರಾಜು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಕುಮಾರಸ್ವಾಮಿ ಆಪ್ತಬಳಗ ಪಕ್ಷ ಬಿಟ್ಟುಹೋದ ಬಳಿಕ ಕುಮಾರಸ್ವಾಮಿ ಶಕ್ತಿ ಕುಂದಿಸುವ ಉದ್ದೇಶದಿಂದ ರಾಜಕೀಯ ತಂತ್ರಗಾರಿಕೆ ಮಾಡುತ್ತಿರುವುದು ಗೊತ್ತೇ ಇದೆ. ಅದರಲ್ಲೂ ಮಂಡ್ಯದ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿ ಪ್ರಬಲ ಪಕ್ಷ ಎನ್ನುವ ಹೆಗ್ಗಳಿಕೆ ಪಡೆದಿರುವ ಮಂಡ್ಯದಲ್ಲೇ ಜೆಡಿಎಸ್ ಮಟ್ಟ ಹಾಕಬೇಕು ಎನ್ನುವ ಯೋಜನೆ ಕೂಡ ಸಿದ್ಧವಾಗ್ತಿದೆ. ಜೆಡಿಎಸ್​ ಶಕ್ತಿ ಕುಂದಿಸಲು ಇರುವ ಎಲ್ಲಾ ಆಯ್ಕೆಗಳನ್ನು ಕಾಂಗ್ರೆಸ್​​ ಮುಕ್ತವಾಗಿ ಇರಿಸಿದೆ ಎನ್ನಲಾಗ್ತಿದೆ. ಇದೇ ಕಾರಣದಿಂದಲೇ ಸಿದ್ದರಾಮಯ್ಯ ಅವರ ಜೊತೆಗೆ ಸಿ.ಎಸ್​ ಪುಟ್ಟರಾಜು ಅವರ ಭೇಟಿ ನಡೆದಿದ್ಯಾ..!? ಎನ್ನುವ ಚರ್ಚೆಗಳು ಶುರುವಾಗಿವೆ.

ಇದನ್ನೂ ಓದಿ: ಸುಂದರ ಸಂಸಾರವನ್ನು ಸುಟ್ಟು ಹಾಕಿತೇ ಐಶಾರಾಮಿ ಬದುಕಿನ ಕನಸು..!?

ನಾನು ಪಕ್ಷ ಬಿಡೋದಿಲ್ಲ ಎಂದು ಶಾಸಕರ ಸ್ಪಷ್ಟನೆ..!!

ರಾತ್ರಿ 11 ಗಂಟೆ ವೇಳೆಗೆ ಸಿದ್ದರಾಮಯ್ಯ ಅವರನ್ನು ಸಿ.ಎಸ್ ಪುಟ್ಟರಾಜು ಭೇಟಿ ಆಗಿದ್ದಾರೆ ಎನ್ನುವ ವಿಚಾರ The Public Spot ಗಮನಕ್ಕೆ ಬಂದಿತ್ತು. ಕೂಡಲೇ ಶಾಸಕರನ್ನು ಸಂಪರ್ಕ ಮಾಡಿ ಮಾಹಿತಿ ಪಡೆಯುವ ಪ್ರಯತ್ನ ಮಾಡಿದ್ದೆವು. ಅಷ್ಟರಲ್ಲಿ ದೃಶ್ಯ ಮಾಧ್ಯಮದ ಜೊತೆಗೆ ಮಾತನಾಡುತ್ತಿದ್ದ ಮೇಲುಕೋಟೆ ಶಾಸಕ ಸಿ.ಎಸ್​ ಪುಟ್ಟರಾಜು, ನಾನು ಯಾವುದೇ ಕಾರಣಕ್ಕೂ ಜೆಡಿಎಸ್​ ಪಕ್ಷ ಬಿಡುವುದಿಲ್ಲ. ಕುಮಾರಸ್ವಾಮಿ ಅವರಿಂದ ಅಂತರವನ್ನೂ ಕಾಯ್ದುಕೊಂಡಿಲ್ಲ. ಜೆಡಿಎಸ್​ ಪಕ್ಷದ ಕಚೇರಿಯಲ್ಲಿ ಕುಮಾರಸ್ವಾಮಿ ಅವರ ಜೊತೆಯಲ್ಲೇ ದಿನಪೂರ್ತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೆರಳುತ್ತಿರುವ ಬಗ್ಗೆ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿಯೇ ಹೋಗಿದ್ದೆ. ಕ್ಷೇತ್ರದ ಚಿಕ್ಕಮಲ್ಲಿಗೆರೆಯಲ್ಲಿ ಸಿದ್ದರಾಮೇಶ್ವರ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಲು ತೆರಳಿದ್ದೆ ಅಷ್ಟೆ ಎಂದಿದ್ದಾರೆ. ಆ ಬಳಿಕ ಮೊಬೈಲ್​ ಕೂಡ ಸ್ವಿಚ್​ ಆಫ್​​ ಆಗಿತ್ತು. ಆದರೆ ಇದು ಎಷ್ಟು ಸತ್ಯ ಎನ್ನುವುದು ಕುಮಾರಸ್ವಾಮಿ ಅವರು ನೀಡುವ ಸ್ಪಷ್ಟನೆ ಮೇಲೆ ನಿಂತಿದೆ.

ಇದನ್ನೂ ಓದಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್​ಗೆ ಸರ್ಕಾರದಿಂದಲೇ ಅಗೌರವ, ಪ್ರತಿಭಟನೆ..!

ಮಂಡ್ಯದಲ್ಲಿ ಜೆಡಿಎಸ್​​ ಬುಡ ಕತ್ತರಿಸಲು ಕಾಂಗ್ರೆಸ್​ ಪ್ಲ್ಯಾನ್​..!

ಜೆಡಿಎಸ್​​ ಅತ್ಯಂತ ಪ್ರಬಲ ಆಗಿರುವ ಜಿಲ್ಲೆಗಳ ಪಟ್ಟಿಯಲ್ಲಿ ಮೊದಲಿಗೆ ಕಾಣುವುದು ಮಂಡ್ಯ ಜಿಲ್ಲೆ, ಆ ಬಳಿಕ ಹಾಸನ, ರಾಮನಗರ, ಮೈಸೂರು ಎನ್ನಬಹುದು. ಕಳೆದ ಬಾರಿ ಏಳೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿ ಜೆಡಿಎಸ್​ ಅಬ್ಬರಿಸಿತ್ತು. ಇದು ಕಾಂಗ್ರೆಸ್​ ಕಣ್ಣು ಕೆಂಪಾಗುವಂತೆ ಮಾಡಿದೆ. ಅದರಲ್ಲೂ ಕುಮಾರಸ್ವಾಮಿ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಚಲುವರಾಯಸ್ವಾಮಿ ಅವರನ್ನು ಕೆರಳಿಸಿದೆ. ಬೂತ್​ ಮಟ್ಟದಲ್ಲಿ ಕಾಂಗ್ರೆಸ್​ ಪಕ್ಷ ಸಂಘಟನೆ ಮಾಡುತ್ತಿರುವ ಚಲುವರಾಯಸ್ವಾಮಿಗೆ ಮಳವಳ್ಳಿಯ ನರೇಂದ್ರಸ್ವಾಮಿ ಉತ್ತಮ ಸಾಥ್​​ ನೀಡಿದ್ದಾರೆ. ಉಳಿದ ಕಡೆ ಜೆಡಿಎಸ್​ ಶಾಸಕರನ್ನೇ ಸೆಳೆಯುವುದು, ಅಥವಾ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೆಡಿಎಸ್​​ ಬಲ ಮುರಿಯುವುದು ಕಾಂಗ್ರೆಸ್​ನ ಲೆಕ್ಕಾಚಾರ. ಇದೀಗ ಮೇಲುಕೋಟೆ ಕ್ಷೇತ್ರದಿಂದಲೇ ಆಪರೇಷನ್​ ಹಸ್ತ ಶುರುವಾಗಿದ್ಯಾ..? ಗೊತ್ತಿಲ್ಲ. ಇಲ್ಲೀವರೆಗೂ ಪಕ್ಷಾಂತರ ಮಾಡಿರುವ ಯಾವುದೇ ನಾಯಕರು ಮೊದಲಿಗೆ ಹೇಳುವುದು ಇದೇ ರೀತಿ ಎನ್ನುವುದೂ ಕೂಡ ಸತ್ಯ.

ಕಮೆಂಟ್ ಮಾಡಿ ನಿಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರಾದ ನೀವೇ ನಮ್ಮ ಮಾರ್ಗದರ್ಶಕರು

Related Posts

Don't Miss it !