ಪಕ್ಷಾಂತರದ ಮಾತಿಗೆ ಗುನ್ನಾ ಹೊಡೆದ ಮಾತಿನ ಮಲ್ಲ ಶಿವಲಿಂಗೇಗೌಡ..!

ಹಾಸನದ ಅರಸೀಕೆರೆ ಕ್ಷೇತ್ರದ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಮಾತಿನಲ್ಲೇ ಚಾಟಿ ಬೀಸುವ ಕಲೆ ಕರಗತ ಮಾಡಿಕೊಂಡಿರುವ ಶಾಸಕರಲ್ಲಿ ಒಬ್ಬರು. ಸದನದಲ್ಲಿ ನೇರವಾದ ಮಾತುಗಳಿಗೆ ಶಿವಲಿಂಗೇಗೌಡ ಹೆಸರುವಾಸಿ. ಇತ್ತೀಚಿಗೆ ಮುಕ್ತಾಯವಾದ ವಿಧಾನಸಭಾ ಅಧಿವೇಶದಲ್ಲಿ ಮಾತನಾಡಿದ್ದ ಶಿವಲಿಂಗೇಗೌಡ, ಸಿದ್ದರಾಮಯ್ಯ ಸರ್ಕಾರದಲ್ಲಿ ನನ್ನ ಕ್ಷೇತ್ರಕ್ಕೆ ಕೊಟ್ಟ ಅಭಿವೃದ್ಧಿ ಕೆಲಸಗಳಿಂದ ನಾನು ಮತ್ತೆ ಎರಡು ಬಾರಿ ಶಾಸಕನಾಗಿದ್ದೇನೆ ಎಂದು ಹಾಡಿ ಹೊಗಳಿದ್ದರು. ರಾಜಕೀಯದಲ್ಲಿ ಬೇರೆ ಪಕ್ಷದ ನಾಯಕರನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾರೆ ಎಂದರೆ ದಾರಿ ಹುಡುಕುತ್ತಿದ್ದಾರೆ ಎಂದೇ ಅರ್ಥ. ಪರಿಸ್ಥಿತಿ ಹೀಗಿರುವಾಗ ಶಿವಲಿಂಗೇಗೌಡರು ತೆನೆ ಹೊರೆಯನ್ನು ಇಳಿಸಿ ಕಾಂಗ್ರೆಸ್​ ಕಡೆಗೆ ಹೆಜ್ಜೆ ಹಾಕುವ ದಿನಗಳು ಸನಿಹ ಆಗಿವೆ ಎನ್ನುವ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಗೌಡರು ಮಾತ್ರ ಗುಟರು ಹಾಕಿದ್ದಾರೆ.

ಕಾಂಗ್ರೆಸ್​ ಸೇರುವುದು ಕೇವಲ ಮಾಧ್ಯಮಗಳ ಊಹೆ..!

ಹಾಸನದಲ್ಲಿ ಮಾತನಾಡಿರುವ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ, ನಾನು ಕಾಂಗ್ರೆಸ್​ಗೆ ಹೋಗುತ್ತೇನೆ ಎನ್ನುವುದು ಮಾಧ್ಯಮಗಳ ಸೃಷ್ಟಿ ಅಷ್ಟೇ. ಅಲ್ಲಿಗೆ ಹೋಗುತ್ತಾರೆ, ಇಲ್ಲಿಗೆ ಹೋಗುತ್ತಾರೆ ಎಂದು ನೀವೇ ಸೃಷ್ಟಿ ಮಾಡಿಕೊಂಡರೆ ನಾವು ಏನು ಮಾಡಕಾಗುತ್ತೆ ಎಂದು ಪ್ರಶ್ನಿಸಿದ್ದಾರೆ. ಮಾಧ್ಯಮದವರು ಒಳ್ಳೆಯದನ್ನು ಮಾಡುತ್ತೀರಿ, ಕೆಟ್ಟದ್ದನ್ನು ಮಾಡುತ್ತೀರಿ ಎಂದು ಛೇಡಿಸಿರುವ ಶಿವಲಿಂಗೇಗೌಡ, ನಾನು ಪಕ್ಷ ಬಿಡುವ ಸಂದರ್ಭ ಒದಗಿ ಬಂದಿಲ್ಲ, ಸದನದಲ್ಲಿ ಚರ್ಚೆಯಾದಾಗ ಸಿದ್ದರಾಮಯ್ಯ ಮಾಡಿಕೊಟ್ಟ ಕೆಲಸದ ಬಗ್ಗೆ ನೆನಪು ಮಾಡಿಕೊಂಡಿದ್ದೇನೆ. ಅದರಿಂದ ನನ್ನ ಗೆಲುವಿಗೆ ಸಹಾಯವಾಯಿತೆಂದು ಹೇಳಿಕೊಂಡಿದ್ದೇನೆ ಅಷ್ಟೆ. ನಾನು ಕಾಂಗ್ರೆಸ್​ಗೆ ಹೋಗುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ನಾನು ಜೆಡಿಎಸ್​ನಿಂದ ಗೆದ್ದು ಬೇರೆ ಪಕ್ಷಕ್ಕೆ ಹೋಗೋಕೆ ಆಗುತ್ತಾ..? ದಯಮಾಡಿ ಇದನ್ನೆಲ್ಲಾ ನೀವು ಹುಟ್ಟು ಹಾಕಬೇಡಿ ಎಂದಿದ್ದಾರೆ. ಸಿದ್ದರಾಮಯ್ಯ ಅವರ ಸಹಾಯದಿಂದ ನನ್ನ ಕ್ಷೇತ್ರದ 500 ಹಳ್ಳಿಗೆ ನೀರು ಬಂದಿದೆ. ಅದನ್ನು ನೆನಪಿಸಿಕೊಂಡಿದ್ದೇನೆ ಅಷ್ಟೆ ಎಂದಿದ್ದಾರೆ.

Read this also;

ಬಿಜೆಪಿಗೆ ಹೋಗ್ತೀನಿ ಎನ್ನುವರಿಗೆ ತಲೆ ಕೆಟ್ಟಿದೆ..!

ಕಾಂಗ್ರೆಸ್​ ಅಷ್ಟೇ ಅಲ್ಲ, ಕೆಲವರು ನಾನು ಬಿಜೆಪಿಗೆ ಹೋಗುತ್ತೇನೆ ಎನ್ನುತ್ತಿದ್ದಾರೆ. ಹೀಗೆ ಬಿಜೆಪಿಗೆ ಹೋಗ್ತೀನಿ ಎನ್ನುವವರಿಗೆ ತಲೆ ಕೆಟ್ಟಿದೆ ಎಂದು ಖಾರವಾಗಿ ಉತ್ತರಿಸಿದ್ದಾರೆ. ಇನ್ನೂ ರಾಜ್ಯ ಸರ್ಕಾರದ ಆಡಳಿತ ಒಂದೂವರೆ ವರ್ಷ ಬಾಕಿ ಇದೆ. ಈ ದೇಶದ ರಾಜಕೀಯ ಪರಿಸ್ಥಿತಿ ಬಗ್ಗೆ ಯಾರಾದರೂ ಚರ್ಚೆ ಮಾಡಿದ್ದಾರ..? ಯಾರು ಯಾರಿಗೆ ತಲೆ ಕೆಟ್ಟಿದೆ ಯಾರಿಗೆ ಗೊತ್ತು..? ಪಕ್ಷಾಂತರದ ಹೇಳಿಕೆ ಕೊಡುವವರಿಗೆಲ್ಲಾ ತಲೆ ಕೆಟ್ಟಿದೆ ಎಂದಿದ್ದಾರೆ. ಯಾವುದೋ ಮೂಲದಿಂದ ತಿಳಿದು ನೀವೇ ಹೇಳುತ್ತಿದ್ದೀರಿ. ಯಾರು ಯಾರಿಗೆ ಯಾವ ಮೂಲದಿಂದ ತಿಳಿಯುತ್ತಿದೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಬಸವರಾಜ ಬೊಮ್ಮಯಿ ಅವರು ಕಣಕಟ್ಟೆ ಹೋಬಳಿಯ ಆರು ಕೆರೆಗೆ ನೀರು ತುಂಬಿಸಲು ಸಹಕಾರ ಕೊಟ್ಟರು, ಅವರಿಗೆ ಚಿನ್ನದ ಉಂಗುರ ತೊಡಿಸಿದ್ದೇನೆ. ಇದೇ ಕಾರಣದಿಂದ ನಾನು ಬಿಜೆಪಿಗೆ ಹೋಗ್ತೀನಿ ಅಂಥಾ ಅರ್ಥನಾ..? ಕೆಲಸ ಮಾಡಿಕೊಟ್ಟವರಿಗೆ ಕೃತಜ್ಞತೆಯನ್ನು ಯಾವ್ಯಾವುದೋ ರೂಪದಲ್ಲಿ ಸಲ್ಲಿಸುತ್ತೇವೆ ಅಷ್ಟೆ ಎಂದಿದ್ದಾರೆ.

Read this also;

ಬಿಡದಿಯಲ್ಲಿ ಗೌಡರ ಸಭೆಯಲ್ಲಿ ತಂತ್ರಗಾರಿಕೆ..!

ವಿಧಾನಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇರುವಾಗಲೇ ಜೆಡಿಎಸ್​, ಕಾಂಗ್ರೆಸ್​, ಬಿಜೆಪಿ ಪಕ್ಷಗಳೂ ಪಕ್ಷವನ್ನು ಗೆಲ್ಲಿಸಲು ಬೇಕಾದ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ನಾಳೆ ದೇವೇಗೌಡರು ಬಿಡದಿಯಲ್ಲಿ ಜೆಡಿಎಸ್​ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಯಾರೆಲ್ಲಾ ಭಾಗಿಯಾಗ್ತಾರೆ ಎನ್ನುವುದರ ಮೇಲೆ ಪಕ್ಷಾಂತರ ಮಾಡುವ ನಾಯಕರು ಯಾರು ಎನ್ನುವುದು ಬಹಿರಂಗ ಆಗಲಿದೆ. ಶಿವಲಿಂಗೇಗೌಡರು ನಾನು ಭಾಗವಹಿಸ್ತೇನೆ ಎಂದಿದ್ದಾರೆ. ಇನ್ನುಳಿದ ಯಾರೆಲ್ಲಾ ಬರ್ತಾರೆ ಎನ್ನುವುದು ನಾಳಿನ ಸಭೆಯ ಬಳಿಕ ಗೊತ್ತಾಗಲಿದೆ. ಪಕ್ಷದ ಆಹ್ವಾನ ಒಪ್ಪಿಕೊಂಡು ಸಭೆಗೆ ಬರುವ ನಾಯಕರು ಪಕ್ಷದಲ್ಲೇ ಉಳಿಯಲಿದ್ದಾರೆ ಎನ್ನುವುದು ಖಚಿತವಾದಂತೆ. ಇಲ್ಲದಿದ್ದರೆ ಪಕ್ಷದಿಂದ ಒಂದು ಕಾಲು ಮಾತ್ರವಲ್ಲ ಸಂಪೂರ್ಣವಾಗಿ ಹೊರಗೆ ಹೋಗಲು ಸಿದ್ಧರಾಗಿದ್ದಾರೆ. ಕ್ಷೇತ್ರದಲ್ಲಿ ಮತ್ತೋರ್ವ ನಾಯಕನನ್ನು ಹುಟ್ಟು ಹಾಕುವ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ ಆಗಲಿದೆ.

Related Posts

Don't Miss it !