ಜೆಡಿಎಸ್​ ಜೊತೆ ಪಾಲಿಕೆ ದೋಸ್ತಿಗೆ ಕಾಂಗ್ರೆಸ್​ ಸಿದ್ಧ..! ಸುಳಿವು ಕೊಟ್ಟ ಡಿಕೆಶಿ..

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕ ಸ್ಥಾನಗಳನ್ನು ಗಳಿಸಿದೆ. ಎರಡನೇ ಸ್ಥಾನದಲ್ಲಿ ಬಿಜೆಪಿ ಇದೆ. ಕೇವಲ 4 ಸ್ಥಾನಗಳನ್ನು ಗಳಿಸಿರುವ ಜೆಡಿಎಸ್​ 3ನೇ ಸ್ಥಾನ ಪಡೆದಿದೆ. ಇನ್ನೊಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್​ ಅಥವಾ ಬಿಜೆಪಿ ಅಧಿಕಾರ ಹಿಡಿಯಬೇಕು ಎಂದರೆ ಜೆಡಿಎಸ್​​ ಬೆಂಬಲ ಬೇಕೇ ಬೇಕು. ಈಗಾಗಿ ತನ್ನ ಪಕ್ಷದ ಸದಸ್ಯನನ್ನೇ ಮೇಯರ್​​ ಮಾಡುವಂತೆ ಜೆಡಿಎಸ್​ ಪಟ್ಟು ಹಿಡಿದಿದೆ. ಬಿಜೆಪಿ ಮೇಯರ್​​ ಸ್ಥಾನ ಬಿಟ್ಟುಕೊಡಲು ಹಿಂದೆ ಮುಂದೆ ನೋಡುತ್ತಿದೆ. ಆದ್ರೆ ಕಾಂಗ್ರೆಸ್​ ಮೇಯರ್​​ ಸ್ಥಾನ ಬಿಟ್ಟುಕೊಟ್ಟರೂ ಸರಿಯೇ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಲೆಕ್ಕಾಚಾರ ಮಾಡುತ್ತಿದೆ ಎನ್ನುವ ಸಣ್ಣ ಸುಳಿವು ಹೊರ ಬಿದ್ದಿದೆ.

ಕುಮಾರಸ್ವಾಮಿ ಜೊತೆಗೆ ಆರ್​ ಅಶೋಕ್ ಚರ್ಚೆ..!

ಬಿಡದಿ ಬಳಿಯ ಕೇತಗಾನಹಳ್ಳಿ ನಿವಾಸಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವ ಆರ್​ ಅಶೋಕ್, ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೆ ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಕಲಬುರಗಿ ಮೇಯರ್​ ಸ್ಥಾನ ಬಿಟ್ಟುಕೊಟ್ಟರೆ ಹೊಂದಾಣಿಕೆಗೆ ಸಿದ್ಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಬಿಜೆಪಿ ಮೇಯರ್​ ಸ್ಥಾನ ಬಿಟ್ಟುಕೊಡುವ ಮನಸ್ಥಿತಿಯಲ್ಲಿ ಇಲ್ಲ ಎನ್ನುವುದು ಗೊತ್ತಾಗ್ತಿದೆ. ಇನ್ನೊಂದು ಕಡೆಯಿಂದ ಕಾಂಗ್ರೆಸ್​ ಕೂಡ ಅಧಿಕಾರ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿದ್ದು, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ಅವರಿಗೂ ಜೆಡಿಎಸ್​ ಅದೇ ಉತ್ತರ ಕೊಟ್ಟಿದ್ದು, ಮೇಯರ್​​ ಸ್ಥಾನ ಬಿಟ್ಟುಕೊಡುವುದಾದರೆ ಮೈತ್ರಿಗೆ ಸಿದ್ಧ ಎನ್ನಲಾಗಿದೆ. ಈ ನಡುವೆ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಚುನಾವಣೆ ಘೋಷಣೆ ಆಗಲಿ, ಆಮೇಲೆ ನೋಡಿ..!

ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿರುವ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​,​ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗುಟ್ಟು ಬಿಟ್ಟುಕೊಟ್ಟಿಲ್ಲ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನ ಗಳಿಸಿದೆ. 55 ಸ್ಥಾನಗಳ ಪೈಕಿ 27 ಸ್ಥಾನ ಗಳಿಸಿದೆ. ಆದರೂ ಹಿಂಬಾಗಿಲಿನಿಂದ ಅಧಿಕಾರ ಗದ್ದುಗೆ ಏರಲು ಬಿಜೆಪಿ ಯತ್ನಿಸುತ್ತಿದೆ. ಕಲಬುರ್ಗಿ ಪಾಲಿಕೆಯಲ್ಲಿ ಆಪರೇಷನ್ ಕಮಲ ನಡೆಸಲು ಬಿಜೆಪಿ ಮುಂದಾಗಿದೆ. ಈ ವಿಷಯ ನಮ್ಮ ಗಮನಕ್ಕೂ ಬಂದಿದೆ. ಅವರು ಏನು ಪ್ರಯತ್ನಗಳನ್ನು ಮಾಡ್ತಾರೋ ಮಾಡಲಿ. ಈಗ ನಾನೇನೂ ಮಾತನಾಡಲ್ಲ. ಆದರೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಘೋಷಣೆಯಾದ ನಂತರ ನನ್ನ ನಡೆ ಏನು ಎನ್ನುವ ಬಗ್ಗೆ ಹೇಳ್ತೇನೆ ಎನ್ನುವ ಮೂಲಕ ಡಿ.ಕೆ ಶಿವಕುಮಾರ್ ಗೌಪ್ಯತೆ ಕಾಯ್ದುಕೊಂಡಿದ್ದಾರೆ.

Read this also;

ಮೇಯರ್​ ಸ್ಥಾನ ಬಿಟ್ಟುಕೊಡಲ್ಲ – ಬಿಜೆಪಿ

ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಹಗ್ಗಜಗ್ಗಾಟದ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಕಲಬುರಗಿಯಲ್ಲಿ ಮಾತನಾಡಿದ್ದು, ಈ ಬಾರಿ ಪಾಲಿಕೆಯಲ್ಲಿ 100 ಪರ್ಸೆಂಟ್ ಬಿಜೆಪಿ ಅಭ್ಯರ್ಥಿ ಮೇಯರ್ ಆಗಲಿದ್ದಾರೆ. ಈಗಾಗಲೇ ನಾನು ಸೇರಿದಂತೆ ನಮ್ಮ ಮುಖಂಡರು ಜೆಡಿಎಸ್ ಜೊತೆ ಮಾತುಕತೆ ನಡೆಸಿದ್ದೇವೆ. ಮೇಯರ್ ಚುನಾವಣೆ ಘೋಷಣೆಯಾದ ಬಳಿಕ ಜೆಡಿಎಸ್‌ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತೇವೆ. ನಮಗೆ ಮೇಯರ್ ಸ್ಥಾನ ಬೇಕೆಂಬ ಜೆಡಿಎಸ್ ಬೇಡಿಕೆ ಬಗ್ಗೆ ಮಾತನಾಡಿ ನಾಲ್ಕು ಸ್ಥಾನ ಪಡೆದ ಜೆಡಿಎಸ್‌‌ಗೆ ಮೇಯರ್ ಸ್ಥಾನ ಬಿಟ್ಟು ಕೊಡೋದು ಕಷ್ಟದ ಕೆಲಸ. ಬಿಜೆಪಿ ಮೇಯರ್ ಸ್ಥಾನ ಪಡೆದು, ಉಳಿದ ಸ್ಥಾನಗಳನ್ನ ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ನಿರ್ಧಾರ ಮಾಡಲಾಗಿದ್ದು, ಜೆಡಿಎಸ್‌ ನಮಗೆ ಬೆಂಬಲ ಸೂಚಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.

ಮೈಸೂರು ಅಸ್ತ್ರ ಬಳಕೆಗೆ ಡಿಕೆ ಶಿವಕುಮಾರ್​ ಸಿದ್ಧ..!?

ಕೋಮುವಾದಿ ಶಕ್ತಿಗಳನ್ನ ಸೋಲಿಸಬೇಕು ಎನ್ನುವುದು ಕಾಂಗ್ರೆಸ್​ ಚಿಂತನೆ. ಇದೇ ಕಾರಣಕ್ಕಾಗಿ ಕಳೆದ ಬಾರಿ ಮೈಸೂರು ಪಾಲಿಕೆ ಮೇಯರ್​ ಚುನಾವಣೆಯಲ್ಲಿ ಕಡೇ ಗಳಿಗೆಯಲ್ಲಿ ಜೆಡಿಎಸ್​ ಬೆಂಬಲಿಸಲಾಗಿತ್ತು. ಇದೇ ಕಾರಣಕ್ಕಾಗಿ ಕಾಂಗ್ರೆಸ್​ ಶಾಸಕ ತನ್ವೀರ್​ ಸೇಠ್​​ಗೆ ನೋಟಿಸ್​ ಕೂಡ ಕೊಡಲಾಗಿತ್ತು.ಅಂತಿಮ ಘಟ್ಟದಲ್ಲಿ ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ನಾನೇ ನಿರ್ಧಾರ ತೆಗೆದುಕೊಳ್ಳಬೇಕಾಯ್ತು ಎಂದು ತನ್ವೀರ್​ ಸೇಠ್ ಬಹಿರಂಗವಾಗಿ ಹೇಳಿದ್ದರು. ಆ ಬಳಿಕ ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅಖಾಡಕ್ಕೆ ಇಳಿದ ಪರಿಣಾಮ ಕಾಂಗ್ರೆಸ್​ – ಜೆಡಿಎಸ್​ ಹೊಂದಾಣಿಕೆ ಸಾಧ್ಯವಾಗದೆ ಬಿಜೆಪಿ ಅಭ್ಯರ್ಥಿ ಮೇಯರ್​ ಆಗಿದ್ದಾರೆ. ಇದೀಗ ಕಲಬುರಗಿಯಲ್ಲೂ ಮೇಯರ್​ ಸ್ಥಾನಕ್ಕೆ ಪೈಪೋಟಿ ನಡೆಸಿ ಅಂತಿಮವಾಗಿ ಮೇಯರ್​ ಪಟ್ಟ ಸಿಗದಿದ್ದರೂ ಜೆಡಿಎಸ್​ ಗೆಲ್ಲಿಸುವ ಮೂಲಕ ಬಿಜೆಪಿಗೆ ಸಡ್ಡು ಹೊಡೆಯಬೇಕು ಎನ್ನುವುದು ಡಿ.ಕೆ ಶಿವಕುಮಾರ್​ ಲೆಕ್ಕಾಚಾರ ಎನ್ನಲಾಗ್ತಿದೆ. ಆದರೆ ಬಿಜೆಪಿ ಅಷ್ಟರೊಳಗೆ ಮೈತ್ರಿ ಮಾತುಕತೆ ಗಟ್ಟಿಯಾದರೆ ಕಾಂಗ್ರೆಸ್​ ನಿರೀಕ್ಷೆ ಕೈ ತಪ್ಪಲಿದೆ ಎನ್ನಲಾಗ್ತಿದೆ.

Related Posts

Don't Miss it !