ಕರಾವಳಿಯಲ್ಲಿ ವರುಣನ ಆರ್ಭಟ, ಶಾಲಾ ಕಾಲೇಜುಗಳಿಗೆ ರಜೆ..!

ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಭಾರೀ ಮಳೆಯಾಗಿತ್ತು. ದಕ್ಷಿಣ ಒಳನಾಡು ಸೇರಿದಂತೆ ಬಯಲು ಸೀಮೆಯಲ್ಲೂ ವರುಣನ ಆರ್ಭದಿಂದ ಕರೆ ಕಟ್ಟೆಗಳು ಭರ್ತಿ ಆಗಿದ್ದವು. ಆದರೆ ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆದರೂ ಸರಿಯಾದ ಪ್ರಮಾಣದ ಮಳೆ ಬಿದ್ದಿರಲಿಲ್ಲ. ಬೆಳೆ ಬಿತ್ತನೆ ಮಾಡುವುದಕ್ಕೆ ರೈತರು ಆಕಾಶದ ಕಡೆಗೆ ನೋಡುವಂತಾಗಿತ್ತು. ಆದರೆ ಇದೀಗ ವರುಣ ತನ್ನ ಕಾಯಕ ಶುರು ಮಾಡಿದ್ದಾನೆ. ಬೆಂಗಳೂರು ಸೇರಿದಂತೆ ಕರಾವಳಿಯಲ್ಲಿ ವರುಣ ಆರ್ಭಟ ಶುರು ಮಾಡಿದ್ದು, ಕರಾವಳಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಭಾಗದಲ್ಲಿ ಮಹಾಮಳೆಗೆ ಮೊದಲ ಬಲಿಯಾಗಿದೆ. ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.

ಎಲ್ಲೆಲ್ಲಿ ಅತಿ ಹೆಚ್ಚು ಮಳೆಯ ಮುನ್ಸೂಚನೆ ಇದೆ..!?

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ನಾಗರಿಕರು ಕಂಗಾಲಾಗಿದ್ದಾರೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಜನಜೀವನ ಅಸ್ತವಸ್ತವಾಗಿದ್ದು, ಇಂದು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನೂ ಕರಾವಳಿಯಲ್ಲಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಿದ್ದು, ಮೀನುಗಾರರು ಸಾಗರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ. ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದ್ದು, ವಿದ್ಯುತ್​ ಸಂಪರ್ಕವಿಲ್ಲದೆ ಜನರು ತತ್ತರಿಸಿದ್ದಾರೆ. ಇನ್ನು ಉತ್ತರ ಕನ್ನಡ ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು, ಇಂದಿನ ಮಳೆ ಪ್ರಮಾಣ ನೋಡಿಕೊಂಡು ರಜೆ ಬಗ್ಗೆ ನಿರ್ಧಾರ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಇದನ್ನೂ ಓದಿ: ಸಾಲು ಮರದ ತಿಮ್ಮಕ್ಕಗೆ ಇನ್ಮುಂದೆ ಸಂಪುಟ ಸಚಿವೆ ಸ್ಥಾನಮಾನ..!

ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲೂ ರಣಮಳೆ..!

ಕರಾವಳಿ ಮಾತ್ರವಲ್ಲದೆ ಉತ್ತರ ಕರ್ನಾಟಕದಲ್ಲೂ ಮಳೆ ಆರ್ಭಟ ಜೋರಾಗಿದೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತೊಂಡಿಹಾಳ ಹಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ ತೊಂಡಿಹಾಳ ಹಾಗು ಬಂಡಿಹಾಳ‌ ನಡುವಿನ ಸಂಪರ್ಕ ಸ್ಥಗಿತವಾಗಿದೆ. ನರೇಗಲ್ ಪಟ್ಟಣಕ್ಕೆ ಹೋಗುತ್ತಿದ್ದ ಶಾಲಾ ಮಕ್ಕಳ ಹಳ್ಳದ ಸಮಸ್ಯೆಯಿಂದ ಪರದಾಡುವಂತಾಗಿದೆ. ಯಲಬುರ್ಗಾದಿಂದ ಮಕ್ಕಳನ್ನು ಕರೆತಂದ ಬಸ್​, ಹಳ್ಳ ದಾಟಲಾಗದೆ ದಡದಲ್ಲೇ ನಿಂತಿದ್ದು, ಶಾಲಾ ಮಕ್ಕಳನ್ನು ಪೋಷಕರು ಟ್ರ್ಯಾಕ್ಟರ್‌ನಲ್ಲಿ ಬಂದು ಕರೆದೊಯ್ದಿದ್ದಾರೆ. . ಸೇತುವೆ ದಾಟಲು ಹೋದ ಬೈಕ್ ಸವಾರ ಯಶಸ್ಸು ಕಾಣದೆ ನೀರಿನಲ್ಲಿ ​ ಒಂದು ಬೈಕ್​ ಕೊಚ್ಚಿಹೋದ ಘಟನೆಯೂ ನಡೆದಿದೆ. ತೊಂಡಿಹಾಳ ಹಳ್ಳಕ್ಕೆ ಸೇತುವೆ ಮಾಡುವಂತೆ ಹತ್ತಾರು ಬಾರಿ ಮನವಿ ಮಾಡಿದರು ಶಾಸಕರು ಹಾಗೂ ಸಚಿವ ಹಾಲಪ್ಪ ಆಚಾರ್​ ನಮ್ಮ ಸಮಸ್ಯೆಗೆ ಕಿವಿಗೊಡುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡ ಕರಾವಳಿ ಜನತೆ..!

ಹಾಸನ, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಸಾಕಷ್ಟು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನೂ ಮಡಿಕೇರಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಬಾರಿಯೂ ಗುಡ್ಡ ಕುಸಿಯುವ ಭೀತಿ ಜಾಸ್ತಿಯಾಗಿದೆ. ಮಗಳೂರಿನ ಕೊಲ್ನಾಡು ಎಂಬಲ್ಲಿ ಮಹಾಮಳೆಗೆ 45 ವರ್ಷದ ಸುನೀಲ್​ ಎಂಬುವರು ಕೊಂಚಿಕೊಂಡು ಹೋಗಿದ್ದು, ಶವವಾಗಿ ಪತ್ತೆಯಾಗಿದ್ದಾರೆ. ಮುಲ್ಕಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದ್ದು, ಎರಡು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಸುಬ್ರಹ್ಮಣ್ಯ ಹಾಗು ಮಂಗಳೂರು ನಡುವೆ ಸಂಚರಿಸಬೇಕಿದ್ದ ಪ್ರಯಾಣಿಕರು ಮಳೆ ನಡುವೆ ರಸ್ತೆ ಮಾರ್ಗದಲ್ಲಿ ತೆರಳುವಂತಾಗಿದೆ. ಮಳೆ ಎಲ್ಲಾ ಕಡೆಯಲ್ಲೂ ಆರ್ಭಟಿಸುತ್ತಿದ್ದು, ಮುಂದಿನ ಒಂದೆರಡು ದಿನಗಳ ಕಾಲ ಇದೇ ಪರಿಸ್ಥಿತಿ ಎನ್ನುತ್ತಾರೆ ಹವಾಮಾನ ತಜ್ಞರು.

Related Posts

Don't Miss it !