ಪ್ರವಾಹ ಪರಿಸ್ಥಿತಿಯಿಂದ ರಾಜ್ಯದಲ್ಲಿ ಏನೇನಾಗಿದೆ ಗೊತ್ತಾ..?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಆಗಿ ಸಮಸ್ಯೆ ಆಗಿದೆ. ಕೆಲವು ಜಿಲ್ಲೆಗಳಲ್ಲಿ ಹೊಲಗಳಲ್ಲಿ ನಿಂತಿರುವ ನೀರು ಕ್ಲಿಯರ್ ಆಗಬೇಕು. ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಹ ಆಗಿದೆ. 463 ಗ್ರಾಮಗಳು ಹಾನಿ ಆಗಿವೆ. ಒಟ್ಟು 13 ಜನ ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದಾರೆ. ಪ್ರವಾಹದಿಂದ ಹಲವು ಕಡೆ ರಸ್ತೆಗಳು ಕಡಿತಗೊಂಡಿವೆ. ರಸ್ತೆ ನಿರ್ಮಾಣಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗಿದೆ, ನಿರ್ಮಾಣ ಕಾರ್ಯಗಳಿಗೆ ಒಟ್ಟು 510 ಕೋಟಿ ರೂಪಾಯಿ ಬಿಡುಗಡೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

15 ದಿನದಲ್ಲಿ ಬೆಳೆ ಹಾನಿ ಸಮೀಕ್ಷೆ..!

ರಾಜ್ಯದಲ್ಲಿ ಮಳೆ ಕಡಿಮೆ ಆದ ಮೇಲೆ ಸಂಪರ್ಕ ರಸ್ತೆಗಳ ಕಾಮಗಾರಿ ಶುರು ಮಾಡುತ್ತೇವೆ ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿ, 150 ಕೋಟಿ ರೂಪಾಯಿ ಹಣವನ್ನು ಎನ್​ಡಿಆರ್​ಎಫ್​ನಿಂದ ಖರ್ಚು ಮಾಡಲಾಗುತ್ತೆ. ತುರ್ತು ಕಾಮಗಾರಿಗಳಿಗೆ ಒಟ್ಟು 660 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ 700 ಕೋಟಿಗೂ ಹೆಚ್ಚು ಹಣ ಜಿಲ್ಲಾಧಿಕಾರಿಗಳ ಅಕೌಂಟ್​ನಲ್ಲಿ ಹಣವಿದೆ. ಪ್ರವಾಹದಿಂದ ಬೆಳೆ ಹಾನಿ ಆಗಿರುವ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆಯನ್ನು 15 ದಿನಗಳ ಒಳಗೆ ಮಾಡಬೇಕಿದೆ. ಈ ಬಗ್ಗೆ ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.

ಮನೆ ಬಿದ್ದರೆ 5 ಲಕ್ಷ ರೂಪಾಯಿ ಪರಿಹಾರ..!

ಮನೆ ಬಿದ್ದವರಿಗೆ 10 ಸಾವಿರ ಕೊಡ್ತಿದ್ದೇವೆ. ಪೂರ್ಣ ಬಿದ್ದ ಮನೆಗೆ 5 ಲಕ್ಷ ರೂಪಾಯಿ ನೆರವು ನೀಡಲಾಗುವುದು. ಈ ಹಿಂದೆ ಯಡಿಯೂರಪ್ಪ ಅವಧಿಯಲ್ಲಿ ಮಾಡಿದ್ದ ನಿಯಮಗಳ ಪ್ರಕಾರವೇ ನೆರವು ನೀಡಲಾಗುತ್ತದೆ. ಈ ಬಗ್ಗೆ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಪ್ರವಾಹದ ಬಗ್ಗೆ ಪತ್ರ ಬರೆದಿದ್ದೇನೆ. ಬೆಳೆ ಹಾನಿ, ಪ್ರವಾಹ ಹಾನಿ ಸಮೀಕ್ಷೆ ಮಾಡಲು ತಂಡ ಕಳುಹಿಸಿ ಎಂದು ಕೋರಿಕೊಂಡಿದ್ದೇವೆ. ಅವರು ಶೀಘ್ರವೇ ರಾಜ್ಯಕ್ಕೆ ಬಂದು ಹಾನಿ ಬಗ್ಗೆ ಅಧ್ಯಯನ ಮಾಡಲಿದ್ದಾರೆ.

ಪ್ರವಾಹಕ್ಕೆ ಸ್ಪಂದಿಸುವ ಕೆಲಸ ಮಾಡ್ತಿದ್ದೇವೆ..!

ಈ ಹಿಂದಿನ ಪರಿಹಾರದ ಹಣವನ್ನೇ ಕೊಟ್ಟಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಪ್ರವಾಹ ಬಂದ ಕೂಡಲೇ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡ್ತಿದೆ. ಈ ಹಿಂದೆ ಅವರು ಯಾವ ರೀತಿ ಮಾಡಿದ್ದಾರೆ ಎಂದು ಗೊತ್ತಿದೆ. ಇದನ್ನು ಮಾಜಿ ಸಿಎಂ ಆಗಿದ್ದವರು ಸ್ವಲ್ಪ ಅರ್ಥ ಮಾಡಿಕೊಂಡು ಮಾತಾನಾಡಬೇಕು ಎನ್ನುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಕೇಂದ್ರದ ಟೀಂ ಬರೋದು ಯಾವಾಗ..?


ಯಾವುದೇ ರಾಜ್ಯದಲ್ಲಿ ಪ್ರವಾಹ ಬಂದಾಗ ಕೇಂದ್ರ ಸರ್ಕಾರದಿಂದ ಅಧಿಕಾರಿಗಳ ಟೀಂ ಬಂದು ಪರಿಶೀಲನೆ ನಡೆಸಬೇಕು. ಕೇಂದ್ರ ತಂಡ ಭೇಟಿ ನೀಡಿ ಪ್ರವಾಹದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು. ಆ ಬಳಿಕ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪರಿಹಾರದ ಹಣ ಬಿಡುಗಡೆ ಆಗಬೇಕಿದೆ. ಇಲ್ಲೀವರೆಗೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಟೀಂ ಕಳುಹಿಸುವ ತೀರ್ಮಾನ ಮಾಡಿಲ್ಲ. ಇದೀಗ ರಾಜ್ಯ ಸರ್ಕಾರದಿಂದ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಈಗಲಾದರೂ ಕೇಂದ್ರದಿಂದ ತಂಡ ಬರುತ್ತಾ ಎನ್ನುವ ನಿರೀಕ್ಷೆ ರಾಜ್ಯದ ಜನರದ್ದಾಗಿದೆ.

Related Posts

Don't Miss it !