ಕನ್ನಡಿಗರ ಆಕ್ರೋಶ ವ್ಯಕ್ತಪಡಿಸಲು ಬಂದ್​ ಉಪಕಾರಿಯೋ..? ಅಪಕಾರಿಯೋ..?

ಕರ್ನಾಟಕದಲ್ಲಿ ಮರಾಠಿಗರ (MES) ದಬ್ಬಾಳಿಕೆಯನ್ನು ಖಂಡಿಸಿ ಡಿಸೆಂಬರ್​ 31ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ವಾಟಾಳ್​ ನಾಗರಾಜ್​ ಕರೆ ನೀಡಿರುವ ಬಂದ್​ ಕರೆಗೆ ಬಹುತೇಕ ಕನ್ನಡ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಆದರೆ ಕರವೇ ನಾರಾಯಣಗೌಡ ಸೇರಿದಂತೆ ಹೋಟೆಲ್​ ಅಸೋಷಿಯೇಷನ್​ ಕರ್ನಾಟಕ ಬಂದ್​ಗೆ ಸಹಮತ ವ್ಯಕ್ತಪಡಿಸಿಲ್ಲ. ನಾವು ಕನ್ನಡಿಗರಾಗಿ ಎಂಇಎಸ್​ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ಆದರೆ ಕರ್ನಾಟಕ ಬಂದ್​ ಕರೆಗೆ ನಮ್ಮ ಬೆಂಬಲ ಇಲ್ಲ ಎಂದು ನೇರವಾಗಿಯೇ ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಸಾಕಷ್ಟು ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ. ಇನ್ನಷ್ಟು ಮಂದಿ ನೈತಿಕ ಬೆಂಬಲ ಮಾತ್ರ ನೀಡಿದ್ದಾರೆ. ಆದರೆ ಈ ನಡುವೆ ಕರ್ನಾಟಕ ಸರ್ಕಾರದ ಪರವಾಗಿ ಮಾತನಾಡಿರುವ ಸಚಿವ ಅಶ್ವತ್ಥ ನಾರಾಯಣ, ಕನ್ನಡ ಪರ ಸಂಘಟನೆಗಳು ಕರ್ನಾಟಕ ​ ಬಂದ್​ ಮೂಲಕ ಆಕ್ರೋಶ ವ್ಯಕ್ತಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ಪ್ರತಿಭಟನೆ ಅವಶ್ಯಕತೆಯಿಲ್ಲ. ನಮ್ಮ ಸರ್ಕಾರ ಕನ್ನಡಿಗರ ಪರವಾಗಿಯೇ ಇದೆ ಎಂದಿದ್ದಾರೆ.

ಪ್ರತಿಭಟನೆ ಮಾಡಲು ಕನ್ನಡಿಗರಲ್ಲಿ ಒಗ್ಗಟ್ಟು ಯಾಕಿಲ್ಲ..?

ಡಿಸೆಂಬರ್​ 31ರಂದು ಪ್ರತಿಭಟನೆ ಮಾಡಲು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದಾರೆ. ಆದರೆ ಡಿಸೆಂಬರ್​ 31 ಸಾಕಷ್ಟು ವ್ಯಾಪಾರ ವಹಿವಾಟು ನಡೆಯುವ ದಿನ. ಹೊಸ ವರ್ಷ 2022ರ ಸ್ವಾಗತ ಮಾಡಲು ಜನರು ಸಂಭ್ರಮದಲ್ಲಿ ಇರುತ್ತಾರೆ. ಅಂದು ಸಾಕಷ್ಟು ಜನರು ಪಾರ್ಟಿಗಳನ್ನು ಆಯೋಜನೆ ಮಾಡುತ್ತಾರೆ. ಹೊರಗಡೆ ಪಾರ್ಟಿ ಮಾಡಲು ಮನಸ್ಸಿಲ್ಲದವರು ಮನೆಯಲ್ಲಿ ಮನೆ ಮಂದಿ ಜೊತೆಯಲ್ಲಿ ಸೇರಿಕೊಂಡು ಸಂಭ್ರಮ ಆಚರಣೆ ಮಾಡುತ್ತಾರೆ. ಈ ಸಂಧರ್ಭದಲ್ಲಿ ಸಾಕಷ್ಟು ವ್ಯಾಪಾರ ವಹಿವಾಟು ನಡೆಯಲಿದೆ. ಆದರೆ ಇದೀಗ ಕನ್ನಡಪರ ಸಂಘಟನೆಗಳು ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲಾ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗಲಿದೆ. ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ ಎನ್ನುವುದು ವ್ಯಾಪಾರಸ್ಥರ ಅಳಲು. ಆದರೆ ಸಂಘಟನೆಗಳಲ್ಲಿ ಒಗ್ಗಟ್ಟು ಮೂಡದಿರುವುದಕ್ಕೆ ಕಾರಣ ಅವರ ನಡುವೆ ಇರುವ ಕಿತ್ತಾಟ. ಈ ರೀತಿ ಒಗ್ಗಟ್ಟು ಇಲ್ಲದೇ ಇರುವ ಕಾರಣದಿಂದಲೇ ಕನ್ನಡಿಗರ ಮೇಲೆ ಆಗಿದ್ದಾಂಗೆ ದಬ್ಬಾಳಿಕೆಗಳು ನಡೆಯುತ್ತಿರುವುದು.

Read this;

ದಿನಗೂಲಿ ನೌಕರರು, ಗಾರ್ಮೆಂಟ್ ಮಾಲೀಕರಿಗೆ ಸಂಕಷ್ಟ..!

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರ, ಪಟ್ಟಣ ಪ್ರದೇಶಗಳಲ್ಲಿ ಸಾವಿರಾರು ಜನರು ದಿನಗೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ. ಆದರೆ ಕನ್ನಡ ಸಂಘಟನೆಗಳ ಕರ್ನಾಟಕ ಬಂದ್ ಕರೆ ಬಡವರ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಬೀಳಲಿದೆ. ಇನ್ನೂ ಹಳ್ಳಿಗಾಡಿನಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿರುವ ಸಾವಿರಾರು ಬಡ ಕುಟುಂಬಗಳು ಗಾರ್ಮೆಂಟ್‌ನಲ್ಲಿ ಕೆಲಸ ಮಾಡುವ ವೃತ್ತಿ ಆಯ್ಕೆ ಮಾಡಿಕೊಂಡಿರುತ್ತಾರೆ. ಒಂದು ದಿನವೂ ರಜೆ ಹಾಕದೆ ಕೆಲಸ ಮಾಡಿ ಹಣ ಸಂಪಾದನೆ ಮಾಡುವ ಮೂಲಕ ಒಂದೆರಡು ಸಾವಿರ ಹೆಚ್ಚಾಗಿ ಸಂಪಾದಿಸುವ ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಡಿಸೆಂಬರ್​ 31ರಂದು ರಜೆಯಾದರೆ ಅನಿವಾರ್ಯವಾಗಿ ಒಂದು ದಿನದ ವೇತನ ಕಳೆದುಕೊಳ್ಳಲಿದ್ದಾರೆ. ಇನ್ನೂ ಬೀದಿಬದಿ ವ್ಯಾಪಾರಿಗಳು ದಿನದ ಲೆಕ್ಕದಲ್ಲಿ ಸಂಪಾದನೆ ಮಾಡುತ್ತಾರೆ. ಒಂದು ದಿನ ಮನೆಯಲ್ಲಿ ಕುಳಿತರೆ ಏನೂ ಆಗೋದಿಲ್ಲ ಎಂದು ನಾವು ಹೇಳಬಹುದು. ಆದರೆ ಗಾಡಿ ಬಾಡಿಗೆ ಸೇರಿದಂತೆ ತೆಗೆದುಕೊಂಡಿರುವ ಸಾಲದ ಕಂತನ್ನು ದಿನನಿತ್ಯ ಕಟ್ಟಿಕೊಂಡು ಹೋಗುತ್ತಿರುತ್ತಾರೆ. ಆದರೆ ಒಂದು ದಿನ ಆದಾಯ ಮೂಲಕ್ಕೆ ಕತ್ತರಿ ಬಿದ್ದರೆ ಅದನ್ನು ಸರಿದೂಗಿಸಲು ಸಾಕಷ್ಟು ಶ್ರಮ ಆಗಲಿದೆ.

ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬೇರೆ ಮಾರ್ಗ ಯಾವುದಿದೆ..?

ಕರ್ನಾಟಕದ ಹಿತಕ್ಕೆ ಧಕ್ಕೆ ಬಂದಾಗ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಬೇಕು. ಅದು ಸರ್ಕಾರದ ಜವಾಬ್ದಾರಿ ಕೂಡ ಹೌದು. ಇದೀಗ ರಾಜ್ಯ ಸರ್ಕಾರ ಖಂಡನಾ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡುವ ನಿರ್ಧಾರವನ್ನು ಮಾಡಿ ಆಗಿದೆ. ಇನ್ನೂ ಕನ್ನಡಿಗರ ಮೇಲೆ ನಡೆದಿರುವ ದಬ್ಬಾಳಿಕೆಯನ್ನು ಖಂಡಿಸಲು ಕನ್ನಡಿಗರಿಗೇ ತೊಂದರೆ ಕೊಡುವುದು ಸರಿಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಇನ್ನೂ ಎಂಇಎಸ್​ ಒಂದು ರಾಜಕೀಯ ಪಕ್ಷವಾಗಿ ನೋಂದಣಿಯಾಗಿರುವ ಕಾರಣಕ್ಕೆ ಏಕಾಏಕಿ ರಾಜ್ಯ ಸರ್ಕಾರ ನಿಷೇಧ ಮಾಡಲು ಸಾಧ್ಯವಿಲ್ಲ. ಕಾನೂನು ಅಷ್ಟೊಂದು ಸರಳವಾಗಿದ್ದರೆ, ಇಷ್ಟು ದಿನಗಳಲ್ಲಿ ಅಧಿಕಾರಕ್ಕೆ ಬಂದ ಪಕ್ಷಗಳು ಎದುರಾಳಿ ಪಕ್ಷಗಳನ್ನು ನಿಷೇಧ ಮಾಡಿಬಿಡುತ್ತಿದ್ದರು. ಮತ್ತೊಮ್ಮೆ ಅಧಿಕಾರಕ್ಕೆ ಬಂದಾಗ ಸೋತ ಪಕ್ಷವನ್ನು ನಿಷೇಧ ಮಾಡುವ ಪ್ರವೃತ್ತಿ ಜೊತೆಗೆ ದ್ವೇಷ ಭಾವನೆ ಹೆಚ್ಚಾಗುತ್ತಿತ್ತು. ಆದರೆ ಚುನಾವಣಾ ಆಯೋಗಕ್ಕೆ ಸೂಕ್ತ ಕಾರಣ ಕೊಟ್ಟು ನಿಷೇಧ ಮಾಡುವಂತೆ ಮನವಿ ಮಾಡುವ ಕೆಲಸ ಮಾಡಬಹುದು. ಆದರೂ ಸೂಕ್ತ ಕಾರಣವಿಲ್ಲದಿದ್ದರೆ ನಿಷೇಧ ಅಷ್ಟು ಸುಲಭದ ಮಾತಲ್ಲ ಎನ್ನುವುದು ಕಾನೂನು ತಜ್ಞರ ಅಭಿಪ್ರಾಯ. ಬಂದ್​ ಎನ್ನುವುದು ಕೋಟಿ ಕೋಟಿ ನಷ್ಟಕ್ಕೆ ಕಾರಣವಷ್ಟೆ. ಇದು ಕನ್ನಡಿಗರಿಗೆ ದುಬಾರಿಯೇ ಸರಿ.

Related Posts

Don't Miss it !