ಉತ್ತರಕ್ಕೆ ಅಯೋಧ್ಯೆ.. ದಕ್ಷಿಣಕ್ಕೆ ಅಂಜನಾದ್ರಿ.. ಬಿಜೆಪಿ ಮತಬ್ಯಾಂಕ್​ ದೇವಸ್ಥಾನ..!

ಸರ್ಕಾರದ ಹಿಡಿತದಿಂದ ದೇವಸ್ಥಾನಗಳಿಗೆ ಮುಕ್ತಿ..?

ಹಿಂದೂಗಳ ಮತಗಳ ಮೇಲೆ ನಿಗಾ ವಹಿಸಿ ಕೆಲಸ ಮಾಡುವ ಬಿಜೆಪಿ ಸರ್ಕಾರದ ಇತ್ತೀಚಿಗೆ ಮತಾಂತರ ನಿಷೇಧ ಕಾನೂನು ಜಾರಿ ಮಾಡುವ ಮೂಲಕ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಹುಬ್ಬಳ್ಳಿಯ ಬಿಜೆಪಿ ಕಾರ್ಯಕಾರಿಣಿ ವೇಳೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಬಜೆಟ್​ ಅಧಿವೇಶನದಲ್ಲೇ ಇದಕ್ಕೊಂಡು ಹೊಸ ಕಾನೂನು ರೂಪಿಸುವ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಇದರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳು ಸರ್ವಸ್ವತಂತ್ರ್ಯ ಪಡೆಯುವಂತಾಗುತ್ತದೆ. ಆದರೆ ಇದರಿಂದ ಯಾರಿಗೆ ಎಷ್ಟು ಲಾಭ..? ಯಾರಿಗೆ ನಷ್ಟವಾಗಲಿದೆ ಎನ್ನುವ ಬಗ್ಗೆ ಚರ್ಚೆ ಮಾಡಬೇಕಿರುವ ಅವಶ್ಯಕತೆ ಇದೆ.

ಆಂಜನೇಯನ ಜನ್ಮಸ್ಥಳದಲ್ಲಿ ರಾಮಮಂದಿರ ಘೋಷಣೆ..!

ಆಂಜನೇಯನ ಪುಣ್ಯ ಕ್ಷೇತ್ರವಾದ ಅಂಜನಾದ್ರಿ ಬೆಟ್ಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಆಂಜನಾದ್ರಿ ಕ್ಷೇತ್ರವನ್ನು ಅಭಿವೃದ್ದಿ ಮಾಡಿ, ಅಲ್ಲಿ ಶ್ರೀರಾಮಚಂದ್ರ ಮಂದಿರ ನಿರ್ಮಾಣ ಮಾಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಆ ದೇವಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಿಸುತ್ತೇವೆ. ಅಂಜನಾದ್ರಿಯನ್ನು ಶ್ರೇಷ್ಠವಾದ ಸ್ಥಳವನ್ನಾಗಿ ಮಾಡುತ್ತೇವೆ. ಇದು ನಮ್ಮ ಸರ್ಕಾರ ಸಂಕಲ್ಪ ಎಂದಿದ್ದಾರೆ. ಈ ಮೂಲಕ ಉತ್ತರಕ್ಕೆ ಅಯೋಧ್ಯೆ ಶ್ರೀರಾಮನ ಅರಾಧ್ಯ ಸ್ಥಳವಾದರೆ ಅಂಜನಾದ್ರಿಯಲ್ಲಿ ಶ್ರೀರಾಮನ ಭಕ್ತ ಹನುಮನ ಜನ್ಮಸ್ಥಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ಮೂಲಕ ರಾಮನ ಧೂತನನ್ನು ಸ್ಮರಿಸಲು ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎನ್ನುವುನ್ನು ಘೋಷಣೆ ಮಾಡಿದ್ದಾರೆ.

Read This

ದೇವಸ್ಥಾನದ ಹಣ ದೇವಸ್ಥಾನಕ್ಕೇ ಬಳಕೆ..!

ದೇವಸ್ಥಾನಗಳು ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿವೆ. ಭಕ್ತರು ನೀಡುವ ಆದಾಯ ಎಲ್ಲವೂ ಸರ್ಕಾರದ ಲೆಕ್ಕಕ್ಕೆ ಹೋಗಲಿದ್ದು ಸರ್ಕಾರ ಇಂತಿಷ್ಟು ಹಣವನ್ನು ದೇವಸ್ಥಾನಗಳ ನಿರ್ವಹಣೆಗೆ ಹಾಗೂ ಅರ್ಚಕರ ವೇತನ, ಪೂಜಾ ಕೈಂಕರ್ಯಗಳಿಗೆ ನೀಡುತ್ತಾರೆ. ಆದರೆ ದೇವಸ್ಥಾನದ ಅಭಿವೃದ್ಧಿ ಅಷ್ಟಕಷ್ಟೆ ಎನ್ನಬಹುದು. ಆದರೆ ಬೇರೆ ಬೇರೆ ಧರ್ಮದ ಪ್ರಾರ್ಥನಾ ಸ್ಥಳಗಳು ಸರ್ಕಾರದ ಹಿಡಿತದಲ್ಲಿ ಇಲ್ಲ. ಹಾಗಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತವೆ. ಒಂದು ಚರ್ಚ್​ ಅಥವಾ ಮಸೀದಿ, ತನ್ನ ಪಾಲಿನ ಆಧಾಯದಲ್ಲಿ ತನಗೆ ಬೇಕಾದ ಹಾಗೆ ಉಪಯೋಗ ಮಾಡಿಕೊಂಡು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ಅಥವಾ ಮಠಗಳೂ ಸಹ ಸರ್ಕಾರದ ಹಿಡಿತದಿಂದ ಮುಕ್ತವಾಗಿದ್ದು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ. ಆದರೆ ಮುಜರಾಯಿ ಇಲಾಖೆ ಅಧೀನದ ದೇವಸ್ಥಾನಗಳಲ್ಲಿ ಇದಕ್ಕೆಲ್ಲಾ ಅವಕಾಶ ಇಲ್ಲದಂತಾಗಿದೆ.

ಮುಖ್ಯಮಂತ್ರಿ ಹೇಳಿಕೆಗೆ ಮಂತ್ರಾಲಯ ಶ್ರೀ ಸ್ವಾಗತ..!

ಹಿಂದೂ ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಬಿಡುಗಡೆ ಮಾಡಲು ವಿಶೇಷ ಕಾನೂನು ತರುವ ವಿಚಾರದಲ್ಲಿ ಮಂತ್ರಾಲಯ ಮಠದ ಸುಭುದೇಂದ್ರ ಶ್ರೀಗಳು. ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಬೇರೆ ಧರ್ಮಗಳ ಪ್ರಾಥನಾ ಸ್ಥಳಗಳು ಸ್ವಾತಂತ್ರ್ಯವಾಗಿವೆ. ಹಿಂದೂ ಧರ್ಮದ ದೇವಾಲಯಗಳಲ್ಲಿ ಹಲವು‌ ನಿಯಮಗಳಿದ್ದು, ಸರ್ಕಾರದ ನಿಯಂತ್ರಣದಲ್ಲಿವೆ. ಸರ್ಕಾರದ ಅಧೀನದಿಂದ ದೇವಸ್ಥಾನಗಳನ್ನು ಬೇರ್ಪಡಿಸುವ ವಿಚಾರ ಸೂಕ್ತವಾಗಿದೆ ಎಂದಿದ್ದಾರೆ. ಆಸಕ್ತ ಧಾರ್ಮಿಕ ‌ಮುಖಂಡ‌ರ ನೇತೃತ್ವದಲ್ಲಿ ‌ದೇವಾಲಯಗಳ ನಿರ್ವಹಣೆ, ದೇಗುಲಗಳ ಅಭಿವೃದ್ಧಿ, ಉತ್ಸವ ಉಸ್ತುವಾರಿ ನೀಡುವುದು ಸೂಕ್ತ. ಸಿಎಂ ಘೋಷಿಸಿರುವ ನಿರ್ಧಾರ ಕೂಡಲೇ ‌ಕಾರ್ಯ ರೂಪಕ್ಕೆ ಬರಲಿ ಎಂದಿದ್ದಾರೆ.

Also Read

ಮುಜರಾಯಿ ಇಲಾಖೆ ಹಣ ಮುಸ್ಲಿಮರಿಗೆ ಸಲ್ಲದು..!

ಇಲ್ಲೀವರೆಗೂ ರಾಜ್ಯ ಸರ್ಕಾರದ ಮೇಲೆ ಹಿಂದೂಪರ ಸಂಘಟನೆಗಳ ಮುಖಂಡರು ಆರೋಪವೊಂದನ್ನು ಮಾಡುತ್ತಿದ್ದರು. ಹಿಂದೂಗಳು ದೇವಾಲಯದಲ್ಲಿ ಹಾಕಿದ ಕಾಣಿಕೆಯನ್ನು ಮುಸ್ಲಿಂ ವ್ಯಕ್ತಿಯ ಮೆಕ್ಕಾ ಮದಿನ ಯಾತ್ರೆಗೆ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ. ಆದರೆ ಮಸೀದಿ ಅಥವಾ ಚರ್ಚ್​ನಲ್ಲಿ ಸಂಗ್ರಹವಾಗುವ ಆದಾಯವನ್ನು ಸರ್ಕಾರ ಕೇಳುವುದೇ ಇಲ್ಲ ಎಂದು ದೂರಲಾಗ್ತಿತ್ತು. ಆದರೆ ಈ ಆರೋಪ ಹೊಸ ಕಾನೂನು ಜಾರಿಯಾದ ಬಳಿಕ ಅಳಿಸಿ ಹೋಗಲಿದೆ. ಆದರೆ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಯಾರೆಲ್ಲಾ ಇರ್ತಾರೆ..? ಸರ್ಕಾರ ಆ ಊರಿನ ಮುಖಂಡರುಗಳ ಒಡೆತನಕ್ಕೆ ಬಿಟ್ಟುಕೊಡುತ್ತಾ..? ಅತವಾ ಹಿಂದೂಪರ ಸ್ವಾಮೀಜಿಗಳ ಒಡೆತನಕ್ಕೆ ಬಿಟ್ಟು ಕೊಟ್ಟು ಮತಬ್ಯಾಂಕ್​ ರಾಜಕೀಯ ಶುರು ಮಾಡುತ್ತಾ..? ಎನ್ನುವ ಪ್ರಶ್ನೆಗಳು ಮೂಡುತ್ತಿದೆ. ಸರ್ಕಾರದ ನಿರ್ಧಾರ ಒಳ್ಳೆಯದೇ ಇರಬಹುದು, ಆದರೆ ಗೋಕರ್ಣ ಕ್ಷೇತ್ರವನ್ನು ಈ ಹಿಂದೆ ಯಡಿಯೂರಪ್ಪ ಸರ್ಕಾರ ರಾಘವೇಶ್ವರ ಶ್ರೀಗಳ ಮಠದ ಉಸ್ತುವಾರಿಗೆ ನೀಡಿದಾಗ ಸಾಕಷ್ಟು ವಿವಾದಗಳು ಸೃಷ್ಟಿಯಾಗಿದ್ದವು ಎನ್ನುವುದನ್ನು ಸ್ಮರಿಸಬಹುದು. ಬಿಜೆಪಿ ಮತಬ್ಯಾಂಕ್ ಆದರೂ ಆಗಲಿ ಉತ್ತಮ ನಿರ್ಧಾರ, ಯಾವುದೇ ವಿವಾದಕ್ಕೆ ಆಸ್ಪದ ಇಲ್ಲದಂತೆ ಕಾನೂನು ತರಲಿ ಎನ್ನುವುದು The Public Spot ಆಶಯ.

Related Posts

Don't Miss it !