ಮೆಟ್ರೋ ಮಾರ್ಗ ಉದ್ಘಾಟನೆ.. ಪ್ರಯಾಣಿಕರಿಂದ ದೂರ ಆಗುತ್ತಾ ಮೆಟ್ರೋ..!?

ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಿಸಿದ ಮಾರ್ಗಗಳ ಉದ್ಘಾಟನೆ ನಡೆಯುತ್ತಲೇ ಇದೆ. ಇಂದೂ ಕೂಡ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನಾಯಂಡಹಳ್ಳಿ ಇಂದ ಕೆಂಗೇರಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದರು. 6 ನಿಲ್ದಾಣಗಳುಳ್ಳ ಮೆಟ್ರೋ ಮಾರ್ಗದಲ್ಲಿ ಮೊದಲಿಗೆ ತಾವೇ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಮೂಲಕ ಲೋಕಾರ್ಪಣೆ ಮಾಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಸಚಿವರಾದ ಆರ್ ಅಶೋಕ್, ವಿ. ಸೋಮಣ್ಣ, ಗೋಪಾಲಯ್ಯ, ಮುನಿರತ್ನ, ಸಂಸದರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ ಭಾಗಿಯಾಗಿದ್ದರು. 7.53 ಕಿಲೋ ಮೀಟರ್​ ಅಂತರದ ಮೆಟ್ರೋ ಸಂಚಾರ ಶುರುವಾದ ಕಾರಣ ಮೈಸೂರು ರಸ್ತೆಯಲ್ಲಿ ಆಗುತ್ತಿದ್ದ ಟ್ರಾಫಿಕ್​​ ಜಾಮ್​ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆ ಹೆಚ್ಚಾಗಿದೆ. ಆದರೆ ಮೆಟ್ರೋ ಅಧಿಕಾರಿಗಳು ತೆಗೆದುಕೊಳ್ತಿರೋ ನಿಲುವುಗಳಿಂದ ನಮ್ಮ ಮೆಟ್ರೋ ಹೆಸರಿಗೆ ತಕ್ಕಂತೆ ಗ್ರಾಹಕ ಸ್ನೇಹಿಯಾಗದೆ ಗ್ರಾಹಕರಿಂದ ದೂರ ಸರಿಯುವ ಆತಂಕವೂ ಕಾಡುತ್ತಿದೆ.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಬೃಹತ್​ ಜಾಲ..!

ಬೆಂಗಳೂರಿನ ಪ್ರತಿ ಮೂಲೆಗೂ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಆಗುತ್ತಿದೆ. ಹಸಿರು ಮಾರ್ಗ ಅಂಜನಾಪುರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದ ತನಕ, ನೇರಳೆ ಮಾರ್ಗ ವೈಟ್​ ಫೀಲ್ಡ್​​​ನಿಂದ ಕೆಂಗೇರಿ ತನಕ, ಕೆಂಪು ಮಾರ್ಗ ನಾಗವಾರದಿಂದ ಗೊಟ್ಟಿಗೆರೆ, ಹಳದಿ ಮಾರ್ಗ ಆರ್​.ವಿ ರಸ್ತೆಯಿಂದ ಬೊಮ್ಮಸಂದ್ರ, ನೀಲಿ ಮಾರ್ಗ ಸಿಲ್ಕ್​ ಬೋರ್ಡ್​ನಿಂದ ಕೆ.ಆರ್​ ಪುರಂ ತನಕ ಒಟ್ಟು 130 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ವಿಸ್ತರಿಸಿಕೊಳ್ಳುತ್ತಿದೆ. ಅಂದರೆ ಬಹುತೇಕ ಬೆಂಗಳೂರು ಮೆಟ್ರೋ ಜಾಲದಲ್ಲಿ ಸಿಲುಕಿದಂತಾಗಿದೆ. ಬೆಂಗಳೂರಿನ ಯಾವುದೇ ಪ್ರದೇಶದಿಂದ ಬೇರೆ ಯಾವುದೇ ಪ್ರದೇಶಕ್ಕೆ ಮೆಟ್ರೋ ಮೂಲಕ ಸಂಚಾರ ಮಾಡುವುದು ಇನ್ನೇನು ಕೆಲವೇ ವರ್ಷಗಳಲ್ಲಿ ಸಾಧ್ಯ. ಈ ವಿಚಾರ ಬೆಂಗಳೂರಿಗರಲ್ಲಿ ಸಂತೋಷಕ್ಕೂ ಕಾರಣವಾಗಿದೆ. ಅದೇ ಸಮಯದಲ್ಲಿ ಮೆಟ್ರೋ ಬಗ್ಗೆ ಅಸಮಾಧಾನವೂ ಹೊರ ಬೀಳುತ್ತಿದೆ.

ಇದನ್ನೂ ಓದಿ;

ಮೆಟ್ರೋ ಬಳಕೆ ಮಾಡುವ ಜನರಿಗೆ ಸಿಗ್ತಿಲ್ಲ ಸೇವೆ..!

ನಮ್ಮ ಮೆಟ್ರೋ ಪ್ರಯಾಣ ಸಾರ್ವಜನಿಕ ಸಾರಿಗೆ ಬಸ್​ ದರಕ್ಕೆ ಹೋಲಿಕೆ ಮಾಡಿದರೆ ನಮ್ಮ ಮೆಟ್ರೋ ರೈಲು ಸಂಚಾರ ತುಸು ದುಬಾರಿ ಎಂದು ಹೇಳಬಹುದು. ಈ ಕಾರಣದಿಂದ ಸಾಮಾನ್ಯ ಜನರು ದಿನನಿತ್ಯ ಮೆಟ್ರೋ ಬಳಸುವುದು ಅಸಾಧ್ಯದ ಮಾತು. ಮೆಟ್ರೋ ಸಂಚಾರದ ಅನುಭವ ಪಡೆಯುವ ಉದ್ದೇಶದಿಂದ ಮೆಟ್ರೋದಲ್ಲಿ ಸಂಚಾರ ಮಾಡಬಹುದೇ ಹೊರತು, ದಿನನಿತ್ಯದ ಕೆಲಗಳಿಗೆ ಮೆಟ್ರೋ ಬಳಸುವುದಿಲ್ಲ. ಬಿಎಂಟಿಸಿ ಬಸ್​ ಪಾಸ್​ ಮೂಲಕ ಸಂಚಾರ ಮಾಡುವುದೇ ಹೆಚ್ಚು. ಆದರೆ ಐಟಿ, ಬಿಟಿಗಳಲ್ಲಿ ಕೆಲಸ ಮಾಡುವ ಟೆಕ್ಕಿಗಳು, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ಮಧ್ಯಮ ವರ್ಗದಲ್ಲೇ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವ ಜನರು ಟ್ರಾಫಿಕ್​ ಕಿರಿಕಿರಿ ತಪ್ಪಿಸಿಕೊಳ್ಳಲು, ಮೆಟ್ರೋ ಸಂಚಾರವನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಮೆಟ್ರೋ ನಿಗಮ ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಮೆಟ್ರೋ ರೈಲು ಸಂಚಾರ ಮಾಡುತ್ತಿಲ್ಲ ಎನ್ನುವ ಬೇಸರ ಬೆಂಗಳೂರಿಗರಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಮೆಟ್ರೋ ರೈಲು ಸಂಚಾರದ ಸಮಯ.

ಮೆಟ್ರೋ ಸಮಯ ಪ್ರಯಾಣಿಕರಿಗೆ ಸಂಚಕಾರ..!?

ಕೊರೊನಾ ಮಾರ್ಗಸೂಚಿ ನಡುವೆಯೂ ಎಲ್ಲಾ ಉದ್ಯಮಗಳು ಎಂದಿನಂತೆ ಯಥಾಸ್ಥಿಗೆ ಮರಳುತ್ತಿದೆ. ಆದರೆ ನಮ್ಮ ಮೆಟ್ರೋ ಸಂಚಾರ ಮಾತ್ರ ಪ್ರಯಾಣಿಕರ ನಿರೀಕ್ಷೆಗೆ ತಕ್ಕಂತೆ ತಡೆಯುತ್ತಿಲ್ಲ. ಸರ್ಕಾರಿ ಸಂಸ್ಥೆಗಳ ರೀತಿ ಬೆಳಗ್ಗೆ 7 ಗಂಟೆಗೆ ಆರಂಭವಾಗುತ್ತದೆ. ಅಷ್ಟರಲ್ಲಿ ಅದೆಷ್ಟೋ ಸಂಸ್ಥೆಗಳಲ್ಲಿ ಕೆಲಸ ಶುರುವಾಗಿರುತ್ತದೆ. ಅದೇ ರೀತಿ ಮೆಟ್ರೋ ರಾತ್ರಿ 9 ಗಂಟೆಗೆ ಸಂಚಾರ ರದ್ದು ಮಾಡುತ್ತದೆ. ಆದರೆ ಅದೆಷ್ಟೋ ಖಾಸಗಿ ಸಂಸ್ಥೆಗಳಲ್ಲಿ ರಾತ್ರಿ 11.30ರ ತನಕವೂ ಕೆಲಸ ಇರುತ್ತದೆ. ಆದರೆ ಶಿಸ್ತಾಗಿ ಮೆಟ್ರೋ ಸಂಚಾರ ಮುಗಿಸಿ ನಿದ್ರೆಗೆ ಜಾರಿರುತ್ತದೆ. ಹಾಗಾಗಿ ಸಾರ್ವಜನಿಕ ವಾಹನ ಬಳಸುವ ಮನಸ್ಸಿದ್ದರೂ ಬೆಂಗಳೂರಿನ ಜನರಿಗೆ ಮೆಟ್ರೋ ಬಳಸುವುದು ಸಾಧ್ಯವಾಗ್ತಿಲ್ಲ. ಕನಿಷ್ಠ ಪಕ್ಷ ಬೆಳಗ್ಗೆ 5 ರಿಂದ ಆರಂಭವಾಗಿ ರಾತ್ರಿ 12ರ ತನಕ ಆದರೂ ಸಂಚಾರ ನಡೆಸಿದ್ರೆ ಬಹುತೇಕ ಮಂದಿ ಮೆಟ್ರೋ ರೈಲು ಬಳಸುತ್ತಾರೆ. ಪ್ರಯಾಣಿಕರ ಸಂಚಾರಕ್ಕೆ ಅನುಗುಣವಾಗಿ ರೈಲು ಸಂಚರಿಸಿದರೂ ಯಾವುದೇ ಸಮಸ್ಯೆ ಇಲ್ಲ. ಆದರೆ ಮೂರು ಶಿಫ್ಟ್​ಗಳಲ್ಲಿ ಉದ್ಯೋಗಿಗಳನ್ನು ವಿಭಾಗಿಸಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಟ್ಟರೆ ಉತ್ತಮ ಎನ್ನುತ್ತಾರೆ ಪ್ರಯಾಣಿಕರು.

ಇದನ್ನೂ ಓದಿ;

ಸಾರಿಗೆ ವ್ಯವಸ್ಥೆಗೆ ಸ್ಮಾರ್ಟ್​ ಕಾರ್ಡ್​ ಉತ್ತಮ..!

ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಗ್ರಾಹಕರ ಹಿತ ಮುಖ್ಯವಲ್ಲ ಎನ್ನುವ ಮಾತು ಜನಜನಿತ. ಇದೇ ರೀತಿ ಮುಂದುವರಿದರೆ ನಮ್ಮ ಮೆಟ್ರೋ ಕೂಡ ಮತ್ತೊಂದು ಬಿಎಸ್​ಎನ್​ಎಲ್​ ಸಂಸ್ಥೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಗ್ರಾಹಕರ ಹಿತಕ್ಕಾಗಿ ಕೆಲಸ ಮಾಡಿದರೆ ಸಾರ್ವಜನಿಕ ಸಾರಿಗೆ ಕಡೆಗೆ ನಾಗರಿಕರನ್ನು ಎಳೆದು ತರಬಹುದು. ಇಷ್ಟು ಮಾತ್ರವಲ್ಲದೆ ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿ ಜೊತೆಗೆ ಮೆಟ್ರೋ ಒಪ್ಪಂದ ಮಾಡಿಕೊಂಡು ಸ್ಮಾರ್ಟ್​ ಕಾರ್ಡ್​ ಜಾರಿಗೆ ತಂದರೆ ಜನರೂ ಕೂಡ 2 ರೂಪಾಯಿ ಹೆಚ್ಚಿಗೆ ಕೊಟ್ಟರೂ ಬೇಸರ ಮಾಡಿಕೊಳ್ಳುವುದಿಲ್ಲ. ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಪ್ರಯಾಣ ಸಾಗುವುದು ಮುಖ್ಯವಾಗಿರುತ್ತದೆ. ಈ ಬಗ್ಗೆ ನಮ್ಮ ಮೆಟ್ರೋ ಎಂಡಿ ಅಂಜುಂ ಫರ್ವೇಜ್​ ಅವರು ಚಿಂತನೆ ನಡೆಸಬೇಕಿದೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಹಾಗೂ ಮೆಟ್ರೋ ಸಂಚಾರಕ್ಕೆ ಸ್ಮಾರ್ಟ್​ ಕಾರ್ಡ್​ ಜೊತೆಗೆ ಸಂಚಾರದ ಸಮಯವನ್ನು ವಿಸ್ತರಣೆ ಮಾಡಿದರೆ ಜನರೂ ಕೂಡ ಸರಾಗ ಸಂಚಾರದ ಮೂಲಕ ಸಾರ್ವಜನಿಕ ಸಾರಿಗೆ ಬಳಸುವ ಜೊತೆಗೆ ಬೆಂಗಳೂರು ಟ್ರಾಫಿಕ್​​ ಸಮಸ್ಯೆಗೂ ತಡೆ ಬೀಳಲಿದೆ ಎನ್ನುತ್ತಾರೆ ನಗರ ತಜ್ಞರು.

Related Posts

Don't Miss it !