ಗೆಲುವಿನ ಕನಸಿನಲ್ಲಿ ಸೋಲುವ ಆತಂಕ..! ಕಾಂಗ್ರೆಸ್​ನಲ್ಲಿ ಗೆದ್ದವರು ಸಿಎಂ..!

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಗೆಲುವು ಸಾಧಿಸಿ ಅಧಿಕಾರ ಹಿಡಿಯುವ ಬಗ್ಗೆ ಈಗಾಗಲೇ ಲೆಕ್ಕಾಚಾರಗಳು ಶುರುವಾಗಿದೆ. ಬಿಜೆಪಿ ಸರ್ಕಾರದ ಆಡಳಿತ ಕಾರ್ಯವೈಖರಿಯಿಂದ ಬೇಸರಗೊಂಡಿರುವ ಜನರು ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಿ ಅಧಿಕಾರ ನೀಡುತ್ತಾರೆ ಎನ್ನುವುದು ಬಹುತೇಕ ರಾಜಕೀಯ ಪಂಡಿತರ ಲೆಕ್ಕಾಚಾರ ಕೂಡ ಆಗಿದೆ. ಕಳೆದ ಬಾರಿ ಕೂಡ ಬಿಜೆಪಿ ಅಧಿಕಾರ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್​ ಸಂಪೂರ್ಣ ಬಲದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ 5 ವರ್ಷಗಳ ಕಾಲ ಅಧಿಕಾರ ಪೂರ್ಣ ಮಾಡಿದ್ದರು. ಇದೀಗ ಮತ್ತದೇ ರಾಜಕೀಯ ಪುನರಾವರ್ತನೆ ಆಗುವ ಲೆಕ್ಕಾಚಾರ ಕಾಂಗ್ರೆಸ್​ ನಾಯಕರಲ್ಲಿದೆ. ಆದರೆ ಸೋತು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತೆವೆಯೋ..? ಎನ್ನುವ ಅಂಜಿಕೆಯೂ ಕಾಂಗ್ರೆಸ್​ ನಾಯಕರನ್ನು ಕಾಡುತ್ತಿದೆ.

ಗೆಲ್ಲುವ ಕ್ಷೇತ್ರ ಹುಡುಕಾಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ..!

2013ರಲ್ಲೂ ಡಾ ಜಿ ಪರಮೇಶ್ವರ್​ ಕಾಂಗ್ರೆಸ್​ ಅಧ್ಯಕ್ಷರಾಗಿದ್ದರು. ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದರು. ಆದರೆ ಹೈಕಮಾಂಡ್​ ಆದೇಶದ ಪ್ರಕಾರ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಇದೀಗ ಮತ್ತೆ ಅದೇ ಭಯ ಡಿ.ಕೆ ಶಿವಕುಮಾರ್​ ಅವರನ್ನೂ ಕಾಡುತ್ತಿದೆ. ಇದೇ ಕಾರಣದಿಂದ ಸಿದ್ದರಾಮಯ್ಯ ಸುಲಭವಾಗಿ ಗೆಲ್ಲುವಂತಹ ಕ್ಷೇತ್ರವನ್ನು ಹುಡುಕುವ ಪ್ರಯತ್ನದಲ್ಲಿ ಇದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಬಾದಾಮಿಯಿಂದ ಮತ್ತೆ ಸ್ಪರ್ಧೆ ಮಾಡುವುದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಗುಳೇದಗುಡ್ಡದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಐದಾರು‌ ಕ್ಷೇತ್ರಗಳಲ್ಲಿ ಜನರು ಕರೆಯುತ್ತಿದ್ದಾರೆ. ಬಾದಾಮಿ, ಕೊಪ್ಪಳ, ಕೋಲಾರ, ಚಾಮರಾಜಪೇಟೆ, ಹುಣಸೂರು, ಚಿಕ್ಕನಾಯಕಹಳ್ಳಿ ಕ್ಷೇತ್ರದಿಂದಲೂ ಕರೆಯುತ್ತಿದ್ದಾರೆ. ಆದರೆ ಹೈಕಮಾಂಡ್ ಎಲ್ಲಿ ಸ್ಪರ್ಧಿಸಲು ಸೂಚಿಸುತ್ತೋ ಅಲ್ಲಿಂದ ಸ್ಪರ್ಧೆ ಎನ್ನುವ ಮೂಲಕ ಕ್ಷೇತ್ರ ಅನಿಶ್ಚಿತತೆ ಬಗ್ಗೆ ಬಹಿರಂಗ ಮಾಡಿದ್ದಾರೆ. ಆದರೆ ಉತ್ತಮ ಕ್ಷೇತ್ರ ಹುಡುಕುತ್ತಿರುವ ಬಗ್ಗೆ ಮಾಹಿತಿ ಸ್ಪಷ್ಟವಾಗಿದೆ.

ಇದನ್ನೂ ಓದಿ; ರಾಜ್ಯ ಸರ್ಕಾರದಲ್ಲಿ ಸಂಪೂರ್ಣ ಉಸ್ತುವಾರಿ ಗೊಂದಲ..! ಸಿಎಂ ರಾಜಕೀಯ ಲೆಕ್ಕಾಚಾರ

ಸಿಎಂ ಅಭ್ಯರ್ಥಿ ಎನ್ನುವ ಕೂಗಿಗೆ ಬೆಚ್ಚಿ ಬಿದ್ದಿದ್ದಾರೆ ಪರಮೇಶ್ವರ್​..!

2013ರಲ್ಲಿ ರಾಜ್ಯವನ್ನು ಸುತ್ತಿ ಪಕ್ಷ ಕಟ್ಟಿ, ಗೆಲ್ಲಿಸಿಕೊಂಡು ಬಂದಿದ್ದ ಡಾ ಜಿ. ಪರಮೇಶ್ವರ್​ ಸೋಲುಂಡಿದ್ದರು. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ ಎನ್ನುವ ಖುಷಿಯನ್ನು ಅನುಭವಿಸಬೇಕೋ..? ಅಥವಾ ಸ್ವಯಂ ತನ್ನದೇ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಎನ್ನುವುದಕ್ಕೆ ದುಃಖ ಪಡೆಬೇಕೋ ಎನ್ನುವ ಸಂದಿಗ್ದ ಪರಿಸ್ಥಿತಿಗೆ ಪರಮೇಶ್ವರ್​ ಬಂದಿದ್ದರು. ಇದೀಗ ದಲಿತ ಮುಖ್ಯಮಂತ್ರಿ ಕೂಗು ಅಲ್ಲಲ್ಲಿ ಕೇಳಿ ಬಂದರೂ ಡಾ ಜಿ. ಪರಮೇಶ್ವರ್​​ ಬೆಚ್ಚಿ ಬೀಳುತ್ತಿದ್ದಾರೆ. ಎಲ್ಲಿ ಮುಖ್ಯಮಂತ್ರಿ ಆಕಾಂಕ್ಷಿ ಎನ್ನುವುದು ಖಚಿತವಾದರೆ ತಮ್ಮವರೇ ತಮ್ಮನ್ನು ಸೋಲಿಸಿ ಬಿಡುತ್ತಾರೋ ಎನ್ನುವ ಭಯ ಡಾ ಜಿ ಪರಮೇಶ್ವರ್​ ಅವರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ತುಮಕೂರು ಜಿಲ್ಲೆ ಕೊರಟಗೆರೆಯ ಚಿಕ್ಕಗುಂಡಕಲ್​​ನಲ್ಲಿ ನನ್ನನ್ನು ಸಿಎಂ ಅಭ್ಯರ್ಥಿ, ಮುಂದಿನ ಸಿಎಂ ಎಂದು ಘೋಷಣೆ ಕೂಗಬೇಡಿ. ಇಲ್ಲಿ ನೀವು ಘೋಷಣೆ ಕೂಗಿದ್ರೆ ಅಲ್ಲಿ ನನಗೆ ಹೊಡೆತ ಬೀಳುತ್ತೆ. ನಿಮ್ಮ ಆಶೀರ್ವಾದ ಒಂದಿದ್ದರೆ, ಹೈಕಮಾಂಡ್​ ಸೂಚಿಸಿದರೆ ಮುಂದಿನ ದಿನಗಳಲ್ಲಿ ನೋಡೋಣ ಎಂದು ಕಾರ್ಯಕರ್ತರಿಗೆ ಕೈ ಮುಗಿದಿದ್ದಾರೆ.

ಮುಖ್ಯಮಂತ್ರಿ ಸ್ಥಾನ ತೀರ್ಮಾನ ಮಾಡೋದು ಬಿಜೆಪಿ..!

ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಹೋಗಿದ್ದು, ಅಲ್ಲಿ ಗೆಲುವು ಕಂಡು ಸಚಿವರಾಗಿರುವ ಕೆಲವಾರು ಮಂದಿ ಕಾಂಗ್ರೆಸ್​ಗೆ ಹೋಗ್ತಾರೆ ಎನ್ನುವುದು ಖಚಿತವಾಗಿದೆ. ಇನ್ನೂ ಕೆಲವರು ಬಿಜೆಪಿಯಿಂದಲೇ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಕಾಂಗ್ರೆಸ್​ಗೆ ಕೆಲವೇ ಕೆಲವು ಸ್ಥಾನಗಳ ಕೊರತೆ ಎದುರಾದರೆ ಜೆಡಿಎಸ್​​ ಎದುರು ಕೈ ಚಾಚುವ ಬದಲು ಬಿಜೆಪಿಯಲ್ಲಿ ಇರುವ ಹಳೇ ಶಿಷ್ಯರನ್ನು ವಾಪಸ್​ ಪಕ್ಷಕ್ಕೆ ಕರೆದುಕೊಳ್ಳುವ ತಂತ್ರಗಾರಿಕೆಯನ್ನು ಕಾಂಗ್ರೆಸ್​ ನಾಯಕರು ಮಾಡಿದ್ದಾರೆ ಎನ್ನಲಾಗ್ತಿದೆ. ಅವರನ್ನು ಕಾಂಗ್ರೆಸ್​ಗೆ ಕರೆತಂದು ಬೆಂಬಲ ಗಿಟ್ಟಿಸಿದವರೇ ಮುಖ್ಯಮಂತ್ರಿ ಆಗ್ತಾರೆ ಎನ್ನುವ ಲೆಕ್ಕಾಚಾರದ ಮಾತುಗಳು ಹರಿದಾಡ್ತಿವೆ. ಇದೇ ಕಾರಣಕ್ಕೆ ಬಿಜೆಪಿಯಲ್ಲಿ ಈಗಾಗಲೇ ಸಿಡಿದೆದ್ದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ವಲಸೆ ಬಂದು ಅಧಿಕಾರ ಉಂಡು, ಮತ್ತೆ ಹಾರಿ ಹೋಗುವ ಹಕ್ಕಿಗಳಿಂದ ಅಧಿಕಾರ ತಪ್ಪಿಸಿ ಎಂದು ನಾಯಕರಿಗೆ ಸಲಹೆ ನೀಡಿದ್ದಾರೆ. ಇದನ್ನು ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಕೂಡ ಅನುಮೋದಿಸಿದ್ದಾರೆ

ಇದನ್ನೂ ಓದಿ: ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ನಮಾಜ್​ಗೆ​ ಅವಕಾಶ ಸರಿಯೋ..? ತಪ್ಪೋ..?

ಕಾಂಗ್ರೆಸ್​ನಲ್ಲಿ ಯಾರಿಗೆ ಯಾರು ಸೋಲಿನ ರುಚಿ ತೋರಿಸ್ತಾರೆ..?

ಬಿಜೆಪಿ ಹಾಗೂ ಜೆಡಿಎಸ್​ನ ಕೆಲವು ನಾಯಕರು ನಮ್ಮ ಸಂಪರ್ಕದಲ್ಲಿ ಇರುವುದು ಸತ್ಯ ಎಂದು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ. ಆದರೆ ಅದನ್ನು ಯಾವುದೇ ಕಾರಣಕ್ಕೂ ಬಹಿರಂಗ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ತನ್ನಷ್ಟಕ್ಕೆ ತಾನೇ ಬಯಲಾಗಲಿದೆ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ಸಚಿವರು ರಾಜೀನಾಮೆ ನೀಡಿ ಸಮಾಜವಾದಿ ಪಕ್ಷವನ್ನು ಸೇರುತ್ತಿರುವ ಹಾಗೆ ಕರ್ನಾಟಕದಲ್ಲೂ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್​ ಸೇರುವ ಸಾಧ್ಯತೆಗಳು ದಟ್ಟವಾಗಿದೆ. ಆದರೆ ಸಿಎಂ ಸ್ಥಾನದ ರೇಸ್​ನಲ್ಲಿದ್ದವರಿಗೆ ಸೋಲಿನ ಭೀತಿ ಎದುರಾಗಿದ್ದು, ಈ ಬಾರಿ ಯಾರು ಯಾರನ್ನು ಸೋಲಿಸಿ ರಾಜಕೀಯ ಚದುರಂಗ ಆಟವಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಈ ಎಲ್ಲಾ ಲೆಕ್ಕಾಚಾರಗಳ ನಡುವೆ ನಾನು ನಾಸ್ತಿಕ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ಸಿದ್ದರಾಮಯ್ಯ ದೇವಸ್ಥಾನಗಳಿಗೆ ಪದೇ ಪದೇ ಭೇಟಿ ನೀಡುತ್ತಿರುವುದು ಅಚ್ಚರಿಯ ಬೆಳವಣಿಗೆ ಎನ್ನಬಹುದು.

ಕಮೆಂಟ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರೇ ನಮ್ಮ ಗುರುಗಳು

Related Posts

Don't Miss it !