ಶಾಲೆಗಳ ಆರಂಭಕ್ಕೆ ಸರ್ಕಾರದಿಂದ ಮಾರ್ಗಸೂಚಿ..! ನೂರೆಂಟು ಗೊಂದಲ ಬಾಕಿ..

ರಾಜ್ಯ ಸರ್ಕಾರ ಮೊದಲೇ ಘೋಷಣೆ ಮಾಡಿದಂತೆ ಆಗಸ್ಟ್​ 23 ರಿಂದ 9ನೇ ತರಗತಿ ಮೇಲ್ಟಟ್ಟ ಮಕ್ಕಳಿಗೆ ಶಾಲಾ ಕಾಲೇಜು ಆರಂಭ ಮಾಡಲು ನಿರ್ಧಾರ ಮಾಡಿದೆ. ಅದರಂತೆ ಶಾಲಾ ಕಾಲೇಜುಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಸರ್ಕಾರ ಪಟ್ಟಿ ಮಾಡಿದ್ದು, ಎಲ್ಲಾ ಸರ್ಕಾರಿ, ಖಾಸಗಿ, ಅರೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಪಾಲಿಸಬೇಕಿದೆ. ಭೌತಿಕ ತರಗತಿಗಳನ್ನು ನಡೆಸಲು ಅನುಮತಿ ನೀಡಿದ್ದು, ಸರ್ಕಾರ ತಿಳಿಸಿರುವ ಮುನ್ಸೂಚನೆಗಳನ್ನು ಪಾಲಿಸಿಕೊಂಡು ಪಾಠ ಮಾಡಬೇಕಿದೆ.

ಎಲ್ಲಾ ಜಿಲ್ಲೆಗಳಲ್ಲೂ ಶಾಲೆ ಕಡ್ಡಾಯವಲ್ಲ..!

ಸರ್ಕಾರ 9ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ಭೌತಿಕ ತರಗತಿ ನಡೆಸಲು ಅನುಮತಿ ನೀಡಿದರೂ ಈ ಆದೇಶ ಎಲ್ಲಾ ಜಿಲ್ಲೆಗಳಿಗೂ ಅನ್ವಯ ಆಗುವುದಿಲ್ಲ. ಯಾವ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ದರ ಶೇಕಡ 2 ಕ್ಕಿಂತ ಕಡಿಮೆ ಇರುತ್ತದೆಯೋ ಆ ಜಿಲ್ಲೆಗಳಲ್ಲಿ ಶಾಲೆ ಆರಂಭ ಮಾಡಬಹುದಾಗಿದೆ. ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿ ಮಾಡಲು ಅನುಮತಿ ನೀಡಿದ್ದು, ಶಾಲೆಗೆ ಆಗಮಿಸಲು ಪೋಷಕರ ಅನುಮತಿ ಪತ್ರ ಕಡ್ಡಾಯ. ಮಕ್ಕಳು ಮನೆಯಿಂದಲೇ ಕುಡಿಯುವ ನೀರು, ಉಪಹಾರ ತರಬೇಕು. ಶಾಲೆಯಲ್ಲೂ ಮಕ್ಕಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಬೇಕು. ಭೌತಿಕ ತರಗತಿಗೆ ಹಾಜರಾಗಬೇಕು ಎನ್ನುವುದು ಕಡ್ಡಾಯವಲ್ಲ. ಆನ್‌ಲೈನ್ ಅಥವಾ ಭೌತಿಕ ಎರಡರಲ್ಲಿ ಒಂದರಲ್ಲಿ ಹಾಜರಾಗಬಹುದು.

ಇದನ್ನೂ ಓದಿ

ಮಧ್ಯಾಹ್ನದ ಬಳಿಕ ಶಾಲೆಗಳು ಇರಲ್ಲ..!

ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರ ತನಕ ಭೌತಿಕ ತರಗತಿ ನಡೆಸಬೇಕು. ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಭೌತಿಕ ತರಗತಿ ನಡೆಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಬಿಡುಗಡೆ ಮಾಡಿದೆ. ಶಾಲೆ ಆರಂಭಕ್ಕೂ ಮುನ್ನ ತರಗತಿ ಸ್ವಚ್ಚತೆ ಮಾಡಬೇಕು. ಒಂದು ಕೊಠಡಿಯಲ್ಲಿ ಕೇವಲ 20 ಮಕ್ಕಳಿಗೆ ಮಾತ್ರ ಕೂರಲು ಅವಕಾಶ ಕಲ್ಪಿಸಬೇಕು. ಶಾಲಾ ಆವರಣದಲ್ಲಿ ಇತರ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸಬೇಕು. ಒಂದು ಬೆಂಚ್​ನಲ್ಲಿ ಒಂದೇ ಮಗುವಿಗೆ ಕೂರಲು ಅವಕಾಶ ಕೊಡಬೇಕು. ಥರ್ಮಲ್ ಸ್ಕ್ಯಾನಿಂಗ್ ಮತ್ತು ಮಾಸ್ಕ್ ಬಳಸುವಂತೆ ಸೂಚಿಸಬೇಕು. ಶಿಕ್ಷಕರು ಮತ್ತು ಸಿಬ್ಬಂದಿ ಒಂದು ಡೋಸ್ ಲಸಿಕೆ ಪಡೆದಿರಬೇಕು. ಶಾಲಾ ಆವರಣದಲ್ಲಿ ಸೋಶಿಯಲ್ ಡಿಸ್ಟೆನ್ಸ್​ ಕಡ್ಡಾಯವಾಗಿ ಕಾಪಾಡಬೇಕು. ಇನ್ನೂ ಶಾಲಾ ಆವರಣದಲ್ಲಿ ಉಗುಳದಂತೆ ನೋಡಿಕೊಳ್ಳಬೇಕು

ಇದನ್ನೂ ಓದಿ

ಶಾಲೆಗಳಿಗೆ ಮಾರ್ಗಸೂಚಿ.. ಪಿಯುಗೆ ಇನ್ನೂ ಇಲ್ಲ..!

9 ಮತ್ತು 10ನೇ ತರಗತಿ ಮಕ್ಕಳಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಆದರೆ ಪಿಯು ಕಾಲೇಜುಗಳಿಗೆ ಮಾರ್ಗಸೂಚಿ ಪ್ರಕಟವಾಗಿಲ್ಲ. ಶಾಲಾ ಮಾರ್ಗಸೂಚಿ ನೋಡಿಕೊಂಡು ಪಿಯು ಕಾಲೇಜಿನಲ್ಲಿ ಅನುಸರಿಸಬೇಕಾದ ಕೊರೊನಾ ಗೈಡ್​ಲೈನ್ಸ್ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಶಾಲಾರಂಭ ಮಾರ್ಗಸೂಚಿ ಆಧಾರದ‌ ಮೇಲೆಯೇ ಪಿಯು ಮಾರ್ಗಸೂಚಿ ಬಿಡುಗಡೆ ಆಗಲಿದೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಆರ್‌ ಸ್ನೇಹಲ್‌ ತಿಳಿಸಿದ್ದಾರೆ. ಇದೇ 19 ರಿಂದ ‌ಸೆಪ್ಟೆಂಬರ್ 3ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಉಚಿತವಾಗಿ ಬಿಎಂಟಿಸಿ ಬಸ್​ಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಕ್ಕೆ ಪಿಯು ಪರೀಕ್ಷೆ ಪ್ರವೇಶ ಪತ್ರ ತೋರಿಸಿ ಸಂಚರಿಸಬಹುದಾಗಿದೆ.

ವಸತಿ ಶಾಲೆಗಳು, ಹಾಸ್ಟೆಲ್ಸ್​ಗೆ​ ಮಾರ್ಗಸೂಚಿ ಇಲ್ಲ..!

ಶಾಲಾ ಆರಂಭಕ್ಕೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ ವಸತಿ ಶಾಲೆಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹಾಸ್ಟೆಲ್​ಗಳು ಆರಂಭ ಆಗುವ ಬಗ್ಗೆಯೂ ಇನ್ನೂ ಏನನ್ನೂ ಸರ್ಕಾರ ಹೇಳಿಲ್ಲ. ದೂರದ ಊರುಗಳಿಂದ ಪಟ್ಟಣ ಪ್ರದೇಶಕ್ಕೆ ಬರುವ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆಯನ್ನೇ ಮಾಡಿಲ್ಲ. ಹಾಸ್ಟೆಲ್, ವಸತಿ ನಿಲಯಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಗೊಂದಲ ಏರ್ಪಟ್ಟಿರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದು, ಅವು ನಮ್ಮ ಅಧಿಕಾರದ ವ್ಯಾಪ್ತಿಯಲ್ಲಿಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.

ಸರ್ಕಾರದ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ..!

ಸರ್ಕಾರದ ಮಟ್ಟದಲ್ಲಿ ಮಾರ್ಗಸೂಚಿ ಬಿಡುಗಡೆ ಆಗುವ ವೇಳೆ ಒಂದೊಂದು ಇಲಾಖೆಯೂ ಒಂದೊಂದು ರೀತಿಯಲ್ಲಿ ಮಾರ್ಗಸೂಚಿ ಹೊರಡಿಸುವುದರಿಂದ ಮಕ್ಕಳು ಹಾಗೂ ಪೋಷಕರಲ್ಲಿ ಸಾಕಷ್ಟು ಗೊಂದಲಗಳು ಮೂಡುತ್ತವೆ. ಈಗ ಶಾಲೆಗಳು ಆರಂಭ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಆ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆ ಏನನ್ನೂ ಹೇಳಿಲ್ಲ. ಅದೆಷ್ಟೋ ಮಕ್ಕಳು ಹಾಸ್ಟೆಲ್​, ವಸತಿ ಶಾಲೆಗಳಲ್ಲಿ ವಿದ್ಯಭ್ಯಾಸ ಮಾಡುತ್ತಾರೆ. ಆ ಮಕ್ಕಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎನ್ನುವಂತಾಗಿದೆ. ಆದಷ್ಟು ಶೀಘ್ರವಾಗಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ.ಅ

Related Posts

Don't Miss it !