3 ದಿನಗಳ ಕಾಲ ಮತ್ತೆ ಮಳೆ, ಚಾರ್ಮಾಡಿ ಘಾಟ್​ ಬಂದ್​!

ಕರ್ನಾಟಕದಲ್ಲಿ ಮತ್ತೆ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜುಲೈ 27ರ ತನಕ ರಾಜ್ಯದಲ್ಲಿ ಭರ್ಜರಿ ಮಳೆ ಸುರಿಯಲಿದ್ದು, ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಇಂದು ಬೆಳಗಾವಿ ಲೋಂಡಾದಲ್ಲಿ 38 ಸೆಂ.ಮೀ, ಉತ್ತರ ಕನ್ನಡದಲ್ಲಿ 34 ಸೆಂ.ಮೀ, ಶಿವಮೊಗ್ಗದಲ್ಲಿ 27 ಸೆಂ.ಮೀ ಮಳೆಯಾಗಿದೆ ಎಂದು ತಿಳಿಸಿದ್ದಾರೆ. ಬಂಗಾಳ ಉಪಸಾಗರದಲ್ಲಿ ವಾಯು ಭಾರ ಕುಸಿತ ಆಗಿರುವ ಹಿನ್ನೆಲೆ ರಾಜ್ಯದಲ್ಲಿ ವ್ಯಾಪಕ‌ ಮಳೆ ಆಗ್ತಿದೆ.

ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಲರ್ಟ್​!

ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಹಾವೇರಿ, ಧಾರವಾಡ, ಗದಗ, ಬೀದರ್ & ಕಲಬುರ್ಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಸದ್ಯದ ಸ್ಥಿತಿಯೇ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.

ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇದರಿಂದಾಗಿ ಕೊಟ್ಟಿಗೆಹಾರದ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶದಂತೆ ಪೊಲೀಸರು ವಾಹನಗಳನ್ನ ತಡೆದು ನಿಲ್ಲಿಸಿದ್ದರು. ದಿಢೀರನೆ ರಸ್ತೆ ಸಂಚಾರ ಬಂದ್ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ರು.

ಬೆಳಗಾವಿಯಲ್ಲಿ ಮಳೆಯಿಂದ ಅನಾಹುತ..!

ಬೆಳಗಾವಿಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಸರಾಸರಿ 6 ಮಿ.ಮೀ ಮಳೆ ಆಗಬೇಕಿತ್ತು, ಆದರೆ 66 ಮಿ.ಮೀ. ಮಳೆ ಆಗಿದೆ. ಮಳೆಯಿಂದ 47 ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಮಳೆಯಿಂದ ಸಾವು, ನೋವಿನ ಸಂಖ್ಯೆ ಕಡಿಮೆಯಾಗಿದೆ. ವಿದ್ಯುತ್ ತಂತಿ ತಗುಲಿ ಓರ್ವ ರೈತ ಮೃತಪಟ್ಟಿದ್ದಾನೆ. ಪ್ರವಾಹದಿಂದ 5 ತಾಲೂಕಿನ 51 ಗ್ರಾಮಗಳಿಗೆ ತೊಂದರೆ ಆಗಿದೆ. 26 ಕಾಳಜಿ ಕೇಂದ್ರ ಆರಂಭಿಸಲಾಗಿದ್ದು, 2 ಸಾವಿರ ಜನ ಕಾಳಜಿ ಕೇಂದ್ರದಲ್ಲಿ ಇದ್ದಾರೆ. ಎರಡು NDRF ತಂಡ ಬೆಳಗಾವಿ ಜಿಲ್ಲೆಯಲ್ಲಿ ಇದ್ದಾರೆ. 224 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. 36 ಸೇತುವೆ ಮುಳುಗಡೆಯಾಗಿವೆ ಎಂದಿದ್ದಾರೆ.

ಮಳೆಯಿಂದ 400 ಕೋಟಿ ರೂಪಾಯಿ ನಷ್ಟ..!

ಬೆಳಗಾವಿ , ಧಾರವಾಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ 400 ಕೋಟಿ ರೂಪಾಯಿ ಹಾನಿಯಾಗಿದೆ. ಜನರಿಗೆ ಸುರಕ್ಷಿತ ಸ್ಥಳಗಳಿಗೆ ಹೋಗಲು ಮನವಿ ಮಾಡಲಾಗಿದೆ. ಇನ್ನೂ ನಾಲ್ಕು ದಿನ ಮಳೆ ಆಗಲಿದ್ದಾರೆ ಎನ್ನುವ ಮಾಹಿತಿ ಇದೆ. ಕೃಷ್ಣ ನದಿಗೆ ಮಹಾರಾಷ್ಟ್ರದಿಂದ 2 ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ. 3 ಲಕ್ಷ ಕ್ಯೂಸೆಕ್ ನೀರು ಆಲಮಟ್ಟಿಯಿಂದ ಬಿಡಲಾಗುತ್ತಿದೆ. ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ, ಮಾರ್ಕಂಡೇಯ ಸೇರಿ 90 ಸಾವಿರ ‌ಕ್ಯೂಸೆಕ್ ನೀರು ಹೊರಗೆ‌ ಬರುತ್ತಿದೆ. 26 ಬೋಟ್​ಗಳು ಜಿಲ್ಲಾಡಳಿತ ಬಳಿ ಇವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

ಮೀನುಗಾರರಿಗೆ ಸರ್ಕಾರದ ಎಚ್ಚರಿಕೆ..!

ಶನಿವಾರ ಉಡುಪಿಯಲ್ಲಿ ಭಾರೀ ಗಾಳಿ ಮಳೆ ಎಚ್ಚರಿಕೆ ನೀಡಲಾಗಿದ್ದು, ಮೀನುಗಾರರಿಗೆ ಮುಂದಿನ ನಾಲ್ಕು ದಿನ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಸಮುದ್ರದಲ್ಲಿ 3 ರಿಂದ 4 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಪ್ರತೀ ಗಂಟೆಗೆ 50 ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಕಾರಣ ಅನಾಹುತಕ್ಕೆ ದಾರಿ ಮಾಡಿಕೊಡದಂತೆ ಎಚ್ಚರಿಕೆ ನೀಡಲಾಗಿದೆ.

Related Posts

Don't Miss it !