ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗುವ ಕೆಲಸ ಅಂದ್ರೆ ಇದೇನಾ..? ಸಿಎಂ ಸರ್..?

ಕರ್ನಾಟಕ ಕೆ.ಆರ್​.ಎಸ್​ ಹಾಗೂ ಕಬಿನಿ ಜಲಾಶಯದಿಂದ ಮೆಟ್ಟೂರು ಡ್ಯಾಂಗೆ ಎತೆಚ್ಚವಾಗಿ ನೀರು ಹರಿದು ಹೋಗ್ತಿದೆ. ಮೆಟ್ಟೂರು ಡ್ಯಾಂನಲ್ಲೂ ಸಂಗ್ರಹ ಮಾಡಲು ಸಾಧ್ಯವಾಗದೆ ಸಮುದ್ರಕ್ಕೆ ಹರಿಯಬಿಡಲಾಗುತ್ತಿದೆ ಎನ್ನುವುದನ್ನು ನಾವು ಈ ಹಿಂದಿನ ವರ್ಷಗಳಲ್ಲಿ ನೋಡಿದ್ದೇವೆ. ಅದೇ ಕಾರಣಕ್ಕೆ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನದಿ ಧುಮ್ಮಿಕ್ಕುವ ಮುನ್ನ ಮೇಕೆದಾಟು ಎಂಬಲ್ಲಿ ಡ್ಯಾಂ ನಿರ್ಮಾಣವಾದರೆ ಅಲ್ಲಿಂದ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದು ರಾಜ್ಯ ಸರ್ಕಾರದ ಇರಾದೆಯಾಗಿದೆ.

ಮಲಗಿದ್ದವರನ್ನು ಎಬ್ಬಿಸಿದ ರಾಜ್ಯ ಸರ್ಕಾರ..!?

ತಮಿಳುನಾಡಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದ ಡಿಎಂಕೆ ಪಕ್ಷ ಆಡಳಿತ ನಡೆಸುತ್ತಿತ್ತು. ಮೇಕೆದಾಟು ಬಗ್ಗೆ ಅಷ್ಟೊಂದು ಗಮನ ಇರಲಿಲ್ಲ. ಆದರೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಸ್ವತಃ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​ಗೆ ಪತ್ರ ಬರೆದು, ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆ ಇಲ್ಲ, ಈ ಯೋಜನೆಗೆ ಅಡ್ಡಿ ಮಾಡಬೇಡಿ ಎಂದಿದ್ದರು. ಮರು ದಿನವೇ ಉತ್ತರ ಕಳುಹಿಸಿದ ಎಂ.ಕೆ ಸ್ಟಾಲಿನ್​, ಯಾವುದೇ ಕಾರಣಕ್ಕೂ ಯೋಜನೆ ಜಾರಿ ಮಾಡಬೇಡಿ. ಈ ಯೋಜನೆಯಿಂದ ತಮಿಳುನಾಡಿಗೆ ಸಂಕಷ್ಟವಾಗಲಿದೆ ಎಂದು ಪ್ರತ್ಯುತ್ತರ ಬರೆದಿದ್ದರು.

ತಮಿಳುನಾಡು ಮುಂದೆ ಮುಂದೆ ಕರ್ನಾಟಕ ಹಿಂದೆ ಹಿಂದೆ..!

ಕರ್ನಾಟಕ ಮೇಕೆದಾಟು ವಿಚಾರದಲ್ಲಿ ಮುಂದಡಿ ಇಡುವ ಮುಂಚೆ ತಮಿಳುನಾಡು ಎಲ್ಲಾ ಕಡೆಗಳಲ್ಲೂ ಅಡ್ಡಗಾಲು ಹಾಕುತ್ತಲೇ ಹೋಗಿದೆ. ಕರ್ನಾಟಕ ಮಾತ್ರ ಅಂಬೆಗಾಲು ಹಾಕುತ್ತ ಹಲ್ಲು ಗಿರಿಯುವ ಕೆಲಸ ಮಾಡ್ತಿದೆ. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​ ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ, ಕರ್ನಾಟಕ ಮೇಕೆದಾಟು ಯೋಜನೆ ಮಾಡದಂತೆ ತಡೆಯಿರಿ ಎಂದು ಮನವಿ ಪತ್ರ ಕೊಟ್ಟಿದ್ದರು. ಆ ಬಳಿಕ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್​ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಯೋಜನೆ ತಡೆಯುವಂತೆ ಹಾಗೂ ಕಾನೂನು ಸಮಸ್ಯೆಗಳ ಬಗ್ಗೆ ಮೊದಲೇ ಮನವರಿಕೆ ಮಾಡಿಕೊಟ್ಟಿದ್ದರು. ಇದಾದ ಬಳಿಕ ತಮಿಳುನಾಡಿನಲ್ಲಿ ಸರ್ವ ಪಕ್ಷ ಸಭೆ ಕರೆದಿದ್ದ ಎಂ.ಕೆ ಸ್ಟಾಲಿನ್​ ಕೇಂದ್ರದ ಮೇಲೆ ಒತ್ತಡಕ್ಕೆ ಸರ್ವಪಕ್ಷ ನಿಯೋಗ, ಕಾನೂನು ಹೋರಾಟ, ತಕ್ಷಣವೇ ಸ್ಥಗಿತ ಮಾಡಬೇಕು ಎಂದು ನಿರ್ಣಯ ಮಾಡಿದ್ದರು. ಇದೀಗ ಶುಕ್ರವಾರ ಸರ್ವಪಕ್ಷ ನಾಯಕರ ನಿಯೋಗ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದೆ. ಜೊತೆಗೆ ಜುಲೈ 18ರಂದು ರಾಷ್ಟ್ರಪತಿಗಳಿಗೂ ಈ ಬಗ್ಗೆ ದೂರು ನೀಡಲು ನಿರ್ಧಾರ ಮಾಡಿದೆ.

ಕರ್ನಾಟಕ ಬಿಜೆಪಿ ಸರ್ಕಾರ ಮಾಡಿದ್ದು ಏನು..?

ಮಲಗಿದ್ದ ತಮಿಳುನಾಡನ್ನು ತಟ್ಟಿ ಎಬ್ಬಿಸಿತ್ತು. ಅವರು ಕೇಂದ್ರ ಜಲಶಕ್ತಿ ಸಚಿವರಿಗೆ ಆಗ್ರಹ ಮಾಡಿದ ಮೇಲೂ ಸುಮ್ಮನೇ ಇದ್ದರು. ಯಾವುದೋ ಬೇರೆ ವಿಚಾರವಾಗಿ ಜಲಶಕ್ತಿ ಸಚಿವರೇ ಕರ್ನಾಟಕಕ್ಕೆ ಬಂದಾಗ ಮನವರಿಕೆ ಪ್ರಯತ್ನ. ಆದರೆ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಹೇಳಿದ್ದು ಒಂದೇ ಮಾತು. ಪಕ್ಷವೇ ಬೇರೆ ಸರ್ಕಾರವೇ ಬೇರೆ. ಕಾನೂನು ಪ್ರಕಾರ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದರು. ವಿರೋಧ ಪಕ್ಷಗಳ ಮೇಕೆದಾಟು ಬಗ್ಗೆ ಸರ್ಕಾರವನ್ನು ಎಚ್ಚರಿಸಿದರೂ ಸರ್ಕಾರ ಮಾತ್ರ ಸರ್ವಪಕ್ಷ ಸಭೆ ಕರೆದು ಒಂದು ನಿರ್ಣಯ ತೆಗೆದುಕೊಂಡು ಮುಂದಿನ ಆಗುಹೋಗುಗಳ ಬಗ್ಗೆ ಚರ್ಚೆ ಮಾಡಲಿಲ್ಲ. ಕೇವಲ ನಾವು ಮಾಡಿಯೇ ಮಾಡುತ್ತೇವೆ. ನಮ್ಮ ನೀರು ನಮ್ಮ ಹಕ್ಕು ಎಂದು ಮಾಧ್ಯಮಗಳ ಎದುರು ಬೊಬ್ಬೆ ಹಾಕಿದ್ರು ಅಷ್ಟೆ.

ಕರ್ನಾಟಕದ ಪರವಾಗಿ ನಿಲ್ಲದ ಕೇಂದ್ರ ಸರ್ಕಾರ..!

ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಕರ್ನಾಟಕದಿಂದ ಬರೋಬ್ಬರಿ 25 ಸಂಸದರು ಇದ್ದಾರೆ. ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಲು ಕರ್ನಾಟಕದ ಕೊಡುಗೆಯೂ ಬಹಳವಾಗಿದೆ. ಆದರೆ ಶುಕ್ರವಾರ ಕರ್ನಾಟಕದ ಪರವಾಗಿ ನಿಲ್ಲಬೇಕಿದ್ದ ಕೇಂದ್ರ ಸರ್ಕಾರ ಉಲ್ಟಾ ಹೊಡೆದಿದೆ. ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ಡಿಪಿಆರ್​ ಒಪ್ಪಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರವು ಡಿಪಿಆರ್​ನಲ್ಲಿನ ಷರತ್ತುಗಳನ್ನು ಪೂರೈಸಿಲ್ಲ. ನದಿ ಕೆಳಗಿನ ರಾಜ್ಯಗಳ ಅನುಮತಿ ಪಡೆಯದೆ ಹಾಗೂ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಯಾವುದೇ ಯೋಜನೆ ಜಾರಿ ಮಾಡುವಂತಿಲ್ಲ. ಹಾಗಾಗಿ ಮೇಕೆದಾಟು ಯೋಜೆನೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ತಮಿಳುನಾಡು ಪರವಾಗಿ ತೆರಳಿದ್ದ ಸರ್ವಪಕ್ಷ ನಾಯಕರ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಬಳಿ ಚರ್ಚೆ ಮಾಡಿಯೇ ಇಲ್ಲ ಸಿಎಂ..!

ಸಿಎಂ ಬಿಎಸ್​ ಯಡಿಯೂರಪ್ಪ ಮೇಕೆದಾಟು ಸೇರಿದಂತೆ ಪ್ರಮುಖ ಜಲವಿವಾದಗಳ ಬಗ್ಗೆ ಪ್ರಧಾನಿ ಜೊತೆ ಮಾತನಾಡಲು ತೆರಳುತ್ತಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿದ್ದವು.ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಪ್ರಧಾನಿ ನರೇಂದ್ರ ಮೋದಿಯವರನ್ನೇ ಮೇಕೆದಾಟು ಶಂಕುಸ್ಥಾಪನೆಗೆ ಕರೆಯಲಾಗುತ್ತೆ. ಇಂದಿನ ಭೇಟಿ ವೇಳೆಯಲ್ಲೇ ಸಮಯದ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ವರದಿಯಾಗಿತ್ತು. ಆದರೆ ಪ್ರಧಾನಿ ಭೇಟಿಯಲ್ಲಿ ಮೇಕೆದಾಟು ಚರ್ಚೆಯ ವಿಷಯವಾಗಿಲ್ಲ ಎನ್ನುತ್ತಿವೆ ಮೂಲಗಳು. ಪ್ರಧಾನಿ ಭೇಟಿಗೂ ಮುನ್ನ ಮಾತನಾಡಿದ್ದ ಸಿಎಂ ಬಿಎಸ್​ ಯಡಿಯೂರಪ್ಪ, ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಸಮಸ್ಯೆ ಆಗುವುದಿಲ್ಲ. ಮನವರಿಕೆ ಮಾಡಲು ಯತ್ನಿಸಿದೆವು, ಆದರೂ ಅವರು ಹಠ ಬಿಡುತ್ತಿಲ್ಲ ಎಂದು ರಾಗ ಪಾಡಿದ್ದಾರೆ. ಇದರ ಅರ್ಥ ಇಷ್ಟೆ. ತಮಿಳುನಾಡು ಮಲಗಿತ್ತು, ಚಿವುಟಿ ಎಬ್ಬಿಸಿದರು. ಇದೀಗ ಕರ್ನಾಟಕವನ್ನು ಸಮಾಧಾನ ಮಾಡಲು ನೋಡುತ್ತಿದ್ದಾರೆ ಗಾಧೆ ಮಾತನ್ನೇ ಉಲ್ಟಾ ಮಾಡಿದ್ರು ಎಂದೆನಿಸುತ್ತಿದೆ.

Related Posts

Don't Miss it !