ಕನ್ನಡಿಗರ ವಿರೋಧದ ನಡುವೆ ಹಿಂದಿ ದಿವಸ್ ಆಚರಣೆ, ಜನರ ಆಕ್ರೋಶ

ಹಿಂದಿ ದಿವಸ್​ ಆಚರಣೆಗೆ ಜೆಡಿಎಸ್​ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ವಿರೋಧ ವ್ಯಕ್ತ ಮಾಡಿದ್ದಾರೆ. ಹಿಂದಿ ದಿವಸ್​ ಆಚರಣೆಯನ್ನು ಕೈ ಬಿಡುವಂತೆ ಎರಡ್ಮೂರು ದಿನಗಳ ಹಿಂದೆಯೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು,. ಆದರೂ ಹಿಂದಿ ದಿವಸ್​ ಆಚರಣೆ ನಿಲ್ಲಲಿಲ್ಲ. ಇದನ್ನು ವಿರೋಧಿಸಿದ ಜೆಡಿಎಸ್​ ಪಕ್ಷ ರಾಜ್ಯ ಹಾಗು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಹೋರಾಟ ಮಾಡಿದೆ. ತೋಳಿಗೆ ಕಪ್ಪು ಪಟ್ಟಿ ಧರಿಸಿ ಹಿಂದಿ ಹೇರಿಕೆಯನ್ನು ಕಟುವಾಗಿ ವಿರೋಧಿಸಿದೆ. ಆದರೆ ಕಾಂಗ್ರೆಸ್​ ಹಾಗು ಬಿಜೆಪಿ ಈ ಬಗ್ಗೆ ದನಿ ಎತ್ತುವ ಕೆಲಸ ಮಾಡಿಲ್ಲ. ಕಾರಣ ಏನು ಅನ್ನೋದು ಕನ್ನಡಿಗರನ್ನು ಕಾಡುವಂತಾಗಿದೆ.

ಕಾಂಗ್ರೆಸ್​ ಹಾಗು ಬಿಜೆಪಿ ಅಂತರ ಕಾಯ್ದುಕೊಳ್ಳುವುದು ಅಥವಾ ಸಮರ್ಥನೆ ಮಾಡಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿದೆ. ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿದ್ದಾರೆ. ಹಿಂದಿ ದಿವಸ್​ ಆಚರಣೆಯನ್ನು ಸಮರ್ಥನೆ ಮಾಡಿಕೊಂಡಿರುವ ರವಿ, 1949 ಅಮಿತ್​ ಷಾ ಹಿಂದಿ ದಿವಸ್​ ಆಚರಣೆ ಮಾಡಿದ್ರಾ..? ಎನ್ನುವ ಮೂಲಕ ಪರೋಕ್ಷವಾಗಿ ಇದು ಕಾಂಗ್ರೆಸ್​​ ಪಕ್ಷದ ಸ್ವತ್ತು ಎಂದಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ ಖಾದರ್​ ಮಾತನಾಡಿ, ಕನ್ನಡದ ರೀತಿಯಲ್ಲೇ ಹಿಂದಿಯೂ ಕೂಡ ಒಂದು ಭಾಷೆ, ಅದಕ್ಕೆ ಅದರದ್ದೇ ಆದ ಮಾನ್ಯತೆ ಇದೆ. ವಿರೋಧಿಸುವುದು ಸರಿಯಲ್ಲ. ಹಿಂದಿ ರಾಷ್ಟ್ರೀಯ ಭಾಷೆ, ಹಿಂದಿ ದಿವಸ್​ ಯಾಕೆ ವಿರೋಧಿಸಬೇಕು ಎನ್ನುವ ಮೂಲಕ ಕನ್ನಡಿಗರನ್ನು ಕೆಣಕುವ ಕೆಲಸ ಮಾಡಿದ್ದಾರೆ. ಅಂದರೆ ಸಿ.ಟಿ ರವಿ ಹೇಳಿದ ಮಾತು ಸತ್ಯ. ಕಾಂಗ್ರೆಸ್​ ಕೂಸನ್ನು ಬಿಜೆಪಿ ಸಾಕುವ ಕೆಲಸ ಮಾಡುತ್ತಿದೆ.

ಹಿಂದಿ ಭಾಷೆಯನ್ನು ಕನ್ನಡಿಗರು ವಿರೋಧಿಸುವುದಿಲ್ಲ. ಆದರೆ ಹಿಂದಿ ದಿವಸ್​ ರೀತಿಯ ಆಚರಣೆಗಳನ್ನು ವಿರೋಧ ಮಾಡಬೇಕಾಗುತ್ತದೆ. ಈಗಾಗಲೇ ಕನ್ನಡ ಭಾಷೆಯಲ್ಲಿ ಪರೀಕ್ಷೆಗಳು ಸರಿಯಾಗಿ ಸಿಗದ ಕಾರಣಕ್ಕೆ ರೈಲ್ವೆ, ಬ್ಯಾಂಕಿಂಗ್​ ಸೇರಿದಂತೆ ಹತ್ತಾರು ಕೇಂದ್ರ ಸರ್ಕಾರದ ನೌಕರಿ ಪಡೆಯಲು ಸಾಧ್ಯವಾಗ್ತಿಲ್ಲ. ಎಲ್ಲಿ ನೋಡಿದರೂ ಹಿಂದಿ ಭಾಷಿಕರೇ ದಬ್ಬಾಳಿಕೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡದಲ್ಲೇ ಪರೀಕ್ಷೆ ಬರೆದು ಕನ್ನಡಿಗ ಯುವಕ ಯುವತಿಯರನ್ನೇ ಕೆಲಸಕ್ಕೆ ನಿಯೋಜನೆ ಮಾಡುವ ಕೆಲಸ ಆಗಬೇಕಿದೆ. ಇದಕ್ಕಾಗಿ ಆದರೂ ಕನ್ನಡದ ಮೇಲೆ ಹಿಂದಿ ದಬ್ಬಾಳಿಕೆ ತಡೆಗಟ್ಟಬೇಕಿದೆ.

ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರ ಹಿಂದಿ ಪ್ರೇಮಕ್ಕೆ ಕಾರಣ ಏನು ಅನ್ನೋದನ್ನು ನೋಡೋದಾದ್ರೆ, ರಾಷ್ಟ್ರೀಯ ಪಕ್ಷ, ಕಾಂಗ್ರೆಸ್​ ಹಾಗು ಬಿಜೆಪಿ ಹೈಕಮಾಂಡ್​ ನಾಯಕರು ಹಿಂದಿ ಭಾಷಿಕರು. ವಿರೋಧ ಮಾಡಿದ್ರೆ ಹುದ್ದೆಗೆ ಕೊಕ್ಕೆ ಬೀಳಲಿದೆ ಎನ್ನುವ ಭೀತಿ ಹಿಂದಿಯನ್ನು ಅಪ್ಪಿಕೊಳ್ಳುವಂತೆ ಮಾಡಿದೆ. ಆದರೆ ಕೇಂದ್ರದಲ್ಲಿ ಯಾವುದೇ ರಾಷ್ಟ್ರೀಯ ಪಕ್ಷ ಅಧಿಕಾರಕ್ಕೆ ಬಂದರೂ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಸಲಾಂ ಹಾಕುತ್ತಾರೆ. ಹಿಂದಿ ಭಾಷೆ ಅಂತಾ ತುಟಿಕ್​ ಪಿಟಿಕ್​ ಎನ್ನುವುದಿಲ್ಲ. ಇಂಗ್ಲಿಷ್​ ಜೊತೆಗೆ ತಮಿಳಿಗೆ ಮಾತ್ರ ಮಾನ್ಯತೆ. ನಮ್ಮ ಕರ್ನಾಟಕದಲ್ಲಿ ಭಾಷಾ ಪ್ರೇಮ ಕಡಿಮೆ. ​ ಪ್ರಾದೇಶಿಕ ಪಕ್ಷ ಜೆಡಿಎಸ್ ಇತ್ತೀಚಿಗೆ ಕನ್ನಡಿಗರ ಪರ ನಿಲ್ಲುತ್ತಿದೆ. ರಾಷ್ಟ್ರೀಯ ಪಕ್ಷಗಳು ಮಾತ್ರ ಹಿಂದಿ ನಾಯಕರ ಹಿಂದೆ ಬಾಲ ಅಲ್ಲಾಡಿಸುತ್ತಿದ್ದಾರೆ.

Related Posts

Don't Miss it !