ಮೇಕೆದಾಟು ಬಗ್ಗೆ ತಮಿಳುನಾಡು ದೂರು, ಕರ್ನಾಟಕಕ್ಕೆ ಬಂದ ಕೇಂದ್ರ ಜಲಸಚಿವ..!

ಕಾವೇರಿ ನದಿಗೆ ಮೇಕೆದಾಟು ಬಳಿ ಕರ್ನಾಟಕ ನಿಮೀಸಲು ಉದ್ದೇಶಿಸಿರುವ ಅಣೆಕಟ್ಟೆ ಬಗ್ಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದೆ. ನಿನ್ನೆಯಷ್ಟೇ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಮೂರು ನಿರ್ಣಯ ಕೈಗೊಳ್ಳಲಾಗಿತ್ತು. ತಮಿಳುನಾಡಿನ ಎಲ್ಲಾ 13 ರಾಜಕೀಯ ಪಕ್ಷಗಳು ವಿರೋಧ ಮಾಡುತ್ತಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಲಾಗಿದೆ. ಕಳೆದ ವಾರ ಪ್ರಧಾನಿ ಭೇಟಿ ಮಾಡಿದ್ದ ಎಂ.ಕೆ ಸ್ಟಾಲಿನ್​ ಮೇಕೆದಾಟಡು ಯೋಜನೆ ತಡೆಯುವಂತೆ ಮನವಿ ಪತ್ರ ನೀಡಿದ್ದರು. ಆ ಬಳಿಕ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್​ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ನಷ್ಟವಾಗಲಿದೆ ಎಂದು ಆರೋಪಿಸಿದ್ದರು. ತಮಿಳುನಾಡು ಸಿಎಂಗೆ ಯಡಿಯೂರಪ್ಪ ಪತ್ರ ಬರೆದ ಬಳಿಕ ತಮಿಳುನಾಡು ಮೇಕೆದಾಟು ವಿಚಾರವಾಗಿ ಚುರುಕಾಗಿದೆ. ಇಂದು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​​ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದಾರೆ.

ಸಿಎಂ ಯಡಿಯೂರಪ್ಪ ಜೊತೆಗೆ ಮಹತ್ವದ ಸಭೆ..!

ಜಲ ಜೀವನ್ ಮಿಷನ್ ಕುರಿತು ಸಭೆ ನಡೆಸುವ ಸಲುವಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಸಿಎಂ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸಿಎಂ ಚರ್ಚೆ ನಡೆಸಿದ್ದು, ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮೇಕೆದಾಟು ಯೋಜನೆ ಸಂಬಂಧ ಅಂಪೂರ್ಣ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಯೋಜನೆ ಸಂಬಂಧ ರಾಜ್ಯ ಸರ್ಕಾರ ಇಲ್ಲೀವರೆಗೂ ಕೈಗೊಂಡಿರುವ ಕ್ರಮಗಳನ್ನು ನೀಡಲಾಗಿದೆ. ಮೇಕೆದಾಟು ಯೋಜನೆ ಬಗ್ಗೆ ಸೆಂಟ್ರಲ್ ಟೀಮ್ ರಾಜ್ಯ ಸರ್ಕಾರದ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ. ರಾಜ್ಯದ ನೀರಾವರಿ ಹಿರಿಯ ಅಧಿಕಾರಿಗಳು ಕೇಂದ್ರದ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿ ಚರ್ಚೆ ನಡೆಸಲಾಗಿದೆ. ಯೋಜನೆಯ ಸಂಬಂಧ ಸರ್ಕಾರದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಕೇಂದ್ರ ಸಚಿವರಿಗೆ ರಾಜ್ಯ ಸಚಿವರಿಂದ ಮನವರಿಕೆ..!

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಂದ್ರ ನೀರಾವರಿ ಸಚಿವರಿಗೆ ರಾಜ್ಯ ಸರ್ಕಾರದಿಂದ ಮಾಹಿತಿ ನೀಡಲಾಗಿದೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆ ಸಿಎಂ ಬಿ.ಎಸ್​ ಯಡಿಯೂರಪ್ಪ, ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಸಭೆ ನಡೆಸಿ ಕಾನೂನು ಚೌಕಟ್ಟು ಹಾಗೂ ತಮಿಳುನಾಡು ಸರ್ಕಾರ ಯೋಜನೆಗೆ ಅನಾವಶ್ಯಕವಾಗಿ ಕ್ಯಾತೆ ತೆಗೆಯುತ್ತಿದೆ ಎನ್ನುವ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಲವು ದಿನಗಳಿಂದ ಸಿಎಂ ಜೊತೆ ಕಾಣಿಸಿಕೊಳ್ಳದ ಸಚಿವ ಮಾಧುಸ್ವಾಮಿ ಕೂಡ ಇಂದಿನ ಸಭೆಯಲ್ಲಿ ಸಿಎಂ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಇಲ್ಲ..!

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಇದುವರೆಗೂ ರಾಜ್ಯ ಸರ್ಕಾರ ನಡೆಸಿದ ಕಾನೂನು ಹೋರಾಟ, ಅಂತಿಮವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು, ಆ ಬಳಿಕ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಜೊತೆಗೆ ತಮಿಳುನಾಡು ಸರ್ಕಾರಕ್ಕೆ ರಾಜ್ಯ ಸರ್ಕಾರದ ಮನವರಿಕೆ ಪ್ರಯತ್ನ, ಇದೀಗ ಯೋಜನೆಗೆ ಅಡ್ಡಿ ಪಡಿಸಲು ಮುಂದಾಗಿರುವ ತಮಿಳುನಾಡು ಕ್ಯಾತೆ ಹಾಗೂ ಈಗ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ತೆಗೆದುಕೊಳ್ಳುತ್ತಿರುವ ನಿಲುವುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆ ಸಿಎಂ ಯಡಿಯೂರಪ್ಪ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ನೀರಾವರಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.

ಮೇಕೆದಾಟು ಮುಹೂರ್ತ ವಿಶ್ವಾಸ..!

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಿರುವ ಬಗ್ಗೆ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವಿಟ್ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಇಂದಿನ ಸಭೆಯಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆ ಕಾಮಗಾರಿ ಆರಂಭಕ್ಕೆ ಮುಹೂರ್ತ ನಿಗದಿ ಮಾಡುತ್ತಾರೆ ಎಂದು ನಂಬಿದ್ದೇನೆ. ಇದು ಇಡೀ ರಾಜ್ಯದ ಜನರ ನಂಬಿಕೆಯೂ ಹೌದು. ಯಡಿಯೂರಪ್ಪನವರೂ ಈ ನಿಟ್ಟಿನಲ್ಲಿ ಕೈ ಜೋಡಿಸುವರೆಂಬ ವಿಶ್ವಾಸವಿದೆ ಎಂದು ಟ್ವಿಟ್ ಮಾಡಿದ್ದಾರೆ.

ಪಕ್ಷ ಬೇರೆ ಸರ್ಕಾರವೇ ಬೇರೆ..!

ಮಾಧ್ಯಮಗಳ ಜೊತೆಗೆ ಮಾತನಾಡಿರುವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್, ಕೇಂದ್ರ ಸರ್ಕಾರ ಮೇಕೆದಾಟು ಯೋಜನೆ ವಿಚಾರದಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದನ್ನು ಸೂಕ್ತ ರೀತಿಯಲ್ಲಿ ತೆಗೆದುಕೊಳ್ಳಲಿದೆ. ಪಕ್ಷವೇ ಬೇರೆ, ಸರ್ಕಾರವೇ ಬೇರೆ ಎಂದು ಉತ್ತರ ಕೊಟ್ಟಿದ್ದಾರೆ. ತಮಿಳುನಾಡು ಸರ್ಕಾರ ನಿರ್ಣಯ ಮಾಡಿರುವ ಬಗ್ಗೆ ಮಾತನಾಡಿದ್ದು, ಯಾರು ಏನು ಬೇಕಾದರೂ ನಿರ್ಣಯ ತೆಗೆದುಕೊಳ್ಳಲಿ ಕೇಂದ್ರ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದಿದ್ದಾರೆ.

ರಾಜ್ಯ ಸರ್ಕಾರದ ನಿಧಾನಗತಿ ಆಲೋಚನೆ..!

ಮೇಕೆದಾಟು ಕಾಮಗಾರಿ ಆರಂಭಕ್ಕೆ ಅಡ್ಡಿ ಮಾಡಬೇಡಿ, ಈ ಯೋಜನೆಯಿಂದ ನಿಮಗೆ ಯಾವುದೇ ಸಮಸ್ಯೆ ಆಗದು ಎಂದು ಸ್ವತಃ ಮುಖ್ಯಮಂತ್ರಿ ಪತ್ರ ಬರೆದ ಕೂಡಲೇ ಎಚ್ಚೆತ್ತುಕೊಂಡಿರುವ ತಮಿಳುನಾಡು ಸರ್ಕಾರ, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಕಾಮಗಾರಿ ತಡೆಗೆ ಮನವಿ ಮಾಡಿದ್ದಾರೆ. ತಮಿಳುನಾಡಿನಲ್ಲಿ ಸರ್ವಪಕ್ಷಗಳ ಸಭೆ ಕರೆದು ಒಕ್ಕೋರಲ ನಿರ್ಧಾರ ಮಾಡಲಾಗಿದೆ. ಶೀಘ್ರದಲ್ಲೇ ಕೇಂದ್ರದ ಮೇಲೆ ಒತ್ತಡ ಹೇರಲು ಸರ್ವಪಕ್ಷ ನಿಯೋಗ ಕೊಂಡೊಯ್ಯಲು ನಿರ್ಧಾರ ಮಾಡಲಾಗಿದೆ. ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಹಾಕಲು ನಿರ್ಧಾರ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರ ಯೋಜನೆ ಜಾರಿ ವಿಚಾರದಲ್ಲಿ ತೆವಳುವತ್ತಾ ಸಾಗಿದೆ. ವಿರೋಧ ಪಕ್ಷಗಳು ಟ್ವೀಟ್​ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಒಂದೇ ಪಕ್ಷ ಅಧಿಕಾರದಲ್ಲಿ ಇದ್ದರೂ ರಾಜ್ಯದ ಜನರ ಪಾಲಿಗೆ ಯಾವುದೇ ಅನುಕೂಲ ಆದಂತೆ ಕಾಣಿಸುತ್ತಿಲ್ಲ ಎನ್ನುವುದು ಸತ್ಯ ಎನ್ನಬಹುದು.

Related Posts

Don't Miss it !